Asianet Suvarna News Asianet Suvarna News

ಚುನಾವಣೆ ಬಳಿಕ ಬಿಜೆಪಿ ಸರ್ಕಾರ ರಚನೆ ತಡೆಯಲು ವಿಪಕ್ಷಗಳ ರಣತಂತ್ರ!

ಸರ್ಕಾರ ರಚನೆಗೆ ಈಗಲೇ ಪ್ರತಿಪಕ್ಷಗಳಿಂದ ಕಸರತ್ತು| ರಾಹುಲ್‌ ಗಾಂಧಿ, ಚಂದ್ರಬಾಬು ನಾಯ್ಡು ಭೇಟಿ| ಮೇ 21ಕ್ಕೆ ವಿಪಕ್ಷಗಳ ಸಭೆ ಕುರಿತು ಸಮಾಲೋಚನೆ| 23ಕ್ಕೆ ಬಿಜೆಪಿಗೂ ಮುನ್ನ ರಾಷ್ಟ್ರಪತಿ ಭೇಟಿಗೆ ತಂತ್ರ?

Strategy to Get First Invite From President Tops Agenda as Opposition Regroups Before Election Result
Author
Bangalore, First Published May 9, 2019, 7:40 AM IST

ನವದೆಹಲಿ[ಮೇ.09]: ಸಾರ್ವತ್ರಿಕ ಲೋಕಸಭೆ ಚುನಾವಣೆ ಮುಕ್ತಾಯಗೊಳ್ಳಲು ಇನ್ನೂ ಎರಡು ಹಂತದ ಮತದಾನ ಬಾಕಿ ಇರುವಾಗಲೇ, ಮೇ 23ರಂದು ಫಲಿತಾಂಶ ಬರುತ್ತಿದ್ದಂತೆ ಏನೇನು ಮಾಡಬೇಕು ಎಂಬ ಕುರಿತು ಪ್ರತಿಪಕ್ಷಗಳ ಪಾಳೆಯ ರಣತಂತ್ರ ರೂಪಿಸಲು ಆರಂಭಿಸಿದೆ. ಅತಂತ್ರ ಫಲಿತಾಂಶ ಅಥವಾ ಬಹುಮತಕ್ಕಿಂತ ಎಷ್ಟೇ ದೂರವಿದ್ದರೂ ರಾಷ್ಟ್ರಪತಿಗಳನ್ನು 23ರಂದು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡುವ ಚಿಂತನೆಯೊಂದು ನಡೆಯುತ್ತಿದೆ. ಈ ಕುರಿತು ಚರ್ಚೆ ನಡೆಸಲು ಫಲಿತಾಂಶಕ್ಕೆ ಎರಡು ದಿನ ಮುನ್ನ ಕಾಂಗ್ರೆಸ್‌ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಪೂರ್ವಭಾವಿ ನಡೆಸುವ ಸಾಧ್ಯತೆ ಇದೆ.

ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗಲೂ ಬಹುತೇಕ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ನಡೆಸುವ ಹೊತ್ತಿನಲ್ಲೇ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು, ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದವು. ಬಹುತೇಕ ಇದೇ ತಂತ್ರವನ್ನು ಇದೀಗ ವಿಪಕ್ಷಗಳು ಕೇಂದ್ರದಲ್ಲೂ ಮುಂದುವರೆಸಲು ನಿರ್ಧರಿಸಿವೆ.

ರಾಹುಲ್‌- ನಾಯ್ಡು ಭೇಟಿ:

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಿದ ತೆಲುಗುದೇಶಂ ಮುಖ್ಯಸ್ಥ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಫಲಿತಾಂಶಕ್ಕೂ ಎರಡು ದಿನ ಮುನ್ನ ಪ್ರತಿಪಕ್ಷ ನಾಯಕರ ಸಭೆ ಕರೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ರಾಹುಲ್‌ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಬರುತ್ತಿದ್ದಂತೆ ತಡ ಮಾಡದೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬಳಿಗೆ ದೌಡಾಯಿಸಿ, ಸರ್ಕಾರ ರಚನೆಗೆ ತಮಗೇ ಆಹ್ವಾನ ನೀಡಬೇಕು. ಅತಂತ್ರ ಲೋಕಸಭೆ ಸೃಷ್ಟಿಯಾಗಿ, ಯಾವುದೇ ಪಾರ್ಟಿ ಅತಿದೊಡ್ಡ ಪಕ್ಷವಾಗಿದ್ದರೂ (ಸಮೀಕ್ಷೆಗಳ ಪ್ರಕಾರ ಬಿಜೆಪಿ) ಅದಕ್ಕೆ ಅವಕಾಶ ನೀಡಬಾರದು ಎಂದು ಹಕ್ಕು ಮಂಡಿಸುವ ಚಿಂತನೆ ಇದೆ. ಶೇ.50ರಷ್ಟುವಿವಿಪ್ಯಾಟ್‌ ಮತಗಳನ್ನು ಎಣಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟಿಗೆ 21 ಪಕ್ಷಗಳು ಅರ್ಜಿ ಸಲ್ಲಿಕೆ ಮಾಡಿದ್ದವು. ಆ ಎಲ್ಲ ಪಕ್ಷಗಳು ಈ ಕಸರತ್ತಿನಲ್ಲಿ ಒಗ್ಗೂಡುವ ಸಾಧ್ಯತೆ ಇದೆ.

ರಾಷ್ಟ್ರಪತಿ ವಿವೇಚನಾಧಿಕಾರ:

ಅತಂತ್ರ ಫಲಿತಾಂಶ ಬಂದಾಗ ಯಾವ ಪಕ್ಷವನ್ನು ಸರ್ಕಾರ ರಚನೆಗೆ ಕರೆಯಬೇಕು ಎಂಬ ವಿಚಾರದಲ್ಲಿ ರಾಷ್ಟ್ರಪತಿಗಳಿಗೆ ವಿವೇಚನಾಧಿಕಾರ ಇದೆ. ಈ ಅಧಿಕಾರ ಕೆಲವು ಬಾರಿ ವಿವಾದಕ್ಕೂ ಕಾರಣವಾದದ್ದಿದೆ. 1996ರಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಂದಿನ ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮಾ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಆದರೆ ಬಹುಮತ ಸಾಬೀತುಪಡಿಸಲು ಆಗದೇ ಅವರು ರಾಜೀನಾಮೆ ನೀಡಿದ್ದರು.

ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಲ್ಲಿನ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿದ್ದರು. ಕಳೆದ ವರ್ಷ ಕರ್ನಾಟಕದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್‌- ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದ್ದರೂ ಬಿಜೆಪಿಯ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು.

Follow Us:
Download App:
  • android
  • ios