Asianet Suvarna News Asianet Suvarna News

'ಧ್ವನಿ' ಸಿನಿಮಾ ವಿಮರ್ಶೆ: ಅಕ್ಕಿ ಅತ್ಯುತ್ತಮ ಅಡುಗೆ ಸಾಧಾರಣ

ಕಥಾನಾಯಕ ವಾಸುದೇವನ ಪಾತ್ರದಲ್ಲಿ ನಿರೂಪಕ ಚಂದನ್‌ ಶರ್ಮಾ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಕಾಣುವ ಅವರ ಲವಲವಿಕೆ ಕ್ರಮೇಣ ಕಡಿಮೆ ಆಗುತ್ತದೆ. ದ್ವಿತೀಯಾರ್ಧದಲ್ಲಂತೂ ಅವರು ಕಳೆದು ಹೋಗಿದ್ದಾರೆ. ನಟನೆಗಿಂತ ನಿರೂಪಣೆಯೇ ಸೂಕ್ತ ಎನ್ನುವ ಹಾಗಿದೆ ಅವರ ಮುಖಭಾವ.

dhwani kannada movie review

ಚಿತ್ರ : ಧ್ವನಿ
ತಾರಾಗಣ : ಚಂದನ್‌ ಶರ್ಮಾ, ಇತಿ ಆಚಾರ್ಯ, ರಮೇಶ್‌ ಭಟ್‌, ವಿನಯಾ ಪ್ರಕಾಶ್‌, ಚೈತ್ರ, ಸೌಜನ್ಯ, ಕಾರ್ತಿಕ್‌ ಬಾನಂದೂರು ಕೆಂಪಯ್ಯ
ನಿರ್ದೇಶನ: ಸೆಬಾಸ್ಟಿನ್‌ ಡೇವಿಡ್‌
ಛಾಯಾಗ್ರಹಣ : ಆರ್‌ ಗಿರಿ
ಸಂಗೀತ : ರಾಜ್‌ ಭಾಸ್ಕರ್‌
ನಿರ್ಮಾಣ: ಆರ್‌ ರಮೇಶ್‌ ಬಾಬು

ರೇಟಿಂಗ್‌: ***

ನಾವೇನು ತಪ್ಪು ಮಾಡಿದೀವಿ ಅಂತ ನಮ್ಗೀ ಈ ಶಿಕ್ಷೆ! ಅಸಹಾಯಕತೆಯ ಆ ಧ್ವನಿ ಕೇಳುಗರ ಮನ ಕಲುಕುತ್ತದೆ. ಆದರೆ, ಆ ಹೊತ್ತಿಗೆ ಕೈದಾಳದ ಅರ್ಚಕರು, ಮತ್ತವರ ಪತ್ನಿ ಹಾಗೂ ಮಗಳು ಮೂವರೂ ಸಾವಿನ ಹೆಬ್ಬಾಗಿನಲ್ಲಿ ನಿಂತಿದ್ದಾರೆ. ಆದಾಗಲೇ ಜೈಲು ಕಂಬಿಗಳ ಹಿಂದೆ ನಿಂತು ಬಂದಿದ್ದು ಅವರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿದೆ. ಅದರ ಕಾರಣವೇ ಗೊತ್ತಿಲ್ಲ. ಮಾಡದ ಆಪರಾಧಕ್ಕೂ ಜೈಲು ಶಿಕ್ಷೆ ಆಗಿದೆ. ಹಾಗಂತ ಸಮಾಜ ಸುಮ್ಮನಿರುತ್ತದೆಯೇ? ಬಾವಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವ ಹಾಗೆ, ಊರಿನಲ್ಲಿ ವ್ಯಂಗ್ಯದ ಮಾತು. ಚುಚ್ಚು ನುಡಿ. ಮಾನ ಮಾರ್ಯದೆ ಇದ್ದವರೂ ಬದುಕಿರಲಾರರು ಎನ್ನುವ ಪ್ರಚೋದನೆ ಬೇರೆ. ಸ್ವಾಭಿಮಾನದಿಂದ ಗೌರವಯುತವಾಗಿ ಬದುಕಿದ ಅರ್ಚಕರಿಗೆ ಸಾವಲ್ಲದೇ ಇನ್ನೇನು ಆಯ್ಕೆ?

ಆರಂಭದಲ್ಲಿ ಕೈದಾಳದ ಚನ್ನಕೇಶವ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಾ ಕುಳಿತ ನಾಯಕ ವಾಸುದೇವನ ಕಥಾ ಚಿತ್ರಣ ಹೀಗೆ ತೆರೆದುಕೊಳ್ಳುತ್ತದೆ. ಅದಕ್ಕೆ ಕಾರಣವಾಗಿದ್ದು ಚಂಚಲ ಮನಸ್ಸಿನ ಒಂದು ಹೆಣ್ಣಿನ ಕೈವಾಡ. ಪತ್ನಿಯಾಗಿ ಸ್ವೀಕರಿಸಿದವನ ಮೇಲೆಯೇ ಸೇಡು ತೀರಿಸಿಕೊಳ್ಳುವುದಕ್ಕಾಗಿ ಆಕೆ ಸೃಷ್ಟಿಸಿದ ‘ವರದಕ್ಷಿಣೆ ಕಿರುಕುಳ'ದ ದೂರಿನ ತಂತ್ರ ಆ ಹೊತ್ತಿಗೆ ಬಹುತೇಕ ಫಲಿಸಿದೆ. ಚನ್ನಕೇಶವನೇ ಬದುಕಿನ ಸೂತ್ರಧಾರ ಎಂದು ನಂಬಿಕೊಂಡು ಗೌರವಯುತವಾಗಿ ಬದುಕಿದ್ದ ಒಂದು ಇಡೀ ಕುಟುಂಬ ಹೆಣ್ಣಿನ ಆಕ್ರೋಶದ ಜ್ವಾಲೆಯಲ್ಲಿ ಬೆಂದು ಹೋಗಿದೆ. ಎಲ್ಲರಿಗೂ ಕಾನೂನು ಒಂದೇ ಎನ್ನುವ ನೆಪದಲ್ಲಿ ಅಸಹಾಯಕರೂ ಶಿಕ್ಷೆಗೆ ಇಲ್ಲಿ ಗುರಿಯಾಗಿದ್ದಾರೆ. ಹಾಗಾದ್ರೆ ಕೈದಾಳದ ಅರ್ಚಕರ ಹಾಗೆ ಸಮಾಜದಲ್ಲಿರುವ ಅದೆಷ್ಟೋ ಅಸಹಾಯಕರನ್ನು ಕಾಪಾಡುವವರು ಯಾರು? ಪ್ರೇಕ್ಷಕರ ಮುಂದೆ ಇಂಥದೊಂದು ಬೃಹದಾಕಾರವಾಗಿ ಬಂದು ನಿಲ್ಲುತ್ತದೆ.

ಹೆಣ್ಣಿನ ಮೇಲಿನ ಶೋಷಣೆ ಕುರಿತೇ ಹೆಚ್ಚು ಮಾತನಾಡುವ ಸಂದರ್ಭದಲ್ಲಿ ಗಂಡಿನ ಮೇಲೂ ಶೋಷಣೆ ನಡೆಯುತ್ತಿದೆ. ಹೆಣ್ಣಿನ ರಕ್ಷಣೆಗೆ ತಂದ ಕಾನೂನುಗಳು ಆಕೆಯ ಸೇಡಿಗೆ ದುರ್ಬಳಕೆ ಆಗುತ್ತಿವೆ. ಆಕೆಯ ಸ್ವಾರ್ಥಕ್ಕೆ ಸಂಸಾರಗಳೇ ಸರ್ವನಾಶವಾಗುತ್ತಿವೆ ಎನ್ನುವ ನೋವಿಗೆ ಧ್ವನಿ ಆಗಿರುವ ಈ ಚಿತ್ರ ತನ್ನ ಕತೆಯ ಸಾರದ ಮೂಲಕ ಗಮನಸೆಳೆದಷ್ಟು ದೃಶ್ಯರೂಪದಲ್ಲಿ ಆಕರ್ಷಣೆ ಹುಟ್ಟು ಹಾಕುವುದಿಲ್ಲ. ಇಡೀ ಕತೆ ಸಾಗುವುದೇ ಫ್ಲ್ಯಾಷ್‌ಬ್ಯಾಕ್‌ನಲ್ಲಿ. ಕತೆ ಹೇಳುವ ಕ್ರಮಕ್ಕೆ ನಿರ್ದೇಶಕರು ಹೀಗೊಂದು ತಂತ್ರವನ್ನು ಬಳಸಿಕೊಂಡಿದ್ದರೂ, ಚಿತ್ರಕತೆ ಸಾಗುವುದು ಮಾತ್ರ ತೀರಾ ನಿಧಾನಗತಿಯಲ್ಲಿ. ಕೆಲವು ಸನ್ನಿವೇಶಗಳು, ಮಾತುಗಳು ಮಾತ್ರ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತವೆ. ನಿತ್ಯ ಒಂದಲ್ಲೊಂದು ಕಾರಣಕ್ಕೆ ಅಸಹಾಯಕರು ಜೈಲು ಪಾಲಾಗುವ ಕರುಣಾಜನಕ ದೃಶ್ಯ ಇಲ್ಲಿ ಮನಮುಟ್ಟುವಂತೆ ಬಂದಿದೆ. ಉಳಿದಂತೆ ಕೆಲವು ಸನ್ನಿವೇಶಗಳಿಗೆ ಹೊಂದಾಣಿಕೆಯೇ ಕಮ್ಮಿ. ಆ ಮಟ್ಟಿಗೆ ಚಿತ್ರದ ದೃಶ್ಯರೂಪ ಪೇಲವ. ಕಥಾನಾಯಕ ವಾಸುದೇವನ ಪಾತ್ರದಲ್ಲಿ ನಿರೂಪಕ ಚಂದನ್‌ ಶರ್ಮಾ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಕಾಣುವ ಅವರ ಲವಲವಿಕೆ ಕ್ರಮೇಣ ಕಡಿಮೆ ಆಗುತ್ತದೆ. ದ್ವಿತೀಯಾರ್ಧದಲ್ಲಂತೂ ಅವರು ಕಳೆದು ಹೋಗಿದ್ದಾರೆ. ನಟನೆಗಿಂತ ನಿರೂಪಣೆಯೇ ಸೂಕ್ತ ಎನ್ನುವ ಹಾಗಿದೆ ಅವರ ಮುಖಭಾವ.

ನಾಯಕಿ ಇತಿ ಶರ್ಮಾ ಇಲ್ಲಿ ವಿಲನ್‌. ಜಯಾ ಪಾತ್ರದಲ್ಲಿ ಝಗಮಗಿಸಿರುವ ಅವರು, ಆಕ್ರೋಶದ ಮುಖದಲ್ಲಿ ಪ್ರೇಕ್ಷಕರನ್ನು ಹಿಗ್ಗಾಮುಗ್ಗಾ ತಿವಿಯುತ್ತಾರೆ. ಆಕ್ರೋಶದ ಅವರ ಮುಖ ನೋಡುವುದಕ್ಕೂ ಕಿರಿ ಕಿರಿ ಆಗುತ್ತದೆ. ಕೈದಾಳದ ಅರ್ಚಕರಾಗಿ ಹಿರಿಯ ನಟ ರಮೇಶ್‌ ಭಟ್‌, ಅವರ ಪತ್ನಿಯಾಗಿ ವಿನಯಾ ಪ್ರಸಾಧ್‌ ಈ ಚಿತ್ರಕ್ಕೆ ನಿಜಕ್ಕೂ ಧ್ವನಿ ಆಗಿದ್ದಾರೆ. ಚಿತ್ರ ಕೊಂಚವಾದರೂ ನಿಮಗೆ ಹಿಡಿಸುವುದಾದರೆ ಇವರಿಬ್ಬರ ಅಭಿನಯದ ಕಾರಣಕ್ಕೆ. ಇನ್ನು ಅರ್ಚಕರ ಮಗಳಾಗಿ ಅಭಿನಯಿಸಿರುವ ಚೈತ್ರಾಗೆ ಉಜ್ವಲ ಭವಿಷ್ಯವಿದೆ. ಸಂಕಲನಕ್ಕೆ ಹೆಚ್ಚು ಅವಕಾಶವಿದ್ದರೂ ಅಲ್ವಿನ್‌, ಹೆಚ್ಚು ತಲೆಕೆಡಿಸಿಕೊಂಡಿಲ್ಲ. ದ್ವಿತೀಯಾರ್ಧದಲ್ಲಿ ಅದಕ್ಕೆ ಸಾಕಷ್ಟುಅವಕಾಶಗಳಿವೆ. ಕೃಷ್ಣೇಗೌಡರ ಕತೆ ಮತ್ತು ಸಂಭಾಷಣೆ ಚಿತ್ರಕ್ಕೆ ಜೀವಾಳ ಆಗಿದೆ. ರಾಜ್‌ ಭಾಸ್ಕರ್‌ ಸಂಗೀತದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್‌ ಹಾಗೂ ಬಾನಂದೂರು ಕೆಂಪಯ್ಯ ಹಾಡಿರುವ ಹಾಡುಗಳು, ಆಪ್ತವಾಗುತ್ತವೆ. ಒಟ್ಟಿನಲ್ಲಿ ಗಂಡಿನ ಶೋಷಣೆ ಪರವಾಗಿ ಧ್ವನಿ ಎತ್ತಿರುವ ಚಿತ್ರ, ಅದರ ತೀವ್ರತೆಯನ್ನು ಇನ್ನಷ್ಟುಗಟ್ಟಿಧ್ವನಿಯಲ್ಲಿ ಹೇಳುವ ಅವಕಾಶದಿಂದ ವಂಚಿತವಾಗಿರುವುದು ಸತ್ಯ.

ವಿಮರ್ಶೆ: ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
epaper.kannadaprabha.in

Follow Us:
Download App:
  • android
  • ios