Asianet Suvarna News Asianet Suvarna News

ಬಿಜೆಪಿಯವರು ಹಿಟ್ಲರ್‌ ವಂಶದವರು ಎಂದ ಸಿದ್ದರಾಮಯ್ಯ

ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ|ಬಿಜೆಪಿಯವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಅಂತಾರೆ| ರಾಜ್ಯದ ಸಚಿವ ಸಂಪುಟದಲ್ಲಿ ಒಬ್ಬೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‌ ಮಂತ್ರಿ ಇಲ್ಲ| ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಯಡಿಯೂರಪ್ಪನಿಗೆ ಆಗುತ್ತಿಲ್ಲ| ಯಡಿಯೂರಪ್ಪ ಸೂತ್ರದ ಗೊಂಬೆ| 

BJP Leaders Descendants of Hitler
Author
Bengaluru, First Published Oct 27, 2019, 8:50 AM IST

ಗದಗ(ಅ.27): ಬಿಜೆಪಿಯವರು ಹಿಟ್ಲರ್‌ ವಂಶದವರು, ಸುಳ್ಳುಗಳನ್ನು ಅತ್ಯಂತ ಸುಂದರವಾಗಿ ಹೇಳುವುದು, ಅದನ್ನೇ ಸತ್ಯ ಮಾಡುವುದು ಅವರಿಗೆ ಕರಗತವಾಗಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಅಂತಾರೆ, ರಾಜ್ಯದ ಸಚಿವ ಸಂಪುಟದಲ್ಲಿ ಒಬ್ಬೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‌ ಮಂತ್ರಿ ಇಲ್ಲ. ಅವರೆಲ್ಲಾ ಮನುಷ್ಯರಲ್ವೋ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಸಂಜೆ ಗದಗ ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಂ ರಾಷ್ಟ್ರ ಮಾಡಿಬಿಡುತ್ತಾರೆ ಎನ್ನುವ ಸುಳ್ಳು ಆರೋಪ ಮಾಡುತ್ತಿದ್ದಾರೆ. 600 ವರ್ಷ ಮೊಗಲರು ಆಳ್ವಿಕೆ ಮಾಡಿಲ್ಲವೇ? ನಂತರ ಬ್ರಿಟೀಷರು ಆಡಳಿತ ನಡೆಸಿಲ್ಲವೇ? ನಮ್ಮ ರಾಷ್ಟ್ರ ಬದಲಾಗಿ ಹೋಯ್ತೇ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ನಾವಷ್ಟೇ ಹಿಂದುಗಳು, ಹಿಂದುಗಳ ವಿರುದ್ಧ ಮಾತನಾಡುವವರೆಲ್ಲಾ ಬೇರೆ ದೇಶದವರು ಎನ್ನುವ ರೀತಿಯಲ್ಲಿ ವರ್ತಿಸುತ್ತೀರಲ್ಲಾ. ನಾವೆಲ್ಲಾ ಯಾರು? ನಾವು ಹಿಂದುಗಳೇ ಎಂದು ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಕುಟುಕಿದ ಅವರು, ದೇಶದಲ್ಲಿ ಮೋದಿ, ಷಾ, ಯಡಿಯೂರಪ್ಪ, ಜೋಶಿ ಮಾತ್ರ ಹಿಂದುಗಳೆಂದುಕೊಂಡಿದ್ದಾರೆ ಎಂದು ತೀಕ್ಷ್ಣವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಶಾಸಕ ಎಚ್‌.ಕೆ. ಪಾಟೀಲ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಲಾಯಿತು.

ವರುಣಾ ಶಾಸಕ ಡಾ. ಯತೀಂದ್ರ, ವಿಪ ಸದಸ್ಯ ಎಚ್‌.ಎಂ. ರೇವಣ್ಣ, ಮಾಜಿ ಶಾಸಕರಾದ ಜಿ.ಎಸ್‌. ಗಡ್ಡದೇವರಮಠ, ಡಿ.ಆರ್‌. ಪಾಟೀಲ, ಶ್ರೀಶೈಲಪ್ಪ ಬಿದರೂರ, ಬಿ.ಆರ್‌. ಯಾವಗಲ್ಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಜಿಪಂ, ತಾಪಂ ಸದಸ್ಯರು ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು.

ಕಾಂಗ್ರೆಸ್‌ ಕಷ್ಟದ ದಿನಗಳನ್ನು ಎದುರಿಸುತ್ತಿದೆ

2014 ಮತ್ತು 2019ರ ಲೋಕಸಭೆ, ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿದ್ದು ಕಾಂಗ್ರೆಸ್‌ ಪಕ್ಷ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಮೈ ಕೊಡವಿ ನಿಲ್ಲಬೇಕು, ನಮ್ಮ ಪಕ್ಷ ಸೋತಿರುವುದು ನಮ್ಮ ತಪ್ಪುಗಳಿಂದ ಅಲ್ಲ, ಬಿಜೆಪಿಯವರ ಅಪಪ್ರಚಾರದಿಂದ. ಸುಳ್ಳು ಮಾಹಿತಿಗಳಿಂದ, ಅವರಿಗೆ ದೇಶದ ಅಭಿವೃದ್ಧಿಯಿಂದ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಾ ಜನರ ದಾರಿ ತಪ್ಪಿಸುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ಈಚೆಗೆ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಜನತೆ ಅದಕ್ಕೆ ಸೂಕ್ತವಾದ ಉತ್ತರವನ್ನು ನೀಡುವ ಮುನ್ಸೂಚನೆಯನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ತಿಳಿಸಿದರು.

ಯಡಿಯೂರಪ್ಪ ಸೂತ್ರದ ಗೊಂಬೆ

ರಾಜ್ಯದಲ್ಲಿ ತೀವ್ರ ಪ್ರವಾಹ ಉಂಟಾಗಿ ಸಂಕಷ್ಟವಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಯಡಿಯೂರಪ್ಪನಿಗೆ ಆಗುತ್ತಿಲ್ಲ ಎಂದರೆ ಲೆಕ್ಕಹಾಕಿ. ಯಡಿಯೂರಪ್ಪ ಸದ್ಯ ಸೂತ್ರದ ಗೊಂಬೆಯಂತಾಗಿದ್ದಾರೆ. ಅವರ ರಿಮೋಟ್‌ ಕಂಟ್ರೋಲ್‌ ಈಗ ದೆಹಲಿಯಲ್ಲಿ ಕುಳಿತಿದ್ದಾರಲ್ಲ ಸಂತೋಷ ಅವರ ಕೈಯಲ್ಲಿದೆ. ಯಡಿಯೂರಪ್ಪ ಕಾಡಿ ಬೇಡಿ ಮುಖ್ಯಮಂತ್ರಿಯಾಗಿದ್ದಾರೆ ಹಾಗಾಗಿ ಮೋದಿ, ಷಾ ಇವರಿಗೆ ಕ್ಯಾರೆ ಅನ್ನಲ್ಲ, ಅದಕ್ಕಾಗಿ ಯಡಿಯೂರಪ್ಪ ನನ್ನದು ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ ನಿಮ್ಗೂ ವಯಸ್ಸಾಯಿತು, ತಂತಿ ಮೇಲೆ ನಡಿಬೇಡಿ, ಬಿದ್ದು ಬಿಡುತ್ತೀರಾ ಎಂದು ಬಿಎಸ್‌ವೈ ಆಡಳಿತವನ್ನು ಟೀಕಿಸಿದರು.
 

Follow Us:
Download App:
  • android
  • ios