Asianet Suvarna News Asianet Suvarna News

ಅಮೇಥಿಯಲ್ಲಿ ಸೋತು, ವಾಯ್ನಾಡ್'ನಲ್ಲಿ ಗೆದ್ದ ರಾಹುಲ್ ಗಾಂಧಿ!

ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸೋಲಿನ ಕಹಿ| ಸ್ಮೃತಿ ಇರಾನಿ ವಿರುದ್ಧ ಸೋಲುಂಡ ರಾಹುಲ್ ಗಾಂಧಿ| ಅಮೇಥಿಯಲ್ಲಿ ಒಂದೂ ಬಾರಿಯೂ ಸೋಲದ ಕಾಂಗ್ರೆಸ್‌ಗೆ ಮುಖಭಂಗ| ವಾಯ್ನಾಡು ಕ್ಷೇತ್ರದಲ್ಲಿ ಗೆಲುವು ಕಂಡ ರಾಹುಲ್ ಗಾಂಧಿ| ಕಾಂಗ್ರೆಸ್ ಅಧ್ಯಕ್ಷರ ಮಾನ ಉಳಿಸಿದ ಕೇರಳದ ವಾಯ್ನಾಡ್ ಕ್ಷೇತ್ರ|

Rahul Gandhi Lost in Amethi But Won in Wayanad
Author
Bengaluru, First Published May 23, 2019, 5:49 PM IST

ನವದೆಹಲಿ(ಮೇ.23): ಕಾಂಗ್ರೆಸ್ ಪಾಲಿಗೆ ದೇಶಾದ್ಯಂತ ಕಂಡ ಸೋಲಿಗಿಂತಲೂ ಅಮೇಥಿಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾರಣ ಸ್ವಾತಂತ್ರೋತ್ತರ ಭಾರತದ ಚುನಾವಣೆಯಲ್ಲಿ ಅಮೇಥಿ ಲೋಕಸಭಾ ಕ್ಷೇತದಲ್ಲಿ ಇದುವರೆಗೂ ಒಂದೇ ಒಂದು ಬಾರಿಯೂ ಸೋಲು ಕಾಣದ ಕಾಂಗ್ರೆಸ್, ಈ ಬಾರಿ ಬಿಜೆಪಿಯ ಅಭ್ಯರ್ಥಿ ಸ್ಮೃತಿ ಇರಾನಿ ಎದುರಿಸಲಾಗದೇ ಸೋಲೊಪ್ಪಿಕೊಂಡಿದೆ.

ಮತ ಎಣಿಕೆ ಕಾರ್ಯ ಇನ್ನೂ ಮುಂದುವರೆದಿದ್ದರೂ, ಅಮೇಥಿಯಲ್ಲಿ ರಾಹುಲ್ ಸೋಲುವುದು ಬಹುತೇಕ ನಿಚ್ಚಳವಾಗಿದೆ. ಎಲ್ಲಾ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿಯ ಸ್ಮೃತಿ ಇರಾನಿ, ಸುಲಭ ಗೆಲುವು ಸಾಧಿಸಲಿದ್ದಾರೆ ಎಂದು ಖಂಡಿತ ಹೇಳಬಹುದು.

ಆದರೆ ರಾಹುಲ್ ಪಾಲಿಗೆ ಕೊಂಚ ನಿರಾಳ ತಂದಿರುವುದು ಕೇರಳದ ವಾಯ್ನಾಡು ಲೋಕಸಭಾ ಕ್ಷೇತ್ರ. ಕಾರಣ ವಾಯ್ನಾಡು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆಲುವು ದಾಖಲಿಸಿದ್ದಾರೆ. ಸುಮಾರು 8 ಲಕ್ಷ ಮತಗಳನ್ನು ಪಡೆಯುವ ಮೂಲಕ ರಾಹುಲ್ ಗೆಲುವಿನ ನಗೆ ಬೀರಿದ್ದಾರೆ.

ಸೋಲಿನ ಭೀತಿಯಿಂದಲೇ ರಾಹುಲ್ ದಕ್ಷಿಣಕ್ಕೆ ವಲಸೆ ಬಂದಿದ್ದಾರೆ ಎಂಬ ಸ್ಮೃತಿ ಇರಾನಿ ಆರೋಪ ನಿಜವಾದಂತಿದ್ದು, ಇಡೀ ಭಾರತ ಒಂದು ಎಂಬ ಸಂದೇಶ ಸಾರಲು ವಾಯ್ನಾಡ್ ಕ್ಷೇತ್ರಕ್ಕೆ ಬಂದಿರುವುದಾಗಿ ಹೇಳಿದ್ದ ರಾಹುಲ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

Follow Us:
Download App:
  • android
  • ios