Asianet Suvarna News Asianet Suvarna News

ತಮಿಳುನಾಡಿನಿಂದ ಹೊರದಬ್ಬಿದರೆ ಹೋಗೋದು ಹಿಮಾಲಯಕ್ಕೆಯೇ: ರಜನೀಕಾಂತ್

"ನನ್ನ ಪ್ರೀತಿಯ ತಮಿಳು ಜನರು ಬಾಳಿ ಬದುಕುತ್ತಿರುವ ಈ ಪುಣ್ಯ ಭೂಮಿಯಲ್ಲೇ ನಾನು ಬದುಕಬೇಕು; ಇಲ್ಲವೇ ಹಿಮಾಲಯಕ್ಕೆ ಹೋಗಬೇಕು. ಇವೆರಡೇ ನನ್ನ ಮುಂದಿರುವ ದಾರಿ. ನನ್ನನ್ನು ಯಾರಾದರೂ ತಮಿಳುನಾಡಿನಿಂದ ಹೊರದಬ್ಬಿದರೆ ನಾನು ಹೋಗಿ ಬೀಳೋದು ಹಿಮಾಲಯಕ್ಕೇ ಹೊರತು ಬೇರೆಲ್ಲೂ ಅಲ್ಲ" ಎಂದು ರಜನೀಕಾಂತ್ ನುಡಿದಿದ್ದಾರೆ.

rajanikanth speaks his mind on states languages and politics

ಚೆನ್ನೈ(ಮೇ 19): ರಜನೀಕಾಂತ್ ತಮಿಳಗನಾ? ಕನ್ನಡಿಗನಾ? ಆಯ್ಕೆಯ ಪ್ರಶ್ನೆ ಬಂದರೆ ರಜನೀಕಾಂತ್ ವಾಲೋದು ಯಾವ ಕಡೆ? ಈ ಪ್ರಶ್ನೆಗೆ ರಜನೀಕಾಂತ್ ಇಂದು ಉತ್ತರ ನೀಡಿದ್ದಾರೆ. 44 ವರ್ಷದಿಂದ ತಮಿಳುನಾಡಿನಲ್ಲಿರುವ ತಾನು ತಮಿಳಗನಾಗಿಯೇ ಆಗಿದ್ದೇನೆ. ತಮಿಳುನಾಡಿನಲ್ಲೇ ಜನರ ಸೇವೆ ಸಲ್ಲಿಸುವುದು ನನ್ನ ಬಯಕೆ ಎಂದು ಸೂಪರ್'ಸ್ಟಾರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ರಾಜಕಾರಣಕ್ಕೆ ತಾನು ಎಂಟ್ರಿ ಕೊಡಬಹುದು ಎಂಬ ಸುಳಿವನ್ನು ರಜನೀಕಾಂತ್ ನೀಡಿದ್ದಾರೆ. ಹಲವು ವರ್ಷಗಳ ಬಳಿಕ ಅಭಿಮಾನಿಗಳೊಂದಿಗೆ ಭೇಟಿ ಕಾರ್ಯಕ್ರಮದಲ್ಲಿ ಭಾಗಿಯಾದ ರಜನೀಕಾಂತ್ ತಮ್ಮ ಕೊನೆಯುಸಿರುವವರೆಗೂ ತಮಿಳಿನಾಡಿನಲ್ಲೇ ಇರುವುದಾಗಿ ಬಯಕೆ ವ್ಯಕ್ತಪಡಿಸಿದ್ದಾರೆ.

ಅಚ್ಚ ತಮಿಳ:
ನನ್ನ ತಂದೆ ಮತ್ತು ಅಜ್ಜಿ ತಮಿಳುನಾಡಿನ ಕೃಷ್ಣಗಿರಿಯವರು. ನಾನು 23 ವರ್ಷ ಕರ್ನಾಟಕದಲ್ಲಿದ್ದೆ, 44 ವರ್ಷದಿಂದ ತಮಿಳುನಾಡಿನಲ್ಲಿದ್ದೇನೆ. ಮರಾಠಿಗ ಮತ್ತು ಕನ್ನಡಿಗನಾಗಿ ತಮಿಳುನಾಡಿಗೆ ಬಂದ ನನ್ನನ್ನು ಆದರಿಸಿ, ಪ್ರೀತಿಸಿ ನನಗೆ ಹೆಸರು, ಖ್ಯಾತಿ, ಜನಪ್ರಿಯತೆ ಕೊಟ್ಟಿದ್ದೀರಿ. ಅಪಾರ ಹಣವನ್ನು ನೀವು ಮೊಗೆಮೊಗೆದು ಕೊಟ್ಟಿದ್ದೀರಿ. ನೀವೇ ನನ್ನನ್ನು ತಮಿಳನಾಗಿ ಮಾಡಿಬಿಟ್ಟಿದ್ದೀರಿ. ಈಗ ನಾನು ಅಚ್ಚ ತಮಿಳ ಎಂದು ಸೂಪರ್ ಸ್ಟಾರ್ ಎದೆಯುಬ್ಬಿಸಿ ಹೇಳಿದ್ದಾರೆ.

ತಮಿಳುನಾಡು ಇಲ್ಲವಾದರೆ ಹಿಮಾಲಯ:
"ನನ್ನ ಪ್ರೀತಿಯ ತಮಿಳು ಜನರು ಬಾಳಿ ಬದುಕುತ್ತಿರುವ ಈ ಪುಣ್ಯ ಭೂಮಿಯಲ್ಲೇ ನಾನು ಬದುಕಬೇಕು; ಇಲ್ಲವೇ ಹಿಮಾಲಯಕ್ಕೆ ಹೋಗಬೇಕು. ಇವೆರಡೇ ನನ್ನ ಮುಂದಿರುವ ದಾರಿ. ನನ್ನನ್ನು ಯಾರಾದರೂ ತಮಿಳುನಾಡಿನಿಂದ ಹೊರದಬ್ಬಿದರೆ ನಾನು ಹೋಗಿ ಬೀಳೋದು ಹಿಮಾಲಯಕ್ಕೇ ಹೊರತು ಬೇರೆಲ್ಲೂ ಅಲ್ಲ" ಎಂದು ರಜನೀಕಾಂತ್ ನುಡಿದಿದ್ದಾರೆ.

ರಾಜಕಾರಣದ ಸುಳಿವು:
ತಮಿಳುನಾಡಿನಲ್ಲಿ ರಾಜಕಾರಣ ವ್ಯವಸ್ಥೆ ಕೆಟ್ಟುಹೋಗಿದ್ದು, ಅದನ್ನು ಬದಲಿಸಬೇಕಾದ್ದು ನನ್ನ ಜವಾಬ್ದಾರಿ ಎಂದು ಹೇಳುವ ಮೂಲಕ ರಜನೀಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ. "ತಮಿಳುನಾಡಿನಲ್ಲಿ ಒಳ್ಳೆಯ ರಾಜಕೀಯ ಪಕ್ಷಗಳಿವೆ. ಅನುಭವಿ ರಾಜಕಾರಣಿಗಳಿದ್ದಾರೆ. ಆದರೆ, ವ್ಯವಸ್ಥೆ ಕೆಟ್ಟುಹೋಗಿದೆ. ಕೆಟ್ಟುಹೋಗಿರುವ ಈ ವ್ಯವಸ್ಥೆ ಸರಿಪಡಿಸುವುದು ಬೇಡವೇ? ಜನರ ಮನೋಭಾವವನ್ನು ಬದಲಾಯಿಸಬೇಡವೇ? ಜನರ ಚಿಂತನೆಗಳಿಗೆ ತಕ್ಕಂತಹ ವ್ಯವಸ್ಥೆ ರೂಪಿಸಿದರೆ ಈ ರಾಜ್ಯವೇ ಚೆನ್ನಾಗಿರುತ್ತದೆ ಎಂದು ಆಸೆ ಪಡುವುದರಲ್ಲಿ ತಪ್ಪೇನಿದೆಯೋ ಗೊತ್ತಿಲ್ಲ," ಎಂದು ತಮ್ಮ ಮನೋಭಿಲಾಷೆಯನ್ನು ರಜನೀ ವ್ಯಕ್ತಪಡಿಸಿದ್ದಾರೆ.

ಭವಿಷ್ಯಕ್ಕೆ ಸಿದ್ಧರಾಗಿ:
"ನನಗೂ ನನ್ನದೇ ಆದ ಜವಾಬ್ದಾರಿ, ಕೆಲಸ ಇದೆ. ನಿಮಗೂ ನಿಮ್ಮದೇ ಆದ ಬದುಕು, ಜವಾಬ್ದಾರಿಗಳಿವೆ. ಆದರೆ, ಯುದ್ಧ ಬಂದಾಗ ಎಲ್ಲವನ್ನೂ ಬಿಟ್ಟು ಹೋರಾಟಕ್ಕಿಳಿಯಬೇಕು. ನೀವೆಲ್ಲ ಈಗ ಊರಿಗೆ ಹೋಗಿ, ನಿಮ್ಮ ನಿಮ್ಮ ಜವಾಬ್ದಾರಿ ನಿರ್ವಹಿಸಿರಿ. ಯುದ್ಧ ಬಂದಾಗ ಎದುರಿಸಲು ಸಜ್ಜಾಗೋಣ. ನಮ್ಮೊಂದಿಗೆ ದೇವರಿದ್ದಾನೆ," ಎಂದು ತಮ್ಮ ಅಭಿಮಾನಿಗಳಿಗೆ ರಜನೀಕಾಂತ್ ಈ ವೇಳೆ ಕರೆಕೊಟ್ಟಿದ್ದಾರೆ.

ಈ ಮೂಲಕ, ಮುಂದಿನ ದಿನಗಳಲ್ಲಿ ತಾನು ಕೈಗೊಳ್ಳಬಹುದಾದ ಯಾವುದಾದರೂ ನಿರ್ಧಾರಕ್ಕೆ ಅಭಿಮಾನಿಗಳು ಬೆಂಬಲ ಕೊಡಬೇಕೆಂದು ರಜನೀಕಾಂತ್ ಮಾಡಿಕೊಂಡ ಪರೋಕ್ಷ ಮನವಿ ಇದಾಗಿದೆ.

ಜಯಲಲಿತಾ ಸಾವಿನ ನಂತರ ತಮಿಳುನಾಡು ರಾಜಕೀಯ ಸ್ಥಿತಿ ಸಂದಿಗ್ಧತೆಯಲ್ಲಿದೆ. ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಳು ಆಂತರಿಕ ಬಿಕ್ಕಟ್ಟಿನಿಂದ ಜರ್ಝರಿತಗೊಂಡು ದುರ್ಬಲವಾಗಿವೆ. ಇದು ರಜನೀಕಾಂತ್ ರಾಜಕೀಯ ಎಂಟ್ರಿಗೆ ಪ್ರಶಸ್ತವಾದ ಕಾಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಬಿಜೆಪಿ ಕೂಡ ರಜನೀಕಾಂತ್ ಅವರನ್ನ ತನ್ನ ಪಕ್ಷಕ್ಕೆ ಬಹಿರಂಗವಾಗಿಯೇ ಆಹ್ವಾನಿಸಿದೆ. ಆದರೆ, ಬೇರೆ ಪಕ್ಷವನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ರಜನೀಕಾಂತ್ ಈಗಾಗಲೇ ಸ್ಪಷ್ಟಪಡಿಸುವ ಮೂಲಕ ಬಿಜೆಪಿ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ. ರಜನೀಕಾಂತ್ ರಾಜಕಾರಣಕ್ಕೆ ಬರುವುದೇ ಆದರೆ, ಹೊಸ ಪಕ್ಷವನ್ನು ಸ್ಥಾಪಿಸಬಹುದು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

Follow Us:
Download App:
  • android
  • ios