Asianet Suvarna News Asianet Suvarna News

ಭಾರೀ ಮಳೆ: ದಶಕಗಳ ಬಳಿಕ ತುಂಬಿದ ಗದಗ ಭೀಷ್ಮಕೆರೆ

ಮಹಾಮಳೆಗೆ ಗದಗದ ಐತಿಹಾಸಿಕ ಕೆರೆ ಹಲವು ದಶಕಗಳ ನಂತರ ತುಂಬಿದೆ|  ಹೊಂಬಳನಾಕಾ, ಗಂಗಿಮಡಿ, ಸಮೀಪದ ನರಸಾಪುರ ಸೇರಿದಂತೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೀವ್ರ ಪರದಾಟ|  ತೀವ್ರ ತರನಾದ ಮಳೆಯಿಂದಾಗಿ ನಗರದ ರಾಜಕಾಲುವೆಗಳೂ ಸೇರಿದಂತೆ ಇತರ ಚರಂಡಿಗಳು ತುಂಬಿ ಹರಿದವು|

Gadag's Bheeshma Lake Full After Decades
Author
Bengaluru, First Published Oct 23, 2019, 9:08 AM IST

ಗದಗ[ಅ.23]: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಗದಗ ನಗರದ ಐತಿಹಾಸಿಕ ಕೆರೆ ಹಲವು ದಶಕಗಳ ನಂತರ ತುಂಬಿ ಹರಿಯುತ್ತಿದೆ. ಸುಮಾರು ವರ್ಷಗಳ ನಂತರ ಈ ರೀತಿ ಉಗ್ರಸ್ವರೂಪನಾಗಿ ಸುರಿಯುತ್ತಿರುವ ಮಳೆರಾಯ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದ್ದಾನೆ.

ಸೋಮವಾರ ರಾತ್ರಿಯಿಂದಲೂ ಸುರಿಯುತ್ತಿರುವ ಮಳೆ ಮಂಗಳವಾರ ಬೆಳಗ್ಗೆ ಕೆಲ ಕಾಲ ಬಿಡುವು ಕೊಟ್ಟಿತ್ತು. ಆದರೆ, ಮತ್ತೆ 11 ಗಂಟೆಗೆ ಪ್ರಾರಂಭವಾದ ರಭಸದ ಮಳೆಮಧ್ಯಾಹ್ನ 1 ರ ವರೆಗೂ ನಿರಂತರ ಸುರಿಯಿತು. ಹೊಂಬಳನಾಕಾ, ಗಂಗಿಮಡಿ, ಸಮೀಪದ ನರಸಾಪುರ ಸೇರಿದಂತೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೀವ್ರ ಪರದಾಡುವಂತಾಯಿತು. 

ತುಂಬಿ ಹರಿದ ಭೀಷ್ಮ ಕೆರೆ: 

ಸಿಂಗಟಾಲೂರ ಏತನೀರಾವರಿ ಮೂಲಕ ಅರ್ಧ ಭರ್ತಿಯಾಗಿದ್ದ ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆಯು ತೀವ್ರವಾದ ಮಳೆಯಿಂದ ಪೂರ್ಣ ತುಂಬಿ ಮಧ್ಯಾಹ್ನ ಕೋಡಿ ಬಿತ್ತು. ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಕೆರೆಯ ಪಕ್ಕದಲ್ಲಿರುವ ತೀಸ್ ಬಿಲ್ಡಿಂಗ್, ಎಸ್‌ಎಸ್‌ಕೆ ಶಾಲೆ ಸಂಪೂರ್ಣಗಿ ಜಲಾವೃತವಾದವು. ಮೊಣಕಾಲಿನವರೆಗೆ ನೀರು ನಿಂತು ತೊಂದರೆ ಅನುಭವಿಸುವಂತಾಯ್ತು. 

ಮನೆಗಳಿಗೆ ನುಗ್ಗಿದ ನೀರು: 

ಕಂಬಾರಸಾಲು, ಜವಳಗಲ್ಲಿ ಮೂಲಕ ಹಾಯ್ದು ಹೋಗುವ ರಾಜಕಾಲುವೆ ಸಂಪೂರ್ಣವಾಗಿ ಭರ್ತಿಯಾಗಿ, ಅತ್ಯಂತ ರಭಸವಾಗಿ ಹರಿದಿದ್ದು, ರಭಸಕ್ಕೆ ಅಕ್ಕಪಕ್ಕದ ನಿವಾಸಿಗಳು ಆತಂಕ ಎದುರಿಸುವಂತಾಯಿತು. ರಾಜಕಾಲುವೆ ಅಕ್ಕಪಕ್ಕದಲ್ಲಿರುವ ಕಂಬಾರಸಾಲ ಹಾಗೂ ಜವಳಗಲ್ಲಿಯ ಮನೆಗಳಿಗೆ ನೀರು ನುಗ್ಗಿಸಾರ್ವಜನಿಕರು ತೀವ್ರ ಪರದಾಡುವಂತಾಯಿತು. ಮನೆಯಲ್ಲಿದ್ದ ಬಟ್ಟೆ, ಕಾಳುಕಡಿ, ಪುಸ್ತಕಗಳು, ಪಾತ್ರೆಗಳು ಸೇರಿದಂತೆ ಎಲ್ಲ ಸಾಮಾಗ್ರಿಗಳು ನೀರು ಪಾಲಾದವು. 

ಪರದಾಡಿದ ಸಾರ್ವಜನಕರು: 

ತೀವ್ರ ತರನಾದ ಮಳೆಯಿಂದಾಗಿ ನಗರದ ರಾಜಕಾಲುವೆಗಳೂ ಸೇರಿದಂತೆ ಇತರ ಚರಂಡಿಗಳು ತುಂಬಿ ಹರಿದವು. ನಗರದ ಪಂಚರೌಂಡ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿತು. ಮೊಣಕಾಲಿನವರೆಗೂ ನೀರು ನಿಂತು ಸವಾರರು ಪರದಾಡಿದರು. ಗಂಗಿಮಡಿ ಪ್ರದೇಶದಲ್ಲಿಯೂ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಮಳೆ ನಿಂತ ಮೇಲೂಸಾರ್ವಜನಿಕರ ಆತಂಕ ಕಡಿಮೆಯಾಗಿಲ್ಲ.

ಈ ಬಗ್ಗೆ ಮಾತನಾಡಿದ ಗದಗ-ಬೆಟಗೇರಿನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಅವರು,  ಸಂಕಷ್ಟಕ್ಕೀಡಾದ ಜನರಿಗಾಗಿಎಸ್.ಎಂ. ಕೃಷ್ಣ ನಗರ ಹಾಗೂ ಡಾ. ಅಂಬೇಡ್ಕರ್ ನಗರಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಭಾರೀ ಮಳೆಯಿಂದಾಗಿ ಗದುಗಿನ ಭೀಷ್ಮ ಕೆರೆಯೂ ಉಕ್ಕಿಹರಿಯುತ್ತಿದ್ದು, ನೀರಿನ ಹರಿವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios