Asianet Suvarna News Asianet Suvarna News

ಬಳ್ಳಾರಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಸಿರುಗುಪ್ಪ, ಬಳ್ಳಾರಿ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಧಾರಾಕಾರ ಮಳೆ| ಆಂಧ್ರಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಗಡಿ ಪ್ರದೇಶ ಗ್ರಾಮಗಳ ವ್ಯಾಪ್ತಿಗೆ ಬರುವ ಸಾವಿರಾರು ಎಕರೆ ಬೆಳೆಗಳು ಜಲಾವೃತ| ಹೊಲ- ಗದ್ದೆಗಳಲ್ಲಿದ್ದ ರೈತರ ನೂರಾರು ಪಂಪ್ ಸೆಟ್‌ಗಳು ಮಳೆಗೆ ಕೊಚ್ಚಿಕೊಂಡು ಹೋಗಿವೆ| ಮಳೆಗಾಗಿ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ|  ಮಳೆ ನೀರಿನಿಂದ ಕೊಟ್ಟೂರು ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ| 

Heavy rain in Ballari District
Author
Bengaluru, First Published Sep 26, 2019, 3:15 PM IST

ಬಳ್ಳಾರಿ(ಸೆ.26): ಜಿಲ್ಲಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಸಿರುಗುಪ್ಪ, ಬಳ್ಳಾರಿ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆಯ ಜತೆಗೆ ಆಂಧ್ರಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಗಡಿ ಪ್ರದೇಶ ಗ್ರಾಮಗಳ ವ್ಯಾಪ್ತಿಗೆ ಬರುವ ಸಾವಿರಾರು ಎಕರೆ ಬೆಳೆಗಳು ಜಲಾವೃತಗೊಂಡಿವೆ.

ಹೊಲ- ಗದ್ದೆಗಳಲ್ಲಿದ್ದ ರೈತರ ನೂರಾರು ಪಂಪ್ ಸೆಟ್‌ಗಳು ಮಳೆಗೆ ಕೊಚ್ಚಿಕೊಂಡು ಹೋಗಿವೆ. ಕೊಟ್ಟೂರಿನಲ್ಲಿ ಕಳೆದ ರಾತ್ರಿಯಿಂದ ಸತತವಾಗಿ ಮಳೆಯಾಗುತ್ತಿದೆ. ಮಳೆಗಾಗಿ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಳೆ ನೀರಿನಿಂದ ಕೊಟ್ಟೂರು ಪಟ್ಟಣದ ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬಳ್ಳಾರಿ ತಾಲೂಕಿನ ಚಾನಾಳ್, ಹಂದಿಹಾಳ್, ಡಿ. ಕಗ್ಗಲ್, ಕೊರಲಗುಂದಿ, ದಮ್ಮೂರು, ಕೋಳೂರು, ಸೋಮಸಮುದ್ರ, ಮದಿರೆ, ವದ್ದಟ್ಟಿ, ಬಾದನಹಟ್ಟಿ, ಲಕ್ಷ್ಮಿನಗರ ಕ್ಯಾಂಪ್ ಸೇರಿದಂತೆ ಅನೇಕ ಕಡೆ ಮಂಗಳವಾರ ರಾತ್ರಿ ಇಡೀ ಧಾರಾಕಾರ ಮಳೆ ಸುರಿದಿದ್ದು, ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಜಲಾವೃತಗೊಂಡಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಹಂದಿಹಾಳು ಗ್ರಾಮಕ್ಕೆ ಸೇರಿದ ೩೦೦ಕ್ಕೂ ಹೆಚ್ಚು ಎಕರೆ ಬತ್ತ ಪ್ರದೇಶ ಜಲಾವೃತವಾಗಿದೆ. ಡಿ. ಕಗ್ಗಲ್ ಗ್ರಾಮದ ಸಂಪರ್ಕಕ್ಕೆ ನಿರ್ಮಿಸಿದ್ದ ರಸ್ತೆ ಭಾಗಶಃ ಹಾಳಾಗಿದೆ. ಮಳೆಯ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ನಾಶವಾಗುವ ಭೀತಿ ಎದುರಾಗಿದೆ. 

ಮಳೆ ನೀರಿನ ಹಾವಳಿ:

ಸತತ ಮೂರು ದಿನಗಳಿಂದ ಸುರಿಯುವ ಮಳೆಗೆ ನಗರದ ನಿವಾಸಿಗಳು ರೋಸಿ ಹೋಗಿದ್ದಾರೆ. ಇಲ್ಲಿನ ವಿಶಾಲ ನಗರ, ರೇಣುಕಾನಗರ, ವಿದ್ಯಾನಗರ, ಬಾಪೂಜಿ ನಗರ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ 20ಕ್ಕೂ ಹೆಚ್ಚು ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ. ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟಕ್ಕೂ ಅಡ್ಡಿಯಾಗಿದೆ. 

ಕೂಡ್ಲಿಗಿಯಲ್ಲಿ ಮನೆಗಳಿಗೆ ಹಾನಿ: ಕೂಡ್ಲಿಗಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ನುಂಕನಹಳ್ಳಿ, ಗಂಡಬೊಮ್ಮನಹಳ್ಳಿ ಗ್ರಾಮಗಳಲ್ಲಿ ಅನೇಕ ಮನೆಗಳು ಜಖಂಗೊಂಡಿವೆ. ಕೂಡ್ಲಿಗಿ ಸಮೀಪದ ಅಮರದೇವರ ಗುಡ್ಡ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಹಳೆಯ ಮನೆಗಳು ಭಾಗಶಃ ಹಾನಿಯಾಗಿವೆ. 

ನೀರಿನ ಮಧ್ಯ ಸಿಲುಕಿದ್ದ ನಾಲ್ವರ ರಕ್ಷಣೆ

ಸಿರುಗುಪ್ಪ ತಾಲೂಕಿನ ಗುಂಡಿಗನೂರು ಗ್ರಾಮದ ಹತ್ತಿರವಿರುವ ಕೆರೆಯ ಸಮೀಪ ಶ್ರೀನಿವಾಸ ಎನ್ನುವ ವ್ಯಕ್ತಿಗೆ ಸೇರಿದ ಕುಟುಂಬ ವಾಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಕೆರೆಗೆ ಹೆಚ್ಚು ನೀರು ಹರಿದು ಬಂದಿದ್ದರಿಂದ ಶ್ರೀನಿವಾಸ್ ಅವರ ಮನೆಯ ಸುತ್ತಲೂ ನೀರು ಆವರಿಸಿದ್ದರಿಂದ ಅವರನ್ನು ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. 

ತೆಕ್ಕಲಕೋಟೆ ಹೋಬಳಿಯ ಕಂದಾಯ ನಿರೀಕ್ಷಕ ರಾಜೇಂದ್ರ ದೊರೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸ್ ಎನ್ನುವ ವ್ಯಕ್ತಿಗೆ ಸೇರಿದ ಕುಟುಂಬವು ನೀರಿನ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ತಿಳಿಯುತ್ತಿದ್ದಂತೆ ಸ್ಥಳಿಯ ಈಜುಗಾರ ಈರಣ್ಣ ಮತ್ತವರ ಸಹಚರರು ತೆಪ್ಪದ ಮೂಲಕ ಶ್ರೀನಿವಾಸ ಮತ್ತು ಅವರ ಪತ್ನಿ ಕನಕಮಹಾಲಕ್ಷ್ಮಿ, ತಾಯಿ ರಾಧಾ, ಮಗ ಮಧುತೇಜರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದರು. 

ಸಿರುಗುಪ್ಪ: 81 ಮನೆ ಕುಸಿತ, ಹಳ್ಳಕೊಳ್ಳ ಭರ್ತಿ

ಸಿರುಗುಪ್ಪ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು ೮೧ ಮನೆಗಳು ಭಾಗಶಃ ಕುಸಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದರಿಂದ ಕೆಲವು ಗ್ರಾಮಗಳಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಮತ್ತು  ಸಾರ್ವಜನಿಕರಿಗೆ ತೊಂದರೆಯಾಗಿತ್ತು. 

ತಾಲೂಕಿನ ತೆಕ್ಕಲಕೋಟೆ 17, ಕರೂರು 16 , ಸಿರುಗುಪ್ಪ 16 , ಹಚ್ಚೊಳ್ಳಿ ಹೋಬಳಿಗಳಲ್ಲಿ 32  ಒಟ್ಟು 81  ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಲೂಕಿನಲ್ಲಿರುವ ವೇದಾವತಿ ಹಗರಿ ನದಿ, ಯಲ್ಲಮ್ಮನ ಹಳ್ಳ, ಗರ್ಜಿಹಳ್ಳ, ದೊಡ್ಡಹಳ್ಳ, ಕೆಂಚಿಹಳ್ಳ, ಕುಲ್ಡನಾಲು, ಗೋಸಬಾಳು ಹಳ್ಳ, ಬೂದುಗುಪ್ಪ ಹಳ್ಳ, ಕರೂರು ಹಳ್ಳ, ಬೈರಾಪುರ ಹಳ್ಳಗಳು ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವುದರಿಂದ ಈ ಭಾಗದ ಗ್ರಾಮಗಳಿಗೆ ಬಸ್ ಸಂಚಾರವಿಲ್ಲದೆ ಗುಂಪು ಗುಂಪಾಗಿ ನೀರಿನಲ್ಲಿ ನಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. 

ಉತ್ತರೆ ಮಳೆಯು ತಾಲೂಕಿನಾದ್ಯಂತ ಸುರಿದಿದ್ದರಿಂದ ಶಾಲೆಗಳ ಆವರಣಗಳಿಗೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದಕ್ಕೂ ಅವಕಾಶವಿರಲಿಲ್ಲ. ಕೆಸರು ಗದ್ದೆಯಂತಾದ ಆವರಣದಿಂದಲೇ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿದರು. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ತಾಲೂಕಿನಾದ್ಯಂತ ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ, ಹತ್ತಿ ಬೆಳೆಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. 

ತಹಸೀಲ್ದಾರ್ ದಯಾನಂದ ಪಾಟೀಲ್ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಬಿದ್ದ ಮನೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಾದ್ಯಂತ ಎರಡು ದಿನಗಳ ಕಾಲ ಮಳೆ ಸುರಿದಿದ್ದರಿಂದ ಸುಮಾರು 81 ಮನೆಗಳು ಭಾಗಶಃ ಕುಸಿದಿದ್ದು, ಮನೆ ಕುಸಿದ ಬಗ್ಗೆ ಜಿಲ್ಲಾಡಳಿತ್ಕೆ ವರದಿ ಸಲ್ಲಿಸಿ ಪರಿಹಾರಧನ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಗುಂಡಿಗನೂರು ಗ್ರಾಮದ ಕೆರೆ ಹತ್ತಿರ ವಾಸವಿದ್ದ ಶ್ರೀನಿವಾಸ ಎನ್ನುವ ವ್ಯಕ್ತಿಯ ಮನೆಯು ಕೆರೆನೀರಿನಿಂದ ಆವೃತವಾಗಿದ್ದು, ಶ್ರೀನಿವಾಸ ಮತ್ತವರ ಕುಟುಂಬದ ಸದಸ್ಯರನ್ನು ಹರಿಗೋಲು ಮೂಲಕ ರಕ್ಷಣೆ ಮಾಡಲಾಗಿದೆ. 

ತಾಲೂಕಿನಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸೇತುವೆಗಳು ಮುಳುಗಿದ್ದು, ಸೇತುವೆಗಳ ರಸ್ತೆಯನ್ನು ಸೂಚಿಸಲು ಮುಳುಗಿರುವ ಸೇತುವೆಗಳ ಸ್ಥಳದಲ್ಲಿ ಕೆಂಪು ಧ್ವಜಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂರು ದಿನಗಳ ಕಾಲ ತಾಲೂಕಿನಲ್ಲಾದ ಹಾನಿ ಕುರಿತು ವರದಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. 

Follow Us:
Download App:
  • android
  • ios