Asianet Suvarna News Asianet Suvarna News

ಸಂದರ್ಶನ : ರೆಬೆಲ್ ಮಗ ನ್ಯಾಯ ಕೇಳುವ ಅಮ್ಮ

‘ತಾಯಿಗೆ ತಕ್ಕ ಮಗ’ ಒಂದು ಕಾಲದ ಸೂಪರ್ ಹಿಟ್ ಚಿತ್ರ. ಈಗ ಮತ್ತೆ ತೆರೆ ಮೇಲೆ ಬರುತ್ತಿದೆ. ಫಾರ್ ಏಚೇಂಜ್, ಅಂದು ರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರದ ಟೈಟಲ್‌ನಲ್ಲೀಗ ಅಜಯ್ ರಾವ್ ಹೀರೋ. ಶಶಾಂಕ್ ಚಿತ್ರದ ನಿರ್ಮಾಪಕ ಕಮ್ ನಿರ್ದೇಶಕ. ಶೀರ್ಷಿಕೆಯೇ ಹೇಳುವ ಹಾಗೆ, ಇದು ಅಮ್ಮ-ಮಗನ ಸೆಂಟಿಮೆಂಟ್ ಚಿತ್ರ. ಇವತ್ತೇ ಬಿಡುಗಡೆಯಾಗುತ್ತಿರುವ ಚಿತ್ರದಲ್ಲಿ ಏನೆಲ್ಲ ಇದೆ, ಹಳೇ ಟೈಟಲ್‌ನಲ್ಲಿ ಹೇಳ ಹೊರಟ ಹೊಸ ಕತೆಯೇನು ಇತ್ಯಾದಿ ಕುರಿತು ಶಶಾಂಕ್ ಜತೆಗೆ ಮಾತುಕತೆ.

Exclusive interview Thayige Thakka Maga
Author
Bengaluru, First Published Nov 16, 2018, 10:44 AM IST

ತಾಯಿಗೆ ತಕ್ಕ ಮಗ ಎನ್ನುವ ಹಳೇ ಟೈಟಲ್‌ನಲ್ಲೇ ಹೊಸ ಸಿನಿಮಾ ಮಾಡಿದ್ದೇಕೆ?

ಹಳೇ ಸಿನಿಮಾಕ್ಕೂ ಇದಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಒಂದೇ ಟೈಟಲ್ ಎನ್ನುವುದನ್ನು ಬಿಟ್ಟರೆ ಅದೇ ಬೇರೆ, ಇದೇ ಬೇರೆ. ಶೀರ್ಷಿಕೆಯೇ ಹೇಳುವ ಹಾಗೆ ಇದು ಕೂಡ ಅಮ್ಮ ಮತ್ತು ಮಗನ ನಡುವಿನ ಸೆಂಟಿಮೆಂಟ್ ಕತೆ. ಆ ಕತೆಗೆ ತಕ್ಕಂತೆ ಟೈಟಲ್ ಬೇಕು ಎನ್ನುವ ಕಾರಣಕ್ಕೆ ಮಾತ್ರ ತಾಯಿಗೆ ತಕ್ಕ ಮಗ ಎನ್ನುವ ಟೈಟಲ್ ಸೆಲೆಕ್ಟ್ ಮಾಡಿಕೊಂಡಿದ್ದೇವೆ. ಅದರಾಚೆ ಹಳೇ ಟೈಟಲ್ ಮರು ಬಳಕೆಯಲ್ಲಿಯಾವುದೇ ಗಿಮಿಕ್ ಇಲ್ಲ.

ಅಮ್ಮ-ಮಗನ ಸೆಂಟಿಮೆಂಟ್ ಕತೆಯ ಸ್ವಾರಸ್ಯ ಏನು?

ಸಮಾಜದಲ್ಲಿನ ಅನ್ಯಾಯ ಖಂಡಿಸಿ, ದಂಗೆಯೇಳುವ ಮಗ. ಮತ್ತೊಂದೆಡೆ ವ್ಯವಸ್ಥೆಯೊಳಗಿನ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸುವ ಅಮ್ಮ. ಅವರಿಬ್ಬರು ಒಂದಾದರೆ ಕೆಟ್ಟ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ.ಅದರ ಜತೆಗೆ ಅಮ್ಮನಿಗಾಗಿ ಮಗ, ಮಗನಿಗಾಗಿ ಅಮ್ಮ ಹೇಗೆಲ್ಲ ಹೋರಾಡುತ್ತಾರೆ, ಅವರ ನಡುವಿನ ಭಾವನಾತ್ಮಕ ಸಂಬಂಧ ಹೇಗಿರುತ್ತೆ ಎನ್ನುವುದನ್ನೇ ಕಮರ್ಷಿಯಲ್ ಆಗಿ ತೋರಿಸಲು ಹೊರಟಿದ್ದೇವೆ.

ನಟ ಅಜೇಯ್ ರಾವ್ ನಿಜ ಜೀವನವೇ ಈ ಚಿತ್ರದ ಕತೆಗೆ ಸ್ಫೂರ್ತಿ ಎನ್ನುವ ಮಾತು ನಿಜವೇ?

ಹೌದು, ಹತ್ತಿರದಿಂದ ನಾನು ಬಲ್ಲ ಆತ್ಮೀಯ ಗೆಳೆಯ ಅಜೇಯ್. ಆತನಿಗೆ ಅಮ್ಮ ಅಂದ್ರೆ ಪ್ರಾಣ. ನಿಜವಾಗಿಯೂ ಅಮ್ಮ-ಮಗ ಅಂದ್ರೆ ಹೀಗಿರಬೇಕು ಎನ್ನುವ ಹಾಗಿದ್ದಾರೆ ಅಜಯ್ ಮತ್ತವರ ಅಮ್ಮ. ಅವರ ನಡುವಿನ ಬಾಂಡೇಜ್ ನೋಡುತ್ತಿದ್ದ ನನಗೆ ಅಂತಹದ್ದೇ ಒಂದು ಅಮ್ಮ-ಮಗನ ಕತೆ ಯಾಕೆ ಹೇಳಬಾರದು ಎಂತೆನಿಸಿತು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಈ ಕತೆ ಬರೆದೆ. ಅದು ಅವರಿಗಷ್ಟೇ ಸಿಮೀತವಾಗದೆ,ಜಗತ್ತಿ ಯಾವುದೇ ಮೂಲೆಯ  ಅಮ್ಮ-ಮಗನ ಸೆಂಟಿಮೆಂಟ್ ಕತೆಯೂ ಆಗಬಹುದು.

ಕತೆ ಹೊಳೆದಾಗ ಅಜೇಯ ರಾವ್ ಜತೆಗೆ ಸಿನಿಮಾ ಮಾಡ್ಬೇಕು ಎನ್ನುವುದು ನಿರ್ಧಾರವಾಗಿತ್ತಾ?

ಖಂಡಿತಾ ಇಲ್ಲ. ಸ್ಕ್ರಿಪ್ಟ್ ವರ್ಕ್ ಮುಗಿಸದೆ, ಸಿನಿಮಾ ಮಾಡುವ ಜಾಯಮಾನ ನಂದಲ್ಲ. ಕತೆ ಬರೆಯುವ ಮುನ್ನವೇ ಹೀರೋ, ಹೀರೋಯಿನ್ ಆಯ್ಕೆ ಮಾಡಿಕೊಳ್ಳುವ ಪರಿಪಾಠ ನನಗಿಲ್ಲ. ಈ ಕತೆ ಹೊಳೆಯುವ ಹೊತ್ತಿಗೆ ನಾನು ಬೇರೆ ಸಿನಿಮಾ ಮಾಡುವ ಸಿದ್ಧತೆ ಯಲ್ಲಿದ್ದೆ. ಅದೇ ಸಮಯದಲ್ಲೇ ಹೊಳೆದ ಕತೆಯಿದು. ಅದನ್ನು ಬರೆದು ಮುಗಿಸಿದಾಗ ಅಜಯ್ ಅವರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆ.

ಹೀರೋ ಕ್ಯಾರೆಕ್ಟರ್‌ಗೆ ಅಜಯ್‌ರಾವ್ ಸೂಕ್ತ ಎನಿಸಿದ್ದು ಅವರದೇ ಕತೆ ಎನ್ನುವ ಕಾರಣಕ್ಕಾ?

ಹಾಗೇನಿಲ್ಲ. ಅಜಯ್ ಮತ್ತು ಅವರ ತಾಯಿ ನಡುವಿನ ಬಾಂಡೇಜ್ ಕತೆಗೆ ಸ್ಫೂರ್ತಿ ಎನ್ನುವುದನ್ನು ಬಿಟ್ಟರೆ, ಇಲ್ಲಿರುವ ಇಡೀ ಕತೆ ಅವರದ್ದೇ ಅಲ್ಲ. ಆ ಕತೆಯೊಳಗೆ ನಾಯಕ ಒಬ್ಬ ಕರಾಟೆ ಮಾಸ್ಟರ್. ಹಾಗೆಯೇ ಆತ ರೆಬೆಲ್. ಆ ಪಾತ್ರವನ್ನು ಕೋಪ, ತಾಪ, ಆಕ್ರೋಶ, ಒಂದಷ್ಟು ಆ್ಯಕ್ಷನ್ ಜತೆಗೆ ಎಮೋಷನಲ್ ಸೀನ್ ಮೂಲಕ ತೋರಿಸಬೇಕಾಗಿತ್ತು. ಹತ್ತಿರದಿಂದ ಕಂಡ ಕಾರಣಕ್ಕೋ, ಅಥವಾ ಒಟ್ಟಿಗೆ ಕೆಲಸ ಮಾಡಿದ ಕಾರಣಕ್ಕೋ, ಅಜೇಯ್ ಆ ಪಾತ್ರಕ್ಕೆ ಸೂಕ್ತ ಅಂತೆನಿಸಿತು. ಜತೆಗೆ, ನಾನಂದುಕೊಂಡಂತೆ ಪಾತ್ರಕ್ಕೆ ಆತನಿಂದ ಅಭಿನಯ ತೆಗೆಯಬಹುದು ಎನ್ನುವ ವಿಶ್ವಾಸವೂ ಅದಕ್ಕೆ ಕಾರಣವಾಯಿತು.

ಅಮ್ಮನ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಬೇಕೆನಿಸಿದ್ದು ಯಾಕೆ?

ಕತೆಯಲ್ಲಿದ್ದ ಅಮ್ಮ ಅಬಲೆಯಲ್ಲ. ತುಂಬಾ ಸ್ಟ್ರಾಂಗ್ . ಮಗನ ಜತೆಗೆ ಒಬ್ಬಂಟಿಯಾಗಿದ್ದರೂ ಯಾರಿಗೂ ಕ್ಯಾರೆ ಎನ್ನದ ಗಟ್ಟಿಗಿತ್ತಿ. ಆ ಪಾತ್ರಕ್ಕೆ ಯಾರು ಸೂಕ್ಕ ಎಂದಾಗ ತಕ್ಷಣವೇ ನನ್ನ ತಲೆಗೆ ಹೊಳೆದಿದ್ದು ಸುಮಲತಾ ಅಂಬರೀಶ್. ಪಾತ್ರಕ್ಕೆ ಅವರಿಂದ ನಾನೇನು ನಿರೀಕ್ಷೆ ಮಾಡಿದ್ದೇನೋ ಅದರ ಎರಡು ಪಟ್ಟು ಎನ್ನುವ ಹಾಗಿದೆ ಅವರ ಪರ್‌ಫಾರ್ಮೆನ್ಸ್.

ಅಮ್ಮ-ಮಗನ ಹೋರಾಟ ಇಲ್ಲಿ ಯಾರ ವಿರುದ್ಧ?

ಅವರಿಬ್ಬರ ಆಕ್ರೋಶ, ಸಿಟ್ಟು, ಕೋಪ, ಹೋರಾಟ ಕೆಟ್ಟ ವ್ಯವಸ್ಥೆಯ ವಿರುದ್ಧ. ಹಾಗಂತ ವ್ಯವಸ್ಥೆಯ ಎಲ್ಲಾ ಮುಖಗಳನ್ನು ತೋರಿಸಲಾಗದು. ಒಬ್ಬ ರಾಜಕಾರಣಿ, ಆತನಿಗೆ ಒಬ್ಬ ಕೆಟ್ಟ ಮಗ. ಅವರಿಬ್ಬರ ದರ್ಪದ ವಿರುದ್ಧ ಅಮ್ಮ -ಮಗನ ಹೋರಾಟ. ಅವರಿಬ್ಬರು ಕೆಟ್ಟ ವ್ಯವಸ್ಥೆಯ ಪ್ರತಿನಿಧಿಗಳು. ಅವರನ್ನು ಮಣಿಸುವುದೇ ನಾಯಕ, ಆತನ ಅಮ್ಮನ ಉದ್ದೇಶ. ಹಾಗಾಗಿಯೇ ನಾಯಕನನ್ನು ಚಿತ್ರದ ಉದ್ದಕ್ಕೂ ಕೆಂಪು ಉಡುಪಿನಲ್ಲಿ ತೋರಿಸಿದ್ದೇನೆ. ಇದು ಕ್ರಾಂತಿಯ ಸಂಕೇತ. ಬಂಡಾಯದ ಸಂಕೇತ.

ಚಿತ್ರದ ತಾಂತ್ರಿಕ ರಿಚ್‌ನೆಸ್ ಬಗ್ಗೆ ಹೇಳೋದಾದ್ರೆ...

ನಿರ್ದೇಶಕನಾಗಿ ಒಂದು ಸಿನಿಮಾ ಮಾಡುವಾಗ ನಾನು ನಿರ್ಮಾಪಕರಾರು ಎಂದು ನೋಡುವುದಕ್ಕಿಂತ ಅದಕ್ಕೇನು ಬೇಕು ಎನ್ನುವುದನ್ನು ನೋಡುತ್ತೇನೆ. ಆ ಪ್ರಕಾರ ಸಿನಿಮಾ ಮಾಡುತ್ತಾ ಹೋಗುತ್ತೇನೆ. ಈ ಚಿತ್ರದ ವಿಚಾರದಲ್ಲೂ ಅಷ್ಟೇ. ನನ್ನದೇ ನಿರ್ಮಾಣದ ಸಿನಿಮಾ ಅಂತ ಬಜೆಟ್‌ನಲ್ಲಿ ರಾಜಿ ಮಾಡಿಕೊಂಡಿಲ್ಲ. ನನ್ನ ಕರಿಯರ್‌ನಲ್ಲಿ ಹೆಚ್ಚು ಬಂಡವಾಳದ ಸಿನಿಮಾವಿದು. ಮೇಕಿಂಗ್, ಪೋಸ್ಟ್ ಪ್ರೊಡಕ್ಷನ್, ಸಾಂಗ್ ಶೂಟಿಂಗ್, ಕಾಸ್ಟ್ಯೂಮ್ ಯಾವುದೂ ಕಮ್ಮಿ ಇಲ್ಲದಂತೆ ಅದ್ಧೂರಿಯಾಗಿ ಬಂದಿದೆ. ಆ್ಯಕ್ಷನ್, ಸಾಂಗ್‌ಗಳಿಗಾಗಿಯೇ ಸಾಕಷ್ಟು ಖರ್ಚಾಗಿದೆ. ಬಂಡವಾಳ ಎಷ್ಟು ಖರ್ಚಾಯಿತು ಎನ್ನುವುದಕ್ಕಿಂತ ಸಿನಿಮಾ ಚೆನ್ನಾಗಿ ಬರಬೇಕೆನ್ನುವುದನ್ನೇ ತಲೆಯಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. 

Follow Us:
Download App:
  • android
  • ios