Asianet Suvarna News Asianet Suvarna News

ಫೆಬ್ರವರಿಯಲ್ಲಿ ಚುನಾವಣೆ : ಕಾಂಗ್ರೆಸ್ ಶಾಸಕರ ಹೊರಹಾಕಲು ಮಾಸ್ಟರ್ ಪ್ಲಾನ್

2020ರ ಫೆಬ್ರವರಿ ತಿಂಗಳಲ್ಲಿ ಚುನಾವಣೆ ಬರುವ ಮುನ್ಸೂಚನೆಯನ್ನು ತಿಳಿದಿರುವ ಮಾಜಿ ಸಂಸದರೋರ್ವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. 

Congress Leader KH Muniyappa Will Plan For Next Election
Author
Bengaluru, First Published Sep 18, 2019, 1:37 PM IST

ಕೋಲಾರ [ಸೆ.18]: ರಾಜ್ಯ ವಿಧಾನಸಭಾ ಚುನಾವಣೆ 2020ರ ಫೆಬ್ರವರಿ ತಿಂಗಳಲ್ಲಿ ಬರುವ ಮುನ್ಸೂಚನೆಯನ್ನು ತಿಳಿದಿರುವ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಜಿಲ್ಲೆಯಲ್ಲಿ ಮುಂದಿನ ಬಾರಿ ತಮ್ಮದೆ ತಂಡ ಕಟ್ಟಿಕೊಂಡು ವಿಧಾನಸಭೆ ಚುನಾವಣೆ ಎದುರಿಸಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲೆಯ ಹಾಲಿ ಶಾಸಕರನ್ನು ಹೊರಹಾಕಿ ಜೆಡಿಎಸ್‌ನಲ್ಲಿರುವ ಮಾಜಿ ಶಾಸಕರು ಮತ್ತು ಇತರೆ ಮುಖಂಡರನ್ನು ಸೆಳೆಯಲು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮುಂದಾಗಿದ್ದಾರೆ. ಆದರೆ ಅವರ ಈ ಪ್ಲಾನ್‌ಗೆ ಹೈಕಮಾಂಡ್‌ ಸದ್ಯದ ಪರಿಸ್ಥಿತಿಯಲ್ಲಿ ಯಾವುದನ್ನೂ ಕೆಣಕುವುದು ಬೇಡ, ಸುಮ್ಮನಿದ್ದರೆ ಒಳ್ಳೆಯದು ಎನ್ನುವ ತಂತ್ರವನ್ನು ಅನುಸರಿಸುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕೆ.ಎಚ್‌.ಮುನಿಯಪ್ಪ ಇನ್ನೂ ತಣ್ಣಗಾಗಿಲ್ಲ. ತಮಗಾದ ಈ ಸೋಲಿಗೆ ವಿರೋಧಿಗಳನ್ನು ಮಣಿಸಲೇಬೇಕೆಂದು ಪಣತೊಟ್ಟಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕರಾದ ರಮೇಶ್‌ಕುಮಾರ್‌, ವಿ.ಮುನಿಯಪ್ಪ, ಎಸ್‌.ಎನ್‌.ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ ನಸೀರ್‌ ಅಹಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಮುಂತಾದವರೆಲ್ಲಾ ಕೈಕೊಟ್ಟಿದ್ದರು. ಮುನಿಯಪ್ಪಗೆ ಸೋಲಿನ ರುಚಿ ತೋರಿಸಲು ಬಿಜೆಪಿಯ ಎಸ್‌.ಮುನಿಸ್ವಾಮಿ ಅವರನ್ನು ಬೆಂಬಲಿಸಿ ಗೆಲ್ಲಿಸಿದರು.

ಚುನಾವಣೆ ಮುಗಿದು 5 ತಿಂಗಳಾದರೂ ಈ ಸೋಲನ್ನು ಮರೆಯಲಾಗದೆ ಸೋಲಿಸಿದವರ ಬೆನ್ನು ಬಿದ್ದಿರುವ ಮುನಿಯಪ್ಪ, ಎಲ್ಲರನ್ನೂ ಪಕ್ಷದಿಂದ ಉಚ್ಚಾಟಿಸಲು ಹೈಕಮಾಂಡ್‌ ಹಂತದಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ರಮೇಶ್‌ ಕುಮಾರ್‌, ವಿ.ಮುನಿಯಪ್ಪ, ಎಸ್‌.ಎನ್‌.ನಾರಾಯಣಸ್ವಾಮಿ, ನಸೀರ್‌ ಅಹಮದ್‌ ಅವರನ್ನು ಪಕ್ಷದಿಂದ ಹೊರಹಾಕಿ ಅವರ ಜಾಗಕ್ಕೆ ಜೆಡಿಎಸ್‌ನ ವೆಂಕಟಶಿವಾರೆಡ್ಡಿ, ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್‌, ಶಿಡ್ಲಘಟ್ಟದಲ್ಲಿ ರಾಜಣ್ಣ ಅಥವಾ ರವಿ, ಬಂಗಾರಪೇಟೆಯ ರಾಮಚಂದ್ರಪ್ಪ, ಮುಳಬಾಗಿಲಿನಲ್ಲಿ ಸಮೃದ್ಧಿ ಮಂಜುನಾಥ್‌, ಚಿಂತಾಮಣಿಯ ಜೆಡಿಎಸ್‌ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ಪಕ್ಷಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಹಗಲು- ರಾತ್ರಿ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ವರ್ತೂರು ಪ್ರಕಾಶ್‌ ಅವರನ್ನು ಕಾಂಗ್ರೆಸ್‌ಗೆ ತಂದು ಚುನಾವಣೆಯಲ್ಲಿ ತಮ್ಮ ಬೆನ್ನಿಗೆ ಚೂರಿ ಹಾಕಿದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರನ್ನೂ ಕ್ಷೇತ್ರದಲ್ಲಿ ಮಣಿಸುವ ತಂತ್ರ ನಡೆಸುತ್ತಿದ್ದಾರೆ. ಹಿಂದೆ ವರ್ತೂರ್‌ ಪ್ರಕಾಶ್‌ ಅವರನ್ನು ಉಳಿಸಿಕೊಂಡು ಶ್ರೀನಿವಾಸಗೌಡರನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷದಿಂದ ಜಮೀರ್‌ ಅಹಮದ್‌ ಅವರಿಗೆ ಟಿಕೆಟ್‌ ಕೊಡಿಸಲಾಗಿತ್ತು. ಆದರೆ ಮುನಿಯಪ್ಪರ ಈ ತಂತ್ರವನ್ನು ಅರಿತಿದ್ದ ಮತದಾರರು ಒಟ್ಟಾಗಿ ಶ್ರೀನಿವಾಸಗೌಡರನ್ನು 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಇಷ್ಟಾದರೂ ಸುಮ್ಮನಾಗದ ಮುನಿಯಪ್ಪ ಜಿಲ್ಲೆಯಲ್ಲಿ ಮತ್ತೊಂದು ಸುತ್ತು ರಾಜಕೀಯ ತಂತ್ರಗಳನ್ನು ಹೆಣೆದು ಘಟಾನುಘಟಿ ನಾಯಕರನ್ನೆಲ್ಲಾ ಮುಗಿಸಲು ತಂತ್ರ ರೂಪಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವ ಗೀತಮ್ಮ ಆನಂದರೆಡ್ಡಿ ಅವರನ್ನು ಕೆಳಗಿಳಿಸಿ ವರ್ತೂರ್‌ ಪ್ರಕಾಶ್‌ ಬಣದ ಸಿ.ಎಸ್‌.ವೆಂಕಟೇಶ್‌ ಅವರನ್ನು ತರುವ ಪ್ರಯತ್ನವೂ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಈಗಾಗಲೇ ಜಿ.ಕೆ.ವೆಂಕಟಶಿವಾರೆಡ್ಡಿ ಬಳಿ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನೂ ತಮಗೆ ಬೇಕಾದವರಿಗೆ ಕೊಡಿಸಿ ಜಿಲ್ಲೆಯ ಕಾಂಗ್ರೆಸ್‌ ಹಿಡಿತವನ್ನು ತಮ್ಮಲ್ಲಿ ಇರಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಶ್ರೀನಿವಾಸಪುರದಲ್ಲಿ ರಮೇಶ್‌ ಕುಮಾರ್‌ ಅವರನ್ನು ಎದುರಿಸಲು ಶಕ್ತಿ ಸಾಮರ್ಥ್ಯ ಬೆಳೆಸಿಕೊಂಡಿರುವ ದಳಸನೂರು ಗೋಪಾಲ್‌ ಅವರ ತಲೆಗೆ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ.

ಬಸವರಾಜ ರಾಯರಡ್ಡಿ ವರದಿ:

ರಮೇಶ್‌ ಕುಮಾರ್‌ ಸೇರಿದಂತೆ ಅವರ ತಂಡದಲ್ಲಿ ಗುರುತಿಸಿ ಕೊಂಡವರನ್ನು ಪಕ್ಷದಿಂದ ಹೊರಹಾಕಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಮುನಿಯಪ್ಪ ದೂರು ಕೊಟ್ಟಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಇತ್ತೀಚೆಗೆ ಸತ್ಯಶೋಧನೆ ಹೆಸರಿನಲ್ಲಿ ಕೋಲಾರಕ್ಕೆ ಆಗಮಿಸಿದ್ದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಳಜಗಳ ಮೊದಲಿನಿಂದಲೂ ಇದೆ. ಒಬ್ಬರ ಕಾಲು ಮತ್ತೊಬ್ಬರು ಎಳೆಯುವ ವಿಚಾರವೂ ಹೊಸದಲ್ಲ. ವಿ.ಮುನಿಯಪ್ಪ ಸೇರಿದಂತೆ ರಮೇಶ್‌ ಕುಮಾರ್‌, ನಸೀರ್‌ ಅಹಮದ್‌ ಅವರನ್ನು ತುಳಿಯಲು ಮುನಿಯಪ್ಪ ಅವರು ತಂತ್ರ ನಡೆಸಿದ್ದರೆಂಬ ದೂರುಗಳೂ ಇವೆ. ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿ ಮುನಿಯಪ್ಪ ಅವರನ್ನು ಸೋಲಿಸಿದರು ಎಂದು ಹೈಕಮಾಂಡ್‌ಗೆ ವರದಿ ನೀಡಿದ್ದರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ವೇಳೆ ರಮೇಶ್‌ ಕುಮಾರ್‌ ಅವರು ಸ್ಪೀಕರ್‌ ಆಗಿ ತೆಗೆದುಕೊಂಡ ತೀರ್ಮಾನಗಳು ಮತ್ತು ನೀಡಿದ ಆದೇಶಗಳನ್ನು ಗಮನಿಸಿದ ಹೈಕಮಾಂಡ್‌, ಇಂತಹ ರಾಜಕೀಯ ಚಾಣಕ್ಷನ ಜತೆಗೆ ನಸೀರ್‌ ಅಹಮದ್‌ ಅಂತಹ ಮುಸ್ಲಿಂ ನಾಯಕ ಹಾಗೂ ಶಿಡ್ಲಘಟ್ಟದ ವಿ.ಮುನಿಯಪ್ಪ ಅವರನ್ನು ಪಕ್ಷದಿಂದ ಹೊರಹಾಕಲು ಸಾಧ್ಯವೇ ಎಂಬ ಮಾತು ಕೇಳಿ ಬರುತ್ತಿದೆ.

ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್‌ ಪಾತಾಳಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ಯಾವುದನ್ನೂ ಕೆಣಕುವುದು ಬೇಡ ಎಂದು ಹೇಳಿ ಹೈಕಮಾಂಡ್‌ ತಿಪ್ಪೆ ಸಾರಿಸುತ್ತಿದೆ. ಈ ಸ್ಥಿತಿಯಲ್ಲಿ ಮುನಿಯಪ್ಪ ತೌಡು ಕುಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಮೂಲವೊಂದು ತಿಳಿಸಿದೆ.

ಮುನಿಯಪ್ಪ ನಡೆಸುತ್ತಿರುವ ಈ ಎಲ್ಲ ತಂತ್ರಗಳ ಮಧ್ಯೆ ರಮೇಶ್‌ ಕುಮಾರ್‌ ತಮಗೇನೂ ಗೊತ್ತಿಲ್ಲ ಎನ್ನುವಂತೆ ಮೌನವಾಗಿದ್ದಾರೆ.

Follow Us:
Download App:
  • android
  • ios