Asianet Suvarna News Asianet Suvarna News

ಹಿರೇಕೆರೂರು- ರಟ್ಟೀಹಳ್ಳಿ ಅಭಿವೃದ್ಧಿ ಕಾಮಗಾರಿಗೆ ಸಿಎಂ ಚಾಲನೆ

ಹಿರೇಕೆರೂರು- ರಟ್ಟೀಹಳ್ಳಿ ತಾಲೂಕಿನಲ್ಲಿ 121 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಳಿಗೆ ಸಿಎಂ ಇಂದು ಚಾಲನೆ| ಯಡಿಯೂರಪ್ಪ ಪ್ರಪ್ರಥಮ ಬಾರಿಗೆ ಕೋಟಿ, ಕೋಟಿ ಅನುದಾನ ನೀಡುವ ಮೂಲಕ ತಾಲೂಕಿನ ಜನತೆಯ ಭರವಸೆಗಳನ್ನು ಈಡೇರಿಸಿದ್ದಾರೆ|

CM B S Yediyurappa will be Inaugurate Development works in Hirekeru-Rattihalli Taluk
Author
Bengaluru, First Published Nov 7, 2019, 7:28 AM IST

ಹಿರೇಕೆರೂರು[ನ.7]: ಹಿರೇಕೆರೂರು- ರಟ್ಟೀಹಳ್ಳಿ ತಾಲೂಕಿನಲ್ಲಿ ವಿವಿಧ ಇಲಾಖೆಗಳ 121 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಗುರುವಾರ ಹಿರೇಕೆರೂರು ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದ ಹಿಂಭಾಗದ, ತಂಬಾಕದ ಮೈದಾನಕ್ಕೆ ಬೆಳಗ್ಗೆ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ ಅವರು ತಿಳಿಸಿದ್ದಾರೆ. 

ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಹೆಲಿಪ್ಯಾಡ್‌ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಯ ದೃಷ್ಠಿಯಿಂದ ರೈತನಾಯಕ ಎಂದೇ ಹೆಸರು ವಾಸಿ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಪ್ರಥಮ ಬಾರಿಗೆ ಕೋಟಿ, ಕೋಟಿ ಅನುದಾನ ನೀಡುವ ಮೂಲಕ ತಾಲೂಕಿನ ಜನತೆಯ ಭರವಸೆಗಳನ್ನು ಈಡೇರಿಸಿದ್ದಾರೆ. ಇಂದು ನಡೆಯುವ ಈ ಬೃಹತ್‌ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಸಾರ್ವಜನಿಕರು, ರೈತ ಬಾಂಧವರು, ಮಹಿಳೆಯರು, ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನಲ್ಲಿ ಈಗ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕೆ ಇದೇ ಮೊದಲ ಬಾರಿಗೆ ತಾಲೂಕಿಗೆ ಆಗಮಿಸುತ್ತಿದ್ದು ನಮ್ಮ ಆಸೆ, ಭರವಸೆಗಳನ್ನು ನಿರೀಕ್ಷೆಗೂ ಮೀರಿ ಈಡೇರಿಸಿದ ಜನಮಾನಸದ ನಾಯಕರಾಗಿದ್ದಾರೆ. ಇದು ನಮ್ಮ ಸರ್ಕಾರದ ಸಾಧನೆ ಎಂಬುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಕೈಯನ್ನು ಇನ್ನು ಬಲಪಡಿಸು ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದರು.

ತಹಸೀಲ್ದಾರ್‌ ಆರ್‌.ಎಚ್‌. ಭಾಗವಾನ, ಸಿಪಿಐ ಮಂಜುನಾಥ ಪಂಡಿತ್‌, ಪಪಂ ಮುಖ್ಯಾಧಿಕಾರಿ ರಾಜಾರಾಮ ಪವಾರ್‌, ದೊಡ್ಡಗೌಡ ಪಾಟೀಲ್‌, ಬಸವರಾಜ ಭರಮಗೌಡರ, ಅಶೋಕ ಜಾಡಬಂಡಿ, ಬಸವರಾಜ ಕಾಲ್ವೀಹಳ್ಳಿ, ದುರ್ಗಪ್ಪ ತಿರಕಪ್ಪನವರ, ಕರಬಸವ ತಿಪ್ಪಕ್ಕಳವರ, ಶಂಭು ಹಂಸಭಾವಿ ಇತರರಿದ್ದರು.

ಇಂದು ಹಿರೇಕೆರೂರಗೆ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಆಗಮಿಸಲಿದ್ದಾರೆ.

ಇಂದು ಜಿಲ್ಲೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

ಸಿಎಂ ಬಿ.ಎಸ್‌. ಯಡಿಯೂರಪ್ಪ ನ. 7 ರಂದು ಹಾವೇರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ನ. 7 ರಂದು ಬೆಳಗ್ಗೆ 9ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ಹೊರಟು, 10.40ಕ್ಕೆ ಹಾವೇರಿ ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಮೈದಾನ ಹೆಲಿಪ್ಯಾಡ್‌ಗೆ ಆಗಮಿಸುವರು. 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು. 11.45ಕ್ಕೆ ನಗರದ ಆರ್‌ಟಿಓ ಕಚೇರಿ ಹತ್ತಿರ ಗುರುಸಿದ್ಧರಾಮೇಶ್ವರ ಸಮುದಾಯ ಭವನ ಸಭಾಂಗಣದ ಉದ್ಘಾಟನೆ, ಮಧ್ಯಾಹ್ನ 12.15ಕ್ಕೆ ಮಲ್ಲಾಡದ ರುದ್ರಮ್ಮ ಮೆಮೋರಿಯಲ್‌ ಹಾಸ್ಪಿಟಲ್‌ ನೂತನ ಕಟ್ಟಡ ಉದ್ಘಾಟನೆ, ಹಾಗೂ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಮಧ್ಯಾಹ್ನ 12.40ಕ್ಕೆ ಹಾವೇರಿಯಿಂದ ಹೆಲಿಕ್ಯಾಪ್ಟರ್‌ನಲ್ಲಿ ಹೊರಟು 12.55ಕ್ಕೆ ಹಿರೇಕೆರೂರು ತಾಲೂಕು ನಗರ ಪಟ್ಟಣ ಪಂಚಾಯಿತಿ ಕ್ರೀಡಾಂಗಣ ಹೆಲಿಪ್ಯಾಡ್‌ಗೆ ತಲುಪುವರು. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸುವರು. 3 ಗಂಟೆಗೆ ಹಿರೇಕೆರೂರು ತಾಲೂಕು ನಗರ ಪಪಂ ಕ್ರೀಡಾಂಗಣ ಹೆಲಿಪ್ಯಾಡ್‌ನಿಂದ ಹೊರಟು ಮಧ್ಯಾಹ್ನ 3.20ಕ್ಕೆ ರಾಣಿಬೆನ್ನೂರು ಎಪಿಎಂಸಿ ಹೆಲಿಪ್ಯಾಡ್‌ಗೆ ಆಗಮಿಸಿ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ರಾಣಿಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆವತಿಯಿಂದ ಮೆಗಾ ಮಾರುಕಟ್ಟೆಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 4.30 ಕ್ಕೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಸಾಣೆಹಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios