Asianet Suvarna News Asianet Suvarna News

ಬೆಂಗ್ಳೂರು ದಕ್ಷಿಣಕ್ಕೆ ಮೋದಿ?: 2019 ಎಲೆಕ್ಷನ್ ಸುನಾಮಿ ಸುದ್ದಿ!

2019ರ ಲೋಕಸಭೆ ಚುನಾವಣೆಯ ಬಿಸಿ ಬಿಸಿ ಸುದ್ದಿ| ಕರ್ನಾಟಕದಲ್ಲಿ ಸುನಾಮಿ ಅಲೆ ಎಬ್ಬಿಸಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ| ಬೆಂಗಳೂರು ದಕ್ಷಿಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿ?| ತೇಜಸ್ವಿನಿ ಅನಂತ್ ಕುಮಾರ್ ಬದಲು ಮೋದಿ ಸ್ಪರ್ಧೆ?| ಈ ಕುರಿತು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಪ್ರತಿಕ್ರಿಯೆ ಏನು?

Social Media Speculates PM Modi Contesting From Bengaluru South
Author
Bengaluru, First Published Mar 22, 2019, 1:27 PM IST

ನವದೆಹಲಿ(ಮಾ.22): ಇದು ಬಹುಶಃ 2019ರ ಲೋಕಸಭೆ ಚುನಾವಣೆಯ ಅತ್ಯಂತ ಕುತೂಹಲಕಾರಿ ಸುದ್ದಿ. ಕರ್ನಾಟಕವೂ ಸೇರದಿಂತೆ ಇಡೀ ದೇಶವೇ ಈ ಸುದ್ದಿ ಕೇಳಿ ಹೌಹಾರಿದೆ.

ಈ ಬಾರಿ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಿಂದ ಸ್ಪರ್ಧೆ ಮಾಡಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿನ್ನೆಯಷ್ಟೇ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಮೋದಿಗೆ ವಾರಾಣಸಿ ಕ್ಷೇತ್ರ ನೀಡಲಾಗಿದೆ.

ಈ ಮಧ್ಯೆ ಮೋದಿ ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಸುನಾಮಿಯಂತೆ ಬಂದು ಅಪ್ಪಳಿಸಿದೆ.

ಹೌದು, ಕಳೆದ ಬಾರಿ ಗುಜರಾತ್ ಮತ್ತು ಉತ್ತರಪ್ರದೇಶದಿಂದ ಸ್ಪರ್ಧಿಸಿದ್ದ ಪ್ರಧಾನಿ ಮೋದಿ, ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವ ಇರಾದೆಯೊಂದಿಗೆ ಕರ್ನಾಟಕದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ದಿವಂಗತ ಅನಂತ್ ಕುಮಾರ್ ಕ್ಷೇತ್ರವಾದ ಬೆಂಗಳೂರು ದಕ್ಷಿಣಕ್ಕೆ ಅಭ್ಯರ್ಥಿ ಘೋಷಿಸಿಲ್ಲ.

ಬೆಂಗಳೂರು ದಕ್ಷಿಣಕ್ಕೆ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹೆಸರು ಬಹುತೇಕ ಖಚಿತವಾಗಿದ್ದು, ಈ ಮಧ್ಯೆ ಮೋದಿ ಸ್ಪರ್ಧೆ ಸುದ್ದಿ ಬಿರುಗಾಳಿಯಂತೆ ಬಂದೆರಗಿದೆ.

ಕಳೆದ ಬಾರಿ ವಡೋದರಾ ಮತ್ತು ವಾರಣಾಸಿಯಿಂದ ಸ್ಪರ್ಧಿಸಿ ಗೆದ್ದಿದ್ದ ಮೋದಿ, ನಂತರ ವಡೋದರಾ ಕ್ಷೇತ್ರ ಬಿಟ್ಟು ವಾರಾಣಸಿ ಕ್ಷೇತ್ರ ಉಳಿಸಿಕೊಂಡಿದ್ದರು. ಈ ಮೂಲಕ ಎರಡೂ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವ ಬೆಳೆಯುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದರು.

ಅದರಂತೆ ಈ ಬಾರಿ ವಾರಾಣಸಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಳಿಕ ವಾರಾಣಸಿ ತ್ಯಜಿಸಿ ಬೆಂಗಳೂರು ದಕ್ಷಿಣ ಕ್ಷೇತ್ರ ಉಳಿಸಿಕೊಳ್ಳುವ ಯೋಜನೆ ಮೋದಿ ಅವರದ್ದಾಗಿದೆ ಎನ್ನಲಾಗಿದೆ. ಇದರಿಂದ ದಕ್ಷಿಣ ಭಾರತಕ್ಕೆ ಲಗ್ಗೆ ಇಡುವ ಬಿಜೆಪಿಯ ಭವಿಷ್ಯದ ಯೋಜನೆಗೆ ಮುನ್ನುಡಿ ಬರೆದಂತಾಗಲಿದೆ ಎಂಬುದು ಸದ್ಯದ ವಿಶ್ಲೇಷಣೆ. 

ಆದರೆ ಈ ಕುರಿತು ಬಿಜೆಪಿ ಮೂಲಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಕೇಂದ್ರೀಯ ಚುನವಣಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯೇ ನಡೆದಿಲ್ಲ ಎಂದು ಹೇಳಲಾಗಿದೆ.

ಇನ್ನು ಪ್ರಧಾನಿ ಮೋದಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ  ಇಡೀ ದಕ್ಷಿಣ ಭಾರತ ಈ ನಡೆಯನ್ನು ಸ್ವಾಗತಿಸಲಿದೆ ಎಂದು ಕಾಂಗ್ರೆಸ್ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ. ನಾವೆಲ್ಲಾ ಸೇರಿ ಪ್ರಧಾನಿ ಅವರನ್ನು ಸೋಲಿಸುವುದಾಗಿ ಸೌಮ್ಯ ಟ್ವೀಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದು, ಮೋದಿ ಬೆಂಬಲಿಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios