Asianet Suvarna News Asianet Suvarna News

ಬೆಂಗಳೂರು : 7 ರಸ್ತೆ ಅಭಿವೃದ್ಧಿ ದಶಕದಿಂದ ನೆನೆಗುದಿಗೆ!

ಪರಿಹಾರದ ವಿಚಾರವಾಗಿ ನಡೆಯುತ್ತಿರುವ ಈ ಹಗ್ಗಜಗ್ಗಾಟದಿಂದ ದಶಕಗಳಿಂದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದ್ದು ಸಂಚಾರ ದಟ್ಟಣೆಯಿಂದ ವಾಹನ ಸವಾರರನ್ನು ಹೈರಾಣಾಗುವಂತೆ ಮಾಡಿದೆ. ನಗರದ ಪ್ರಮುಖ 7 ರಸ್ತೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ. 

No Development This 7 Streets in Bengaluru
Author
Bengaluru, First Published Sep 30, 2019, 9:44 AM IST

ಲಿಂಗರಾಜು ಕೋರಾ

ಬೆಂಗಳೂರು [ಸೆ.30]:  ನಗರದ ಏಳು ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಭೂಸ್ವಾಧೀನಗೊಳ್ಳುವ ಆಸ್ತಿ ಮಾಲಿಕರು ‘ಟಿಡಿಆರ್‌ (ವರ್ಗಾಯಿಸುವ ಅಭಿವೃದ್ಧಿ ಹಕ್ಕು) ಬದಲು ಮೆಟ್ರೋ ಮಾದರಿಯ ನಗದು ಪರಿಹಾರ’ಕ್ಕೆ ಬಿಗಿ ಪಟ್ಟು ಮುಂದುವರಿಸಿರುವುದು ಬಿಬಿಎಂಪಿಗೆ ನುಂಗಲಾರದ ತುತ್ತಾಗಿದೆ. ಪರಿಹಾರದ ವಿಚಾರವಾಗಿ ನಡೆಯುತ್ತಿರುವ ಈ ಹಗ್ಗಜಗ್ಗಾಟದಿಂದ ದಶಕಗಳಿಂದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದ್ದು ಸಂಚಾರ ದಟ್ಟಣೆಯಿಂದ ವಾಹನ ಸವಾರರನ್ನು ಹೈರಾಣಾಗುವಂತೆ ಮಾಡಿದೆ.

ಸದಾ ವಾಹನಗಳಿಂದ ಗಿಜಿಗುಡುವ ಟ್ಯಾನರಿ ರಸ್ತೆ, ಪಾದರಾಯನಪುರ ಮುಖ್ಯರಸ್ತೆ, ಬನ್ನೇರುಘಟ್ಟರಸ್ತೆ, ವರ್ತೂರು ರಸ್ತೆ, ಸರ್ಜಾಪುರ ರಸ್ತೆ, ಬೇಗೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಕೆಲ ವರ್ಷಗಳಿಂದ ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನಗೊಳ್ಳುವ ಆಸ್ತಿ ಮಾಲಿಕರನ್ನು ಪರಿಹಾರ ವಿಚಾರದಲ್ಲಿ ಮನವೊಲಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೈಕಟ್ಟಿಕೂರುವಂತಾಗಿದೆ.

ನಗರದಲ್ಲಿ ಮೆಟ್ರೋ ಯೋಜನೆಗೆ ಬಿಎಂಆರ್‌ಸಿಎಲ್‌ ಮೂಲಕ ಸ್ವಾಧೀನಪಡಿಸಿ ಕೊಂಡಿರುವ ಆಸ್ತಿಗಳಿಗೆ ಸರ್ಕಾರ ನಗದು ರೂಪದ ಪರಿಹಾರ ನೀಡಿದೆ. ಆದರೆ, ಬಿಬಿಎಂಪಿಯೂ ಏಕೆ ಅದೇ ರೀತಿ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಆಸ್ತಿ ಮಾಲಿಕರ ಮೂಲಪ್ರಶ್ನೆ. ಅಲ್ಲದೆ, ಟಿಡಿಆರ್‌ ಮಾದರಿಯ ಪರಿಹಾರಕ್ಕೂ ಬಿಎಂಆರ್‌ಸಿಎಲ್‌ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇತ್ತೀಚೆಗೆ ಬಯಲಾಗಿರುವ ಟಿಡಿಆರ್‌ ಹಗರಣದಿಂದಾಗಿ ಈಗ ಟಿಡಿಆರ್‌ ಮಾರಿಕೊಳ್ಳುವುದೂ ದೊಡ್ಡ ಸವಾಲಾಗಿದೆ. ಹಾಗಾಗಿ ನಮಗೆ ನಗದು ರೂಪದ ಪರಿಹಾರವನ್ನೇ ನೀಡಿ ಎಂದು ಆಸ್ತಿ ಮಾಲಿಕರು ಪಟ್ಟು ಹಿಡಿದಿದ್ದಾರೆ. ದಶಕಗಳಿಂದ ರಸ್ತೆಗಳ ಅಗಲೀಕರಣವಾಗದೆ ಇರುವುದರಿಂದ ಯೋಜನಾ ವೆಚ್ಚಗಳು ಏರಿಕೆಯಾಗುತ್ತಿದ್ದು, ಇದರಿಂದ ಪಾಲಿಕೆಗೂ ಹೊರೆ, ವಾಹನ ಸವಾರರಿಗೂ ಸಂಚಾರ ದಟ್ಟಣೆ ಸಮಸ್ಯೆಯ ಪರಿಹಾರ ಸಿಗುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಸರ್ಕಾರೊಂದಿಗೆ ಚರ್ಚಿಸಲು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಗರದ ಶಾಸಕರು, ಕಾರ್ಪೊರೇಟರ್‌ಗಳು ಪಕ್ಷಾತೀತವಾಗಿ ಆಗ್ರಹಿಸಿದರೂ ಪಾಲಿಕೆ ಬದ್ಧತೆ ತೋರುತ್ತಿಲ್ಲ ಎಂದು ಆರೋಪಿಸಲಾಗಿದೆ.

ಟ್ಯಾನರಿ ರಸ್ತೆಯಲ್ಲಿ ಡಿವೈಡರ್‌ ನಾಪತ್ತೆ?

ವಸಂತನಗರದ ಕಂಟೋನ್ಮೆಂಟ್‌ ಬಳಿಯಿಂದ ನಾಗವಾರ ಕಡೆಗೆ ಹೋಗುವ ವಾಹನಗಳಿಗೆ ಇರುವ ಪ್ರಮುಖ ಮಾರ್ಗ ಟ್ಯಾನರಿ ರಸ್ತೆ. ಎಂ.ಎಂ.ರಸ್ತೆಯಿಂದ ನಾಗವಾರ ಹೊರವರ್ತುಲ ರಸ್ತೆ ವರೆಗಿನ 4.61 ಕಿ.ಮೀ ಉದ್ದದ ಈ ರಸ್ತೆಯನ್ನು 6.45 ಮೀಟರ್‌ನಿಂದ 24 ಮೀಟರ್‌ಗೆ ಅಗಲೀಕರಿಸಿಲು .30.97 ಕೋಟಿಗೆ ಟೆಂಡರ್‌ ನೀಡಲಾಗಿದೆ. ಕಳೆದ ಮಾಚ್‌ರ್‍ನಲ್ಲಿ ಆಸ್ತಿ ಮಾಲಿಕರೊಂದಿಗೆ ಮಾತುಕತೆ ಯಶಸ್ವಿಯಾಯಿತು ಎಂದು ಹೇಳಿಕೊಂಡು ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಗುದ್ದಲಿ ಪೂಜೆ ನೆರವೇರಿಸಿದೆ. ಅದಾಗಿ ಏಳು ತಿಂಗಳೇ ಕಳೆದರೂ ಮತ್ತೆ ಅಲ್ಲಿನ ಜನರೊಂದಿಗೆ ಬಿಬಿಎಂಪಿ ಮಾತುಕತೆ ನಡೆಸುವ ಪ್ರಯತ್ನ ಮಾಡಿಲ್ಲ, ಇತ್ತ ರಸ್ತೆ ರಸ್ತೆ ಅಗಲೀಕರಣ ಕಾರ್ಯವನ್ನೂ ಆರಂಭಿಸಿಲ್ಲ ಎಂದು ಆರೋಪಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಧ್ಯೆ, ದ್ವಿಮುಖ ಸಂಚಾರವಿರುವ ಈ ರಸ್ತೆಯುದ್ದಕ್ಕೂ ಸುರಕ್ಷತೆಯ ಡಿವೈಡರ್‌ಗಳು ರಸ್ತೆ ಅಗಲೀಕರಣಕ್ಕೆ ಗುದ್ದಲಿಪೂಜೆಯಾದ ಬೆನ್ನಲ್ಲೇ ನಾಪತ್ತೆಯಾಗಿವೆ. ಕೊನೆಯ ಪಕ್ಷ ವಾಹನ ಡಿವೈಡರ್‌ ಮರು ಜೋಡಿಸಿ ಸುರಕ್ಷತೆಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ದ್ವಿಮುಖ ಸಂಚಾರವಿರುವ ಟ್ಯಾರರಿ ರಸ್ತೆಯಲ್ಲಿ ಸುರಕ್ಷತೆಗಾಗಿ ಹಾಕಲಾಗಿದ್ದ ಡಿವೈಡರ್‌ಗಳು ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆಯಾದ ಬೆನ್ನಲ್ಲೇ ನಾಪತ್ತೆಯಾಗಿವೆ. ಆಸ್ತಿ ಮಾಲಿಕರ ಮನವೊಲಿಸದೆ ರಸ್ತೆ ಡಿವೈಡರನ್ನೇ ತೆಗೆದುಹಾಕಿದೆ. ಇದರಿಂದ ಇಲ್ಲಿ ಮತ್ತಷ್ಟುಸಂಚಾರ ದಟ್ಟಣೆ ಉಂಟಾಗುತ್ತಿದೆ.

-ಸೈಯದ್‌, ನಾಗವಾರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ.

ಪಾದರಾಯನಪುರ ಮುಖ್ಯರಸ್ತೆ ಅಗಲೀಕರಣಕ್ಕೆ ವಿರೋಧ

ಪಾದರಾಯನಪುರ ವಾರ್ಡ್‌ನ ಬಿನ್ನಿಮಿಲ್‌ ಟ್ಯಾಂಕ್‌ ಬಂಡ್‌ ರಸ್ತೆಯಿಂದ ವಿಜಯನಗರ ಪೈಪ್‌ಲೈನ್‌ವರೆಗಿನ 1.85 ಕಿ.ಮೀ. ಉದ್ದದ ಮುಖ್ಯರಸ್ತೆಯನ್ನು .41.40 ಕೋಟಿ ವೆಚ್ಚದಲ್ಲಿ 80 ಅಡಿಗೆ ವಿಸ್ತರಿಸಲು (ಪ್ರಸ್ತುತ 9 ಮೀಟರ್‌ ಅಗಲವಿದೆ) ಬಿಬಿಎಂಪಿ ತೀರ್ಮಾನಿಸಿದೆ. ಆದರೆ, ಇದಕ್ಕೆ ಭೂಸ್ವಾಧಿನಕ್ಕೊಳಪಡುವ 230 ಆಸ್ತಿ ಮಾಲಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಗಲೀಕರಣ ಸರ್ವೇ ಕಾರ್ಯಕ್ಕೂ ವಿರೋಧಿಸಿದ್ದರು. ಅಗಲೀಕರಣ ನಿರ್ಧಾರ ಕೈಬಿಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಸ್ಥಳೀಯ ಬಿಬಿಎಂಪಿ ಸದಸ್ಯರೂ ಆದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್‌ ಪಾಷಾ, ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಟಿಡಿಆರ್‌ ಬದಲು ನಗದು ಪರಿಹಾರ ನೀಡಬೇಕು. ಇದಕ್ಕೆ ಪಾಲಿಕೆ ಒಪ್ಪುವುದಾದರೆ ಆಸ್ತಿ ಮಾಲೀಕರೊಂದಿಗೆ ಮಧ್ಯಸ್ತಿಕೆ ವಹಿಸಿ ಮನವೊಲಿಸುವುದಾಗಿ ಹೇಳಿದ್ದರು. ಒಟ್ಟಿನಲ್ಲಿ ನಗದು ಪರಿಹಾರಕ್ಕೆ ಬಿಬಿಎಂಪಿ ಒಪ್ಪುತ್ತಿಲ್ಲ, ಆಸ್ತಿ ಮಾಲೀಕರು ಟಿಡಿಆರ್‌ಗೆ ಮಣಿಯುತ್ತಿಲ್ಲ.

ನಾನು ಪಾದರಾಯನಪುರ ಮುಖ್ಯರಸ್ತೆಯಲ್ಲಿ 50 ವರ್ಷದಿಂದ ವಾಸವಿದ್ದು, ಜೀವನ ನಿರ್ವಹಣೆಗಾಗಿ ಸೈಕಲ್‌ ಶಾಪ್‌ ಮತ್ತು ಸಣ್ಣ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದೇನೆ. ಟಿಡಿಆರ್‌ ಪರಿಹಾರ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಆಗುತ್ತದೆಯೇ?

-ಉಸ್ಮಾನ್‌ ಖಾನ್‌, ಸ್ಥಳೀಯ ನಿವಾಸಿ.

ವರ್ತೂರು ರಸ್ತೆ: ಅರ್ಧ ಯಶಸ್ವಿ?

ವರ್ತೂರು ರಸ್ತೆಯನ್ನು ಗುಂಜೂರು ಮಾರ್ಗವಾಗಿ ಸರ್ಜಾಪುರ ರಸ್ತೆವರೆಗೆ 1.7 ಕಿ.ಮೀ. ಉದ್ದದ ರಸ್ತೆಯನ್ನು 45 ಮೀಟರ್‌ ಅಗಲೀಕರಣಕ್ಕೆ ನಿರ್ಧರಿಸಿ ನಾಲ್ಕೈದು ವರ್ಷಗಳೇ ಕಳೆದಿವೆ. ಗುತ್ತಿಗೆದಾರರಿಗೆ ಕಾರ್ಯಾದೇಶದ ಪತ್ರವನ್ನೂ ನೀಡಲಾಗಿದೆ. ಆದರೆ, ಟಿಡಿಆರ್‌ ಬದಲು ನಗದು ಪರಿಹಾರಕ್ಕಾಗಿ ಆಸ್ತಿ ಮಾಲಿಕರು ಮತ್ತು ಬಿಬಿಎಂಪಿ ನಡುವೆ ನಡೆದ ಹಗ್ಗಜಗ್ಗಾಟದಿಂದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಮಧ್ಯೆ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಆಸ್ತಿ ಮಾಲಿಕರು ಮತ್ತು ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿ ಒಂದು ಮಟ್ಟಕ್ಕೆ ಟಿಡಿಆರ್‌ ಪರಿಹಾರಕ್ಕೇ ಸ್ಥಳೀಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದನ್ನು ಕೆಲವರು ಒಪ್ಪಿದ್ದರೆ ಇನ್ನು ಕೆಲವರು ಒಪ್ಪಿಲ್ಲ. ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಅಗತ್ಯವಿದೆ. ಆ ನಂತರವಷ್ಟೇ ಸ್ಪಷ್ಟತೆ ದೊರೆಯಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಸರ್ಜಾಪುರ ರಸ್ತೆ ವಿಸ್ತರಣೆಗೆ ಅಪಸ್ವರ

ಮತ್ತೊಂದೆಡೆ ಇಬ್ಬಲೂರು ಜಂಕ್ಷನ್‌ನಿಂದ ಚಿಕ್ಕನಹಳ್ಳಿಯ ಕಾರ್ಮೆಲ್‌ರಾಮ್‌ನ ರೈಲ್ವೆ ಕೆಳಸೇತುವೆವರೆಗೆ 4.37 ಕಿ.ಮೀ ಉದ್ದದ ಸರ್ಜಾಪುರ ರಸ್ತೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 278 ಆಸ್ತಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಇವುಗಳ ಮಾಲಿಕರು ರಸ್ತೆ ವಿಸ್ತರಣೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಬೇಗೂರು ರಸ್ತೆ ವಿಸ್ತರಣೆಗೂ ಬಿಬಿಎಂಪಿ ಆಸಕ್ತಿ ತೋರಿದ್ದರೂ ಪರಿಹಾರದ ವಿಚಾರದಲ್ಲಿ ಒಪ್ಪತ ಮೂಡದೆ ನೆನೆಗುದಿಗೆ ಬಿದ್ದಿದೆ.

ಬನ್ನೇರುಘಟ್ಟರಸ್ತೆ ವಿಸ್ತರಣೆಗೆ ಕೂಡಿ ಬರದ ಕಾಲ!

ಜೇಡಿಮರ ಜಂಕ್ಷನ್‌ ನಿಂದ ನೈಸ್‌ ರಸ್ತೆವರೆಗೆ 7.5 ಕಿ.ಮೀ. ಉದ್ದದಷ್ಟುಬನ್ನೇರುಘಟ್ಟರಸ್ತೆ ಅಗಲೀಕರಹಣಕ್ಕೆ ಬಿಬಿಎಂಪಿ ನಿರ್ಧರಿಸಿ ವರ್ಷಗಳೇ ಕಳೆದಿದೆ. ಈ ರಸ್ತೆಯಲ್ಲಿ ಮೆಟ್ರೋ ಕೂಡ ಹಾದುಹೋಗಿರುವುದರಿಂದ ಮೆಟ್ರೋ ಯೋಜನೆಗೆ ವಶಪಡಿಸಿಕೊಂಡು ಆಸ್ತಿಗಳಿಗೆ ನಗದು ಪರಿಹಾರ ನೀಡಲಾಗಿದೆ. ಮೆಟ್ರೋ ಮಾದರಿಯಲ್ಲಿ ಅಷ್ಟೋ ಮೊತ್ತದ ನಗದು ಪರಿಹಾರವನ್ನೇ ನೀಡಿ ಎಂದು ಭೂಸ್ವಾಧೀನಕ್ಕೊಳಪಡುವ 421 ಆಸ್ತಿದಾರರು ಪಟ್ಟುಹಿಡಿದಿದ್ದಾರೆ. ಇತ್ತೀಚಿನ ಪಾಲಿಕೆ ಸಭೆಯಲ್ಲಿ ಸ್ಥಳೀಯ ಶಾಸಕ ಸತೀಶ್‌ ರೆಡ್ಡಿ ಕೊನೆಯ ಪಕ್ಷ ಟಿಡಿಆರ್‌ ಪರಿಹಾರವನ್ನು 1:2 ಬದಲು 1:3 (ಆಸ್ತಿ ಬೆಲೆಯ ಮೂರು ಪಟ್ಟು ದರದ ಟಿಡಿಆರ್‌)ಗೆ ಹೆಚ್ಚಿಸಿ ನೀಡಿದರೆ ಸ್ಥಳೀಯರ ಮನವೊಲಿಸುವ ಭರವಸೆ ನೀಡಿದ್ದರು. ಆದರೆ, ಇದಕ್ಕೆ ಒಪ್ಪದ ಬಿಬಿಎಂಪಿ ಈ ರಸ್ತೆಯ ಅಗಲೀಕರಣ ಕಾರ್ಯವನ್ನೂ ಹಾಗೇ ಉಳಿಸಿಕೊಂಡಿದೆ.

ಟೆಂಡರ್‌ ಆದರೂ ಬಳ್ಳಾರಿ ರಸ್ತೆ ವಿಸ್ತರಣೆ ವಿಳಂಬ!

ನಗರದ ಬಿಡಿಎ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗಿನ ಬಳ್ಳಾರಿ ರಸ್ತೆ (1.8 ಕಿ.ಮೀ) ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಮೇಖ್ರಿ ವೃತ್ತದವರೆಗಿನ ಜಯಮಹಲ್‌ ರಸ್ತೆ ವಿಸ್ತರಣೆಗೆ (2.8 ಕಿ.ಮೀ) ಬಿಬಿಎಂಪಿ ಟೆಂಡರ್‌ ಕರೆದಿದೆ. ಅರಮನೆ ಮೈದಾನದ ಸುತ್ತಲಿನ ರಸ್ತೆಗಳ ವಿಸ್ತರಣೆಗೆ ಒಟ್ಟು 15.39 ಎಕರೆ ಭೂಮಿ ಬೇಕಿದೆ. ಇದರಲ್ಲಿ ಮೈಸೂರು ರಾಜವಂಶಸ್ಥರಿಗೆ ಸೇರಿದ ಭೂಮಿಯೇ 13.10 ಎಕರೆಯಷ್ಟಿದೆ. ಬಿಡಿಎ ಜಂಕ್ಷ ನ್‌ನಿಂದ ಮೇಖ್ರಿ ವೃತ್ತದವರೆಗಿನ ರಸ್ತೆಯನ್ನು 45 ಮೀಟರ್‌ಗೆ (150 ಅಡಿ) ವಿಸ್ತರಿಸಲು ಪಾಲಿಕೆ ಉದ್ದೇಶಿಸಿದೆ. ಈ ರಸ್ತೆ ವಿಸ್ತರಣೆಗೆ 6.19 ಎಕರೆ, ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣದವರೆಗಿನ ರಸ್ತೆ ವಿಸ್ತರಣೆಗೆ 9.20 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ 112 ಮರಗಳ ಪೈಕಿ 52 ಮರಗಳನ್ನು ಸ್ಥಳಾಂತರಿಸಲಾಗಿದೆ. ಆದರೂ, ಇನ್ನೂ ರಸ್ತೆ ವಿಸ್ತರಣೆ ಕಾರ್ಯ ಮಾತ್ರ ಆರಂಭವಾಗಿಲ್ಲ.

Follow Us:
Download App:
  • android
  • ios