Asianet Suvarna News Asianet Suvarna News

ನೋ ಪಾಲಿಟಿಕ್ಸ್ : ಉಪೇಂದ್ರರಿಗೆ ಒಳ್ಳೆಯದಾಗಲಿ

ನಟ ಕಿಚ್ಚ ಸುದೀಪ್ ಈಗ ‘ಬಿಗ್‌ಬಾಸ್ ಸೀಸನ್ ೫’ ಗುಂಗಿನಲ್ಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಇನ್ನು ಬಿಗ್‌ಬಾಸ್ ಮನೆಯೇ ಅವರ ಖಾಯಂ ವಾಸ. ಹಾಗಂತ ಅವರು ಈಗ ಫ್ರೀ ಇದ್ದಾರೆಂದು ಭಾವಿಸಬೇಡಿ. ಈಗಷ್ಟೇ ‘ದಿ ವಿಲನ್’ ಚಿತ್ರದ ಶೂಟಿಂಗ್ ಮುಗಿಸಿ ಕೊಂಡು ಬ್ಯಾಂಕಾಕ್‌ನಿಂದ ಬಂದಿದ್ದಾರೆ. ವಾರದಲ್ಲಿ ಹಾಲಿವುಡ್ ಸಿನಿಮಾದ ಕೆಲಸ ಶುರುವಾಗಲಿದೆ ಯಂತೆ. ಜತೆಗೆ ‘ಪೈಲ್ವಾನ್’ಗೂ ತಯಾರಿ ನಡೆದಿದೆ. ಮತ್ತೊಂದೆಡೆ ಜಾಕ್ ಮಂಜು ನಿರ್ಮಾಣದ ಸಿನಿಮಾ. ಹೀಗೆ ಸಾಕಷ್ಟು ಬ್ಯುಸಿ. ಅದರ ನಡುವೆಯೇ ಬಿಗ್‌ಬಾಸ್ ನಿರೂಪಣೆಗೆ ರೆಡಿ. ಅವರ ಜತೆ ಸಣ್ಣ ದೊಂದು ಮಾತುಕತೆ.

Sudeep interview with KP

1) ಬಿಗ್‌ಬಾಸ್‌ಗೆ ಸಕಲ ರೀತಿಯಲ್ಲೂ ರೆಡಿ ಆಗಿದ್ದೀರಿ ?

ಸು: ಹೌದು. ಆದರೆ ಹೊಸ ಥರದ ತಯಾರಿ ಅಂತೇನಿಲ್ಲ. ಭಾವನಾತ್ಮಕವಾಗಿ ನಾನೂ ಆ ಮನೆಯ ಸದಸ್ಯ. ಯಾಕೆಂದ್ರೆ ಇದು ಮೊದಲಲ್ಲ, ಐದನೇ ಸೀಸನ್. ಪ್ರತಿ ಸೀಸನ್ ಶುರುವಾಗುವಾಗ ಅದರ ಅಗ್ರಿಮೆಂಟ್ ಓದದೇ ನಿರೂಪಣೆಗೆ ನಾನು ರೆಡಿ ಅಂತ ಹೇಳೋದಕ್ಕೆ ಅದೇ ಕಾರಣ. ಅಲ್ಲಿಂದ ಸಾಕಷ್ಟು ಕಲಿತಿದ್ದೇನೆ. ಏನ್ ಮಾಡಬೇಕು, ಏನ್ ಮಾಡಬಾರದು ಅನ್ನೋದು ಗೊತ್ತಾಗಿದೆ. ಅದಕ್ಕಿಂತ ಮುಖ್ಯವಾಗಿ ತಾಳ್ಮೆ ಬಂದಿದೆ. ಜಗತ್ತನ್ನು ನೋಡುವ ರೀತಿ ಬದಲಾಗಿದೆ. ಪ್ರತಿ ಆವೃತ್ತಿ ಶುರುವಾಗೋ ಹೊತ್ತಿಗೆ ಕಲರ್ಸ್ ಕನ್ನಡ ಚಾನೆಲ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮತ್ತು ನನ್ನ ನಡುವೆ ವಾಗ್ವಾದ ನಡೆಯುತ್ತೆ. ಅದು ಪ್ರೋಮೋ ಸೇರಿದಂತೆ ಶೋ ಕ್ವಾಲಿಟಿ ವಿಚಾರಕ್ಕೆ ಮಾತ್ರ. ಆ ತರಹದ ವಾಗ್ವಾದ ಈ ಬಾರಿಯೂ ನಡೆದಿದೆ. ಆ ನಿಟ್ಟಿನಲ್ಲಿ ಒಂಚೂರು ಮಾನಸಿಕ ತಯಾರಿ ಇದ್ದೇ ಇರುತ್ತೆ.

2)ಸಿನಿಮಾಗೆ ಹೋಲಿಸಿದ್ರೆ ಬಿಗ್‌ಬಾಸ್ ನಿರೂಪಣೆ ಒತ್ತಡ ಅಂತ ಅನ್ಸೋದಿಲ್ವಾ?

ಸು: ಹಾಗೇನೂ ಇಲ್ಲ. ನಿಜ ಹೇಳ್ಬೇಕಂದ್ರೆ ಒತ್ತಡ ಕಡಿಮೆ ಎನಿಸುತ್ತೆ. ಅದೊಂದು ರೀತಿ ಚಾಲೆಂಜ್. ಆ ವೇದಿಕೆ ಮೇಲೆ ನಿಂತರೆ ವಿಶೇಷವಾದ ಉತ್ಸಾಹ. ಅದರರ್ಥ ಜವಾಬ್ದಾರಿ ಕಾರಣಕ್ಕೆ. ಹಿಂದಿನ ನಾಲ್ಕು ಆವೃತ್ತಿಗಳನ್ನು ಅದೇ ಉತ್ಸಾಹ, ಎನರ್ಜಿಯಿಂದಲೇ ನಿಭಾಯಿಸಿದ್ದೇನೆ. ಹಾಗೆ ನೋಡುತ್ತಾ ಹೋದ್ರೆ ಎಲ್ಲವೂ ಕಷ್ಟ. ಆದ್ರೆ ಅದನ್ನು ನಾವು ಹೇಗೆ ನಿಭಾಯಿಸುತ್ತೇವೆ ಅನ್ನೋದರ ಮೇಲೆ ಪ್ರತಿ ಕೆಲಸ ನಿಂತಿರುತ್ತದೆ. ನಂಗೇನು ಇದು ಒತ್ತಡ, ಸಾಕಪ್ಪಾ ಸಾಕು ಅಂತ ಎಂದಿಗೂ ಎನಿಸಿಲ್ಲ. ಪಾಸಿಟಿವ್ ಇರೋ ಹಾಗೆ ನೆಗೆಟಿವ್ ಇದ್ದೇ ಇರುತ್ತವೆ. ಕೆಲವು ಎಲಿಮೆಂಟ್ ಮಾತ್ರ.

3)‘ದಿ ವಿಲನ್’ ಶೂಟಿಂಗ್ ಎಲ್ಲಿಗೆ ಬಂತು, ಹೇಗಿತ್ತು ಚಿತ್ರೀಕರಣದ ಅನುಭವ ?

ಸು: ಆಲ್‌ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಹತ್ತು ಪರ್ಸೆಂಟ್ ಮಾತ್ರ ಬಾಕಿಯಿದೆ. ಬ್ಯಾಂಕಾಂಕ್‌ನಲ್ಲಿ ಶೂಟಿಂಗ್ ನಡೆದಿದ್ದು. ಅದ್ಬುತ ಅನುಭವ. ಅದಕ್ಕಿಂತ ಹೆಚ್ಚಾಗಿ ನಿರ್ಮಾಪಕ ಮನೋಹರ್, ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪ್ರೇಮ್ ಜತೆಗೆ ಕೆಲಸ ಮಾಡಿದ್ದು ಹೆಮ್ಮೆ ಎನಿಸುತ್ತೆ. ಅಷ್ಟೂ ಮಂದಿಗೂ ವೃತ್ತಿ ಮೇಲೆ ಅದ್ಭುತವಾದ ಪ್ಯಾಷನ್ ಇದೆ. ಕೆಲವರು ಪ್ರೇಮ್ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿ ಈ ಮನುಷ್ಯ ಹೇಗಪ್ಪಾ ಅಂತ ನನಗೂ ಅನಿಸಿದ್ದು ಇತ್ತು. ಆದ್ರೆ ಪ್ರೇಮ್ ಕನ್ನಡದ ಅದ್ಭುತ ನಿರ್ದೇಶಕ. ನಟರನ್ನು ವಿಭಿನ್ನವಾಗಿ ತೋರಿಸುವ ಪ್ಯಾಷನ್ ಕೆಲವರಲ್ಲಿ ಮಾತ್ರವಿದೆ. ಅದರಲ್ಲಿ ಪ್ರೇಮ್ ಒಬ್ಬರು. ಎಲ್ಲವನ್ನು ಅಚ್ಚುಕಟ್ಟಾಗಿ ತರಬೇಕು ಅನ್ನುವ ತವಕ. ಸೆಟ್‌ನಲ್ಲಿ ಸುಮ್ಮನಿರೋದಿಲ್ಲ. ಕೆಲಸ ಕೆಲಸ. ನಿಜಕ್ಕೂ ಅವರೊಂದಿಗೆ ಕೆಲಸ ಮಾಡೋದಕ್ಕೆ ಖುಷಿ ಆಗಿದೆ.

4)ಈ ಸಿನಿಮಾದ ಹೈಲೆಟ್ ಏನು ಅಂತ ಹೇಳಬಹುದಾ...?

ಸು: ಖಂಡಿತಾ ನಂಗೊತ್ತಿಲ್ಲ. ನಿರ್ದೇಶಕ ಪ್ರೇಮ್ ಪ್ರತಿಯೊಂದನ್ನು ಅದ್ಭುತವಾಗಿ ಕೆತ್ತುತ್ತಿದ್ದಾರೆ. ಪ್ರತಿ ಯೊಂದು ಅಚ್ಚುಕಟ್ಟಾಗಿ ಬರಬೇಕು ಅನ್ನೋದು ಅವರ ಆಸೆ. ಬ್ಯಾಂಕಾಕ್ ಚೇಸಿಂಗ್ ಸನ್ನಿವೇಶಗಳು ತುಂಬಾ ರಿಯಾಲಿಸ್ಟಿಕ್ ಆಗಿ ಬಂದಿವೆ. ಅವರೇನು ಹೇಳ ಹೊರಟ್ಟಿದ್ದಾರೋ ನಮಗೂ ಗೊತ್ತಿಲ್ಲ. ಅವರಿಗೆ ಬೇಕೆನಿಸಿದ್ದನ್ನು ನಮ್ಮಿಂದ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಕೆಲಸ ಅಷ್ಟು ಮಾತ್ರ.

5) ಹಾಲಿವುಡ್ ಸಿನಿಮಾ ಮಾಡ್ತಿದ್ದೀರಿ... ?

ಸು: ಇದು ಆಸ್ಟ್ರೇಲಿಯಾ ತಂಡದ ಸಿನಿಮಾ. ನಿರ್ದೇಶಕರೇ ಸಂಪರ್ಕಿಸಿದ್ದರು. ಸಿನಿಮಾ ಬಗ್ಗೆ ನಾನೇನೂ ಮಾತನಾಡಲ್ಲ. ಕೆಲಸ ಮಾತನಾಡಬೇಕು ಅನ್ನೋದು ನನ್ನ ಸಿದ್ಧಾಂತ. ಒಂದೊಳ್ಳೆ ಸಿನಿಮಾ ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಹೆಚ್ಚೇನು ನನಗೂ ಗೊತ್ತಿಲ್ಲ. ಕತೆ, ಚಿತ್ರಕತೆ ಇತ್ಯಾದಿ ಚರ್ಚೆಗೆ ನಾನು ಆಸ್ಟ್ರೇಲಿಯಾಕ್ಕೆ ಹೋಗಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ಅದೇ ತಂಡ ಅಕ್ಟೋಬರ್ 22ಕ್ಕೆ ಬೆಂಗಳೂರಿಗೆ ಬರುತ್ತಿದೆ. ಅವತ್ತೇ ಮುಖಾಮುಖಿ ಭೇಟಿ. ಸುದ್ದಿಗೋಷ್ಠಿ ನಡೆಸಿ, ಹೆಚ್ಚಿನ ವಿವರ ನೀಡುವುದಾಗಿ ತಂಡ ಹೇಳಿದೆ. ಆನಂತರ ಕತೆ  ಕೇಳುವುದು, ಫೋಟೋ ಶೂಟ್ ಎಲ್ಲವೂ ಫಿಕ್ಸ್ ಆಗಲಿವೆ.

6) ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀರಿ ಅನ್ನೋದು ನಿಜವೇ?

ಸು: ಮಾತುಕತೆ ನಡೆದಿದೆ. ಅದು ಇನ್ನೂ ಕನ್‌ಫರ್ಮ್ ಆಗಿಲ್ಲ. ಕನ್‌ಫರ್ಮ್ ಆಗದೆ ಆ ಬಗ್ಗೆ ನಾನು ಮಾತನಾಡೋದಿಲ್ಲ.

7) ಪೈಲ್ವಾನ್ ಸಿನಿಮಾದ ಸಿದ್ಧತೆಯೂ ಶುರುವಾಗಿದೆ ಯಂತೆ.... ?

ಸು: ಕೃಷ್ಣ ಜತೆಗೆ ಇದು ಮತ್ತೊಂದು ಸಿನಿಮಾ. ನನ್ನ ಮೊದಲ ಆದ್ಯತೆ ಇದಕ್ಕೆ. ಹಾಗಂತ ನಾನು ಎಲ್ಲವನ್ನು ಹೇಳಿಕೊಂಡು ಮಾಡೋದಿಲ್ಲ. ಒಟ್ಟೊಟ್ಟಿಗೆ ಎಲ್ಲವೂ ನಡೆಯುತ್ತಲೇ ಇರುತ್ತವೆ. ಒಳ್ಳೆಯ ಪ್ರಾಜೆಕ್ಟ್. ಸಾಕಷ್ಟು ತಯಾರಿ ಬೇಕಿದೆ. ಏನೇನೋ ತಯಾರಿ ನಡೆದಿದೆ. ನಂಗೆ ಜಿಮ್‌ಗಿಮ್ ಗೊತ್ತಿಲ್ಲ. ಅವರೇ ಬಂದು ಎಬ್ಬಿಸಿಕೊಂಡು ಒಂದಷ್ಟು ಬಾಡಿ ಬಿಲ್ಡಿಂಗ್ ಬೇಕು ಅಂತ ರೆಡಿ ಮಾಡುತ್ತಿದ್ದಾರೆ. ಊಟ ತಿಂಡಿಯಲ್ಲಿ ಕಟ್ಟು ನಿಟ್ಟು ಬೇಕು ಅಂತಿದ್ದಾರೆ. ಆ ಬಗ್ಗೆ ನಾನು ಇಷ್ಟೇ ಹೇಳೋದು.

8) ‘ಅಂಬಿ ನಿಂಗೆ ವಯಸ್ಸಾಯ್ತು’ ಸಿನಿಮಾ ನಿಮ್ದೇ ಪ್ರಾಜೆಕ್ಟ್ ಎನ್ನಲಾಗುತ್ತಿದೆ... ?

ಸು: ಕಿಚ್ಚ ಕ್ರಿಯೇಷನ್ಸ್‌ನಲ್ಲಿ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ವೆರಿ ಇಂಟರೆಸ್ಟಿಂಗ್ ಸಿನಿಮಾ. ಈ ಟೈಟಲ್ ಕೊಟ್ಟಿದ್ದೇ ನಾನು. ಅಂಬಿ ಮಾಮರ ಜತೆಗೆ ಮಾತುಕತೆ ನಡೆದಿದೆ. ನೀನ್ ಮಾಡ್ತೀಯಾ ಮಾಡು ಅಂತ ಅವರೇ ಪ್ರೋತ್ಸಾಹ ಕೊಟ್ಟಿದ್ದಾರೆ. ಇದರ ಟೀಸರ್ ತುಂಬಾ ಡಿಫರೆಂಟ್ ಆಗಿರಲಿದೆ. ಸಾಕಷ್ಟು ವಿಭಿನ್ನವಾಗಿ ತರೋಣ ಅಂತ ಯೋಚನೆ ನಡೆದಿದೆ. ಅದು ಹೇಗಿರುತ್ತೆ ಅನ್ನೋದು ನಿಮ್ಮ ಮುಂದೆ ಬಂದಾಗಲೇ ಗೊತ್ತಾಗುತ್ತೆ.

9) ಮತ್ತೆ ನಿರ್ದೇಶನಕ್ಕಿಳಿಯುವುದು ಯಾವಾಗ?

ಸು: ನಮಗಾಗಿಯೇ ಕತೆ ಮಾಡೋರು ಇದ್ದಾರೆಂದರೆ ನಾವಿನ್ನೂ ಬೇಡಿಕೆಯಲ್ಲಿ ಇದ್ದೇವೆ ಅಂತ ಅರ್ಥ. ಸಾಕಷ್ಟು ಯುವಕರು ಕತೆ ರೆಡಿ ಮಾಡ್ಕೊಂಡು ಬರುತ್ತಿದ್ದಾರೆ. ಅವರ ಉತ್ಸಾಹ, ಆಸಕ್ತಿಗೆ ನಿರಾಸೆ ಮೂಡಿಸಲು ನಾನ್ ರೆಡಿ ಇಲ್ಲ. ಅಲ್ಲಿ ನನಗೆ ಇಷ್ಟವಾಗುವ ಒಳ್ಳೆಯ ಕತೆ ಸಿಕ್ಕರೆ ಸಿನಿಮಾ ಮಾಡುತ್ತೇನೆ. ಸದ್ಯಕ್ಕೆ ನಿರ್ದೇಶನದ ಪ್ರಸ್ತಾಪ ಇಲ್ಲ.?

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

Follow Us:
Download App:
  • android
  • ios