Asianet Suvarna News Asianet Suvarna News

ಹಾಕಿ ಜಯಭೇರಿ: ಒಲಿಂಪಿಕ್ಸ್‌ಗೆ ಇನ್ನೊಂದೇ ಮೆಟ್ಟಿಲು ಬಾಕಿ.!

ಟೋಕಿಯೋ ಒಲಿಂಪಿಕ್ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಗೂ ಪುರುಷರ ತಂಡ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿಯೇ ಶುಭಾರಂಭ ಮಾಡಿವೆ. ಮಹಿಳಾ ತಂಡ ಅಮೆರಿಕ ವಿರುದ್ಧ ಗೆದ್ದು ಬೀಗಿದರೆ, ಪುರುಷರ ತಂಡ ರಷ್ಯಾವನ್ನು ಮಣಿಸಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Indian mens and Womens hockey Team one step away from Tokyo Olympics 2020
Author
Bhubaneswar, First Published Nov 2, 2019, 10:22 AM IST

ಭುವನೇಶ್ವರ(ನ.02): ಭಾರತ ಹಾಕಿ ತಂಡಗಳು 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಹೊಸ್ತಿಲಲ್ಲಿವೆ. ಶುಕ್ರವಾರ ಇಲ್ಲಿ ನಡೆದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಭರ್ಜರಿ ಗೆಲುವು ಸಾಧಿಸಿದವು. ಪುರುಷರ ತಂಡ, ರಷ್ಯಾ ವಿರುದ್ಧ 4-2 ಗೋಲುಗಳಿಂದ ಜಯಗಳಿಸಿದರೆ, ಮಹಿಳಾ ತಂಡ ಬಲಿಷ್ಠ ಅಮೆರಿಕ ವಿರುದ್ಧ 5-1 ಗೋಲುಗಳಿಂದ ಗೆದ್ದು ಅಚ್ಚರಿ ಮೂಡಿಸಿತು. ಶನಿವಾರ 2ನೇ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ತಂಡಗಳು ಕೊನೆ ಪಕ್ಷ ಡ್ರಾ ಮಾಡಿಕೊಂಡರೆ, ಇಲ್ಲವೇ ಕಡಿಮೆ ಅಂತರದಿಂದ ಸೋಲುಂಡರೂ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲಿದೆ.

ಭಾರತದ ಅಬ್ಬರಕ್ಕೆ ಬೆಚ್ಚಿದ ಅಮೆರಿಕ! ಭಾರತ ಮಹಿಳಾ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನ ದಲ್ಲಿದ್ದರೂ, ವಿಶ್ವ ನಂ.12 ಅಮೆರಿಕದಿಂದ ಕಠಿಣ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ಆದರೆ ರಾಣಿ ರಾಂಪಾಲ್ ಪಡೆ ಅತ್ಯಮೋಘ ಪ್ರದರ್ಶನ ನೀಡಿ 5-1 ಗೋಲುಗಳ ಗೆಲುವು ಸಾಧಿಸಿತು. ಪಂದ್ಯದ ಆರಂಭದಿಂದಲೂ ಅಮೆರಿಕದ ಮೇಲೆ ಒತ್ತಡ ಹೇರಿದ ಭಾರತ, 28ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಲಿಲಿಮಾ ಮಿನ್ಜ್ ಮೊದಲಾರ್ಧದ ಮುಕ್ತಾಯಕ್ಕೂ ಮುನ್ನ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. 3ನೇ ಕ್ವಾರ್ಟರ್‌ನಲ್ಲಿ ಭಾರತ ಎರಡು ಗೋಲು ದಾಖಲಿಸಿತು. 40ನೇ ನಿಮಿಷದಲ್ಲಿ ಶರ್ಮಿಲಾ ದೇವಿ ಹಾಗೂ 42ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಗಳಿಸಿದರು. ಕೊನೆ ಕ್ವಾರ್ಟರ್‌ನಲ್ಲಿ ಭಾರತ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 46ನೇ ನಿಮಿಷದಲ್ಲಿ ನವ್‌ನೀತ್ ಕೌರ್ ಗೋಲು ಬಾರಿಸಿದರೆ, 51ನೇ ನಿಮಿಷದಲ್ಲಿ ಗುರ್ಜಿತ್ ತಂಡದ ಮುನ್ನಡೆಯನ್ನು 5-0ಗೇರಿಸಿದರು. 54ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅವಕಾಶ ಪಡೆದ ಅಮೆರಿಕ ಸೋಲಿನ ಅಂತರವನ್ನು 1-5ಕ್ಕೆ ಇಳಿಸಿಕೊಂಡಿತು. ತಂಡದ ಪರ ಎರಿನ್ ಮಾಟ್ಸನ್ ಗೋಲು ಗಳಿಸಿದರು.

ಹಾಕಿ: ಭಾರ​ತ​ಕ್ಕಿಂದು ಒಲಿಂಪಿಕ್‌ ಪರೀಕ್ಷೆ!

ನಿರೀಕ್ಷಿತ ಆಟವಾಡದ ಭಾರತ ತಂಡ

ಮನ್‌ದೀಪ್ ಸಿಂಗ್ 2 ಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಕೆಳಗಿರುವ ರಷ್ಯಾ ವಿರುದ್ಧ ಭಾರತ ಗೆಲುವು ಸಾಧಿಸಲು ನೆರವಾದರು. ಆದರೆ ಗೆಲುವಿನ ಅಂತರ ಭಾರತ ತಂಡಕ್ಕೆ ಸಮಾಧಾನ ತಂದುಕೊಡಲಿಲ್ಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತ, ವಿಶ್ವ ನಂ.22 ರಷ್ಯಾ ವಿರುದ್ಧ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಪಂದ್ಯದುದ್ದಕ್ಕೂ ಸಿಕ್ಕ ಹಲವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡ, ಕೇವಲ 2 ಗೋಲುಗಳ ಮುನ್ನಡೆಯೊಂದಿಗೆ ಮೊದಲ ಪಂದ್ಯವನ್ನು ಮುಕ್ತಾಯಗೊಳಿಸಿತು.

ಪಂದ್ಯದ 5ನೇ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ದೊರೆಯಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್‌ಪ್ರೀತ್ ಸಿಂಗ್ ಯಾವುದೇ ತಪ್ಪು ಮಾಡಲಿಲ್ಲ. ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ ಭಾರತ 1-0 ಮುನ್ನಡೆ ಸಾಧಿಸಿತು. ಆದರೆ ದ್ವಿತೀಯ ಕ್ವಾರ್ಟರ್ ಆರಂಭಗೊಂಡ ಎರಡೇ ನಿಮಿಷಕ್ಕೆ ರಷ್ಯಾ ಸಮಬಲ ಸಾಧಿಸಿತು. ಆ್ಯಂಡ್ರೆಯೆ ಕುರಯೆವ್ (17ನೇ ನಿಮಿಷ) ಆಕರ್ಷಕ ಗೋಲು ಬಾರಿಸಿದರು. ಭಾರತದ 2ನೇ ಆಯ್ಕೆ ಗೋಲ್ ಕೀಪರ್ ಕೃಷನ್ ಬಹದ್ದೂರ್ ಪಾಠಕ್ ಗೋಲು ರಕ್ಷಿಸುವಲ್ಲಿ ವಿಫಲರಾದರು. ಮನ್‌ದೀಪ್ ಸಿಂಗ್ 24ನೇ ನಿಮಿಷದಲ್ಲಿ ಗೋಲು ಗಳಿಸಿ, ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 2-1ರ ಮುನ್ನಡೆ ಗಳಿಸಲು ನೆರವಾದರು. 3ನೇ ಕ್ವಾರ್ಟರ್ ನಲ್ಲಿ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಗದೆ ಇರುವುದು ಅಚ್ಚರಿ ಮೂಡಿಸಿತು. 48ನೇ ನಿಮಿಷದಲ್ಲಿ ಕನ್ನಡಿಗ ಎಸ್.ವಿ.ಸುನಿಲ್ ತಂಡಕ್ಕೆ 3ನೇ ಗೋಲು ಗಳಿಸಿಕೊಟ್ಟರು. ನೀಲಕಂಠ ಶರ್ಮಾ ನೀಡಿದ ಪಾಸನ್ನು ಬಳಸಿಕೊಂಡು ಆಕರ್ಷಕ ಗೋಲು ಗಳಿಸಿದರು.

53ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ತಮ್ಮ 2ನೇ ಗೋಲು ಬಾರಿಸಿ, ತಂಡದ ಮುನ್ನಡೆಯನ್ನು 4-1ಕ್ಕೇರಿಸಿದರು. ಅಂತಿಮ ನಿಮಿಷದಲ್ಲಿ ಸೀಮೆನ್ ಮಟ್ಕೊವ್ಸ್ಕಿ ಗಳಿಸಿದ ಗೋಲು, ರಷ್ಯಾದ ಸೋಲಿನ ಅಂತರವನ್ನು ತಗ್ಗಿಸಿತು. ಅಂತಿಮ ಕ್ವಾರ್ಟರ್‌ನಲ್ಲೇ 3 ಪೆನಾಲ್ಟಿ ಕಾರ್ನರ್ ಪಡೆದರೂ, ಒಂದರಲ್ಲೂ ಭಾರತ ಗೋಲು ಗಳಿಸಲಿಲ್ಲ. ಶನಿವಾರದ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ಪಡೆ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವತ್ತ ಹೆಚ್ಚಿನ ಗಮನ ಹರಿಸಬೇಕಿದೆ.

 

Follow Us:
Download App:
  • android
  • ios