ನಿರ್ಭಯಾ ರೇಪಿಸ್ಟ್‌ಗಳನ್ನು ನಾನು ಗಲ್ಲೆಗೇರಿಸ್ತೀನಿ: ರಕ್ತದಲ್ಲೇ ಪತ್ರ ಬರೆದ ಅಂತಾರಾಷ್ಟ್ರೀಯ ಶೂಟರ್!
ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ದಿನಗಣನೆ| ಗಲ್ಲಿಗೇರಿಸುವ ಸಿಬ್ಬಂದಿಗಳಿಲ್ಲ ಎಂದ ಬೆನ್ನಲ್ಲೇ ಗಲ್ಲಿಗೇರಿಸಲು ಸ್ವಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ ಜನಸಾಮಾನ್ಯರು| ನಾನೂ ತ್ಯಾಚಾರಿಗಳನ್ನು ಗಲ್ಲಿಗೇರಿಸಲು ಸಿದ್ಧ ಅವಕಾಶ ಕೊಡಿ ಎಂದ ಅಂತರಾಷ್ಟ್ರೀಯ ಶೂಟರ್| ಕೇಂದ್ರ ಗೇಹ ಸಚಿವ ಅಮಿತ್ ಶಾಗೆ ರಕ್ತದಿಂದ ಬರೆದ ಪತ್ರದ ಮೂಲಕ ಮನವಿ
ನವದೆಹಲಿ[ಡಿ.16]: ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು ಇಂದು, ಡಿ. 16ಕ್ಕೆ ಬರೋಬ್ಬರಿ 5 ವರ್ಷಗಳಾಗಿವೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ಆರು ಮಂದಿ ದೋಷಿಗಳಲ್ಲಿ ಒಬ್ಬಾತನನ್ನು ಅಪ್ರಾಪ್ತನೆಂದು ಮೂರು ವರ್ಷ ಜೈಲು ಶಿಕ್ಷೆ ನೀಡಿ ಬಿಡುಗಡೆಗೊಳಿಸಿದರೆ, ಮತ್ತೊಬ್ಬ ಜೈಲಿನಲ್ಲಿ ಸಾವನ್ನಪ್ಪಿದ್ದ. ಇನ್ನುಳಿದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ದಿನಗಣನೆ ನಡೆಯುತ್ತಿದೆ.
ಇನ್ನು ತಿಹಾರ್ ಜೈಲಿನಲ್ಲಿರುವ ಈ ದೋಷಿಗಳಿಗೆ ಗಲ್ಲು ನೀಡಲು ಸಿಬ್ಬಂದಿ ಕೊರತೆ ಇದೆ ಎಂಬ ವರದಿ ಕೆಲ ದಿನಗಳ ಹಿಂದಷ್ಟೇ ಮಾಧ್ಯಮಗಳಲ್ಲಿ ವರದಿ ಮಾಡಿತ್ತು. ಹೀಗಿರುವಾಗ ಅನೇಕ ಮಂದಿ ತಾವು ಸಿದ್ಧರಿದ್ದೇವೆ ಎಂದು ಮುಂದಾಗಿದ್ದರು. ಸದ್ಯ ಅಂತಾರಾಷ್ಟ್ರೀಯ ಶೂಟರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಕ್ತದಲ್ಲಿ ಪತ್ರ ಬರೆದು ತನಗೆ ಈ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ನಾನು 'ನಿರ್ಭಯ': ಅತ್ಯಾಚಾರಿಗಳ ಕತ್ತಿಗೆ ಹಗ್ಗ ಹಾಕುವೆನೆಂದ ಪೇದೆ!
ಹೌದು ಅಂತರಾಷ್ಟ್ರೀಯ ಕ್ರೀಡಾ ತಾರೆ, ವರ್ತಿಕಾ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ರಕ್ತದಲ್ಲಿ ಪತ್ರ ಬರೆದು ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವರ್ತಿಕಾ 'ನನ್ನ ಕೈಯ್ಯಲ್ಲಿ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರ ಇದೆ. ನಾನದನ್ನು ನನ್ನ ರಕ್ತದಿಂದ ಬರೆದಿದ್ದೇನೆ. ಅಪರಾಧಿಗಳನ್ನು ಗಲ್ಲಿಗೇರಿಸಲು ನನಗೆ ಅವಕಾಶ ನೀಡಬೇಕೆಂದು ನಾನು ಈ ಮೂಲಕ ಮನವಿ ಮಾಡಿಕೊಂಡಿದ್ದೇನೆ. ಈ ಮೂಲಕ ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ನೋಡುವ ಪರಿಕಲ್ಪನೆ ಮತ್ತಷ್ಟು ಗಟ್ಟಿಯಾಗುತ್ತದೆ. ಅಲ್ಲದೆ ಮಹಿಳೆ ತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಮುಂದೆ ಇಂತಹ ಕೃತ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ಬಲವಾದ ಸಂದೇಶ ಕೊಡುತ್ತದೆ' ಎಂದಿದ್ದಾರೆ.
ಅಲ್ಲದೇ 'ನನ್ನ ಈ ಸಂದೇಶ ಇಡೀ ಪ್ರಪಂಚಕ್ಕೆ ತಿಳಿಯಬೇಕು. ಭಾರತದಲ್ಲಿ ಓರ್ವ ಮಹಿಳೆ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸುವ ಕ್ಷಮತೆ ಹೊಂದಿದ್ದಾಳೆಂದು ಅತ್ಯಾಚಾರಿಗಳಿಗೆ ತಿಳಿಯಬೇಕು' ಎಂದು ಸಿಂಗ್ ಹೇಳಿದ್ದಾರೆ.
ಇನ್ನು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ತಯಾರಿ ಆರಂಭವಾಗಿದ್ದು, ಈಗಾಗಲೇ ಮೀರತ್ ಜೈಲಿನ ಸಿಬ್ಬಂದಿಗೆ ಗಲ್ಲಿಗೇರಿಸುವ ಹಗ್ಗ ತಯಾರು ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ ನಾಲ್ವರು ದೋಷಿಗಳಲ್ಲಿ ಒಬ್ಬಾತ ಪವನ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಗಲ್ಲು ಶಿಕ್ಷೆ ವಿರೋಧಿಸಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾನೆ. ಹೀಗಿದ್ದರೂ ಈ ಅರ್ಜಿ ವಿಚಾರಣೆ ನಡೆದು ಡಿಸೆಂಬರ್ 21ರಂದು ರೇಪಿಸ್ಟ್‌ಗಳಿಗೆ ಗಲ್ಲು ಶಿಕ್ಷೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.
ಕೊನೆ ಕ್ಷಣದಲ್ಲಿ ಸುಪ್ರೀಂ ಮೆಟ್ಟಿಲೇರಿದ ನಿರ್ಭಯಾ ರೇಪಿಸ್ಟ್: ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬ?