Asianet Suvarna News Asianet Suvarna News

ಹಾನಗಲ್ಲ ತಾಲೂಕಿಗೆ ನೀರಾವರಿ ಯೋಜನೆಗೆ ಒಪ್ಪಿಗೆ: ರೈತರ ಹರ್ಷ

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಉತ್ತರ ಭಾಗದ ರೈತರ ನೀರಾವರಿ ಕನಸನ್ನು ಬಾಳಂಬೀಡ ಏತ ನೀರಾವರಿ ಯೋಜನೆಗೆ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ| ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ರೂಪುಗೊಂಡಿತ್ತು| ಈಗ ಸಚಿವ ಸಂಪುಟದಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆಗೆ 386 ಕೋಟಿ ರು. ವೆಚ್ಚದಲ್ಲಿ 162 ನೀರಾವರಿ ಕೆರೆ ತುಂಬುವ ಹಾಗೂ 117 ಕೋಟಿ ರು. ವೆಚ್ಚದಲ್ಲಿ ಹಿರೇಕಾಂಶಿ ಭಾಗದ 78 ನೀರಾವರಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆತಿದೆ| 

Farmers Happy For State Cabinet Decide Hangall Taluka Irrigation Project
Author
Bengaluru, First Published Oct 7, 2019, 2:37 PM IST

ಹಾನಗಲ್ಲ(ಅ.7): ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಉತ್ತರ ಭಾಗದ ರೈತರ ನೀರಾವರಿ ಕನಸನ್ನು ಬಾಳಂಬೀಡ ಏತ ನೀರಾವರಿ ಯೋಜನೆಗೆ ಮಂಜೂರಿ ನೀಡುವ ಮೂಲಕ ನನಸಾಗಿಸಿದ ಸರ್ಕಾರದ ಸಚಿವ ಸಂಪುಟದ ನಿರ್ಧಾರ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ರೂಪುಗೊಂಡಿತ್ತು. ನಂತರದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಜಾರಿಯಾಗುವುದೆಂಬ ವಿಶ್ವಾಸ ರೈತರಲ್ಲಿ ಮೂಡಿತ್ತು. ಆಗೀಗ ಒಂದಷ್ಟು ಹೋರಾಟಗಳು ಕೂಡ ಈ ಅವಧಿಯಲ್ಲಿ ನಡೆದಿದ್ದವು. ಇದಕ್ಕಾಗಿ ರೈತರು ಇಂದಲ್ಲ ನಾಳೆ ಈ ಯೋಜನೆ ಜಾರಿಯಾಗುವ ವಿಶ್ವಾಸ ಹೊಂದಿದ್ದರಾದರೂ ಸರ್ಕಾರಗಳ ಇಚ್ಛಾಶಕ್ತಿಗೆ ಇದು ಸವಾಲಾಗಿತ್ತು. ಈಗ ಸಚಿವ ಸಂಪುಟದಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆಗೆ 386 ಕೋಟಿ ರು. ವೆಚ್ಚದಲ್ಲಿ 162 ನೀರಾವರಿ ಕೆರೆ ತುಂಬುವ ಹಾಗೂ 117 ಕೋಟಿ ರು. ವೆಚ್ಚದಲ್ಲಿ ಹಿರೇಕಾಂಶಿ ಭಾಗದ 78 ನೀರಾವರಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದೊಮ್ಮೆ ಬತ್ತಿ ಕೆರೆ ಕಾಲುವೆ ಯೋಜನೆಯನ್ನು ಜಾರಿ ಮಾಡಿ ಕಾಮಗಾರಿಯೂ ಮುಗಿಯಿತು. ಆದರೆ ಮಳೆಯ ವಿಪರೀತ ಅಭಾವದ ಕಾರಣದಿಂದಾಗಿ ಈ ಕಾಲುವೆ ಮೂಲಕ ನೀರು ಹರಿಯದೆ ರೈತರು ಮತ್ತೆ ನಿರಾಶೆಯ ಮಡಿಲಲ್ಲಿ ತೊಳಲಾಡುವಂತಾಗಿತ್ತು. ಆ ದಿನದಿಂದಲೇ ಬಾಳಂಬೀಡ ಏತ ನೀರಾವರಿ ಯೋಜನೆ ಸಫಲವಾಗಬೇಕೆಂಬ ಕನಸು ಹೊತ್ತ ರೈತರಿಗೆ ಈಗ ಈ ಯೋಜನೆಯ ಜಾರಿ ಹೊಸ ಆಶಾಕಿರಣ ಮೂಡಿಸಿದೆ. 

ಹಾನಗಲ್ಲ ತಾಲೂಕಿನ ಉತ್ತರ ಭಾಗದಲ್ಲಿ ಯಾವುದೇ ನೀರಾವರಿ ಯೋಜನೆಗಳ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಬಹುಪಾಲು ಕೊಳವೆ ಬಾವಿಗಳನ್ನೆ ಅವಲಂಬಿಸಿದ ನೀರಾವರಿ ಅಂತರ್ಜಲ ಕುಸಿತದಿಂದಾಗಿ ಕೃಷಿಕನ ಬದುಕಿನಲ್ಲಿ ನಡುಕ ಆರಂಭವಾಗಿತ್ತು. ನೂರಾರು ಎಕರೆ ತೋಟಗಳು ಒಣಗಿ ಹೋಗಿವೆ. ಈಗ ಮತ್ತೆ ತೋಟ ಮತ್ತು ನೀರಾವರಿ ಮೂಲಕ ರೈತರು ಬದುಕು ಕಟ್ಟಿಕೊಳ್ಳುವ ಆಸೆ ಚಿಗುರಿದ್ದು, ಸರ್ಕಾರದ ಈ ಕ್ರಮ ಅತ್ಯಂತ ಸಂತಸಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿದ ಹಾನಗಲ್ಲ ಶಾಸಕ ಸಿ.ಎಂ. ಉದಾಸಿ ಅವರು, ಹಾನಗಲ್ಲ ತಾಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸುವ ನನ್ನ ಕನಸಿನ ಈ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿರುವುದು ಅಭಿನಂದನೀಯ. ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದರೆ ರೈತರು ಯಾರಲ್ಲೂ ಕೈಚಾಚುವ ಪ್ರಸಂಗಗಳಿಲ್ಲ. ಇದು ಹತ್ತು ವರ್ಷಗಳಿಂದ ನಡೆಸಿದ ಪ್ರಯತ್ನ ಈಗ ಸಫಲವಾಗಿದೆ. ಬಾಳಂಬೀಡ ಹಾಗೂ ಹಿರೇಕಾಂಶಿ ಪ್ರದೇಶದ ಕೃಷಿ ಭೂಮಿಗೆ ಈ ಏತ ನೀರಾವರಿ ಯೋಜನೆ ಹೊರತುಪಡಿಸಿ ಬೇರೆ ನೀರಾವರಿ ಮೂಲಗಳನ್ನು ನೀಡುವ ಸಾಧ್ಯತೆ ಕ್ಷೀಣವಾದವು. ಈ ಯೋಜನೆಯನ್ನು ಶೀಘ್ರ ಆರಂಭಿಸಿ ರೈತರ ಕನಸನ್ನು ನನಸು ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದ್ದಾರೆ. 

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರವರಿ ಯೋಜನೆಗೆ ದೊಡ್ಡ ಪ್ರಮಾಣದ ಹೋರಾಟ ನಡೆಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರೂ ಫಲ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಅಗತ್ಯಕ್ಕೆ ಸ್ಪಂದಿಸಿ ಈ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದ್ದು ತಾಲೂಕಿನ ನೀರಾವರಿ ಇತಿಹಾಸಕ್ಕೆ ಹೊಸ ಮೈಲುಗಲ್ಲಾಗಿದೆ. ಶೀಘ್ರ ಗುಣಮಟ್ಟದ ಕಾಮಗಾರಿ ನಡೆದು ಶಾಸಕ ಸಿ.ಎಂ.ಉದಾಸಿ ಅವರ ಶ್ರಮ ಸಾರ್ಥಕವಾಗಲಿ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಅವರು ತಿಳಿಸಿದ್ದಾರೆ.  
 

Follow Us:
Download App:
  • android
  • ios