entertainment
By Suvarna Web Desk | 04:37 PM March 18, 2017
ಶುದ್ಧಿ ವಿಮರ್ಶೆ: ಸೇಡಿನ ಬೆಂಕಿಯಿಂದ ಸುಟ್ಟು ಶುದ್ಧ ಮಾಡಿದವರು

Highlights

ಮೊದಲ ಚಿತ್ರದಲ್ಲೇ ನಿರೂಪಣೆ, ತಾಂತ್ರಿಕತೆ ಮತ್ತು ಕತೆ ಹೇಳುವ ತುಡಿತವನ್ನು ಕಟ್ಟಿಕೊಟ್ಟಿರುವ ಆದರ್ಶ್, ಕನ್ನಡಕ್ಕೊಂದು ಮ್ಯಾಜಿಕ್‌ ಸ್ಪರ್ಶವನ್ನು ದಯಪಾಲಿಸಿದ್ದಾರೆ.

ಚಿತ್ರ: ಶುದ್ಧಿ
ನಿರ್ದೇಶನ: ಆದರ್ಶ ಎಚ್‌. ಈಶ್ವರಪ್ಪ
ನಿರ್ಮಾಣ: ನಂದಿನಿ ಮಾದೇಶ್‌ ಮತ್ತು ಮಾದೇಶ್‌ ಟಿ. ಭಾಸ್ಕರ್‌,
ತಾರಾಗಣ: ಲಾರೆನ್‌ ಸ್ಪಾರ್ಟಾನೋ, ನಿವೇದಿತಾ, ಅಮೃತಾ ಕರಗಡ, ಸಂಚಾರಿ ವಿಜಯ್‌, ಪ್ರಶಾಂತ್‌ ಪುರುಷೋತ್ತಮ್‌, ಸಿದ್ಧಾರ್ಥ್ ಮಾಧ್ಯಮಿಕ ಮತ್ತಿತರರು
ಛಾಯಾಗ್ರಹಣ: ಆ್ಯಂಡ್ರಿಯೋ
ಸಂಗೀತ: ಜೆಸ್ಸಿ ಕ್ಲಿಂಟನ್‌

ರೇಟಿಂಗ್‌ ****

ಮೈಸೂರಿನಲ್ಲಿ ಗಾಡಿಯಲ್ಲಿ ಹೋಗುತ್ತಾ ಅವಳು ಹೇಳುತ್ತಾಳೆ, ‘ಪುರಾಣದಲ್ಲಿ ಬರುವ ರಾಕ್ಷಸ ದೇವಿಯಿಂದನೇ ನಾಶವಾಗುತ್ತಾನಲ್ಲ, ಅದಕ್ಕೇ ನನಗೆ ಈ ನಗರದ ಇತಿಹಾಸ ಇಷ್ಟ'. ಹಾಗೆ ಹೇಳಿ ಅವಳು ಕಾರಿನ ಗಾಜು ಮುಚ್ಚಿಕೊಂಡರೆ ಅದರ ಮೇಲೆ ಮಹಿಷಾಸುರನ ಪ್ರತಿಫಲನ ಮೂಡುತ್ತದೆ. ಎಷ್ಟೇ ರಕ್ಕಸರನ್ನು ಸಂಹರಿಸಿದರೂ ರಕ್ತಬೀಜಾಸುರರಂತೆ ಅವರು ಮತ್ತೆ ಮತ್ತೆ ಮೂಡುತ್ತಾರಾ?

ಅದನ್ನು ಇಲ್ಲಿ ನಿರ್ದೇಶಕ ಹೇಳಲು ಪ್ರಯತ್ನಿಸುತ್ತಾನಾ?
- ಗೊತ್ತಿಲ್ಲ, ಒಟ್ಟಿನಲ್ಲಿ ಈ ‘ಶುದ್ಧಿ' ಶುದ್ಧೀಕರಿಸುವ ಕತೆ. ಶೋಷಣೆಯನ್ನು ತೊಳೆಯಬೇಕು ಅಂತ ಹೊರಡುವವರ ಕತೆ. ಎಂದೋ ದೌರ್ಜನ್ಯಕ್ಕೊಳಗಾದ ವಿದೇಶಿ ನೆಲದ ಕಾರ್ಲಿನ್‌ ಎನ್ನುವಾಕೆ, ಒಂದು ದಿನ ತಾನೇ ವಾಪಾಸ್‌ ಬರುತ್ತಾಳೆ, ದುರ್ಜನರ ವಿರುದ್ಧ ಸಮರ ಸಾರಲು ಹೊರಡುತ್ತಾಳೆ. ಅವಳ ಸೇಡಿಗೆ ಇಲ್ಲಿನ ವರ್ತಮಾನದ ಹೆಣ್ಮಕ್ಕಳ ನೋವು, ರಾಕ್ಷಸರ ಅಟ್ಟಹಾಸ, ರಾಜಕೀಯದ ಒಳಸುಳಿ, ವ್ಯವಸ್ಥೆಯ ಕ್ರೌರ್ಯಗಳು ಸೇರಿಕೊಳ್ಳುತ್ತವೆ.

ಲಾಸ್‌ ಎಂಜಲೀಸ್‌ನಲ್ಲಿ ಓದಿ, ಹಾಲಿವುಡ್‌ ತಂತ್ರಜ್ಞರ ಜೊತೆ ಕೆಲಸ ಮಾಡಿ, ಹಾಲಿವುಡ್‌ ಮಟ್ಟದ ಸಿನಿಮಾವೊಂದನ್ನು ಮಾಡುವುದಕ್ಕೆ ಪಣತೊಟ್ಟಂತಿರುವ ಕನ್ನಡದ ನಿರ್ದೇಶಕ ಆದರ್ಶ್, ಈ ದೇಶದ ಕತೆ ಮಾಡಿದ್ದಾರೆ. ಪ್ರಸಕ್ತ ಸನ್ನಿವೇಶವನ್ನು ಕರ್ನಾಟಕದ ಹಿನ್ನೆಲೆಯಲ್ಲಿ ಹೇಳಿದ್ದಾರೆ. ಮೈಸೂರೆಂಬ ಐತಿಹಾಸಿಕ ನೆಲ, ಅವರ ಕತೆಗೆ ಪೌರಾಣಿಕ ಹಿನ್ನೆಲೆಯನ್ನೂ ಕೊಟ್ಟಿದೆ. ಶ್ರದ್ಧೆ, ಪ್ರೀತಿ, ಆದರ್ಶಗಳನ್ನು ಎರೆದು ಮಾಡಿರುವ ಈ ಸಿನಿಮಾ, ಹಲವು ಕಾರಣಕ್ಕೆ ನಿಮ್ಮನ್ನು ಸೆಳೆಯುತ್ತದೆ. ಯಾರೂ ಹೇಳದ ಕತೆಯನ್ನು ಹೇಳುತ್ತಿದ್ದೇನೆ ಅಂತನ್ನುವ ಹಮ್ಮು ಬಿಮ್ಮುಗಳಿಲ್ಲದ ಸಿನಿಮಾ ಇದು. ಈಗಾಗಲೇ ದೌರ್ಜನ್ಯದ ಮೇಲೆ ಸಿನಿಮಾಗಳು ಬಂದಿವೆ, ಕತೆಗಳನ್ನು ಕಟ್ಟಿದ್ದಾರೆ, ಸೇಡು ತೀರಿಸಿಕೊಳ್ಳುವ ಪಾತ್ರಗಳನ್ನು ಹೆಣೆದಿದ್ದಾರೆ. ಹಾಗಾಗಿ ಆ ಹಾದಿಯಲ್ಲೇ ಹೊಸ ನಿರ್ದೇಶಕನೂ ಸಾಗಿದ್ದಾನೆ. ಆದರೆ ಈ ಚಿತ್ರದ ಹೆಚ್ಚುಗಾರಿಕೆ ಇರುವುದು ಆ ಕತೆಯನ್ನು ಹೇಳಲು ಬಳಸಿರುವ ಮಾರ್ಗ, ಅದನ್ನು ಕಟ್ಟುವಲ್ಲಿ ತೋರಿಸಿರುವ ತಾಂತ್ರಿಕ ಜಾಣ್ಮೆ ಗಮನಾರ್ಹ.

ಕತ್ತಲ ಗರ್ಭವನ್ನು ಸೀಳಿ ಹೋಗುವ ಕಾರು, ನಿಗೂಢವಾಗಿ ಕಾಣುವ ನಗರಗಳ ಓಣಿಗಳು, ಮಾರ್ಕೇಟ್‌ನ ರಸ್ತೆಗಳಲ್ಲಿ ಸಿಗುವ ಕ್ರೂರ ಕಣ್ಣುಗಳು, ನಾಚಿಕೆ ಬಿಟ್ಟಂತೆ ಎದುರಾಗುವ ಹಸಿದ ಹರೆಯದ ಹುಡುಗರು, ಸ್ತ್ರೀಶೋಷಣೆಯ ವಿರುದ್ಧ ಹೋರಾಡಬೇಕೆಂದು ಓಡಾಡುವ ಇಬ್ಬರು ಹುಡುಗಿಯರು, ಡ್ರಗ್ಸ್‌ ಹುಚ್ಚಿಗೆ ಬಿದ್ದ ಹುಡುಗರು, ನೈತಿಕತೆಯ ಪಾಠ ಹೇಳಲು ಶಸ್ತ್ರಾಸ್ತ್ರ ಹಿಡಿದು ಹೊರಡುವ ದುರುಳರು, ಎಲ್ಲೋ ಅರಳುವ ಶುದ್ಧ ಪ್ರೀತಿ, ಮತ್ತೆಲ್ಲೋ ಹೊಂಚು ಹಾಕುವ ಮಂದಿ- ಇವೆಲ್ಲವನ್ನೂ ಕಟ್ಟಿಕೊಡುವ ನಿರ್ದೇಶಕ ಆದಶ್‌ರ್‍ ಅವರು, ನೇರವಾಗಿ ಅಲ್ಲದ ನಾನ್‌ ಲೀನಿಯರ್‌ ನಿರೂಪಣೆಯನ್ನು ಪರಿಣಾಮಕಾರಿಯಾಗಿ ತಂದಿದ್ದಾರೆ. ಹಾಗಾಗಿ ಎಲ್ಲಾ ಸಿನಿಮಾಗಳ ಥರ ಟೇಕಾಪ್‌, ಶಾಟ್‌ ಕಂಪೋಸಿಶನ್‌, ರೀರೆಕಾರ್ಡಿಂಗ್‌ ಇಲ್ಲಿ ಕಾಣುವುದಿಲ್ಲ. ಹಾಲಿವುಡ್‌ ಚಿತ್ರಗಳ ವಿಶಿಷ್ಟಚಿತ್ರಣ ಕನ್ನಡಕ್ಕೆ ದಕ್ಕಿರುವುದನ್ನು ನೀವು ಇಲ್ಲಿ ಗಮನಿಸಬಹುದು. ಛಾಯಾಗ್ರಾಹಕ ಆ್ಯಂಡ್ರಿಯೋ, ಸಂಗೀತ ನಿರ್ದೇಶಕ ಜೆಸ್ಸಿ ಕ್ಲಿಂಟನ್‌, ಸಂಕಲನಕಾರ ರಾಮ್‌ಸೆಟ್ಟಿಪವನ್‌- ಚಿತ್ರವನ್ನು ಹೊಸ ಅನುಭವವಾಗಿಸುತ್ತಾ ಹೋಗುತ್ತಾರೆ.

ಕಾರ್ಲಿನ್‌ ಆಗಿ ಲಾರೆನ್‌ ಸ್ಪಾರ್ಟಾನೋ ಅದ್ಭುತವಾಗಿ ಪಾತ್ರವಾಗಿದ್ದಾರೆ. ಇಡೀ ಕತೆಯನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಪ್ರೇರೇಪಿಸುತ್ತಾರೆ ಲಾರೆನ್‌. ಇನ್ನೆರೆಡು ಪಾತ್ರಗಳಲ್ಲಿ ನಿವೇದಿತಾ ಮತ್ತು ಅಮೃತಾ ಕರಗಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ ಅಲ್ಲಲ್ಲಿ ಬರುವ ಕಾಪ್‌ ಪಾತ್ರವಾಗಿ ಆವರಿಸಿಕೊಳ್ಳುವವರು ಶಶಾಂಕ್‌ ಪುರುಷೋತ್ತಮ್‌ ಮತ್ತು ಸಿದ್ಧಾರ್ಥ್ ಮಾಧ್ಯಮಿಕ. ಚಿತ್ರದಲ್ಲಿ ಬರುವ ಪ್ರತಿ ಪುಟ್ಟಪುಟ್ಟ ಪಾತ್ರಗಳೂ ಒಂದು ಕತೆಯನ್ನು ಜೀವಂತವಾಗಿಸಿವೆ. ಸಂಚಾರಿ ವಿಜಯ್‌, ಅಜಯ್‌ ರಾಜ್‌, ನಾಗಾರ್ಜುನ್‌ ರಾಜಶೇಖರ್‌, ವಾಸುಕಿ ವೈಭವ್‌- ಹೀಗೆ ಪ್ರತಿಯೊಬ್ಬರನ್ನೂ ನೀವು ಮರೆಯಲಿಕ್ಕಾಗುವುದಿಲ್ಲ.

ಮೊದಲ ಚಿತ್ರದಲ್ಲೇ ನಿರೂಪಣೆ, ತಾಂತ್ರಿಕತೆ ಮತ್ತು ಕತೆ ಹೇಳುವ ತುಡಿತವನ್ನು ಕಟ್ಟಿಕೊಟ್ಟಿರುವ ಆದರ್ಶ್, ಕನ್ನಡಕ್ಕೊಂದು ಮ್ಯಾಜಿಕ್‌ ಸ್ಪರ್ಶವನ್ನು ದಯಪಾಲಿಸಿದ್ದಾರೆ.

ವಿಮರ್ಶೆ: ವಿಕಾಸ್ ನೇಗಿಲೋಣಿ, ಕನ್ನಡಪ್ರಭ
epaper.kannadaprabha.in

Show Full Article


Recommended


bottom right ad