Asianet Suvarna News Asianet Suvarna News

ಲಕ್ಷ್ಮೇಶ್ವರ: ಹೇಳಿ ಹೇಳಿ ಸಾಕಾಗಿ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು!

ಗುತ್ತಲ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಮಾಡಿದ ಗ್ರಾಮಸ್ಥರು| ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು| ಕ್ಯಾರೆ ಎನ್ನದ  ಅಧಿಕಾರಿಗಳು| ತಾವೇ ಹಣ ಸಂಗ್ರಹ ಮಾಡಿ ರಸ್ತೆ ದುರಸ್ತಿ ಮಾಡಿದ್ದಾರೆ|

Villagers Did Repair of Road in Lakshmeshwar in Gadag District
Author
Bengaluru, First Published Oct 31, 2019, 1:35 PM IST

ಲಕ್ಷ್ಮೇಶ್ವರ[ಅ.30]: ಸಮೀಪದ ಬಾಲೆಹೊಸೂರಿನಿಂದ ಗುತ್ತಲ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಗ್ರಾಮಸ್ಥರೇ ಕಲ್ಲು ಮಣ್ಣು ಹಾಕಿ ದುರಸ್ತಿ ಮಾಡಿದ ಘಟನೆ ಬುಧವಾರ ನಡೆದಿದೆ.

ಕಳೆದ 2-3  ತಿಂಗಳಿಂದ ಬಾಲೆಹೊಸೂರ-ಗುತ್ತಲಕ್ಕೆ ಸಾಗುವ ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿಉಂಟಾಗಿರುವ ದೊಡ್ಡ ದೊಡ್ಡ ಗುಂಡಿಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೂ ಅಧಿಕಾರಿಗಳು ಕ್ಯಾರೆ ಎನ್ನದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ರೋಸಿ ಹೋಗಿದ್ದಾರೆ. ಹೀಗಾಗಿ ತಾವೇ ಹಣ ಸಂಗ್ರಹ ಮಾಡಿಕೊಂಡು ಗ್ರಾಮದಲ್ಲಿ ಬಿದ್ದಿರುವ ಗುಂಡಿಗಳನ್ನು ಟ್ರ್ಯಾಕ್ಟರ್ ಮೂಲಕ ಕಲ್ಲು ಮಣ್ಣು ತಂದು ಹಾಕಿ ಜೆಸಿಬಿಯಿಂದ ಹರಡಿ ಬಸ್,ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಲೆಹೊಸೂರಿಂದ ಗುತ್ತಲಕ್ಕೆ ತೆರಳುವ ರಸ್ತೆ ದುರಸ್ತಿ ಕಾರ್ಯದಲ್ಲಿ ಗ್ರಾಮದ ಯುವಕ ಸಂಗಪ್ಪ ಬಡಿಗೇರ, ಚಂದ್ರು ಹಿರೇಮಠ, ಮಲ್ಲಪ್ಪ ಕಬ್ಬೇರ, ಮಂಜುನಾಥ ಗುಳೇದ, ಫಕ್ಕೀರಪ್ಪ ಪಟ್ಟೇದ, ಹನಮಂತಪ್ಪ ಚಿಗರಿ,ವಿಜಯ ತಳವಾರ, ವಿಷ್ಣು ಬಡಿಗೇರ ಮೊದಲಾದವರು ಇದ್ದರು. ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಿಡಿ ಮಣ್ಣು ಹಾಕುವ ಗೋಜಿಗೆ ಹೋಗದಿರುವುದು ದರುಂತದ ಸಂಗತಿ ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಚೆನ್ನಪ್ಪ ಜಗಲಿ.ಗುಂಡಿಗಳಿಂದ ತುಂಬಿದ್ದ ಬಾಲೆಹೊಸೂರಿನಿಂದ ಗುತ್ತಲ ಗ್ರಾಮಕ್ಕೆ ತೆರಳುವ ರಸ್ತೆ ಬಾಲೆಹೊಸೂರ ಗ್ರಾಮದಿಂದಗುತ್ತಲ ಕಡೆಗೆ ಹೋಗುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದುಅನೇಕ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. 

ಕಾರ್ ಮತ್ತು ಟಂಟಂಗಳು ಈ ಗುಂಡಿಯಲ್ಲಿ ಸಿಲುಕಿ ಹಾಕಿಕೊಂಡು ಪರದಾಡಿದ ಪ್ರಸಂಗಗಳು ನಡೆದಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆ ಇದೆಯೋ ಇಲ್ಲವೋ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಸ್ತೆಯ ಸ್ಥಿತಿಕಂಡು ನಾವೇ ದುರಸ್ತಿ ಮಾಡಿಕೊಳ್ಳುತ್ತಿದ್ದೇವೆ. ಇನ್ನಾದರೂ ಅಧಿಕಾರಿಗಳು ಈ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವರೋ ಇಲ್ಲವೋ ನೋಡುತ್ತೇವೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ರಾಸ್ತಾ ರೋಕೊ ಮಾಡುವ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದು ಬಾಲೆಹೊಸೂರು ನಿವಾಸಿ ಸುರೇಶ ಹಾವನೂರ ಅವರು ಹೇಳಿದ್ದಾರೆ. 

Follow Us:
Download App:
  • android
  • ios