Asianet Suvarna News Asianet Suvarna News

ಯಡಿಯೂರಪ್ಪ - ಈಶ್ವರಪ್ಪ ಬಗ್ಗೆ ಎಸ್.ಎಂ.ಕೃಷ್ಣ ಹೇಳಿದ್ದೇನು?

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಎಸ್ . ಎಂ ಕೃಷ್ಣ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮಾತನಾಡಿದ್ದಾರೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಪರ ಪ್ರಚಾರ ಮಾಡಿದ್ದಾರೆ. 

Loksabha Elections 2019 SM Krishna Praises Yeddyurappa Eshwarappa
Author
Bengaluru, First Published Apr 21, 2019, 10:16 AM IST

ಶಿವಮೊಗ್ಗ :  ಶಿವಮೊಗ್ಗದಲ್ಲಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೆ.ಎಸ್‌. ಈಶ್ವರಪ್ಪ ಇಬ್ಬರು ಜೊಡೆತ್ತುಗಳಾಗಿ ಕೆಲಸಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ನಗರದಲ್ಲಿ ಶನಿವಾರ ರಾಯಲ್‌ ಆರ್ಕಿಡ್‌ನಲ್ಲಿ ಆಯೋಜಿಸಿದ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೆ.ಎಸ್‌. ಈಶ್ವರಪ್ಪ ಇಬ್ಬರು ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಕೆಲಸಮಾಡಿಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ ಎಂದರು.

ಜನಪ್ರತಿನಿಧಿಗಳು ಸಾಮಾನ್ಯ ಜನರಿಗೆ ಸುಲಭವಾಗಿ ಸಿಗಬೇಕು. ಆಗ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತವೆ. ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದ್ದಾರೆ. ರಾಘವೇಂದ್ರ ಬೆಳೆಯುತ್ತಿರುವ ರಾಜಕಾರಣಿ. ಅವರಿಗೆ ನಿಮ್ಮ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತೊಡಗಿದ್ದು ವಿಶ್ವಮಟ್ಟದಲ್ಲಿ ದೇಶಕ್ಕೆ ಪ್ರತಿಷ್ಠೆ ತಂದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಲ್ಲಿ ನಿಷ್ಕಳಂಕ ಆಡಳಿತ ನೀಡಿದ್ದಾರೆ. ಅದು ಈ ದೇಶದ ಜನರ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಅಲ್ಲದೆ ಕೇಂದ್ರ ಸಂಪುಟದಲ್ಲಿ ಯಾವ ಸಚಿವರ ಮೇಲೂ ಸಹ ಭ್ರಷ್ಟಾಚಾರದ ಆರೋಪ ಇಲ್ಲ. ಆದರೆ ವಿರೋಧ ಪಕ್ಷಗಳು ವ್ಯಕ್ತಿ ದ್ವೇಷದ ಮೇಲೆ ಆಧಾರ ಇಲ್ಲದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಯುದ್ಧದಲ್ಲಿ ಸತ್ತವರ ಲೆಕ್ಕ ಕೇಳುತ್ತಾರೆ. ಕಾಂಗ್ರೆಸ್‌ ನಾಯಕತ್ವ ಹೆಣಗಳನ್ನು ಎಣಿಸುವ ಕೆಲಸಕ್ಕೆ ನಿರತವಾಗಿದೆ. ಪ್ರಬುದ್ಧ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಕೆಲಸ ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಶಕ್ತಿಶಾಲಿ ವಿರೋಧ ಪಕ್ಷ ಇರಬೇಕು. ಆದರೆ ಅಪ್ರಬುದ್ಧ ಜನರು ವಿರೋಧಪಕ್ಷದಲ್ಲಿ ಇದ್ದಾಗ ಈ ರೀತಿ ಆಗುತ್ತದೆ ಎಂದರು.

ಮೋದಿ ಒಬ್ಬ ತಪಸ್ವಿ. ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ದೇಶದ ಬಗ್ಗೆ ಚಿಂತಿಸುತ್ತಾರೆ. ಅವರಿಗೆ ಬೇರೆ ಯಾವುದೇ ಕೆಟ್ಟಹವ್ಯಾಸಗಳಿಲ್ಲ. ದೇಶದ ಬಗ್ಗೆ ಚಿಂತಿಸಿ, ದೇಶದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುವುದೇ ಅವರ ಹವ್ಯಾಸ. ಯೋಗದಿಂದ ಅದು ಅವರಿಗೆ ಸಾಧ್ಯವಾಗಿದೆ ಎಂದ ಅವರು, ದೇಶದ 130 ಕೋಟಿ ಜನರೆ ಮೋದಿ ಅವರ ಪರಿವಾರ. ಅವರ ಉದಾತ ಚಿಂತನೆಯ ಹಿಂದೆ ತತ್ವ ಮತ್ತು ಸತ್ಯ ಹಡಗಿದೆ. ಕಾಂಗ್ರೆಸ್‌ ನಾಯಕ ಜನಾರ್ಧನ ಪೂಜಾರಿ ಕೂಡ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಪುಲ್ವಾಮ ದಾಳಿಯ ನಂತರ ಸರ್ಜಿಕಲ್‌ ಸ್ಟ್ರೈಕ್ ಮಾಡಿದಾಗ ಇಡೀ ಪ್ರಪಂಚದ ಯಾವೊಂದು ದೇಶಕೂಡ ಮೋದಿಯ ಬಗ್ಗೆ ಅಪಸ್ವರ ಎತ್ತಿಲ್ಲ. ವಿದ್ವಂಸಕ ಪ್ರಚೋದಕ ರಾಷ್ಟ್ರ ಪಾಕಿಸ್ತಾನ ದಿವಾಳಿಯ ಹಂಚಿನಲ್ಲಿದೆ. ಆದರೆ ಭಾರತ ದೇಶದ 6ನೇ ಅಭಿವೃದ್ಧಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಹಾಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಈ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌. ಈಶ್ವರಪ್ಪ, ಅರಗಜ್ಞಾನೇಂದ್ರ, ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಪ್ರಮುಖರಾದ ವಿಜೇಂದ್ರ, ಡಿ.ಎಸ್‌.ಅರುಣ್‌, ಮಂಜುಳಾ, ಮದನ್‌, ದತ್ತಾತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios