entertainment
By Suvarna Web Desk | 04:19 PM March 18, 2017
'ಎರಡು ಕನಸು' ವಿಮರ್ಶೆ: ನಿದ್ದೆ ಮಾಡಿದವರಿಗೆ ಕನಸು ಗ್ಯಾರಂಟಿ

Highlights

ಚಿತ್ರದ ಎಲ್ಲ ಹಾಡುಗಳು ಅದ್ಧೂರಿಯಾಗಿವೆ. ನೋಡಕ್ಕೂ ಮತ್ತು ಕೇಳಕ್ಕೂ ಕೂಡ ಪರ್ವಾಗಿಲ್ಲ. ಹಾಡುಗಳಿಗೆ ಕೊಟ್ಟ ಗಮನ ನಿರೂಪಣೆ, ಸಂಭಾಷಣೆ, ಕಥೆಗೆ ಕೊಟ್ಟಿದ್ದರೆ ಒಳ್ಳೆಯ ಟೈಟಲ್‌'ಗೆ ಒಳ್ಳೆಯ ಸಿನಿಮಾ ರೂಪಗೊಳ್ಳುತ್ತಿತ್ತು.

ಚಿತ್ರ: ಎರಡು ಕನಸು
ತಾರಾಗಣ: ವಿಜಯ್‌ ರಾಘವೇಂದ್ರ, ಕಾರುಣ್ಯ ರಾಮ್‌, ಕೃಷಿ ತಾಪಂಡ, ಸುದರ್ಶನ್‌, ಸಿದ್ಲಿಂಗು ಶ್ರೀಧರ್‌, ಕುರಿ ಪ್ರತಾಪ್‌, ಪವನ್‌, ಭಗವಾನ್‌
ನಿರ್ದೇಶನ: ಮದನ್‌
ನಿರ್ಮಾಣ: ಅಶೋಕ್‌ ಕೆ ಬಿ
ಛಾಯಾಗ್ರಾಹಣ: ದರ್ಶನ್‌ ಕನಕ
ಸಂಗೀತ: ಸ್ಟೀವ್‌- ಕೌಶಿಕ್‌

ರೇಟಿಂಗ್‌: **

ಚಿತ್ರಕ್ಕೆ ಒಳ್ಳೆಯ ಟೈಟಲ್‌ ಇದ್ದರೆ ಸಾಲದು, ಅಷ್ಟೇ ಉತ್ತಮವಾದ ಕತೆ ಇರಬೇಕು ಎಂಬುದನ್ನು ಎರಡು ರೀಲು ಓಡುವ ಹೊತ್ತಿಗೆ ಮನವರಿಕೆ ಮಾಡಿಕೊಂಡುವ ಚಿತ್ರ ‘ಎರಡು ಕನಸು'. ಈ ಹೆಸರು ಕೇಳಿದಾಕ್ಷಣ ನೆನಪಾಗುವುದು ಡಾ ರಾಜ್‌ಕುಮಾರ್‌, ಕಲ್ಪನಾ, ಮಂಜುಳಾ ಜೋಡಿ. ತುಂಬಾ ವರ್ಷಗಳ ನಂತರ ಅದೇ ಕ್ಲಾಸಿಕ್‌ ಟೈಟಲ್‌ ಇಟ್ಟುಕೊಂಡು ಮದನ್‌ ನಿರ್ದೇಶಿಸಿರುವ ಈಗಿನ ‘ಎರಡು ಕನಸು' ವಿರಾಮಕ್ಕೂ ಮುನ್ನವೇ ಬರಡು ಕನಸು ಅನಿಸುತ್ತದೆ. ಇದು ಪ್ರೇಮ ಕತೆನಾ, ಫ್ಯಾಮಿಲಿ ಡ್ರಾಮಾನಾ ಎನ್ನುವ ಗೊಂದಲದಲ್ಲೇ ಕೂತ ನೋಡುಗನಿಗೆ ಕಾಣುವುದು ಮಾತ್ರ ಎರಡು ದೊಡ್ಡ ರಸ್ತೆ ಅಪಘಾತಗಳು. ಅಲ್ಲಿಗೆ ನಿರ್ದೇಶಕರು ಸಿನಿಮಾ ಹೆಸರಿನಲ್ಲಿ ಟ್ರಾಫಿಕ್‌ ಸೆನ್ಸ್‌ ಬಗ್ಗೆ ಸಿನಿಮಾ ಮಾಡಿರಬೇಕೆನ್ನುವ ನಿರ್ಧಾರಕ್ಕೆ ಬರುತ್ತಾರೆ. ಹೀಗಾಗಿ ಖಾಲಿ ರಸ್ತೆಗಳಲ್ಲಿ ಹೇಗೆ ಭೀಕರ ಅಪಘಾತಗಳು ಸಂಭವಿಸುತ್ತವೆ ಎನ್ನುವ ಪ್ರಶ್ನೆ ಮತ್ತು ಕುತೂಹಲ ಇದ್ದವರಿಗೆ ಹಾಗೂ ಟ್ರಾಫಿಕ್‌ ಕುರಿತ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಿನಿಮಾ ಒಳ್ಳೆಯ ವಸ್ತುವಾಗಬಹುದು!

ಇಂಥ ಚಿತ್ರದಲ್ಲೂ ವಿಜಯ ರಾಘವೇಂದ್ರ, ಕುರಿ ಪ್ರತಾಪ್‌, ಕಾರುಣ್ಯ ರಾಮ್‌, ಕೃಷಿ ತಾಪಂಡ ಅವರು ತಮ್ಮ ಪಾತ್ರಗಳಿಗೆ ಪ್ರಾಮಾಣಿಕ ಸೇವೆ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆಂಬುದು ಮೆಚ್ಚಿಕೊಳ್ಳುವ ವಿಚಾರ. ಹಿರಿ- ಕಿರಿ ಕಲಾವಿದರ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಆದರೆ, ಯಾವ ಕಲಾವಿದರನ್ನು ನಿರ್ದೇಶಕರು ಸೂಕ್ತ ರೀತಿಯಲ್ಲಿ ದುಡಿಸಿಕೊಂಡಿಲ್ಲ. ತುಂಬು ಕುಟುಂಬದ ಕುಡಿ ತಮ್ಮ ಮನೆತನಕ್ಕೆ ಪರಿಚಯವಿರುವ ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಾನೆ. ಹೆತ್ತವರು ಕೂಡ ಒಪ್ಪಿಕೊಳ್ಳುತ್ತಾರೆ. ಮದುವೆಯ ಸಂಭ್ರಮದಲ್ಲಿ ಒಂದೇ ವಾಹನದಲ್ಲಿ ಮನೆಗೆ ಬರುವಾಗ ರಸ್ತೆ ದುರಂತ. ಹೆಚ್ಚು ಕಮ್ಮಿ 12 ಮಂದಿ ಸಾವು. ತಾನು ಊರಿಗೆ ಬಂದಿದ್ದು, ಹುಡುಗಿಯನ್ನು ಪ್ರೀತಿಸಿದ್ದು, ಮದುವೆ ಸಂಭ್ರಮ, ಆ್ಯಕ್ಸಿಡೆಂಟ್‌ ಇದೆಲ್ಲದ್ದಕ್ಕೂ ತಾನೇ ಕಾರಣ ಎಂದು ನೊಂದುಕೊಂಡು ಊರು ಬಿಡುತ್ತಾನೆ ನಾಯಕ. ಇದಕ್ಕೂ ಮುನ್ನ ಒಂದು ರಸ್ತೆ ಅಪಘಾತವಾಗಿದೆ. ಅಲ್ಲಿಗೆ ನಾಯಕನಿಗೆ ತನ್ನವರು ಅಂತ ಯಾರೂ ಇಲ್ಲದಿದ್ದಾಗ ‘ಕಸ್ತೂರಿ ನಿವಾಸ' ಎನ್ನುವ ಹೆಸರಿನಲ್ಲಿ ಅನಾಥಶ್ರಮ ಮಾಡಿಕೊಂಡು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಆದರೆ, ತನಗೆ ಯಾರೂ ಇಲ್ಲ ಅಂದುಕೊಂಡವನಿಗೆ ‘ನಿನ್ನವರು ಇದ್ದಾರೆ' ಎನ್ನುವ ಮಾಹಿತಿ ಸಿಗುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ.

ವಿರಾಮಕ್ಕೂ ಮುನ್ನವೇ ಸಿನಿಮಾ ಮುಗಿದು ಹೋಗಿರುತ್ತದೆ. ಏನು ಮಾಡಬೇಕೆಂಬ ಗೊಂದಲದಲ್ಲೇ ಮುಂದಿನ ಭಾಗವನ್ನು ನಿರ್ದೇಶಿಸಿದಂತೆ ಕಾಣುತ್ತದೆ. ಹೀಗಾಗಿ ಬಾಲ್ಯದಲ್ಲಿ ಸತ್ತಿದ್ದಾಳೆಂದು ಭಾವಿಸುವ ಹುಡುಗಿ ತುಂಬಾ ವರ್ಷಗಳ ನಂತರ ಸಿಕ್ಕಾಗ ಸಂತೋಷ ಪಡುವ ಬದಲು ವ್ಯಥೆ ಪಡುತ್ತಾ ನಾಯಕ ಮಳೆಯಲ್ಲಿ ಹಾಡುತ್ತಾನೆ. ಸಂದರ್ಭಕ್ಕೂ ಹಾಡಿಗೂ ಏನು ಸಂಬಂಧ? ಇಂಥ ಅಸಂಬದ್ದಗಳು ಚಿತ್ರದ ಉದ್ದಕ್ಕೂ ಇವೆ. ಇದರ ನಡುವೆ ಅನಾಥ ಮುಗ್ಧ ಮಕ್ಕಳಿಂದ ಡ್ರಗ್ಸ್‌ ಮಾರಾಟ ಮಾಡುವ ಕತೆ ಇದೆ. ಅದನ್ನೇ ಕೇಂದ್ರವಾಗಿಟ್ಟುಕೊಂಡಿದ್ದರೆ ಒಳ್ಳೆಯ ಮಾಫಿಯಾ ಸಿನಿಮಾ ಆಗುವ ಸಾಧ್ಯತೆಗಳಿದ್ದವು. ಅಲ್ಲದೆ ಚಿತ್ರದ ಎಲ್ಲ ಹಾಡುಗಳು ಅದ್ಧೂರಿಯಾಗಿವೆ. ನೋಡಕ್ಕೂ ಮತ್ತು ಕೇಳಕ್ಕೂ ಕೂಡ ಪರ್ವಾಗಿಲ್ಲ. ಹಾಡುಗಳಿಗೆ ಕೊಟ್ಟ ಗಮನ ನಿರೂಪಣೆ, ಸಂಭಾಷಣೆ, ಕಥೆಗೆ ಕೊಟ್ಟಿದ್ದರೆ ಒಳ್ಳೆಯ ಟೈಟಲ್‌'ಗೆ ಒಳ್ಳೆಯ ಸಿನಿಮಾ ರೂಪಗೊಳ್ಳುತ್ತಿತ್ತು.

ವಿಮರ್ಶೆ: ಆರ್.ಕೇಶವಮೂರ್ತಿ, ಕನ್ನಡಪ್ರಭ
epaper.kannadaprabha.in

Show Full Article


Recommended


bottom right ad