ಸಿಎಎ ತಡೆಗೆ ಸುಪ್ರೀಂ ನಕಾರ: ಉತ್ತರ ಬಯಸಿ ಕೇಂದ್ರಕ್ಕೆ ಆದೇಶ!
ಸಿಎಎ ಜಾರಿಗೆ ತಡೆ ನೀಡುವುದು ಸಾಧ್ಯವಿಲ್ಲ ಎಂದ ಸುಪ್ರೀಂ| ನಾಲ್ಕು ವಾರಗಳ ಒಳಗಾಗಿ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ| ಸಿಎಎ ಕುರಿತು ಸಲ್ಲಿಕೆಯಾಗಿರುವ 143 ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್| ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ| ಕೇಂದ್ರದಿಂದ ಉತ್ತರ ಬರುವವರೆಗೂ ಸಿಎಎ ಜಾರಿಗೆ ತಡೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್|
ನವದೆಹಲಿ(ಜ.22): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಕುರಿತು ನಾಲ್ಕು ವಾರಗಳ ಒಳಗಾಗಿ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ಉತ್ತರದ ಬಳಿಕ ಈ ಕುರಿತು ಸಲ್ಲಿಕೆಯಾಗಿರುವ ಎಲ್ಲಾ 143 ಅರ್ಜಿಗಳನ್ನು ಪ್ರತಿದಿನ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದಿಂದ ಉತ್ತರ ಬರುವವರೆಗೆ ಕಾಯ್ದೆಗೆ ತಡೆಯೊಡ್ಡುವುದಿಲ್ಲ ಎಂದು ಹೇಳಿರುವ ಸುಪ್ರೀಂ, ಕಾಯ್ದೆಯ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಬಹುದು ಎಂದು ಸಲಹೆ ನೀಡಿದೆ.
ಸಿಎಎ ವಿರುದ್ಧ ಕಾನೂನು ಸಮರಕ್ಕೆ 320 ಕ್ವಿಂಟಲ್ ಭತ್ತ ಕೊಟ್ಟ ರೈತರು!
ಒಟ್ಟು 143 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಕೇಂದ್ರ ಸರ್ಕಾರದಿಂದ ಉತ್ತರ ಬಂದ ಬಳಿಕ ಅರ್ಜಿಗಳ ವಿಚಾರಣೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿತು.
ಇದಕ್ಕೂ ಮೊದಲು ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್, ಸಿಎಎ ಪ್ರಕ್ರಿಯೆಗಳಿಗೆ ತಡೆ ನೀಡಬೇಕು ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಮುಂದೂಡಬೇಕೆಂದು ಒತ್ತಾಯಿಸಿದರು.
ಆದರೆ ಕೇಂದ್ರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಉತ್ತರಿಸಲು ಕಾಲಾವಕಾಶ ಏಕು ಎಂದು ಹೇಳಿದರು.
ಕೆಕೆ ವೇಣುಗೋಪಾಲ್ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಲ್ಲದೇ ಉತ್ತರ ಬರುವವರೆಗೂ ಸಿಎಎ ಜಾರಿಗೆ ತಡೆಯೊಡ್ಡುವುದಿಲ್ಲ ಎಂದು ಸ್ಪಷ್ಟಪಡಿಸಿತು.