Asianet Suvarna News Asianet Suvarna News

ರಂಗದ ಮೇಲೆ ಬಂದಿದ್ದಾನೆ ಬಕಾಸುರ

ಅವನ ಆಹಾರ ದಿನಕ್ಕೆ ಒಂದು ಹಂಡೆ ಅನ್ನ, ಒಂದು ಹಂಡೆ ಸಾಂಬರ್‌, ಒಬ್ಬ ವ್ಯಕ್ತಿ, ಜೋಡಿ ಎತ್ತುಗಳು. ಇದು ಊರಿನಿಂದ ದಿನವೂ ನಿಯಮಿತವಾಗಿ ಸರಬರಾಜಾಗಬೇಕು. ಇಲ್ಲದೇ ಇದ್ದರೆ ಆ ರಾಕ್ಷಸ ಊರಿಗೆ ನುಗ್ಗಿ ಎಲ್ಲವನ್ನೂ ದ್ವಂಸ ಮಾಡುತ್ತಾನೆ. ಇಷ್ಟನ್ನು ಕೇಳಿದರೆ ಸಾಕು ಅವನು ‘ಬಕಾಸುರ’ ಎಂದು ಥಟ್ಟನೆ ಹೇಳಿಬಿಡಬಹುದು. ಮುಂದೆ ಕತೆ ಸಾಗಿದರೆ, ಕಡೆಗೆ ಭೀಮ ಬಕಾಸುರನನ್ನು ಕೊಲ್ಲುತ್ತಾನೆ. ಇದು ಪುರಾಣದ ಕತೆಯಾದರೂ ಇದನ್ನೇ ಆಧರಿಸಿ ಎಲ್ಲಾ ಕಾಲಕ್ಕೂ ಸಲ್ಲುವಂತೆ ನಾಟಕ ಬರೆದಿದ್ದರು ಎಂ.ಎಸ್‌.ಕೆ. ಪ್ರಭು. ಅದನ್ನು ಈಗ ಐದನೇ ಬಾರಿಗೆ ಜೆ.ಪಿ. ನಗರದ ರಂಗಶಂಕರದಲ್ಲಿ ಜನವರಿ 04ಕ್ಕೆ ರಂಗದ ಮೇಲೆ ತರುತ್ತಿದ್ದಾರೆ ವಿಎಎಸ್‌ಪಿ ಥಿಯೇಟರ್‌ ತಂಡ. ನಿರ್ದೇಶಕರು ವಿನಯ್‌ ಶಾಸ್ತ್ರಿ.

Exclusive Interview with Vinya shastry about Baka VASP Theater
Author
Bengaluru, First Published Dec 29, 2018, 10:39 AM IST

ಕೆಂಡಪ್ರದಿ

‘ಬಕ’ ಶುರು ಮಾಡಿದ್ದು ಹೇಗೆ?

ಮಹಾಭಾರತದ ಬಕಾಸುರನ ಕತೆಯನ್ನು ಆಧರಿಸಿ ಎಂ.ಎಸ್‌.ಕೆ. ಪ್ರಭು ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಟಕ ಬರೆದಿದ್ದರು. ಅದು ಪೌರಾಣಿಕ ಕತೆಯಾಗಿದ್ದರೂ ಇಂದಿಗೂ ಮುಂದಿಗೂ ಸಲ್ಲುವಂತಹ ಕತೆ. ಹಾಗಾಗಿ ನಾವು ಅದನ್ನೇ ರಂಗಕ್ಕೆ ಇಳಿಸಬೇಕು ಎಂದು ನಿರ್ಧಾರ ಮಾಡಿದೆವು. ನಾನು ಈ ಮೊದಲು ‘ಅವನು ಗಜಲ್‌, ಅವಳು ಶಾಹಿರಿ’, ‘ಕತ್ತಲೆ ಬೆಳೆಕು’, ‘ಸಾಹೇಬರು ಬರುತ್ತಾರೆ’, ‘ಬಿಹ್ಯಾಂಡ್‌ ದ ಲ್ಯಾಂಡ್‌ ಆಫ್‌ ಹಠಮಾಲ’ ಎನ್ನುವ ನಾಟಕಗಳನ್ನು ನಿರ್ದೇಶನ ಮಾಡಿದ್ದೆ. ಪೌರಾಣಿಕ ಕತೆಯುಳ್ಳ ನಾಟಕವ ಮಾಡಿರಲಿಲ್ಲ. ಹಾಗಾಗಿ ಇದನ್ನು ಸವಾಲಾಗಿ ಸ್ವೀಕಾರ ಮಾಡಿ ನಮ್ಮ ವಿಎಎಸ್‌ಪಿ (ವಿ ಆಸ್ಪೇಯ​ರ್‍ಸ್ -ನಾವು ಆಕಾಂಕ್ಷಿಗಳು) ತಂಡ ಸೇರಿ ನಾಟಕ ಮಾಡಿದೆವು. ಈಗ ಅದು ಐದನೇ ಪ್ರದರ್ಶನಕ್ಕೆ ಸಿದ್ಧವಾಗಿದೆ.

ನಾಟಕದ ಬಗ್ಗೆ ಹೇಳುವುದಾದರೆ?

ಮಹಾಭಾರತದ ಬಕಾಸುರ ಎನ್ನುವ ರಾಕ್ಷಸನನ್ನು ಇಟ್ಟುಕೊಂಡು ಮಾಡಿರುವ ನಾಟಕ. ನಮಗೆ ಗೊತ್ತಿರುವ ಹಾಗೆ ಬಕಾಸುರ ರಾಕ್ಷಸ, ಬಂಡಿ ಅನ್ನ ತಿನ್ನುತ್ತಿದ್ದ. ಇಡೀ ಊರಿಗೆ ಹಾನಿ ಮಾಡುತ್ತಿದ್ದ, ದೊಡ್ಡ ದೇಹಿ ಎಂದು. ಇದಕ್ಕೂ ಮುಂದೆ ಹೋಗಿ ಅವನನ್ನು ಭೀಮ ಸಂಹಾರ ಮಾಡಿ ಊರಿನ ಜನರಿಗೆ ಸಹಾಯ ಮಾಡಿದ ಎಂದು ಗೊತ್ತು. ಭೀಮ-ಬಕಾಸುರನ ಯುದ್ಧವೂ ಸ್ವಾರಸ್ಯಕರವಾಗಿ ಕೆಲವಾರು ಕಡೆ ಚಿತ್ರಿತವಾಗಿದೆ. ಆದರೆ ನಾಟಕಾರರು ಒಂದು ಹೆಜ್ಜೆ ಮುಂದೆ ಹೋಗಿ, ಬಕಾಸುರನಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದ ಊರಿನ ಜನರನ್ನು ಮುಖ್ಯ ಭೂಮಿಕೆಗೆ ತಂದಿದ್ದಾರೆ. ಅಲ್ಲಿ ನಡೆಯುವ ರಾಜಕೀಯ, ವ್ಯವಹಾರ, ಉಳ್ಳವರು, ಇಲ್ಲದವರು, ಶ್ರೀ ಸಾಮಾನ್ಯರು ಎಲ್ಲರೂ ಬಂದು ಹೋಗುತ್ತಾರೆ.

ಬಕಾಸುರ ತನ್ನ ಆಹಾರವನ್ನು ಸರಿಯಾಗಿ ಪೂರೈಸಿಕೊಳ್ಳಲು ಊರಿನವರೊಂದಿಗೆ ಒಪ್ಪಂದ ಮಾಡಿಕೊಂಡು ದಿನಕ್ಕೆ ಇಂತಿಷ್ಟುಆಹಾರ ತನ್ನ ಬಳಿ ತಲುಪುವಂತೆ ಮಾಡಿಕೊಂಡಿರುತ್ತಾನೆ. ಆದರೆ ಇತ್ತ ಒಂದು ಊರು ಎಂದಮೇಲೆ ಅಲ್ಲಿ ಒಂದು ರಾಜಕೀಯ ವ್ಯವಸ್ಥೆ ಇರುತ್ತದೆ. ಒಬ್ಬ ರಾಜ ಇರುತ್ತಾನೆ. ಶ್ರೀಮಂತ ವರ್ಗ ಇರುತ್ತದೆ. ದಿನ ಬಿಟ್ಟು ದಿನ ಯಾರು ಬಕಾಸುರನಿಗೆ ಆಹಾರ ಕಳುಹಿಸಬೇಕು, ಯಾರು ಅವನಿಗೆ ಆಹಾರ ಆಗಬೇಕು ಎಂಬುದನ್ನು ನಿರ್ಧರಿಸುತ್ತಿರುತ್ತಾರೆ. ಆದರೆ ಹೀಗೆ ನಿರ್ಧಾರ ತೆಗೆದುಕೊಳ್ಳುವ ಬಲಿಷ್ಠ ವರ್ಗದವರು ಬಕಾಸುರನ ಆಹಾರವಾಗಿದ್ದರೆ? ಕೇವಲ ಸಾಮಾನ್ಯರು ಮಾತ್ರವೇ ಬಕನಿಗೆ ಆಹಾರವಾದರೆ ಎನ್ನುವುದು ಪ್ರಶ್ನೆ. ಇದೇ ನಾಟಕದ ಮುಖ್ಯ ತಿರುಳು.

ನೀವು ನಾಟಕವನ್ನು ಪ್ರಸ್ತುತಪಡಿಸಿರುವುದು ಹೇಗೆ?

ನಾವು ಇಂದಿನ ಸ್ಥಿತಿಗೆ ತಕ್ಕಂತೆ ಕೆಲವು ಸಣ್ಣ ಬದಲಾವಣೆ ಮಾಡಿಕೊಂಡಿದ್ದೇವೆ. ಹಿಂದೆಯೂ ಬಕಾಸುರ ಹೇಗೆ ಸಾಮಾನ್ಯರನ್ನು ಆಹಾರ ಮಾಡಿಕೊಂಡಿದ್ದನೋ, ಈಗಲೂ ದೊಡ್ಡ ದೊಡ್ಡ ಕಂಪನಿಗಳು ಬಕನ ರೀತಿ ನಮ್ಮನ್ನು ತಿನ್ನುತ್ತಿವೆ. ಅಂದು ಬಕ ಎಲ್ಲರಿಗೂ ಗೊತ್ತಾಗುವ ಹಾಗೆ ತಿನ್ನುತ್ತಿದ್ದ. ಇಂದು ಗೊತ್ತಾಗದ ರೀತಿಯಲ್ಲಿ ದೊಡ್ಡ ಕಂಪನಿಗಳು ನಮ್ಮನ್ನು ತಿನ್ನುತ್ತಿವೆ ಅಷ್ಟೇ. ಇದನ್ನು ನಾವು ನಾಟಕದಲ್ಲಿ ಕೆಲವೊಂದಷ್ಟುಸಂಕೇತಗಳನ್ನು ಇಟ್ಟುಕೊಂಡು ತೋರಿಸಿದ್ದೇವೆ. ಅಲ್ಲಿ ಒಬ್ಬ ನಗರ ಪಾಲಕ ಇದ್ದ. ಈಗ ಸರಕಾರಗಳು ಬಂದಿವೆ. ಅಂದೂ ಶ್ರೀಮಂತರು, ಪ್ರಭಾವಿಗಳು ಬಕನ ತೆಕ್ಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಇಂದೂ ಕೂಡ ಶ್ರೀಮಂತರು, ಉದ್ಯಮಿಗಳು, ಪ್ರಭಾವಿಗಳು ತಪ್ಪಿಸಿಕೊಂಡು ಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನು ದೇಶದಲ್ಲಿ ನಡೆದಿರುವ ಕೆಲವಾರು ದೊಡ್ಡ ದೊಡ್ಡ ಸ್ಕಾ್ಯಮ್‌ಗಳು, ಭ್ರಷ್ಟಾಚಾರವನ್ನು ತೋರಿಸಿ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದೇವೆ.

ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೇಳಿ

Exclusive Interview with Vinya shastry about Baka VASP Theater

ನಾನು ಎಚ್‌ಪಿ ಕಂಪನಿಯಲ್ಲಿ ಫೈನಾನ್ಸಿಯಲ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೆ. ಹೀಗಿರುವಾಗಲೇ ಬಾಲ್ಯದಿಂದಲೂ ಬೆಳೆದಿದ್ದ ರಂಗಭೂಮಿಯ ಮೇಲಿನ ಆಸಕ್ತಿ ರಂಗ ತಂಡವನ್ನು ಕಟ್ಟುವಂತೆ ಮಾಡಿತ್ತು. ನಾನು ನನ್ನ ಸ್ನೇಹಿತರಾದ ಅರುಣ್‌, ಪಾರ್ಥ ಸಾರಥಿ, ಸಂತೋಷ್‌ ಸೇರಿ ಹತ್ತು ವರ್ಷಗಳ ಹಿಂದೆ ವಿಎಎಸ್‌ಪಿ ರಂಗತಂಡವನ್ನು ಕಟ್ಟಿದೆವು. ಮೊದ ಮೊದಲು ಕೆಲಸ ಮಾಡಿಕೊಂಡು ತಂಡವನ್ನು ಮುನ್ನಡೆಸುತ್ತಿದ್ದೆವು. ಈಗ ನಾನು ನನ್ನ ಉದ್ಯೋಗ ತೊರೆದು ಸಂಪೂರ್ಣವಾಗಿ ರಂಗಭೂಮಿಯಲ್ಲೇ ತೊಡಗಿಸಿಕೊಂಡಿದ್ದೇನೆ. ಇದುವರೆಗೂ 14ಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದೇವೆ. ‘ಬಕ’ ನಾಟಕದ ಐದನೇ ಪ್ರದರ್ಶನ ಈಗ ಕಾಣುತ್ತಿದೆ. ಇದಕ್ಕಾಗಿ 35 ಜನ ಕಲಾವಿದರು ಸುಮಾರು ಎರಡೂವರೆ ತಿಂಗಳು ಅಭ್ಯಾಸ ಮಾಡಿದ್ದೇವೆ. ಇಡೀ ನಮ್ಮ ತಂಡವೇ ಒಟ್ಟಾಗಿ ‘ಬಕ’ ಭಿನ್ನವಾಗಿ ರಂಗದ ಮೇಲೆ ಬರಬೇಕು ಎಂದು ಕನಸು ಹೊತ್ತಿತ್ತು. ಅದಕ್ಕಾಗಿ ಕೆಲವೊಂದಷ್ಟುಅಧ್ಯಯನ ಮಾಡಿ ಹೊಸ ಮ್ಯಾನರಿಸಮ್‌ಗಳನ್ನು ಕ್ರಿಯೇಟ್‌ ಮಾಡಿದೆವು. ಭಯ, ಗೌರವ, ಸಂತೋಷ ಮೊದಲಾದ ಎಲ್ಲಾ ಭಾವಗಳನ್ನೂ ಬೇರ ಬೇರೆ ರೀತಿ ಹೇಗೆ ತೋರಿಸಬೇಕು ಎಂಬುದನ್ನು ಪ್ರಯೋಗ ಮಾಡಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದೇವೆ. ನಮ್ಮ ಮಿಕ್ಕ ನಾಟಕಗಳಿಗೆ ಹೆಚ್ಚು ಸೆಟ್‌ ವರ್ಕ್ ಇರಲಿಲ್ಲ. ಆದರೆ ಈ ನಾಟಕದಲ್ಲಿ ಸೆಟ್‌ಗೆ ಹೆಚ್ಚು ಶ್ರಮ ಹಾಕಿದ್ದೇವೆ. ಹೊಟೆದಾಟ, ಬಡಿದಾಟದ ಪ್ರಸಂಗಗಳೂ ಇರುವುದರಿಂದ ಅಭ್ಯಾಸದ ವೇಳೆ ಕೆಲವೊಂದಷ್ಟುಮಂದಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದ್ದೂ ಇದೆ.

ಸ್ಥಳ: ರಂಗಶಂಕರ, ಜೆ.ಪಿ. ನಗರ, ಬೆಂಗಳೂರು

ದಿನಾಂಕ: ಜನವರಿ 04, ಸಮಯ: ಸಂಜೆ 7.30

Follow Us:
Download App:
  • android
  • ios