Asianet Suvarna News Asianet Suvarna News

ಪ್ರವಾಹ ತಪ್ಪಿಸಲು ಪರ್ಯಾಯ ರಾಜಕಾಲುವೆ!

ಪ್ರವಾಹ ತಪ್ಪಿಸಲು ನವ ನಗರೋತ್ಥಾನ ಯೋಜನೆಯಡಿ ಮೂರು ಬೃಹತ್‌ ಪರ್ಯಾಯ ರಾಜಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

3 Separate Rajakaluve in Bangalore For Flood Management
Author
Bengaluru, First Published Oct 7, 2019, 8:48 AM IST

ಬೆಂಗಳೂರು [ಅ.07]:  ಸಣ್ಣ ಮಳೆಗೂ ಪ್ರವಾಹ ಭೀತಿ ಎದುರಿಸುತ್ತಿರುವ ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಅನುಗ್ರಹ ಲೇಔಟ್‌, ವಿಜಯ ಬ್ಯಾಂಕ್‌ ಲೇಔಟ್‌ಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನವ ನಗರೋತ್ಥಾನ ಯೋಜನೆಯಡಿ ಮೂರು ಬೃಹತ್‌ ಪರ್ಯಾಯ ರಾಜಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದರೆ ಸಾಕು ಎಚ್‌ಎಸ್‌ಆರ್‌ ಲೇಔಟ್‌ನ 2 ಮತ್ತು 3ನೇ ಸೆಕ್ಟರ್‌, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅನುಗ್ರಹ ಲೇಔಟ್‌, ವಿಜಯ ಬ್ಯಾಂಕ್‌ ಲೇಔಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಬಡಾವಣೆಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಾರೆ. ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಹಲವು ಬಾರಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಕಳೆದ ಶುಕ್ರವಾರ ಸುರಿದ ಮಳೆಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ರಾಜಕಾಲುವೆ ಉಕ್ಕಿ ಹರಿದು ಬಡಾವಣೆ ಜಲಾವೃತಗೊಂಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಭಾನುವಾರ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ, ಬಿಬಿಎಂಪಿಯ ಬೃಹತ್‌ ನೀರುಗಾಲುವೆ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಅವರು ಎಚ್‌ಎಸ್‌ಆರ್‌ ಲೇಔಟ್‌ ಭಾಗದಲ್ಲಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರದ ನವ ನಗರೋತ್ಥಾನ ಯೋಜನೆಯಡಿ 81 ಕೋಟಿ ರು. ವೆಚ್ಚದಲ್ಲಿ ಮೂರು ಪರ್ಯಾಯ ರಾಜಕಾಲುವೆ ನಿರ್ಮಾಣ ಯೋಜನೆ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.

ರಸ್ತೆಯಲ್ಲಿ ಪರ್ಯಾಯ ರಾಜಕಾಲುವೆ:

ಪ್ರಸ್ತತವಾಗಿರುವ ರಾಜಕಾಲುವೆಯಲ್ಲಿ ನೀರು ಉಕ್ಕಿ ಹರಿದು ಅಕ್ಕ-ಪಕ್ಕದಲ್ಲಿರುವ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ರಾಜಕಾಲುವೆ ನಿರ್ಮಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಪರ್ಯಾಯ ರಾಜಕಾಲುವೆಯೂ ಈಗಿರುವ ರಸ್ತೆಯಲ್ಲಿ ಹಾದು ಹೋಗಲಿದ್ದು, ಪ್ರೀಕಾಸ್ಟ್‌ ಸಿಮೆಂಟ್‌ ಮೌಲ್ಡ್‌ಗಳನ್ನು ಬಳಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆರೆಯಲ್ಲಿ ಮುಚ್ಚಿ ಎಚ್‌ಎಸ್‌ಆರ್‌ ಲೇಔಟ್‌ ನಿರ್ಮಾಣ!

ದಾಖಲೆಗಳು ಹೇಳುವ ಪ್ರಕಾರ ಅಗರ ಕೆರೆ ಹಾಗೂ ಸಿಂಗಸಂದ್ರ ಕೆರೆಯ ಮಧ್ಯೆ ಒಂದು ಸಣ್ಣ ಕೆರೆ ಇತ್ತು. ಆ ಕೆರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಚ್ಚಿ ಎಚ್‌ಎಸ್‌ಆರ್‌ ಲೇಔಟ್‌ ನಿರ್ಮಿಸಿದ ಹಿನ್ನೆಲೆಯಲ್ಲಿ ಎರಡು ಕೆರೆಗಳ ಸಂಪರ್ಕ ಕಡಿತಗೊಂಡು ಎಚ್‌ಎಸ್‌ಆರ್‌ ಲೇಔಟ್‌ ಪ್ರವಾಹ ಭೀತಿ ಎದುರಿಸುತ್ತಿದೆ. ಈಗಾಗಲೇ ಬಡಾವಣೆ ಅಭಿವೃದ್ಧಿ ಹೊಂದಿದ್ದು, ಸಾವಿರಾರು ಮನೆಗಳು ನಿರ್ಮಾಣಗೊಂಡಿವೆ. ಹಾಗಾಗಿ, ಪರ್ಯಾಯ ರಾಜಕಾಲುವೆ ನಿರ್ಮಿಸುವುದಕ್ಕೆ ಚರ್ಚೆ ನಡೆಸಲಾಗಿದೆ. ಅಲ್ಪಾವಧಿ ಟೆಂಡರ್‌ ಆಹ್ವಾನಿಸುವುದಕ್ಕೆ ಸೂಚನೆ ನೀಡಲಾಗಿದೆ. ನ.25ರ ಒಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಿ ಮುಂಬರುವ ಜನವರಿ 25ರೊಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿದರು.

ಯೋಜನೆ -1

ಒಟ್ಟು 43 ಕೋಟಿ ರು. ವೆಚ್ಚದ ಯೋಜನೆಯಾಗಿದ್ದು, 1.25 ಕಿ.ಮೀ ಉದ್ದದ ಪರ್ಯಾಯ ರಾಜಕಾಲುವೆ ಸೋಮಸುಂದರ ಪಾಳ್ಯ, ಎಚ್‌ಎಸ್‌ಆರ್‌ ಲೇಔಟ್‌ ಮೂಲಕ ಅಗರಕೆರೆ ತಲುಪಲಿದೆ. ಈ ಕಾಲುವೆ ನಿರ್ಮಾಣವಾಗುವುದರಿಂದ ಎಚ್‌ಎಸ್‌ಆರ್‌ ಲೇಔಟ್‌ನ ಸೆಕ್ಟರ್‌ 2 ಮತ್ತು 3ರಲ್ಲಿ ಉಂಟಾಗುತ್ತಿರುವ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಯೋಜನೆ -2

ಮಂಗಮ್ಮನಪಾಳ್ಯ ಮುಖ್ಯರಸ್ತೆ ಹಾಗೂ ಸುತ್ತ-ಮುತ್ತ ಉಂಟಾಗುತ್ತಿರುವ ಪ್ರವಾಹ ತಪ್ಪಿಸುವುದಕ್ಕೆ ಒಟ್ಟು 25 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, 900 ಮೀಟರ್‌ ಉದ್ದದ ಪರ್ಯಾಯ ರಾಜಕಾಲುವೆ ನಿರ್ಮಿಸಲಾಗುತ್ತಿದೆ. ಈ ಕಾಲುವೆ ಮಂಗಮ್ಮನಪಾಳ್ಯ, ಹೊಸೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೇಗೂರು ಕೆರೆಗೆ ಸಂರ್ಪಕ ಕಲ್ಪಿಸಲಿದೆ.

ಯೋಜನೆ -3

ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಗೆ ಬರುವ ಅನುಗ್ರಹ ಲೇಔಟ್‌ ಹಾಗೂ ವಿಜಯಬ್ಯಾಂಕ್‌ ಲೇಔಟ್‌ನಲ್ಲಿ ಪ್ರತಿ ಬಾರಿ ಮಳೆ ಬಂದಾಗ ಉಂಟಾಗುತ್ತಿದ್ದ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮಡಿವಾಳ ಕೆರೆ ಸುತ್ತ 13 ಕೋಟಿ ರು. ವೆಚ್ಚದಲ್ಲಿ 1.7 ಕಿ.ಮೀ ಉದ್ದದ ಪರ್ಯಾಯ ರಾಜಕಾಲುವೆ ನಿರ್ಮಿಸಲಾಗುತ್ತಿದೆ.

Follow Us:
Download App:
  • android
  • ios