Asianet Suvarna News Asianet Suvarna News

ಕೇಂದ್ರದ ಬಳಿ ಹಣ ಇಲ್ಲ, ಪರಿಹಾರ ಎಲ್ಲಿಂದ ಕೊಡ್ತಾರೆ: ಸಿದ್ದರಾಮಯ್ಯ

ನೋಟ್‌ ಬ್ಯಾನ್‌, ಜಿಎಸ್‌ಟಿಯಿಂದ ಕೇಂದ್ರ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಸಿದ್ದರಾಮಯ್ಯ| ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಜತೆ ಕಾಂಗ್ರೆಸ್‌ ಪಕ್ಷವಿದೆ| ಡಿಕೆಶಿ ಜತೆ ಕಾನೂನಾತ್ಮಕ, ರಾಜಕೀಯ ಹೋರಾಟದ ಜತೆ ಪಕ್ಷ ಇರಲಿದೆ|ಈಶ್ವರಪ್ಪನಿಗೆ ಸಂಸ್ಕೃತಿಯಿಲ್ಲ, ರಾಜಕೀಯ ಭಾಷೆ, ಪ್ರೌಢಮೆ ಇಲ್ಲ ಅವರ ಬಗ್ಗೆ ಮಾತನಾಡದಿರುವುದೆ ಒಳ್ಳೆಯದು ಎಂದ  ಸಿದ್ದರಾಮಯ್ಯ| 

Central Government Does not Have Money: Siddaramaih
Author
Bengaluru, First Published Sep 21, 2019, 2:56 PM IST

ಚನ್ನರಾಯಪಟ್ಟಣ: (ಸೆ.21) ನೋಟ್‌ ಬ್ಯಾನ್‌, ಜಿಎಸ್‌ಟಿ ಜಾರಿ ಪರಿಣಾಮ ಅರ್ಥಿಕ ದಿವಾಳಿ ಎದುರಿಸುತ್ತಿರುವ ಕೇಂದ್ರ ಸರ್ಕಾರದ ಬಳಿ ಹಣ ಇಲ್ಲ. ಇದರ ಪರಿಣಾಮ ರಾಜ್ಯದಲ್ಲಿ ಪ್ರವಾಹ ಬಂದು 50 ದಿನ ಕಳೆದರೂ ನಯಾಪೈಸೆ ಪರಿಹಾರ ಹಣ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ರಾಜ್ಯದ ಏಳೆಂಟು ಲಕ್ಷ ಜನ ಬೀದಿಪಾಲಾಗಿ, 2.5 ಲಕ್ಷ ಮನೆಗಳು ಹಾಳಾಗಿವೆ. 20 ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿ ನಾಶವಾಗಿ ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ ಕೇಂದ್ರ ಸರ್ಕಾರ, ಕರ್ನಾಟಕವನ್ನು ನಿರ್ಲಕ್ಷದಿಂದ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪರಮೇಶ್ವರ್‌ ಜೊತೆ ಭಿನ್ನಾಭಿಪ್ರಾಯವಿಲ್ಲ:

ಮಾಜಿ ಸಚಿವ ಜಿ.ಪರಮೇಶ್ವರ್‌ ಮತ್ತು ನನ್ನ ನಡುವೆ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ಅವರು ಹೇಳಿದಂತೆ ಪ್ರತಿಯೊಬ್ಬರಿಗೂ ಅವರದೇ ಆದ ಶಕ್ತಿ ಇರುತ್ತೆ, ಪಕ್ಷ ಕಟ್ಟುವ ವಿಚಾರದಲ್ಲಿ ಯಾರನ್ನೂ ಕಡೆಗಣಿಸಿಲ್ಲ. ರಾಜಕೀಯದಲ್ಲಿ ಸಾಮೂಹಿಕವಾಗಿ ಕೆಲಸ ಮಾಡಿದರೇ ಮಾತ್ರ ಪಕ್ಷ ಬೆಳೆಯಲು ಸಾಧ್ಯವೆಂದು ನಂಬಿರುವನು ನಾನು, ಅವರು ದೆಹಲಿಯಲಿದ್ದ ಕಾರಣ ಸಿಎಲ್‌ಪಿ ಸಭೆಗೆ ಬರಲಾಗಿಲ್ಲ, ಇದಕ್ಕೆ ಮಾಧ್ಯಮಗಳು ಇಲ್ಲಸಲ್ಲದ ಬಣ್ಣ ಕಟ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೆಹಲಿಗೆ ಹೋಗಿದ್ದ ವೇಳೆ ಸೋನಿಯಾ ಭೇಟಿಗೆ ತಮಗೆ ಅವಕಾಶ ಸಿಗದೇ, ಪರಮೇಶ್ವರ್‌ರವರಿಗೆ ಅವಕಾಶ ಸಿಕ್ಕಿದರ ಕುರಿತಾಗಿ ಸ್ಪಷ್ಟನೆ ನೀಡಿದ, ಅವರು ನಾನು ದೆಹಲಿಗೆ ಹೋದ ದಿನ ಸೋನಿಯಾರವರಿಗೆ ಮೀಟಿಂಗ್‌ ನಿಗದಿಯಾಗಿತ್ತು. ನಾಳೆ ಭೇಟಿಗೆ ಅವಕಾಶ ನೀಡುವುದಾಗಿ ಇಲ್ಲೆ ಉಳಿಯುವಂತೆ ಸೂಚನೆ ಬಂದಿತ್ತು. ನಾನು ಉಳಿಯದೇ ಬೆಂಗಳೂರಿಗೆ ಹಿಂದುರುಗಿದೆ. ಪರಮೇಶ್ವರ್‌ ಹೋದ ದಿನ ಭೇಟಿಗೆ ಅವಕಾಶ ಸಿಕ್ಕಿದೆಯಷ್ಟೆಇದು ಮಾಧ್ಯಮದವರು ಮೊಸರಿನಲ್ಲಿ ಕಲ್ಲು ಹುಡುಕುವ ಯತ್ನವೆಂದರು.

ಸದನದಲ್ಲಿ ಧ್ವನಿಯೆತ್ತುವೆ:

ಹಾಸನ ಜಿಲ್ಲೆಯಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲಮನ್ನಾದ ಹಣದಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗವಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ತನಿಖೆಗೆ ಆಗ್ರಹಿಸಿ ವಿಧಾನಸಭೆ ಆಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.

ಈಶ್ವರಪ್ಪನಿಗೆ ಸಂಸ್ಕೃತಿಯಿಲ್ಲ:

ಇನ್ನೂ 25 ಎಂಪಿಗಳು ಬಿಜೆಪಿಯಿಂದ ಆಯ್ಕೆಯಾಗಲು ಸಿದ್ರಾಮಯ್ಯನೇ ಕಾರಣ ಎಂಬ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನಿಗೆ ಸಂಸ್ಕೃತಿಯಿಲ್ಲ, ರಾಜಕೀಯ ಭಾಷೆ, ಪ್ರೌಢಮೆ ಇಲ್ಲ ಅವರ ಬಗ್ಗೆ ಮಾತನಾಡದಿರುವುದೆ ಒಳ್ಳೆಯದು ಎಂದರು.

ಡಿ.ಕೆ.ಶಿವಕುಮಾರ್‌ ಅವರನ್ನು ನ್ಯಾಯಾಂಗ ಬಂಧನಕೊಪ್ಪಿಸಲಾಗಿದೆ. ಅವರೊಂದಿಗೆ ಕಾಂಗ್ರೆಸ್‌ ಪಕ್ಷವಿದೆ. ಈ ಬಗ್ಗೆ ಪಕ್ಷ ನಿರ್ಣಯ ಕೈಗೊಂಡಿದೆ. ಕಾನೂನಾತ್ಮಕ, ರಾಜಕೀಯ ಹೋರಾಟದ ಜತೆ ಪಕ್ಷ ಇರಲಿದೆ. ಶನಿವಾರ ನಡೆಯುವ ಕೋರ್ಟ್‌ ಕಲಾಪ, ಆದೇಶ ನೋಡಿಗೊಂಡು ಮುಂದಿನ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಯಡಿಯೂರಪ್ಪನವರಿಗೆ ತಾಕತ್ತಿಲ್ಲ:

ರಾಜ್ಯದಿಂದ 25 ಸಂಸದರನ್ನು ನೀಡಿದ ಜನರ ವಿಶ್ವಾಸಕ್ಕೆ ಬಿಜೆಪಿ ದ್ರೋಹ ಬಗೆದಿದೆ. ಮುಖ್ಯಮಂತ್ರಿ ಯಡ್ಡಿಯೂರಪ್ಪನಿಗೆ ಪರಿಹಾರದ ಹಣ ತರಲಿಕ್ಕೆ ತಾಕತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 2009ರಲ್ಲಿ ಇದೇ ರೀತಿ ಪ್ರವಾಹ ಬಂದಿತ್ತು, ಅಂದು ಕಾಂಗ್ರೆಸ್‌ ಸರ್ಕಾರದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಕೂಡಲೇ ವೈಮಾನಿಕ ಸಮೀಕ್ಷೆ ನಡೆಸಿ 1600 ಕೋಟಿ ಪರಿಹಾರವನ್ನು ಘೋಷಣೆ ಮಾಡಿದ್ದರು. ಆದರೆ, ಇಂದಿನ ಪ್ರಧಾನಿ ಮುಖ್ಯಮಂತ್ರಿಯವರಿಗೆ ಭೇಟಿ ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದರು.


ತಪ್ಪು ಅರ್ಥಿಕ ನೀತಿಯ ಫಲದಿಂದ ಮುಚ್ಚುತ್ತಿವೆ ಕೈಗಾರಿಕೆಗಳು


ತಪ್ಪು ಅರ್ಥಿಕ ನೀತಿಯ ಫಲ ದೇಶದಲ್ಲಿ ಕೈಗಾರಿಕೆಗಳು ಮುಚ್ಚುತ್ತಿವೆ. ಇರುವ ಉದ್ಯೋಗಗಳನ್ನು ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಶೇ.3.7 ರಷ್ಟಿರುವ ದೇಶದ ಜಿಡಿಪಿಯನ್ನು ಶೇ.5 ರಷ್ಟಿದೆ ಎಂದು ಬಿಂಬಿಸುವ ನಾಟಕ ನಡೆಯುತ್ತಿದೆ. ಅರ್ಥಿಕತೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡದ ಕಾರಣ ದೇಶದ ರೈತರ, ನಿರುದ್ಯೋಗಿಗಳ, ಕಾರ್ಮಿಕರ ಕಷ್ಟ ಹೇಳತೀರದು ಎಂದು ಹೇಳಿದರು. 
 

Follow Us:
Download App:
  • android
  • ios