Asianet Suvarna News Asianet Suvarna News

ಅಮರ್ ಚಿತ್ರದ ದೃಶ್ಯಗಳನ್ನು ಹಠ ಮಾಡಿ ನೋಡಿದ್ದ ಅಂಬಿ

ನನ್ನ ಮತ್ತು ಅಂಬಿ ಸ್ನೇಹಕ್ಕೆ 55 ವರ್ಷಗಳ ವಯಸ್ಸು. ಆದರೂ ನಮ್ಮ ನಡುವೆ ಇದುವರೆಗೂ ಒಂದೇ ಒಂದು ಸಣ್ಣ ಜಗಳ ಆಗಿಲ್ಲ ಅಂದ್ರೆ ನಂಬಿ. ನಾವು ರಾಜಕಾರಣಿಯಾಗಿಯೋ, ಸಿನಿಮಾ ಮಂದಿಯಾಗಿಯೋ ಅಥವಾ ಬ್ಯುಸಿನೆಸ್ ಮ್ಯಾನ್‌ಗಳಾಗಿಯೋ ಸ್ನೇಹಿತರಾಗಿದ್ದಲ್ಲ. ವಿದ್ಯಾರ್ಥಿ ದೆಸೆಯ ಗೆಳೆಯರು. 

 

Ambareesh demamds to watch Son film amara
Author
Bengaluru, First Published Nov 27, 2018, 9:29 AM IST

ನಾನು ಓದುತ್ತಿದ್ದ ಹಾಸ್ಟೆಲ್ ಅಂಬರೀಶ್ ಮನೆ ಪಕ್ಕದಲ್ಲೇ ಇತ್ತು. ಅಲ್ಲಿಂದ ಪರಿಚಯವಾಗಿದ್ದು. ಅಂದಿನಿಂದ ಇಂದಿನ ತನಕ ಅಂದರೆ ಮೊನ್ನೆ ರಾತ್ರಿ ಅಸ್ಪತ್ರೆಗೆ ಹೋಗುವ ಮುನ್ನ ನನ್ನ ಕರೆಸಿಕೊಂಡು ಮಗನ ಸಿನಿಮಾ ಬಗ್ಗೆ ಮಾತನಾಡಿದ್ದರು.

ಬಾಲ್ಯದ ಗೆಳೆಯನಾದ ನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂದು ಸಿನಿಮಾ ನಿರ್ಮಾಪಕನ್ನಾಗಿಸಿದ ವ್ಯಕ್ತಿ ಅಂಬಿ. 1965ರಲ್ಲಿ ನಾನು ನಿರ್ಮಿಸಿದ ‘ಮಣ್ಣಿನ ದೋಣಿ’ ಚಿತ್ರಕ್ಕೆ ಅಂಬರೀಷ್ ನಾಯಕ. ನನಗೆ ದೊಡ್ಡ ಮಟ್ಟದಲ್ಲಿ ಹೆಸರು ಕೊಟ್ಟ ಸಿನಿಮಾ. ಆ ಚಿತ್ರದ ಗೆಲುವು ನಾನು ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಮುಂದುವರಿಯುವಂತೆ ಮಾಡಿತು.

1965ರಲ್ಲಿ ಅಂಬಿ ನನ್ನ ಸಿನಿಮಾ ನಿರ್ಮಾಪಕನನ್ನಾಗಿಸಿದರೆ 2018ರಲ್ಲಿ ಅವರ ಮಗ ಅಭಿಷೇಕ್‌ನನ್ನು ‘ಅಮರ್’ ಚಿತ್ರದ ಮೂಲಕ ನಾನು ಹೀರೋ ಆಗಿ ಲಾಂಚ್ ಮಾಡಿಸುತ್ತಿದ್ದೇನೆ. ಇದು ನನ್ನ ಆತ್ಮೀಯ ಗೆಳೆಯನಿಗೆ ನಾನು ಕೊಡುತ್ತಿರುವ ಮಹತ್ತರವಾದ ನೆನಪಿನ ಕಾಣಿಕೆ ಎಂದು ಭಾವಿಸುವೆ. ತುಂಬಾ ಜಾಲಿ ಮನುಷ್ಯ, ಸ್ನೇಹಜೀವಿ, ಯಾವುದಕ್ಕೂ ಕೇರ್ ಮಾಡದವ, ಒಳಗೊಂದು ಹೊರಗೊಂದು ಇಟ್ಟುಕೊಂಡವನಲ್ಲ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದವ. ವೈಯಕ್ತಿಕವಾಗಿ ಯಾರಿಗೂ ನೋವುಂಟು ಮಾಡದವ. ಯಾಕೆಂದರೆ ನಾನು ಮತ್ತು ಅವನು ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದವರು. ಆತ ಕಾಂಗ್ರೆಸ್, ನಾನು ಜೆಡಿಎಸ್. ಚುನಾವಣೆ ಸಮಯದಲ್ಲಿ ಮೈಸೂರಿನಲ್ಲಿ ಪ್ರಚಾರ ಮಾಡುವಾಗ ನನ್ನದೇ ಹೋಟೆಲ್ನಲ್ಲಿ ಮೊದಲ ಮಹಡಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಉಳಿದುಕೊಂಡರೆ, ನಾಲ್ಕನೇ ಮಹಡಿಯಲ್ಲಿ ಅಂಬಿಗಾಗಿಯೇ ಖಾಯಂ ಆಗಿ ಕಾಯ್ದಿರಿಸಿದ್ದ ರೂಮಿನಲ್ಲಿರುತ್ತಿದ್ದರು. ಚುನಾವಣೆ ಮುಗಿಯುವ ತನಕ ನಾನು ಅಂಬಿ ರೂಮ್‌ಗೆ ಹೋಗುತ್ತಿರಲಿಲ್ಲ. ಅವನು ನನ್ನ ರೂಮ್‌ಗೆ ಬರುತ್ತಿರಲಿಲ್ಲ. ಎರಡು ಪಕ್ಷಗಳ ನಾಯಕರು ಒಂದೇ ಹೋಟೆಲ್‌ನಲ್ಲಿ ಚುನಾವಣೆಯ ಸಮಯದಲ್ಲಿ ಇರಕ್ಕೆ ಸಾಧ್ಯನಾ ಎಂದರೆ ಸಾಧ್ಯ ಎನ್ನುವಂತಾಗಿದ್ದು ಅಂಬಿಯ ಸ್ನೇಹದ ಮನಸ್ಸಿನಿಂದ. ಹೀಗಾಗಿ ಎಂದೂ ರಾಜಕೀಯದ ಮೋಡ ನಮ್ಮಿಬ್ಬರ ನಡುವೆ ಬರಲಿಲ್ಲ.

ನನಗೆ ಗೊತ್ತಿರುವ ಅಂಬರೀಷ್ ತಮ್ಮ ರೆಗ್ಯುಲರ್ ಜೀವನ ಬದಲಾಯಿಸಿಕೊಂಡು ಗಂಭೀರ ವ್ಯಕ್ತಿ ಆಗಿದ್ದಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಿದ್ದರು. ಅಂಥ ಅವಕಾಶ ಅವನಿಗೆ ಬಂದಾಗಲೆಲ್ಲ ದೂರ ತಳ್ಳಿದ್ದಾನೆ. ಅಯ್ಯೋ ಹೋಗಯ್ಯ ಸಿಎಂ ಕುರ್ಚಿ ನನಗೆ ಯಾಕೆ ಎಂದು ಅವನದ್ದೇ ಸ್ಟೈಲಿನಲ್ಲಿ ನನಗೆ ಪ್ರತ್ಯುತ್ತರ ಕೊಡುತ್ತಿದ್ದವ. ಯಾವುದಕ್ಕೂ ಆಸೆ ಪಡಲಿಲ್ಲ. ಆದರೆ, ಎಲ್ಲವೂ ಅವನ ಬಳಿಗೆ ಬಂತು.

ಸ್ನೇಹಿತರು, ಕ್ರೀಡಾಕಾರರು, ರಾಜಕಾರಣಿಗಳು, ಉದ್ಯಮಿಗಳು, ಸಾಮಾನ್ಯ ಜನ ಎಲ್ಲರು ಅಂಬಿ ಹತ್ತಿರ ಬಂದರೇ ಹೊರತು, ಯಾರ ಬಳಿಯೂ ಹೋಗಿ ಅಂಬಿ ಕೈ ಚಾಚಲಿಲ್ಲ. ಅದು ಅಂಬರೀಷ್ ಅಂದರೆ. ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಅಂಬರೀಷ್ ಅಂದರೆ ಅದು ನನ್ನ ಪ್ರೀತಿಯ ಗೆಳೆಯ ರೆಬೆಲ್ ಸ್ಟಾರ್. ನೋಡಿ, ಅವನಿಗೆ ಏನನಿಸಿತೋ ಗೊತ್ತಿಲ್ಲ, ಧಿಡೀರ್ ಅಂತ ಎರಡ್ಮೂರು ದಿನಗಳ ಹಿಂದೆಯಷ್ಟೇ ನನ್ನ ಕರೆದು ‘ಅಮರ್’ ಚಿತ್ರಕ್ಕೆ ಈಗೆಷ್ಟು ಶೂಟಿಂಗ್ ಆಗಿದೆಯೋ ಅಷ್ಟನ್ನು ನಾನು ನೋಡಬೇಕು ಅಂತ ಹಠ ಮಾಡಿದ. ಅಯ್ಯೋ ಬೇಡಪ್ಪ. ಎಲ್ಲ ಮುಗಿಯಲಿ ಫೈನಲ್ ನೋಡೋಣ ಅಂದೆ. ಕೇಳಲಿಲ್ಲ. ಹೀಗಾಗಿ ಅರ್ಧ ಚಿತ್ರವನ್ನು ಎಡಿಟಿಂಗ್ ಮಾಡಿ, ಡಬ್ಬಿಂಗ್ ಕೂಡ ಮುಗಿಸಿ ಅವನಿಗೆ ತೋರಿಸಿದ್ವಿ.  ಮಗನನ್ನು ತೆರೆ ಮೇಲೆ ನೋಡಿದ ಆ ಕ್ಷಣ ನನ್ನ ಗೆಳೆಯನಿಗೆ ಆದ ಖುಷಿ ನಾನು ಮಾತ್ರ ಕಂಡಿದ್ದೇನೆ. ಮಗನ ಅರ್ಧ ಚಿತ್ರ ನೋಡಿ ಹೋದ. ಪೂರ್ತಿ ಚಿತ್ರ ನೋಡಲಿಲ್ಲ ಎನ್ನುವ ನೋವು ನನ್ನಲ್ಲಿದೆ. 

ಮಗನನ್ನು ತೆರೆ ಮೇಲೆ ನೋಡಿದ ಆ ಕ್ಷಣ ನನ್ನ ಗೆಳೆಯನಿಗೆ ಆದ ಖುಷಿ ನಾನು ಮಾತ್ರ ಕಂಡಿದ್ದೇನೆ. ಮಗನ ಅರ್ಧ ಚಿತ್ರ ನೋಡಿ ಹೋದ. ಪೂರ್ತಿ ಚಿತ್ರ ನೋಡಲಿಲ್ಲ ಎನ್ನುವ ನೋವು ನನ್ನಲ್ಲಿದೆ.

 

 

Follow Us:
Download App:
  • android
  • ios