Asianet Suvarna News Asianet Suvarna News

ಕನ್ನಡದ ಪರ್ಘೆಕ್ಟ್ ಸ್ಕ್ರಿಪ್ಟ್ ಕಾವಲುಗಾರ 'ನಂಜುಂಡ'!

ಕನ್ನಡದಲ್ಲಿ ಕತೆಗಾರರಿಲ್ಲ, ಚಿತ್ರಕತೆ ಬರೆಯುವವರಿಲ್ಲ, ಸಂಭಾಷಣೆ ಬರೆಯುವವರು ಸಿಗುತ್ತಿಲ್ಲ ಎಂದೆಲ್ಲ ದೂರುವ ಕನ್ನಡ ಚಿತ್ರರಂಗ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಅನ್ನುವುದಕ್ಕೆ ಸಾಕ್ಷಿಯಂತಿದ್ದವರು ನಂಜುಂಡ. ನೇರ ನುಡಿ, ನಿಷ್ಠುರ ನಿಲುವು, ಅಪಾರ ಪ್ರತಿಭೆ ಮತ್ತು ಅಖಂಡ ಅಸಹನೆಯ ಮೊತ್ತದಂತಿದ್ದ ನಂಜುಂಡ ಕನ್ನಡ ಚಿತ್ರರಂಗದಲ್ಲಿರುವ ಪ್ರತಿಭಾವಂತರ ದುರಂತ ಪ್ರತಿನಿಧಿ. ಅವರನ್ನು ಸದ್ಬಳಕೆ ಮಾಡಿಕೊಂಡಿದ್ದರೆ...

Kaviraj remembers Kannada film director Nanjunda
Author
Bangalore, First Published Apr 26, 2019, 10:03 AM IST

ಕವಿರಾಜ್‌

ಎಲ್ಲ ಭಾಷೆಯ ಚಿತ್ರರಂಗಗಳಂತೆ ಕನ್ನಡ ಚಿತ್ರರಂಗದಲ್ಲೂ ಹಲವು ನಿರ್ದೇಶಕರ ಶಿಷ್ಯ ಪರಂಪರೆಗಳಿವೆ. ಆ ಪೈಕಿ ಕೆ ವಿ ರಾಜು ಅವರ ಶಿಷ್ಯ ಪರಪಂಪರೆ ಪ್ರಮುಖವಾದದ್ದು. ತಮ್ಮ ನೇರ, ನಿಷ್ಠುರ, ಖಡಕ್‌ ಮಾತುಗಳಿಂದಲೇ ಕನ್ನಡ ಸಿನಿಮಾ ಪರದೆಯ ಆಚೆಗೂ ಗುರುತಿಸಿಕೊಂಡವರು ಹಿರಿಯ ನಿರ್ದೇಶಕ ಕೆ ವಿ ರಾಜು. ಇತರೆ ಶಿಷ್ಯ ಪರಂಪರೆಗಳಲ್ಲಿ ತಮ್ಮ ಗುರುಗಳು ಕೆಲಸ ಮಾಡುವ ಕೆಲಸದ ಶೈಲಿಯನ್ನು ಮಾತ್ರ ಶಿಷ್ಯರು ಅನುಕರಿಸಿದರೆ, ಕೆ ವಿ ರಾಜು ಅವರ ಬಹುತೇಕ ಶಿಷ್ಯರು ತಮ್ಮ ಗುರುಗಳ ಕೆಲಸದ ಶೈಲಿ ಜತೆಗೆ ಅವರ ವ್ಯಕ್ತಿತ್ವ, ಹಾವಭಾವ, ದಿಟ್ಟತನ, ನಿಷ್ಠುರತೆ, ತೀಕ್ಷಣ ನೋಟ, ಮುಂಗೋಪ, ಪದೇ ಪದೇ ಆಡುವ ಪಂಚಿಂಗ್‌ ಮಾತು... ಹೀಗೆ ಅವರ ಗುಣ ವಿಶೇಷಗಳನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿರುತ್ತಾರೆ. ಅಂಥವರಲ್ಲಿ ನಾನು ಮೊತ್ತ ಮೊದಲ ಬಾರಿ ಭೇಟಿಯಾಗಿದ್ದು ಖ್ಯಾತ ಬರಹಗಾರ, ನಿರ್ದೇಶಕ ಕೆ ನಂಜುಂಡ ಅವರನ್ನು. ‘ಚಪ್ಪಾಳೆ’ ಸಿನಿಮಾದ ಹಾಡುಗಳನ್ನು ಬರೆಯಲು ನಾನು ನಿರ್ದೇಶಕ ನಾಗಣ್ಣ ಅವರ ಗ್ಯಾಂಗಿಗೆ ಎಂಟ್ರಿ ಕೊಟ್ಟಾಗ ಅಲ್ಲಾಗಲೇ ಆಸ್ಥಾನಸಚಿವರ ಸ್ಥಾನದಲ್ಲಿದ್ದವರು ಇದೇ ನಂಜುಂಡ. ಹೊರ ನೋಟಕ್ಕೆ ಒಂಚೂರು ಉಬ್ಬಿದ ಕಣ್ಣು, ಗಂಭೀರ ಮುಖಭಾವದಲ್ಲೂ ತುಂಟಿಯಂಚಿನಲ್ಲಿ ಸಣ್ಣಗೆ ಲಾಸ್ಯವಾಡುವ ನಗು, ಬಹಳ ಕಠಿಣ ವ್ಯಕ್ತಿತ್ವವೇನೊ ಅನ್ನಿಸಿದರೂ ಅವರ ಜತೆ ಒಂಚೂರೇ ಚೂರು ಪಳಗಿದರೆ ಗೊತ್ತಾಗುವುದು ಮುಂಗೋಪಿಯಾದರೂ ಈ ವ್ಯಕ್ತಿ ಸಜ್ಜನ, ಹೃದಯವಂತ ಎಂದು.

‘ಚಪ್ಪಾಳೆ’ಯಿಂದ ಮೊದಲಗೊಂಡು ನಂತರ ಕುಟುಂಬ, ಗೋಕರ್ಣ, ಗೌರಮ್ಮ ಹೀಗೆ ಸಾಲಾಗಿ ಮೂರು ಉಪೇಂದ್ರ ಅವರ ನಟನೆಯ ಸಿನಿಮಾಗಳನ್ನು ನಾಗಣ್ಣ ಅವರು ನಿರ್ದೇಶಿಸುವ ವೇಳೆಗೆ ನಾನು ಮತ್ತು ನಂಜುಂಡ ಆ ತಂಡದ ಖಾಯಂ ಸದಸ್ಯರಾಗಿಬಿಟ್ವಿ. ಆ ಹೊತ್ತಿಗೆ ನಮಗೊಂದು ಆತ್ಮೀಯತೆ, ಸ್ನೇಹ ಬೆಳೆದು ಬಿಟ್ಟಿತ್ತು. ನಾನಿನ್ನು ಹೊಸಬನಾದರೂ ಯಾವುದೇ ಹಮ್ಮಿಲ್ಲದೆ ಬೆರೆತು, ನನ್ನಲ್ಲಿ ವಿಶ್ವಾಸ ತುಂಬುತ್ತ, ಸಲಹೆ, ಸೂಚನೆ ನೀಡುತ್ತ, ಬೆನ್ನು ತಟ್ಟಿದವರು ನಂಜುಂಡ. ಅಷ್ಟೇ ತಮಾಷೆಯಾಗಿ ಆಗಾಗ ಕಾಲೆಳೆಯುತ್ತ ಗಹಗಹಿಸಿ ನಕ್ಕು ನಮ್ಮನ್ನು ನಗಿಸುತ್ತಿದ್ದ ಸ್ನೇಹಜೀವಿ ಅವರು. ಆ ದಿನಗಳಲ್ಲಿ ಸ್ನೇಹಿತನಾಗಿ ಅವರ ಜೊತೆ ನಾನು ಹೋಟೆಲ್‌, ಥಿಯೇಟರ್‌ಗಳಿಗೆ ಭೇಟಿ ಕೊಟ್ಟಿದ್ದಕ್ಕಿಂತ ಪುಸ್ತಕದಂಗಡಿ, ಗಾಂಧಿನಗರದ ಸೀಡಿ ಶಾಪ್‌ಗಳಿಗೆ ಹೋಗುತ್ತಿದ್ದದ್ದೇ ಹೆಚ್ಚು. ಈಗಿನಂತೆ ಯೂಟ್ಯೂಬ್‌, ನೆಟ್‌ ಸಂಪರ್ಕ ಇರುವ, ಟೀವಿಯಲ್ಲೇ ಎಲ್ಲ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲದ ಆ ಕಾಲದಲ್ಲಿ ನಂಜುಂಡ ಹಾಲಿವುಡ್‌ ಸೇರಿದಂತೆ ಪರಭಾಷೆಯ, ಒಳ್ಳೆಯ ವಿಮರ್ಶೆ ಬಂದ ಯಾವ ಚಿತ್ರವನ್ನೂ ನೋಡದೆ ಹಾಗೂ ಅಭ್ಯಸಿಸದೆ ಬಿಡುತ್ತಿರಲಿಲ್ಲ. ಅದರ ಸೀಡಿ ಹುಡುಕಲು, ತರಿಸಿಕೊಳ್ಳಲು ಅವರು ನಡೆಸುತ್ತಿದ್ದ ಗಂಭೀರ ಪ್ರಯತ್ನಗಳು ನನಗೆ ಅಚ್ಚರಿ ಹುಟ್ಟಿಸುತ್ತಿತ್ತು. ಹಾಗಾಗಿಯೇ ನಂಜುಂಡ ಅವರಿಗೆ ಅಗಾಧವಾದ ಸಿನಿಮಾ ಜ್ಞಾನ ಸಿದ್ಧಿಸಿತ್ತು. ನಮಗೆಲ್ಲ ಅವರೊಂದು ನಡೆದಾಡುವ ಸಿನಿಮಾ ಎನ್‌ಸೈಕ್ಲೋಪೀಡಿಯಾ ಆಗಿದ್ದರು. ಈಗೆಲ್ಲ ಯಾವುದೇ ಮಾಹಿತಿಗಾಗಿ ಥಟ್ಟಂತ ಗೂಗಲ್ಲನ್ನು ಕೇಳುವಂತೆ ಆಗ ನಾವು ಸಿನಿಮಾ ಮಾಹಿತಿಗಾಗಿ, ಕತೆÜಗಳ ಮಾಹಿತಿಗಾಗಿ ಮೊರೆ ಹೋಗುತ್ತಿತ್ತು ನಂಜುಂಡ ಅವರಲ್ಲಿಗೆ. ಆ ಮಟ್ಟಿಗೆ ಅವರು ನಮಗೆ ಸಿನಿಮಾ ಜಗತ್ತಿನ ಗೂಗಲ್ಲು!

ಹೀಗೆ ಒಮ್ಮೆ ಅವರಲ್ಲಿದ್ದ ದೊಡ್ಡ ಲೈಬ್ರರಿಯಂತಹ ಸಿನಿಮಾ ಸೀಡಿ, ಪುಸ್ತಕಗಳ ಸಂಗ್ರಹ ಕಂಡು ನಾನು ದಂಗಾಗಿದ್ದೆ. ತಮ್ಮ ದುಡಿಮೆಯ ಹೆಚ್ಚಿನ ಭಾಗವನ್ನು ಅವರು ಇದಕ್ಕೆ ವ್ಯಯಿಸುತ್ತಿದ್ದರು ಎಂಬುದು ನನಗೆ ಆಗ ಗೊತ್ತಾದ ಸತ್ಯ. ನಂಜುಂಡ ಅವರ ಸಿನಿಮಾ ಜ್ಞಾನದ ಅಗಾಧತೆ ನಮಗೆ ಪರಿಚಯ ಆಗುತ್ತಿದ್ದಿದ್ದು ಸ್ಟೋರಿ ಡಿಸ್ಕಷನ್‌ ಹಾಗೂ ನರೇಷನ್‌ಗಳಲ್ಲಿ. ಅವರೆದುರು ವಾದಕ್ಕಿಳಿದವರನ್ನು ತಮ್ಮ ಪ್ರಖರ ವಿಚಾರ ಮಂಡನೆಯಿಂದ ಲಾಜಿಕ್‌, ಲಿಂಕ್‌ ಮುಂತಾದ ಪಟುಗಳನ್ನು ಹಾಕಿ ಮಣಿಸುವ ಛಾತಿ ಅವರಿಗೆ ಸಿದ್ಧಿಸಿತ್ತು. ನಂಜುಂಡ ಸ್ಟೋರಿ ಡಿಸ್ಕಷನ್‌ ಬಳಗದಲ್ಲಿ ಇದ್ದಾರೆ ಎಂದರೆ ಅದಕ್ಕೊಂದು ಕಳೆ ಬರುತ್ತಿತ್ತು. ಸಡಿಲ, ಅಸಮಂಜಸ ಸಂಗತಿಗಳು ಅವರ ಕಣ್‌ ತಪ್ಪಿಸಿ ಸ್ಕಿ್ರಪ್ಟ್‌ನೊಳಗೆ ಸೇರಿಕೊಳ್ಳಲು ಅವರು ಬಿಡುತ್ತಿರಲಿಲ್ಲ. ಅದಕ್ಕಾಗಿ ಎಂತಹ ವಾಗ್ಯುದ್ದಕ್ಕು ಅವರು ಸಿದ್ಧರಿರುತ್ತಿದ್ದರು. ಒಮ್ಮೊಮ್ಮೆ ವಾದಗಳು ತಾರಕಕ್ಕೇರಿದಾಗ ನಂಜುಂಡ ಅವರ ಉಗ್ರ ಸ್ವರೂಪವನ್ನು ನೋಡಿ ಎಷ್ಟೋ ಸಲ ನಾನು ಬೆವರೊರೆಸಿಕೊಂಡಿದ್ದುಂಟು. ಆ ಮಟ್ಟಿಗೆ ಅವರು ಪರ್‌ಫೆಕ್ಟ್ ಸ್ಕಿ್ರಫ್ಟ್‌ ಕಾವಲುಗಾರ ಅಂತಲೇ ಹೇಳಬೇಕು. ಕನ್ನಡದ ಇಂತಹ ಸಂಪನ್ಮೂಲ ವ್ಯಕ್ತಿಯೆಂದು ತಮಿಳು, ತೆಲುಗು ಚಿತ್ರರಂಗದವರಿಗೂ ಗೊತ್ತಿತ್ತು. ಅಲ್ಲಿನ ಹಲವು ಖ್ಯಾತನಾಮ ನಿರ್ದೇಶಕರು ನಂಜುಂಡ ಅವರನ್ನು ತಮ್ಮ ಸ್ಟೋರಿ ಡಿಸ್ಕಷನ್‌, ಸ್ಕಿ್ರಪ್ಟ್‌ ಮುಂತಾದ ಕೆಲಸಗಳಿಗೆ ರಾಜ ಮರ್ಯಾದೆಯಿಂದ ಕರೆಸಿಕೊಳ್ಳುತ್ತಿದ್ದರು. ಅಲ್ಲಿನ ಸ್ವಾರಸ್ಯಕರ ವಿಷಯಗಳನ್ನು ಆಗಾಗ ನನ್ನೊಂದಿಗೆ ಹಂಚಿಕೊಳ್ಳುವ ಜೊತೆಗೆ ಬರಹಗಾರರಿಗೆ ಅಲ್ಲಿರುವ ಮನ್ನಣೆ ಸಂಭಾವನೆ ಇಲ್ಲಿಲ್ಲ ಎಂದು ವಿಷಾದ ಮತ್ತು ಆಕ್ರೋಶವನ್ನು ಆಗಾಗ ವ್ಯಕ್ತಪಡಿಸುತ್ತಿದ್ದರು.

ಇಷ್ಟೆಲ್ಲಾ ಪ್ರತಿಭೆ, ಪರಿಶ್ರಮವಿದ್ದರೂ ಅವರೇಕೆ ಯಶಸ್ವಿ ನಿರ್ದೇಶಕರಾಗಲು ಸಾಧ್ಯವಾಗಲಿಲ್ಲ ಎಂಬ ಯಕ್ಷಪ್ರಶ್ನೆ ಅವರಷ್ಟೇ ಅಥವಾ ಅವರಿಗಿಂತ ಹೆಚ್ಚು ಅವರ ಆಪ್ತ ಬಳಗವನ್ನು ಕಾಡುತ್ತಿತ್ತು. ಬಹುಶಃ ಇದಕ್ಕೆ ಮೊದಲ ಕಾರಣವೇ ನಾವೆಲ್ಲ ಇಷ್ಟಪಡುವ ಅವರ ವ್ಯಕ್ತಿತ್ವವೇ ಇರಬಹುದೇನೋ. ನೇರ, ನಿಷ್ಠುರ ನಡವಳಿಕೆ ಇದ್ದಿದ್ದನ್ನು ಇದ್ದಂತೆ ಹೇಳುವ ದಿಟ್ಟತನ, ಮುಖಸುತ್ತಿ ಮಾಡದ, ಹೊಗಳುಭಟ್ಟನಾಗಲೊಲ್ಲದ, ತಗ್ಗಿಬಗ್ಗಿ ನಡೆಯದ ಅವರ ಗಟ್ಟಿಬೆನ್ನು ಮೂಳೆಯೇ ಅವರನ್ನು ಅವಕಾಶವಂಚಿತರಾಗಿಸಿತೇನೋ. ತಮ್ಮ ಕನಸನ್ನೆಲ್ಲ ಧಾರೆಯೆರೆದು 1998ರಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ ಪ್ರಕಾಶ್‌ ರೈ, ವಿನೀತ್‌, ಆಯೇಷಾ ಜುಲ್ಕಾ ಅಂತಹ ಕಲಾವಿದರನ್ನು ಹಾಕಿಕೊಂಡು ಅವರು ಮೊದಲ ಬಾರಿಗೆ ನಿರ್ದೇಶಸಿದ ‘ಕನಸಲೂ ನೀನೆ ಮನಸಲೂ ನೀನೆ’ ಸಿನಿಮಾ ಉತ್ತಮ ವಿಮರ್ಶೆಗಳ ಹೊರತಾಗಿಯೂ ಅಂದುಕೊಂಡಂತೆ ಯಶಸ್ವಿ ಆಗದೇ ಹೋಗಿದ್ದು ಅವರನ್ನು ಸಾಕಷ್ಟುಕಾಡುತ್ತಿತ್ತು. ಆ ನಂತರವು ನಿರ್ದೇಶನ ಮಾಡುವ ಪ್ರಯತ್ನಗಳು ಕೈಗೆ ಬಂದು ಬಾಯಿಗೆ ಬರದ ಪರಿಸ್ಥಿತಿ ಉಂಟಾಗುತ್ತಿತ್ತು. ಇತ್ತೀಚೆಗೆ ನಿರ್ದೇಶಿಸಿದ ಗಾಯಕ ‘ರಾಜೇಶ್‌ ಕೃಷ್ಣನ್‌’ ಅವರನ್ನು ನಾಯಕನಾಗಿಸಿ ನಿರ್ದೇಶಿಸಿದ ‘ಮೆಲೋಡಿ’ ಚಿತ್ರವು ಯಶಸ್ಸು ಕಾಣಲಿಲ್ಲ. ಕೆಲವೇ ದಿನಗಳಲ್ಲಿ ಆ ಚಿತ್ರದ ಸಂಗೀತ ನಿರ್ದೇಶಕ ಅವರದೇ ತದ್ರೂಪು ಅನ್ನುವಂತಹ ವ್ಯಕ್ತಿತ್ವದ ಅತ್ಯಂತ ಆಪ್ತ ಗೆಳೆಯ ಎಲ್‌.ಎನ್‌.ಶಾಸ್ತ್ರಿ ಅವರ ಸಾವು ಮಾನಸಿಕವಾಗಿ ನಂಜುಂಡ ಅವರನ್ನು ಘಾಸಿಗೊಳಿಸಿತ್ತು. ನೆಮ್ಮದಿಯ ಜೀವನ ತಂದುಕೊಡದ ಬರಹಗಾರನ ವೃತ್ತಿ, ನಿರಂತರ ಅನಿಶ್ಚಿತತೆ ಸೋಲುಂಡ ಪ್ರಯತ್ನಗಳು ನಂಜುಂಡರಂತಹ ನಂಜುಂಡರನ್ನೇ ಹೈರಾಣಾಗಿಸಿತ್ತು. ಹೆಸರಿಗೆ ತಕ್ಕಂತೆ ಅವರ ಪ್ರತಿಭೆಗೆ ತದ್ವಿರುದ್ಧವಾಗಿ ಅವರು ಬಯಸಿ ಬಯಸಿ ಆಯ್ದುಕೊಂಡ ಚಿತ್ರರಂಗದಲ್ಲಿ ನಂಜು ಉಂಡಿದ್ದೇ ಹೆಚ್ಚು. ಯಥಾಪ್ರಕಾರ ನಮ್ಮ ವೈಯಕ್ತಿಕ ಜೀವನದ ಜಂಜಾಟದಲ್ಲಿ ಪಕ್ಕದಲ್ಲೇ ಇದ್ದ ಸ್ನೇಹಿತನನ್ನು ಹೇಗಿದ್ದೀರಾ? ಎಂದು ವಿಚಾರಿಸಿಕೊಳ್ಳದ ನಾವು ಅವರು ಅಗಲಿದ ಮೇಲೆ, ಅವರು ಹಾಗಿದ್ದರು, ಹೀಗಿದ್ದರು ಅಂತಾ ಕೊಂಡಾಡುತ್ತಿದ್ದೇವೆ. ಏನು ಮಾಡುವುದು ಈಗುಳಿದಿರುವುದು ವಿಷಾದವೊಂದೇ. ಕ್ಷಮಿಸಿ ನಂಜುಂಡಾ ಆತ್ಮೀಯರ ಕಷ್ಟಗಳಿಗೆ ಹೆಗಲಾಗದ ನಮ್ಮ ಮನುಷ್ಯತ್ವಕ್ಕೆ, ಸ್ವಾರ್ಥ ಜೀವನಕ್ಕೆ ಧಿಕ್ಕಾರವಿರಲಿ.

Follow Us:
Download App:
  • android
  • ios