Asianet Suvarna News Asianet Suvarna News

ಕೀಳರಿಮೆಯಿಂದ ಪಾರಾಗುವುದು ಹೇಗೆ?

ಪ್ರತಿಯೊಬ್ಬರಿಗೂ ಅವರವರ ದೌರ್ಬಲ್ಯಗಳೇ ಕೀಳರಿಮೆಗಳಾಗಿರುತ್ತದೆ. ಒಂದಲ್ಲಾ ಒಂದು ರೀತಿ ಕೀಳರಿಮೆಯಿಂದ ಬಳಲುತ್ತಿರುತ್ತಾರೆ. ನ್ಯೂನ್ಯತೆಗಳನ್ನೆಲ್ಲಾ ಮೀರಿ ತಮ್ಮತನವನ್ನು ರೂಪಿಸಿಕೊಳ್ಳುವುದಿದೆಯಲ್ಲ ಅದೇ ಗ್ರೇಟ್. ಅಂತಹವರೆ ಜೀವನವೆಂಬ ಸಾಗರದಲ್ಲಿ ಈಜಿ ದಡ ಸೇರುತ್ತಾರೆ. 

Here are tips for how to overcome from inferiority complex
Author
Bengaluru, First Published Oct 23, 2019, 3:38 PM IST

ಕೆಲವೊಂದು ವಿಷಯಗಳೇ ಹಾಗೆ, ನಾವು ಎಷ್ಟೇ ಬೇಡವೆಂದು ಅಂದುಕೊಂಡರು ಅದೇ ವಿಷಯ ಬೆಂಬಿಡದ ಭೂತದಂತೆ ನಮ್ಮನ್ನು ಕಾಡುತ್ತದೆ. ನೀವೆಲ್ಲಾ ಉಪೇಂದ್ರ ಅವರ ಉಪ್ಪಿ-2 ಸಿನಿಮಾ ನೋಡಿರಬಹುದು. ಅದರಲ್ಲಿ ಹೇಗೆ ಆಲೋಚನೆ ಮಾಡಬಾರದು ಅಂತಾರೋ ಹಾಗೇ ಜೀವನದಲ್ಲಿ ಬದುಕುವುದು ತುಂಬಾ ಕಷ್ಟ. ಏನೇ ಅಂದರೂ ಆಲೋಚನೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಹುಟ್ಟಿನಿಂದಲೇ ಹೊಕ್ಕಿಹೋಗಿರುತ್ತೆ.

ಅಲ್ಲೆಲ್ಲೋ ಬಸ್‌ಸ್ಟ್ಯಾಂಡ್‌ನಲ್ಲಿ, ಪಾರ್ಕ್‌ಗಳಲ್ಲಿ ತುಂಬಾ ಜನರು ನಿಂತಿರುತ್ತಾರೆ. ಅಲ್ಲಿಗೆ ಹೋಗಿ ನಿಲ್ಲಬೇಕೊ? ಅಥವಾ ಅವರ ಮುಂದೆ ಹಾದು ಹೋಗಬೇಕೋ ಅನ್ನೋದು ತಿಳಿಯದೆಯೇ ಅಸಲಿಗೆ ಹೇಗಪ್ಪಾ ಹೋಗೋದು ಎಂಬ ದ್ವಂದ್ವ ಶುರುವಾಗಿ ಬಿಡುತ್ತದೆ. ಹಾಗೋ ಹೀಗೋ ಹೋಗಿ ನಿಂತವರ ಮಧ್ಯದಿಂದಲೋ ಅಥವಾ ಅವರೆಲ್ಲರ ಹಿಂದಿನಿಂದಲೋ ಹೋಗಿ ನಿಂತುಕೊಂಡು ಬಿಡುತ್ತೇವೆ. ಅಲ್ಲಿ ನಿಂತ ಮೇಲೂ ನಾನು ನಿಂತದ್ದು ಸರಿ ಇದೆಯೆ, ಯಾರಾದರೂ ನನ್ನನ್ನೇ ನೋಡುತ್ತಿದ್ದಾರೆಯೇ? ಅವರು ನನ್ನನ್ನು ನೋಡಿಕೊಂಡೇ ನಕ್ಕಿರಬಹುದು ಅನ್ನುವ ಒಂದು ಅನುಮಾನ ಮಾತ್ರ ಎದೆಯ ಆಳದಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ.

ಗೊತ್ತಿರುವುದೆಲ್ಲಾ ಮಾತನಾಡಬೇಡಿ; ಕಾಮನ್ ಸೆನ್ಸ್ ಇದ್ದರೆ ಮನಸ್ಸು ಗೆಲ್ಲಬಹುದು!

ನಿಜವಾಗಿ ಹೇಳಬೇಕೆಂದರೆ ಹೀಗೆಲ್ಲಾ ಅನಿಸುವುದಕ್ಕೆ ನಮ್ಮಲ್ಲಿಯೆ ಎಲ್ಲೋ ಒಂದು ರೀತಿಯ ನಾಚಿಕೆಯ ಸ್ವಭಾವ ಮೂಡಿರುತ್ತದೆ. ನಮಗೆ ನಮ್ಮ ಮೇಲೆಯೇ ಕೀಳರಿಮೆ ಇರುತ್ತದೆ. ನನ್ನಲ್ಲೇನೋ ಕೊರತೆ ಇದೆ ಅಂತ ವಿನಾಕಾರಣ ಅಂದುಕೊಳ್ಳುತ್ತೇವಲ್ಲಾ ಅದೇ ಇವಕ್ಕೆಲ್ಲಾ ಕಾರಣವಾಗುತ್ತದೆ. ನಮಗೆ ನಮ್ಮ ಮೇಲೆಯೇ ಕಾನ್ಫಿಡೆನ್ಸ್ ಇಲ್ಲವೆಂದಾಗ ಈ ರೀತಿಯೆಲ್ಲಾ ಶುರುವಾಗುತ್ತದೆ. ಮನೆಯಿಂದ ಹೊರಗಡೆ ಹೋಗುವಾಗ ಸಾವಿರ ಬಾರಿ ಕನ್ನಡಿ ಎದುರು ನಿಂತು ಹೊರ ಬಂದರೂ ಏನೋ ಸರಿಯಾಗಿಲ್ಲ ಎನ್ನುವ ಅನುಮಾನ.

ನಾನು ಸರಿಯಾಗಿ ನಡೆಯುತ್ತಿಲ್ಲ, ನನ್ನ ಡ್ರೆಸ್ ಸರಿಯಾಗಿಲ್ಲ, ನಾನು ಈ ರೀತಿ ಕೈಬೀಸಿ ನಡೆಯುವುದು ಸರಿ ಕಾಣುವುದಿಲ್ಲ ವೇನೋ, ಎಲ್ಲೋ ಒಂದು ಕಡೆ ವಾಲಿಕೊಂಡು ನಡೆಯುತ್ತಿದ್ದೆನೇನೋ, ನಡೆಯುವಾಗ ಏಕೋ ಕಾಲುಗಳನ್ನು ನೆಲಕ್ಕೆ ಸವೆದುಕೊಂಡು ಹೋಗುತ್ತಿದ್ದೆನೇನೋ, ನನಗೆ ಗೂನು ಬೆನ್ನು ಇದೆಯೇ, ನಾನು ನೋಡಲು ಕಪ್ಪು ಎಂದೋ ಈ ರೀತಿಯ ವಿಷಯಗಳೆಲ್ಲವನ್ನು ಮನದಲ್ಲಿ ತುಂಬಿಕೊಂಡು ಬೀದಿಗೆ ಬಿಳುತ್ತೇವೆ, ಹೌದಾ? ಬಹಳ ಸಮಯ ಈ ರೀತಿಯ ಇನ್ಫಿರಿಯಾರಿಟಿಯಿಂದಾಗಿ ನಮ್ಮ ನಡವಳಿಕೆಯಲ್ಲಿ ಬದಲಾವಣೆಯಾಗಿ ಅದು ಮತ್ತಷ್ಟೂ ನಮ್ಮ ವಕ್ರತೆ ತೋರಿಸಲು ಕಾರಣವಾಗುತ್ತದೆ. ನಡಿಗೆ ಸರಿಯಿಲ್ಲ ಅಂತ ಹೇಗೇಗೋ ನಡೆಯಲು ಹೋಗಿ ವಿಚಿತ್ರವೆಂಬಂತೆ ನಡೆದು ಬಿಡುತ್ತೇವೆ.

ಅದರಲ್ಲೂ ಒಂದು ಹುಡುಗಿಯೊಬ್ಬಳು ಮುಂದೆ ನಡೆದು ಹೊಗುವಾಗ ಕಾಲು ನೆಲ ತಾಕುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ನಾವು ಸರಿಯಾಗಿಯೇ ಇರುತ್ತೇವೆ. ನಾವು ಸರಿಯಾಗಿಲ್ಲ ಎನ್ನುವ ಒಂದು ಮನೋಭಾವವು ಅದೆಲ್ಲಿಂದಲೋ ಶನಿಯ ಹಾಗೆ ನಮ್ಮ ಹೆಗಲನ್ನೇರಿ ಕುಳಿತಿರುತ್ತದೆ. ಅದಕ್ಕಾಗಿಯೇ ನಮ್ಮ ವರ್ತನೆಯಲ್ಲಿ ಪರಿವರ್ತನೆ ಹೊಂದಿ ಬೇಡವಾದ ಅಸಂಬದ್ಧ ನಡವಳಿಕೆಗಳನ್ನು ನಮ್ಮಿಂದ ಹೊರಹಾಕಿಸುತ್ತದೆ. ಇದು ಒಂದು ರೀತಿಯಲ್ಲಿ ಕೀಳರಿಮೆ ಅಲ್ಲವೇ? ಒಂದು ವಿಚಾರದಂತೆಯೇ ಈ ಜಗತ್ತಿನಲ್ಲಿ ಯಾರೊಬ್ಬರೂ ಪರಿಪೂರ್ಣರಿಲ್ಲ. ಸುಂದರರು, ಸುಂದರಿಯರೂ ಎನಿಸಿಕೊಂಡವರಲ್ಲಿ ಒಂದು ಪರ್ಫೆಕ್ಟ್ ಪರ್ಸನಾಲಿಟಿಗಳಿಲ್ಲ. ಈ ನೆಲದಲ್ಲಿ ಜೀವಿಸುವ ಪ್ರತಿಯೊಬ್ಬರೂ ಒಂದಲ್ಲೊಂದು ನ್ಯೂನ್ಯತೆಯಿಂದ ಬಳಲುವವರೆ.

ಮಾನಸಿಕ ಆರೋಗ್ಯ ಕೆಡಿಸೋ ಕೆಟ್ಟ ವರ್ತನೆಗಳಿವು!

ಆದರೆ ಈ ನ್ಯೂನ್ಯತೆಗಳನ್ನೆಲ್ಲಾ ಮೀರಿ ತಮ್ಮತನವನ್ನು ರೂಪಿಸಿಕೊಳ್ಳುವುದಿದೆಯಲ್ಲ ಅದೇ ಗ್ರೇಟ್. ಅಂತಹವರೆ ಜೀವನವೆಂಬ ಸಾಗರದಲ್ಲಿ ಈಜಿ ದಡ ಸೇರುತ್ತಾರೆ. 

Follow Us:
Download App:
  • android
  • ios