Asianet Suvarna News Asianet Suvarna News

ಅಪಸ್ವರ ಮೀರಿ ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿದ್ದು ಹೇಗೆ?

ಶೋಭಾ ಕರಂದ್ಲಾಜೆ ಅವರು ಮತ್ತೊಂದು ಅವಧಿಗೆ ಲೋಕಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ತಮಗೆ ವ್ಯಕ್ತವಾದ ವಿರೋಧದ ಹಿನ್ನೆಲೆ, ತಾವೇನು ಮಾಡಿದ್ದೇನೆ ಎಂಬುದನ್ನು ವಿವರಿಸಿದ್ದಾರೆ.

Loksabha Elections 2019 Udupi Chikkamagalur Candidate Shobha Karandlaje Interview
Author
Bengaluru, First Published Mar 25, 2019, 11:17 AM IST


ಅಪಸ್ವರ ಮೀರಿ ಹೇಗೆ ಉಡುಪಿ-ಚಿಕ್ಕಮಗಳೂರು ಟಿಕೆಟ್ ಗಿಟ್ಟಿಸಿದ್ದು ಹೇಗೆ?

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿದ ಹಾಲಿ ಬಿಜೆಪಿ ಸಂಸದರ ಪೈಕಿ ಪಕ್ಷದಲ್ಲಿ ಅಂತರಿಕವಾಗಿ ಹೆಚ್ಚು ಚರ್ಚೆಯಾಗಿದ್ದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಗ್ಗೆ. ಅಲ್ಲಿನ ಹಾಲಿ ಸಂಸದೆಯೂ ಆಗಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಬಾರದು ಎಂಬ ಸ್ಥಳೀಯವಾಗಿ ಎದ್ದಿದ್ದ ಕೂಗು ಕೊನೆಗೆ ದೆಹಲಿಯ ವರಿಷ್ಠರ ಅಂಗಳವನ್ನೂ ತಲುಪಿತು. ಆದರೆ, ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತಿತರ ಅಂಶಗಳು ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಸೆ ಹಿನ್ನೆಲೆಯಲ್ಲಿ ವರಿಷ್ಠರು ಶೋಭಾ ಅವರ ವಿರುದ್ಧ ಕೇಳಿಬಂದಿದ್ದ ಅಪಸ್ವರದ ಧ್ವನಿಯನ್ನು ನಿರ್ಲಕ್ಷಿಸಿದರು. ಮತ್ತೊಮ್ಮೆ ಟಿಕೆಟ್ ಘೋಷಿಸಿದರು. ರಾಜ್ಯ ರಾಜಕಾರಣಕ್ಕೆ ಮರಳಬೇಕು ಎಂಬ ಅದಮ್ಯ ಆಸೆಯಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಶೋಭಾ ಅವರು ಮತ್ತೊಂದು ಅವಧಿಗೆ ಲೋಕಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ತಮಗೆ ವ್ಯಕ್ತವಾದ ವಿರೋಧದ ಹಿನ್ನೆಲೆ, ತಾವೇನು ಮಾಡಿದ್ದೇನೆ ಎಂಬುದನ್ನು ವಿವರಿಸಿದ್ದಾರೆ.

* ಚುನಾವಣೆ ಸಮೀಪಿಸಿದಂತೆ ನಿಮಗೆ ಟಿಕೆಟ್ ಸಿಗುವ ಬಗ್ಗೆ ಅನುಮಾನದ ವಾತಾವರಣ ನಿರ್ಮಾಣವಾಗಿದ್ದು ಯಾಕೆ?

ಪ್ರಸಕ್ತ ಸನ್ನಿವೇಶದಲ್ಲಿ ಚುನಾವಣಾ ರಾಜಕಾರಣ ಮಾಡುವುದು ಕಷ್ಟ. ಹೀಗಾಗಿ, ಚುನಾವಣೆಗೆ ನಿಲ್ಲುವ ಬದಲು ಪಕ್ಷದ ಕೆಲಸ ಮಾಡುತ್ತೇನೆ ಎಂಬ ಮಾತನ್ನು ಹಿಂದೊಮ್ಮೆ ಹೇಳಿದ್ದೆ. ಆ ಸಂದರ್ಭದಲ್ಲಿ ನನಗನಿಸಿದ್ದನ್ನು ಹೇಳಿದ್ದೆ ಅಷ್ಟೆ. ಆದರೆ, ಅದು ನಿರ್ಧಾರವಾಗಿರಲಿಲ್ಲ. ಕೇವಲ ಅನಿಸಿಕೆಯಾಗಿತ್ತು. ವಿಚಿತ್ರ ಎಂದರೆ, ಅದನ್ನೇ ಮುಂದಿಟ್ಟುಕೊಂಡು ನನ್ನ ಬಗ್ಗೆ ಅನೇಕ ರೀತಿಯ ಉಹಾಪೋಹದ ಸುದ್ದಿಗಳು ಹಬ್ಬಿದವು. ನಂತರ ಪಕ್ಷದ ವರಿಷ್ಠರು ಈ ರೀತಿಯ ಹೇಳಿಕೆ ನೀಡಬಾರದು ಎಂಬ ಸೂಚನೆ ಕೊಟ್ಟಿದ್ದರಿಂದ ನಾನು ಸುಮ್ಮನಾದೆ.

* ನಿಮ್ಮ ವಿರುದ್ಧದ ‘ಗೋ ಬ್ಯಾಕ್’ ಆಂದೋಲನದ ಹಿಂದೆ ಸ್ವಪಕ್ಷೀಯರೂ ಇದ್ದಾರೆ ಎಂಬ ಮಾತನ್ನು ನೀವೆ ಕೆಲ ದಿನಗಳ ಹಿಂದೆ ಹೇಳಿದ್ದಿರಿ?

ಈಗ ಅದು ಅಪ್ರಸ್ತುತ. ಅದರ ಅಗತ್ಯವಿಲ್ಲ. ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಘೋಷಣೆ ಯಾಗುವವರೆಗೆ ಸ್ವಲ್ಪ ಪೈಪೋಟಿ, ಗೊಂದಲ ಇರಬಹುದು. ಆದರೆ, ಅಭ್ಯರ್ಥಿ ಘೋಷಣೆಯಾದ ನಂತರ ಎಲ್ಲರೂ ಹಿಂದಿನದೆಲ್ಲವನ್ನೂ ಮರೆತು ಕೆಲಸ ಮಾಡುವುದು ವಿಶೇಷ. 

ರಾಜ್ಯ ರಾಜಕಾರಣಕ್ಕೆ ಬರಲು ನೀವು ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಯತ್ನಪಟ್ಟು ವಿಫಲರಾದಿರಿ ಎಂಬ ಮಾತಿದೆ?

ಖಂಡಿತವಾಗಿಯೂ ಇಲ್ಲ. ಪಕ್ಷ ಯಾವ ಜವಾಬ್ದಾರಿ ನೀಡುತ್ತ ದೆಯೊ ಅದನ್ನು ನಿರ್ವಹಿಸುತ್ತೇನೆ. ಅದಕ್ಕೆ ರಾಜ್ಯ ಅಥವಾ ರಾಷ್ಟ್ರ ಎಂಬುದಿಲ್ಲ. ನಾನು ಸಂಸದೆಯಾಗಿದ್ದರೂ ರಾಜ್ಯದ ಕೆಲಸ ಮಾಡುತ್ತೇನೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ.

ಚುನಾವಣಾ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ನೀವು ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳುತ್ತೀರಿ ಎಂಬ ವದಂತಿ ಬಲವಾಗಿ ಕೇಳಿಬಂದಿತ್ತು?

ಅದು ಅನವಶ್ಯಕವಾದ ಊಹಾಪೋಹ. ನಾನು ಈಗಿನ ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಅಥವಾ ಬೇರಾವುದೇ ಕ್ಷೇತ್ರಕ್ಕೆ ವಲಸೆ ಬರುವ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಒಂದು ಪಕ್ಷ ಗೆಲ್ಲುವ ಕ್ಷೇತ್ರ ಎಂದ ಮೇಲೆ ಹಲವು ರೀತಿಯ ವದಂತಿಗಳು ಹಬ್ಬುವುದು ಸಹಜ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಎಲ್ಲ ಹಾಲಿ ಸಂಸದರಿಗೂ ಟಿಕೆಟ್ ಕೊಡುವುದಾಗಿ ಮುಂಚಿತವಾಗಿಯೇ ಹೇಳಿಕೆ ನೀಡಿದ್ದರ ಹಿಂದೆ ನಿಮಗೆ ಟಿಕೆಟ್ ತಪ್ಪಬಾರದು ಎಂಬ ಉದ್ದೇಶ ಅಡಗಿತ್ತಂತೆ?

ಎಲ್ಲ ಸಂಸದರಿಗೂ ಟಿಕೆಟ್ ನೀಡಬೇಕು ಎಂಬ ವರಿಷ್ಠರ ನಿಲುವು ಯಡಿಯೂರಪ್ಪ ಅವರಿಗೆ ಗೊತ್ತಿದ್ದಿರಬೇಕು. ಅವರು ಪಕ್ಷದ ರಾಜ್ಯಾಧ್ಯಕ್ಷರು. ಯಾರದೋ ಒಬ್ಬರ ವೈಯಕ್ತಿಕ ಕಾರಣಕ್ಕಾಗಿ ಆ ರೀತಿ ಹೇಳಿಕೆ ನೀಡಿಲ್ಲ. 

ನಿಮಗೆ ಮತ್ತೊಮ್ಮೆ ಟಿಕೆಟ್ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ರಾಜ್ಯ ನಾಯಕರು ವರಿಷ್ಠರ ಬಳಿಯೂ ಪ್ರಸ್ತಾಪಿಸಿದ್ದರಂತೆ?

ನನಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಮ್ಮ ಕೇಂದ್ರ ನಾಯಕರ ಬಳಿ ಪ್ರತಿಯೊಂದು ಕ್ಷೇತ್ರ ಮತ್ತು ಅದರ ಸದಸ್ಯರು ಅಥವಾ ಆಕಾಂಕ್ಷಿಗಳ ಬಗ್ಗೆ ವರದಿ ಇರುತ್ತದೆ. ಅದರ ಆಧಾರದ ಮೇಲೆಯೇ ಟಿಕೆಟ್ ನೀಡಲಾಗುತ್ತದೆ. 

ಕಳೆದ ಐದು ವರ್ಷಗಳ ಹಿಂದೆ ಮೋದಿ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದ ‘ಅಚ್ಛೇ ದಿನ್’ ಬಂದೇ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ? 

ವಿದೇಶದಲ್ಲಿ ಗೌರವ ಸಿಗುವಂಥದ್ದು, ಭಾರತದ ಸೈನಿಕರಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಸ್ವಾವಲಂಬನೆ ಮಾಡುವಂಥದ್ದು, ಬಡಜನರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದು, ಬಡಜನರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜರೆ ಜಾರಿಗೆ ತರುವಂಥದ್ದು ಅಚ್ಛೇ ದಿನ್ ಅಲ್ಲವೇ? ಭಾರತ ಭಿಕ್ಷುಕ ದೇಶ ಅಲ್ಲ, ಒಂದು ಪ್ರಬಲ ದೇಶ ಎಂಬುದನ್ನು ಜಗತ್ತಿಗೆ ತೋರಿಸಿದ್ದು ಪ್ರಧಾನಿ ಮೋದಿ. ಇದೆಲ್ಲವೂ ಅಚ್ಛೇ ದಿನ್. ಇದು ಪ್ರತಿಪಕ್ಷಗಳ ಮುಖಂಡರಿಗೆ ಅರ್ಥವಾಗುವುದಿಲ್ಲ ಬಿಡಿ.

ರಾಜ್ಯದ ಬಿಜೆಪಿ ಸಂಸದರ ಪೈಕಿ ಅನೇಕರ ಕಾರ್ಯವೈಖರಿ ಬಗ್ಗೆ ಅಪಸ್ವರ ಇದ್ದರೂ ಮೋದಿ ಅಲೆಯಲ್ಲಿ ಗೆಲುವಿನ ದಡ ಸೇರುವ ವಿಶ್ವಾಸದಲ್ಲಿದ್ದಾರಂತೆ?

ನಾವು ಕಳೆದ ಐದು ವರ್ಷಗಳ ಹಿಂದೆ ಗುಜರಾತಿನ ಯಶೋಗಾಥೆಯನ್ನು ಜನರು ಕೇಳಿದ್ದರು. ಅದನ್ನು ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ದೇಶಾದ್ಯಂತ ಅನೇಕ ಅಭಿವೃದ್ಧಿ ಕೆಲಸಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ಯಾವುದೇ ರಾಜ್ಯದಲ್ಲೂ ಪಕ್ಷಬೇಧ ಮಾಡಿಲ್ಲ. ಎಲ್ಲ ರಾಜ್ಯಗಳಿಗೂ ಸಮಾನಾವಾಗಿ ಸಂಪನ್ಮೂಲದ ಹಂಚಿಕೆ ಮಾಡಿದ್ದಾರೆ. ಮೋದಿ ಅವರೊಬ್ಬ ಗಂಡು ಮಗ ಎಂದು ಹಳ್ಳಿ ಜನರೂ ಹೇಳುತ್ತಾರೆ. ಹೀಗಾಗಿ, ಮೋದಿ ಅವರ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಅವರವರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಸದರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಉದಾಹರಣೆಗೆ ನನ್ನ ಕ್ಷೇತ್ರವನ್ನೇ ತೆಗೆದುಕೊಳ್ಳುವುದಾದರೆ ರಾಷ್ಟ್ರೀಯ ಹೆದ್ದಾರಿಗಳು, ರೇಲ್ವೆ ಯೋಜನೆಗಳು, ಶೌಚಾಲಯಗಳು, ಉಚಿತ ಗ್ಯಾಸ್, ವಿದ್ಯುದೀಕರಣ ಮೊದಲಾದ ಅನೇಕ ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದೇನೆ. ನನ್ನಂತೆ ಇತರ ಬಿಜೆಪಿ ಸಂಸದರು ಮಾಡಿದ್ದಾರೆ.

ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದರು ಎರಡನೇ ಬಾರಿ ಲೋಕಸಭೆಗೆ ಪ್ರವೇಶಿಸುತ್ತಿದ್ದೀರಿ? ಹಿಂದಿನ ಭರವಸೆಗಳನ್ನೇ ಈಡೇರಿಸಿಲ್ಲ ಎಂಬ ಆರೋಪವಿದೆ?

ಕಳೆದ ಬಾರಿ ಮೋದಿ ಅವರು ದೇಶದ ಪ್ರಧಾನಿಯಾಗಬೇಕು ಎಂಬ ಭಾವನೆಯಿಂದ ಚುನಾವಣೆ ಎದುರಿಸಿದ್ದೆವು. ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ, ಜನಸಾಮಾನ್ಯರಿಗೆ ತಲುಪುವ ಅಭಿವೃದ್ಧಿ ಕೆಲಸ, ದೇಶದ ಗಡಿಯ ರಕ್ಷಣೆ ಮತ್ತು ಸೈನಿಕರಿಗೆ ಗೌರವ ಕೊಡುವಂತೆ ಮಾಡುತ್ತೇವೆ ಎಂಬ ಹಲವು ಭರವಸೆಗಳನ್ನು ಮೋದಿ ಅವರು ನೀಡಿದ್ದರು.  ಅವುಗಳನ್ನು ಈಡೇರಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ. ಅದನ್ನು ಮುಂದುವರೆಸಿಕೊಂಡು ಇನ್ನಷ್ಟು ಅಭಿವೃದ್ಧಿ ಕೆಲಸ ಹಮ್ಮಿಕೊಳ್ಳುವುದಕ್ಕಾಗಿ ಮತ ನೀಡುವಂತೆ ಕೇಳುತ್ತೇವೆ.

ನೀವು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕುರಿತ ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದೀರಿ. ಅದರಲ್ಲಿನ ಅಭಿವೃದ್ಧಿ ಕೆಲಸ ಮತ್ತು ಅಂಕಿ ಅಂಶಗಳ ಬಗ್ಗೆ ನಿಮ್ಮ ವಿರೋಧಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ?

ಅಭಿವೃದ್ಧಿ ಕೆಲಸಗಳು ಆಗಿರುವ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೇನೆ. ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ. ಪ್ರಸ್ತಾಪಿತ ಯೋಜನೆಗಳ ಬಗ್ಗೆಯೂ ಉಲ್ಲೇಖಿಸಿಲ್ಲ. ಹಾಗೆ ಮಾಡಿದ್ದರೆ ಸುಮಾರು 25 ಸಾವಿರ ಕೋಟಿ ರು.ಗಳಷ್ಟು ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾಪಿಸಬಹುದಿತ್ತು. ಏನು ಕೆಲಸಗಳಾಗಿವೆಯೊ ಅದನ್ನು ನಮೂದಿಸಿದ್ದೇನೆ.

ನಿಮ್ಮ ಪಕ್ಷಕ್ಕೆ ವಲಸೆ ಬಂದಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಕಡೆಗಣಿಸಿದ್ದೀರಂತೆ? ಇದೀಗ ಮತ್ತೊಮ್ಮೆ ನಿಮಗೇ ಟಿಕೆಟ್ ಘೋಷಿಸಿದ್ದರಿಂದ ಆಕಾಂಕ್ಷಿಯಾಗಿದ್ದ ಅವರು ಬೇಸರಗೊಂಡಿದ್ದಾರಂತೆ?

ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಅನೇಕ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರನ್ನು ಕಡೆಗಣಿಸುವ ಅಥವಾ ಬೇಸರಪಟ್ಟುಕೊಳ್ಳುವ ಮಾತೇ ಇಲ್ಲ. ತಮಗೆ ಟಿಕೆಟ್ ಕೊಟ್ಟರೂ ಕೊಡದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಮಾತನ್ನು ಇತ್ತೀಚೆಗೆ ಅವರೇ ಹೇಳಿದ್ದರು. ಈಗ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿಸಿದೆ. ನಮಗೆಲ್ಲರಿಗೂ ಅವರ ಬಗ್ಗೆ ಅಪಾರ ಗೌರವವಿದೆ.

ನೀವು ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಕರೆತರುವ ಪ್ರಯತ್ನ ಮಾಡಿದ್ದೀರಾ?

ನಾನು ಪ್ರಯತ್ನ ಮಾಡಿದ್ದೇನೆ. ಆದರೆ, ಅವರ ಭೇಟಿ ಮಾಡಲು ಸಾಧ್ಯವಾಗಿಲ್ಲ. ಅವರು ಬೇರೆಡೆ ಇದ್ದಾರೆ. ಊರಿಗೆ ಬಂದ ಕೂಡಲೇ ಭೇಟಿ ಮಾಡಿ ಪ್ರಚಾರಕ್ಕೆ ಆಹ್ವಾನಿಸುತ್ತೇನೆ. 

 ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಮ್ಮ ವಿರುದ್ಧ ಮಾಜಿ ಸಚಿವ ಪ್ರಮೋದ್ ಮಹಾಜನ್ ಕಣಕ್ಕಿಳಿದಿರುವುದು ಆತಂಕ ಉಂಟು ಮಾಡಿದೆಯೇ?

ಅದು ಅವರ ವೈಯಕ್ತಿಕ ನಿರ್ಧಾರ. ನಮ್ಮ ಎದುರಾಳಿಯನ್ನು ನಾನು ಸಮರ್ಥವಾಗಿಯೇ ಎದುರಿಸುತ್ತೇನೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಸಾಧನೆಗಳೇನೂ ಇಲ್ಲ. ಹೀಗಾಗಿ, ನಾವು ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ರಾಜಕಾರಣದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ?

ಅದು ಅವರ ಪಕ್ಷದ ನಿರ್ಧಾರ. ಅಂತಿಮವಾಗಿ ಅದಕ್ಕೆ ಜನರು ತೀರ್ಮಾನ ಕೊಡುತ್ತಾರೆ. ಎಷ್ಟು ದಿನಗಳ ಕಾಲ ಕುಟುಂಬ ರಾಜಕಾರಣ ಸಹಿಸಿಕೊಳ್ಳಬೇಕು? ಎಷ್ಟು ದಿನ ಮುಂದುವರೆಸಬೇಕು? ಯಾವಾಗ ನಿಲ್ಲಿಸಬೇಕು ಎಂಬುದನ್ನು ಜನರು ನಿರ್ಧಾರ ಕೈಗೊಳ್ಳುತ್ತಾರೆ.


ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನಿಮಗೆ ಪರಿಸ್ಥಿತಿ ಅಷ್ಟು ಅನುಕೂಲಕರವಾಗಿಲ್ಲ ಎಂಬ ಮಾತು ಕೇಳಿಬಂದಿದ್ದು ಯಾಕೆ?

ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ನೀಡಿದ ಜವಾಬ್ದಾರಿ ಹಿನ್ನೆಲೆ ನಾನು ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಹೆಚ್ಚು ಪ್ರವಾಸ ಕೈಗೊಳ್ಳಬೇಕಾಯಿತು. ಕೇಂದ್ರ ಕಚೇರಿಯಲ್ಲೂ ಹೊಣೆಗಾರಿಕೆ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಕೆಲವರು ಅನಗತ್ಯವಾಗಿ ಗೊಂದಲ ಮೂಡಿಸಲು ಯತ್ನಿಸಿದರು. ಯಾರಿಗೆ ಸ್ಪರ್ಧೆ ಮಾಡಬೇಕು ಎಂಬ ಅಪೇಕ್ಷೆ ಇತ್ತೊ ಅಂಥವರು ಅಪಪ್ರಚಾರ ಮಾಡಿದರು. ಕೇಂದ್ರದಿಂದ ಬರುವ ಎಲ್ಲ ಅಭಿವೃದ್ಧಿ ಯೋಜನೆಗಳ ಪೈಕಿ ಹಿಂದಿನ ಸಂಸದರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ. ಆದರೂ ಅಪಪ್ರಚಾರ ಮಾಡಲಾಯಿತು. ಆದರೆ, ಅಭಿವೃದ್ಧಿ ಕೆಲಸದಲ್ಲಿ ನನ್ನ ಕ್ಷೇತ್ರ ಯಾವತ್ತೂ ಹಿಂದೆ ಬೀಳಲಿಲ್ಲ. ಲೋಕಸಭೆಯ ಕಲಾಪದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ. ಧ್ವನಿ ಎತ್ತಿದ್ದೇನೆ.

ಸಂದರ್ಶನ :  ವಿಜಯ್ ಮಲಗಿಹಾಳ

Follow Us:
Download App:
  • android
  • ios