Asianet Suvarna News Asianet Suvarna News

ಉಪ ಮೇಯರ್‌, ಆಯುಕ್ತರಿಗೆ ಹೊಸ ಕಾರು: ತೀವ್ರ ಅಸಮಾಧಾನ

ಆಯುಕ್ತರು ಮತ್ತು ಉಪ ಮೇಯರ್‌ ಬಳಸುತ್ತಿದ್ದ ಕಾರುಗಳು ಸುಸ್ಥಿತಿಯಲ್ಲಿದ್ದರೂ ಪಾಲಿಕೆಯ ಬೊಕ್ಕಸದಿಂದ 40 ಲಕ್ಷ ರು. ವೆಚ್ಚ ಮಾಡಿ ಎರಡು ಇನ್ನೋವಾ ಕ್ರಿಸ್ಟ್‌ ಹೊಸ ಕಾರು ಖರೀದಿ ಮಾಡಲಾಗಿದೆ. ಉಪಮೇಯರ್‌ ಮತ್ತು ಆಯುಕ್ತರ ಈ ಕ್ರಮಕ್ಕೆ ಬಿಬಿಎಂಪಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ.

BBMP Deputy Mayor Purchase New Car
Author
Bengaluru, First Published Oct 5, 2019, 11:45 AM IST

ಬೆಂಗಳೂರು [ಅ.05]:  ಬಿಬಿಎಂಪಿ ಉಪ ಮೇಯರ್‌ ರಾಮ್‌ ಮೋಹನ್‌ ರಾಜ್‌ ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಪಾಲಿಕೆ ಬೊಕ್ಕಸದಿಂದ ಹೊಸ ಕಾರು ಖರೀದಿಸಿದ್ದಾರೆ. ಇದೇ ವೇಳೆ ಪಾಲಿಕೆ ಆಯುಕ್ತ ಅನಿಲ್‌ ಕುಮಾರ್‌ ಅವರಿಗೂ ಹೊಸ ಕಾರು ಖರೀದಿ ಮಾಡಲಾಗಿದೆ.

ಈವರೆಗೆ ಆಯುಕ್ತರು ಮತ್ತು ಉಪ ಮೇಯರ್‌ ಬಳಸುತ್ತಿದ್ದ ಕಾರುಗಳು ಸುಸ್ಥಿತಿಯಲ್ಲಿದ್ದರೂ ಪಾಲಿಕೆಯ ಬೊಕ್ಕಸದಿಂದ 40 ಲಕ್ಷ ರು. ವೆಚ್ಚ ಮಾಡಿ ಎರಡು ಇನ್ನೋವಾ ಕ್ರಿಸ್ಟ್‌ ಹೊಸ ಕಾರು ಖರೀದಿ ಮಾಡಲಾಗಿದೆ. ಉಪಮೇಯರ್‌ ಮತ್ತು ಆಯುಕ್ತರ ಈ ಕ್ರಮಕ್ಕೆ ಬಿಬಿಎಂಪಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಬಿಬಿಎಂಪಿಯಲ್ಲಿ ಮೊದಲೇ ಆರ್ಥಿಕ ಶಿಸ್ತು ಇಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೆಕ್ಕದಲ್ಲಿ ಹಲವು ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರು. ಬಿಲ್‌ ಪಾವತಿ ಬಾಕಿ ಉಳಿದಿದೆ. ಮತ್ತೊಂದೆಡೆ ಪ್ರತೀ ವರ್ಷ ಆದಾಯಕ್ಕಿಂತ ಹೆಚ್ಚು ಮೊತ್ತದ ಬಜೆಟ್‌ ಮಂಡಿಸಿಕೊಂಡು ಬರಲಾಗುತ್ತಿದೆ. ಇದರ ನಡುವೆ ಅನಗತ್ಯವಾಗಿ ರಸ್ತೆ ಸ್ವೀಪಿಂಗ್‌ಗಾಗಿ ಲಕ್ಷಾಂತರ ರು. ಮೌಲ್ಯದ ಯಂತ್ರೋಪಕರಣಗಳನ್ನು ಖರೀದಿಸಿ ಪಾಲಿಕೆ ವಿವಾದಕ್ಕೀಡಾಗಿತ್ತು. ಇದೀಗ ಲಕ್ಷಾಂತರ ರು. ಸಾರ್ವಜನಿಕ ತೆರಿಗೆ ಹಣ ವೆಚ್ಚ ಮಾಡಿ ಆಯುಕ್ತರು, ಉಪಮೇಯರ್‌ ಅವರಿಗೆ ಹೊಸ ಕಾರು ಖದೀದಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯುಕ್ತರು ಮಾತ್ರ, ‘ಅಗತ್ಯವಿದ್ದುದರಿಂದಲೇ ಕಾರುಗಳ ಖರೀದಿಸಲಾಗಿದೆ. ಇಲ್ಲದಿದ್ದರೆ ಏಕೆ ಖರೀದಿಸೋಣ. ಹಳೆಯ ಕಾರುಗಳಲ್ಲಿ ಸಮಸ್ಯೆ ಇತ್ತೋ ಇಲ್ವೋ ಬೇರೆ ವಿಚಾರ. ನಮ್ಮ ಅಗತ್ಯಗಳನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ. ಹಳೆಯ ಕಾರುಗಳನ್ನು ಉಪಯೋಗಿಸುವವರಿಗೆ ತಾನೆ ಸಮಸ್ಯೆ ಗೊತ್ತಿರುತ್ತದೆ’ ಎಂದು ಹೇಳಿದ್ದಾರೆ.

ಹಿಂದೆ ಇದ್ದ ಕಾರುಗಳು ನಿಗದಿಗಿಂತ ಹೆಚ್ಚು ಕಿ.ಮೀ. ಸಂಚರಿಸಿವೆ. ಹಾಗಾಗಿ ಎರಡು ಕಾರುಗಳ ಖರೀದಿಗೆ 2017ರಲ್ಲಿ ಆಗಿನ ಉಪಮೇಯರ್‌ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಅನುಮೋದನೆ ದೊರೆತು ಕಾರು ಖರೀದಿ ಮಾಡಲಾಗಿದೆ. ಇದು ನಮ್ಮ ಅವಧಿಯಲ್ಲಿ ಆಗಿಲ್ಲ. ಆಯುಕ್ತರು ಮತ್ತು ಉಪಮೇಯರ್‌ ಜೊತೆ ಮಾತನಾಡಿ ಹೊಸ ಕಾರುಗಳ ಅಗತ್ಯವಿದೆಯೇ ಕೇಳುತ್ತೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ.

-ಗೌತಮ್‌ ಕುಮಾರ್‌, ಮೇಯರ್‌.

Follow Us:
Download App:
  • android
  • ios