entertainment
By Suvarna Web Desk | 03:56 PM March 18, 2017
ಉರ್ವೀ ವಿಮರ್ಶೆ: ವರ್ಮಾಹಲಕ್ಷ್ಮೀ ವೃಥಾ!

Highlights

ಕತೆಯಲ್ಲಿ ತಿರುವುಗಳು ಇರಲೇಬೇಕು ಎಂಬ ಕಾರಣಕ್ಕೇ ತಿರುವುಗಳನ್ನು ತುಂಬಿರುವುದು ಕತೆಯ ತೀವ್ರತೆಯನ್ನು ಕುಗ್ಗಿಸಿದೆ. ನಿರ್ದೇಶಕರು ತಮ್ಮ ಅನುಕೂಲಕ್ಕಾಗಿಯೇ ಕತೆಯನ್ನು ತಿರುಚಿಕೊಂಡಿದ್ದಾರೆ.

ಚಿತ್ರ: ಉರ್ವಿ
ತಾರಾಗಣ: ಶ್ರುತಿ ಹರಿಹರನ್‌, ಶ್ರದ್ಧಾ ಶ್ರೀನಾಥ್‌, ಶ್ವೇತಾ ಪಂಡಿತ್‌, ಅಚ್ಯುತ್‌, ಭವಾನಿ ಪ್ರಕಾಶ್‌ ಮತ್ತಿತರರು.
ನಿರ್ದೇಶನ: ಪ್ರದೀವ್‌ ವರ್ಮ
ನಿರ್ಮಾಣ: ಬಿ.ಆರ್‌. ಪಿ. ಭಟ್‌
ಛಾಯಾಗ್ರಹಣ: ಆನಂದ್‌ ಸುಂದರೇಶ
ಸಂಗೀತ: ಮನೋಜ್‌ ಜಾರ್ಜ್

ರೇಟಿಂಗ್‌: ***

1. ನಿರ್ದೇಶಕರ ಕೈಗೆ ಬಣ್ಣ ಕೊಡಬಾರದು.
ಉರ್ವಿ- ಪ್ರದೀಪ್‌ ವರ್ಮ ಅವರ ಮೊದಲ ಚಿತ್ರ. ನಾನಾ ಕಾರಣಕ್ಕೆ ವೇಶ್ಯಾವಾಟಿಕೆ ಸೇರಿದವರು. ಅವರನ್ನು ಸಾಕುವ ಘರ್‌ವಾಲಿ. ಅವಳನ್ನು ಹತೋಟಿಯಲ್ಲಿಟ್ಟುಕೊಂಡ ವ್ಯಾಪಾರಿ. ಅವನ ಖಯಾಲಿ. ಇವರ ಮೌನ. ಹಾರಲಾರದ ಹಕ್ಕಿಗಳ ಮೂಕಮರ್ಮರ. ಅವರ ಬಣ್ಣಬಣ್ಣದ ಕನಸು. ಆ ಕನಸಲ್ಲ ಗುಟ್ಟಾಗಿ ಬರುವ ರಾಜಕುಮಾರ. ಇವೆಲ್ಲದರ ನಡುವೆ ಕುಂಚದಿಂದಲೇ ಭ್ರಷ್ಟತೆ ಬಯಲಿಗೆಳೆವ ಒಬ್ಬ ಕಲಾವಿದ. ಅವನನ್ನು ಅಟ್ಟಿಸಿಕೊಂಡು ಬರುವ ಪೊಲೀಸರು.

ಹೀಗೆ ಬಣ್ಣದೊಂದಿಗೆ ಆಟ ಆಡಿದ್ದಾರೆ ಪ್ರದೀಪ್‌. ವೇಶ್ಯಾಗೃಹ ಎಂದರೆ ಎಲ್ಲೆಲ್ಲೂ ಬಣ್ಣವೇ. ಆ ಬಣ್ಣದ ನಡುವೆಯೇ ಬಣ್ಣ ಕಳಕೊಂಡವರ ಅಸಹಾಯಕ ಮೌನ. ಅನಿವಾರ್ಯ ಸಂಭ್ರಮ. ಅನಿರೀಕ್ಷಿತ ಅಬ್ಬರ. ಮೊಗ್ಗನ್ನು ಹೊಸಕುವ ಧಾವಂತ. ಮುಳ್ಳಬೇಲಿಯ ನಡುವೆ ನೀಲಿಹೂವಂತೆ ಅರಳಿದವಳ ಆತಂಕ.

ಇವೆಲ್ಲವನ್ನೂ ಎಪಿಸೋಡಿಕ್‌ ಆಗಿ ಕಟ್ಟಿಕೊಟ್ಟಿದ್ದಾರೆ ಪ್ರದೀಪ್‌. ಎಲ್ಲವನ್ನೂ ಹೇಳಬೇಕು ಅನ್ನುವ ಆತುರವಿದೆ. ಹೇಗೆ ಹೇಳಬೇಕು ಅನ್ನುವುದು ಗೊತ್ತಿಲ್ಲದ ಚೊಚ್ಚಲ ಸಂಭ್ರಮದಲ್ಲಿ ಪ್ರದೀಪ್‌ ತೋಚಿದ್ದೆಲ್ಲವನ್ನೂ ಗೀಚಿದ್ದಾರೆ. ನಿಮಗೆ ಎಷ್ಟುಬೇಕೋ ಅಷ್ಟನ್ನು ಓದಿಕೊಳ್ಳಬಹುದು.

2. ಹೆಣ್ಮಕ್ಕಳ ಕೈಗೆ ಗನ್ನು ಕೊಡಬಾರದು.
ಇದು ಕ್ರಾಂತಿಕಾರಿ ಚಿತ್ರ. ಕ್ರಾಂತಿ ಯಾವಾಗಲೂ ತಡವಾಗಿಯೇ ಬರುತ್ತದೆ. ಪಂಜರದ ಹಕ್ಕಿಗಳ ಪಾಲಿಗೆ ಆಶಾದೀಪವಾಗಿ ಬರುವ ಆಶಾ, ಅವರನ್ನೆಲ್ಲ ಸೇರಿಸಿ ಭಾಷಣ ಮಾಡುತ್ತಾರೆ. ಒಂದು ಸಾವು ಮತ್ತು ಒಂದು ಭಾಷಣ ಏನನ್ನು ಬೇಕಿದ್ದರೂ ಬದಲಾಯಿಸಬಲ್ಲದು. ಹಕ್ಕಿಗಳೆಲ್ಲ ಚೂಪು ಉಗುರು, ಹರಿತ ಕೊಕ್ಕು ಬೆಳೆಸಿಕೊಂಡು ದಾಳಿಗೆ ಸಿದ್ಧವಾಗುತ್ತವೆ. ಹೋರಾಟದ ಮುಂಚೂಣಿಯಲ್ಲಿರುವ ಹೆಣ್ಣಿನ ಕೈಗೆ ಗನ್ನು ಕೂಡ ಸಿಗುತ್ತದೆ. ಅಲ್ಲಿಂದಾಚೆ ಮಾರಣ ಹೋಮ ಶುರುವಾಗುತ್ತದೆ. ಸಾಲುಸಾಲಾಗಿ ಹೆಣಗಳು ಬೀಳುತ್ತಾ ಹೋಗುತ್ತವೆ. ಅಷ್ಟೂವರ್ಷದ ಶೋಷಣೆಗೆ ಅವರೆಲ್ಲ ಉತ್ತರ ಕಂಡುಕೊಳ್ಳುತ್ತಾರೆ. ಪಂಜರದಲ್ಲಿಟ್ಟ ರತ್ನಮಂಜರಿ ಬಾಬ್ಬಿ, ಆಕೆಯ ಸುತ್ತ ಇರುವ ಸೇನಾಪಡೆ, ಅಡ್ಡ ಬರುವ ಕಾಲಾಳುಗಳೆಲ್ಲ ಗುಂಡಿನೇಟಿಗೆ ಬಲಿಯಾಗುತ್ತಾರೆ. 

ಪ್ರದೀಪ್‌ ವರ್ಮ ಕೂಡ ಕಂಡಲ್ಲಿ ಗುಂಡಿಕ್ಕಲು ಮೊದಲೇ ನಿರ್ಧಾರ ಮಾಡಿದಂತೆ ಕಾಣಿಸುತ್ತದೆ. ಅವರು ಯಾರನ್ನೂ ಬಿಡುವುದಿಲ್ಲ. ಪುಟ್ಟಹುಡುಗಿ ರಶ್ಮೀ, ಪ್ರೀತಿಸಲು ಬರುವ ಗಡ್ಡಧಾರಿ, ಎಲ್ಲದರ ಹಿಂದಿರುವ ಸೂತ್ರಧಾರಿ, ಪ್ರೀತಿಸಿ ಮೋಸ ಮಾಡಿದ ಜೀವದ ಗೆಳೆಯ- ಎಲ್ಲರನ್ನೂ ಅವರು ಹುಟ್ಟಡಗಿಸುತ್ತಾರೆ. ಚಿತ್ರದ ಕೊನೆಗೆ ಮನಸ್ಸಲ್ಲಿ ಉಳಿಯುವುದು ಗುಂಡಿನ ಸದ್ದು ಮತ್ತು ರಕ್ತಸಿಕ್ತ ಮೌನ!

3. ಚದುರಿ ಹೋದ ಚಿತ್ರಗಳು
ಪ್ರದೀಪ್‌ ವರ್ಮ ಹೇಳಲು ಹೊರಟದ್ದನ್ನು ವಿಭಾಗ ಮಾಡಿಕೊಂಡು ಕತೆ ಹೇಳುತ್ತಾರೆ. ಹೀಗಾಗಿ ಚಿತ್ರಕ್ಕೊಂದು ಸಾವಯವ ಸಮಗ್ರೀಕರಣ ಬಲ ದಕ್ಕಿಲ್ಲ. ಹಲವಾರು ದೃಶ್ಯಗಳನ್ನು ಜೋಡಿಸಿದಾಗ ಸಿನಿಮಾ ಆಗುವುದಿಲ್ಲ ಅನ್ನುವುದನ್ನು ಯಾವ ನಿರ್ದೇಶಕರೂ ಮರೆಯುವಂತಿಲ್ಲ. ವಿನಾಕಾರಣ ಗಹಗಹಿಸುವ ಪೋಲಿಸ್‌ ಅಧಿಕಾರಿ, ಗೆಳೆಯ ತನ್ನ ಪ್ರೇಯಸಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿಸಲು ಮಾಡುವ ತರ್ಕಬದ್ಧತೆಯೇ ಇಲ್ಲದ ಸಂಚು, ದುಡ್ಡು ಮರಳಿಸಲು ಕುಖ್ಯಾತ ಹೋಟೆಲಿಗೆ ಹೋಗಿ ಸಿಕ್ಕಿಬೀಳುವ ನಾಯಕಿ, ಹಳ್ಳಿಗೆ ಮಾರುವೇಷದಲ್ಲಿ ಹೋಗಿ ಕೆಲಸ ಕೇಳುವ ಪ್ರಸಂಗ- ಇವೆಲ್ಲವೂ ಚಿತ್ರಕತೆಯ ದೌರ್ಬಲ್ಯಕ್ಕೆ ಸಾಕ್ಷಿ. ಸಂಭಾಷಣೆಯೂ ಅಲ್ಲಲ್ಲಿ ಕಾವ್ಯಾತ್ಮಕವೂ ಅಲ್ಲಲ್ಲಿ ಗ್ರಾಂಥಿಕವೂ ಆಗೀಗ ಇಂಗ್ಲಿಷ್‌'ಮಯವೂ ಆಗಿ ಕತೆಯ ಅಂದಗೆಡಿಸುತ್ತದೆ. ಕತೆಯಲ್ಲಿ ತಿರುವುಗಳು ಇರಲೇಬೇಕು ಎಂಬ ಕಾರಣಕ್ಕೇ ತಿರುವುಗಳನ್ನು ತುಂಬಿರುವುದು ಕತೆಯ ತೀವ್ರತೆಯನ್ನು ಕುಗ್ಗಿಸಿದೆ. ನಿರ್ದೇಶಕರು ತಮ್ಮ ಅನುಕೂಲಕ್ಕಾಗಿಯೇ ಕತೆಯನ್ನು ತಿರುಚಿಕೊಂಡಿದ್ದಾರೆ. ಕೆಟ್ಟ ಅನುಭವದ ನಂತರವೂ ನಾಯಕಿ ವೇಶ್ಯೆಯರೇ ತುಂಬಿರುವ ವಾಹನ ಹತ್ತುವುದು. ಓಡಿ ಹೋಗುವ ಅವಕಾಶ ಇದ್ದಾಗಲೂ ಓಡಿ ಹೋಗದೇ ಇರುವುದು- ಇವೆಲ್ಲ ಕತೆಯ ಪರಿಣಾಮವನ್ನು ಕಮ್ಮಿ ಮಾಡುತ್ತಾ ಹೋಗುತ್ತವೆ. ಒಂದೊಂದು ಹೂವನ್ನೂ ಬಣ್ಣತುಂಬಿ ಚೆಂದವಾಗಿಸುವ ಪ್ರದೀಪ್‌, ಹೂ ಕಟ್ಟುವ ದಾರವನ್ನು ಮರೆತುಬಿಟ್ಟಿದ್ದಾರೆ.

4. ಮೌನ ಮರೆಯಾಗಿದೆ
ಅಬ್ಬರವೇ ಚಿತ್ರದ ಮೊದಲ ಶತ್ರು. ಇಲ್ಲಿ ಎಲ್ಲವೂ ಅತಿ. ಕಾಮುಕ ತಂದೆಯ ಕುರಿತು ಮಗಳು ಆಡುವ ಮಾತು ಕೂಡ ನಾಟಕೀಯವಾಗಿದ್ದರಿಂದ ಇಡೀ ಚಿತ್ರಕ್ಕೊಂದು ಬೀದಿನಾಟಕದ ಗುಣ ತನ್ನಿಂತಾನೇ ಪ್ರಾಪ್ತಿಯಾಗಿದೆ. ಇಂಥ ಕಥಾವಸ್ತುವಿಗೆ ಮೌನವೂ ಆಭರಣ ಅನ್ನುವುದನ್ನು ಮರೆಯಕೂಡದು.
ಶ್ರುತಿ ಹರಿಹರನ್‌ ಮುಗ್ದತೆ, ಪ್ರೇಮದ ಉತ್ಕಟತೆ, ಅಸಹಾಯಕತೆ ಮತ್ತು ರೋಷತಪ್ತ ನಟನೆಯಲ್ಲಿ ಅತ್ಯುತ್ತಮ. ಆದರೆ ಅವರಿಗೆ ಮಾತಾಡುವ ಅವಕಾಶವನ್ನೇ ಎಷ್ಟೋ ಕಡೆ ಕೊಡದೇ ಅರೆಬರೆ ಸಂಭಾಷಣೆಯಲ್ಲಿ ಅವರನ್ನು ಕಟ್ಟಿಹಾಕಿದ್ದಾರೆ. ಶ್ರದ್ಧಾ ಶ್ರೀನಾಥ್‌ ಶೃಂಗಾರ, ವಿರಹ ಮತ್ತು ಸಂಕಟದ ಸನ್ನಿವೇಶದಲ್ಲಿ ದಿ ಬೆಸ್ಟ್‌. ಮಾತಾಡಿದಾಗ ನಾಟಕೀಯ. ಶ್ವೇತಾಪಂಡಿತ್‌ ಏಕಾಗ್ರತೆ ಕಮ್ಮಿ ಅನ್ನುವುದು ಬಿಟ್ಟರೆ, ತಮಗೊಪ್ಪಿಸಿದ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಭವಾನಿ ಪ್ರಕಾಶ್‌ ಘರ್‌ವಾಲಿಯಾಗಿ ಮೆರೆದಿದ್ದಾರೆ. ಅಚ್ಯುತ್‌ ಪಾತ್ರಕ್ಕೆ ಸೂತ್ರವಿಲ್ಲ, ಭಾಷೆಯೂ ಇಲ್ಲ. ಮಂಗಳೂರಿನ ಎರಡು ಪದಗಳನ್ನು ಮಾತಾಡಿದ ತಕ್ಷಣ ಕರಾವಳಿ ಮನುಷ್ಯನಾಗುವುದಿಲ್ಲ.

ವಿಮರ್ಶೆ: ಜೋಗಿ, ಕನ್ನಡಪ್ರಭ
epaper.kannadaprabha.in

Show Full Article


Recommended


bottom right ad