Asianet Suvarna News Asianet Suvarna News

20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ: ಯಾರಿಗೆಲ್ಲ ಅಗ್ನಿಪರೀಕ್ಷೆ?

ಇಂದು ಮೊದಲ ಸಮರ|  20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ| ಆಂಧ್ರ, ಅರುಣಾಚಲ, ಸಿಕ್ಕಿಂ, ಒಡಿಶಾ ವಿಧಾನಸಭೆಗೂ ಮತದಾನ

Loksabha Elections Begins 91 Seats Vote Today In First Phase
Author
Bangalore, First Published Apr 11, 2019, 7:43 AM IST

ನವದೆಹಲಿ[ಏ.11]: ತೀವ್ರ ಕುತೂಹಲ ಕೆರಳಿಸಿರುವ 2019ರ ಲೋಕಸಭೆ ಚುನಾವಣಾ ಮಹಾಸಮರಕ್ಕೆ ಗುರುವಾರ ಶ್ರೀಕಾರ ಬೀಳಲಿದ್ದು, ದೇಶದ ವಿವಿಧ 20 ರಾಜ್ಯಗಳ (18 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು) 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇದೇ ವೇಳೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮತದಾನ ನಡೆಯಲಿದೆ.

ಆಂಧ್ರಪ್ರದೇಶದ 25, ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್‌ಗಢದ 1, ಜಮ್ಮು-ಕಾಶ್ಮೀರದ 2, ಮಹಾರಾಷ್ಟ್ರದ 7, ಮಣಿಪುರದ 1, ಮೇಘಾಲಯದ 2, ಮಿಜೋರಾಂನ 1, ನಾಗಾಲ್ಯಾಂಡ್‌ನ 1, ಒಡಿಶಾದ 4, ಸಿಕ್ಕಿಂನ 1, ತೆಲಂಗಾಣದ 17, ತ್ರಿಪುರಾದ 1, ಉತ್ತರಪ್ರದೇಶದ 8, ಪಶ್ಚಿಮ ಬಂಗಾಳದ 2, ಅಂಡಮಾನ್‌ನ 1 ಹಾಗೂ ಲಕ್ಷದ್ವೀಪದ 1 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಇನ್ನು ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳು, ಅರುಣಾಚಲ ಪ್ರದೇಶದ 60, ಸಿಕ್ಕಿಂ 32 ವಿಧಾನಸಭೆ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆದರೆ, 147 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿರುವ ಒಡಿಶಾದಲ್ಲಿ ಏ.11 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮುಂದಿನ ಹಂತಗಳಲ್ಲಿ 18, 23 ಮತ್ತು 29ರಂದು ಮತದಾನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತ್ತು ಸುಸೂತ್ರವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಭದ್ರತೆ ಸೇರಿದಂತೆ ಸರ್ವ ಸಿದ್ಧತೆ ಮಾಡಿಕೊಂಡಿದೆ.

ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭೆ: ಇಂದು ಯಾರಿಗೆ ಅಗ್ನಿಪರೀಕ್ಷೆ

ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ (ನಾಗಪುರ), ಕಿರಣ್‌ ರಿಜಿಜು (ಅರುಣಾಚಲ ಪಶ್ಚಿಮ), ಜ| ವಿ.ಕೆ. ಸಿಂಗ್‌ (ಗಾಜಿಯಾಬಾದ್‌), ಮಹೇಶ್‌ ಶರ್ಮಾ (ಗೌತಮಬುದ್ಧನಗರ), ಹಂಸರಾಜ್‌ ಅಹಿರ್‌ (ಚಂದ್ರಾಪುರ), ಎಲ್‌ಜೆಪಿ ನಾಯಕ ರಾಮವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ (ಜಮೂಯಿ), ಎಐಎಂಎಂಎಂ ನೇತಾರ ಅಸಾದುದ್ದೀನ್‌ ಒವೈಸಿ (ಹೈದರಾಬಾದ್‌), ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾ (ನಿಜಾಮಾಬಾದ್‌), ಅಸ್ಸಾಂ ಕಾಂಗ್ರೆಸ್‌ ಮುಖಂಡ ಗೌರವ್‌ ಗೊಗೋಯ್‌ (ಕಾಲಿಬೋರ್‌).

ಆಂಧ್ರ ವಿಧಾನಸಭೆ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (ಕುಪ್ಪಂ), ನಾಯ್ಡು ಪುತ್ರ ನಾರಾ ಲೋಕೇಶ್‌ (ಮಂಗಳಗಿರಿ), ವೈಎಸ್ಸಾರ್‌ ಕಾಂಗ್ರೆಸ್‌ನ ಜಗನ್ಮೋಹನ ರೆಡ್ಡಿ (ಪುಲಿವೆಂದುಲ)

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios