Asianet Suvarna News Asianet Suvarna News

ಕೈ- ಜೆಡಿಎಸ್ ಮೈತ್ರಿ ಕೈ ತಪ್ಪಲಿವೆಯಾ 6 ಕ್ಷೇತ್ರಗಳು ?

ರಾಜ್ಯದಲ್ಲಿ ಲೋಕಸಭಾ ಮಹಾ ಸಮರದ ಒಂದು ಹಂತದ ಚುನಾವಣೆ ಮುಕ್ತಾಯವಾಗಿದ್ದು ಇನ್ನೊಂದು ಹಂತದ ಚುನಾವಣೆಗೆ ರಾಜ್ಯ ಸಜ್ಜಾಗಿದೆ. ಇದೇ ವೇಳೆ ಮೊದಲ ಹಂತದ 6 ಕ್ಷೇತ್ರಗಳಲ್ಲಿ ಮೈತ್ರಿ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. 

Loksabha Elections 2019 JDS Congress Alliance May Loss 6 Constituency in Karnataka
Author
Bengaluru, First Published Apr 20, 2019, 7:43 AM IST

ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ‘ಜಾತ್ಯತೀತ ಮತ’ ಹರಿದು ಹಂಚಿಹೋಗಬಾರದು ಎಂಬ ಉದ್ದೇಶ ಇರಿಸಿಕೊಂಡು ಕಾಂಗ್ರೆಸ್‌-ಜೆಡಿಎಸ್‌ ಮಾಡಿಕೊಂಡ ಮೈತ್ರಿ ಕೆಲಸ ಮಾಡಿದೆಯೇ ಅಥವಾ ಮೈತ್ರಿ ಭಂಗವಾಗಿದೆಯೇ?

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಬೂತ್‌ ಮಟ್ಟದ ಲೆಕ್ಕಾಚಾರ ಹಾಗೂ ಮತದಾನದ ನಡೆದ ದಿನ ಹಾಗೂ ಅದರ ಹಿಂದಿನ ಎರಡು ದಿನಗಳಲ್ಲಿ ತಳಮಟ್ಟದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ವರ್ತಿಸಿದ ರೀತಿಯನ್ನು ಆಧರಿಸಿ ಕಾಂಗ್ರೆಸ್‌ ನಾಯಕತ್ವ ಹಾಕಿರುವ ಲೆಕ್ಕಾಚಾರದ ಪ್ರಕಾರ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ, ಉಳಿದ ಕಡೆಗಳಲ್ಲಿ ತಳಹಂತದಲ್ಲಿ ಮೈತ್ರಿ ಭಂಗವಾಗಿದೆ.

ಹೌದು, ಎರಡು ಪಕ್ಷಗಳ ರಾಜ್ಯ ಮಟ್ಟದ ನಾಯಕರು ಸತತ ಮನವಿ, ಕಟ್ಟು ನಿಟ್ಟಿನ ಕ್ರಮದ ಎಚ್ಚರಿಕೆ ಹಾಗೂ ಒಗ್ಗೂಡಿ ಪ್ರಚಾರ ನಡೆಸಿದ್ದರ ಹೊರತಾಗಿಯೂ ತಳ ಮಟ್ಟದಲ್ಲಿ ಅದರಲ್ಲೂ ಕೆಳ ಹಂತದ ನಾಯಕತ್ವ ತಮ್ಮ ಸಾಂಪ್ರದಾಯಿಕ ವಿರೋಧಿಗಳ ವಿರುದ್ಧವೇ ಕೆಲಸ ಮಾಡಿದ್ದಾರೆ. ಇದರಿಂದಾಗಿ ಮೈತ್ರಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಇಲ್ಲಿ ಯಶಸ್ವಿ: ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಮೈತ್ರಿ ಉತ್ತಮವಾಗಿ ಕೆಲಸ ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿರುವ ಈ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ನಾಯಕರಿಂದ ಉತ್ತಮ ಸಹಕಾರ ದೊರಕಿದೆ. ಅದರಲ್ಲಂತೂ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ.

ಎಲ್ಲಿ ಮೈತ್ರಿಭಂಗ, ಒಳ ಏಟು?:

ಆದರೆ, ಇದೇ ಮಾತು ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದ ವಿಷಯದಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಈ ಕ್ಷೇತ್ರಗಳಲ್ಲಿ ಮೈತ್ರಿ ಭಂಗವಾಗಿರುವುದು ಮಾತ್ರವಲ್ಲ, ಒಳಏಟು ಕೂಡಾ ಜೋರಾಗಿಯೇ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ವಿಶೇಷವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದ ಮಂಡ್ಯದಲ್ಲಿ ಮೈತ್ರಿ ಭಂಗ ಸ್ಪಷ್ಟವಾಗಿ ಕಂಡು ಬಂದಿದೆ. ಕಾಂಗ್ರೆಸ್‌ ನಾಯಕತ್ವದ ಸತತ ಎಚ್ಚರಿಕೆಯ ನಡುವೆಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಯಾರಿಗೂ ಸಂಶಯವಿಲ್ಲವಾಗಿದೆ. ವಿಶೇಷವಾಗಿ ನಾಗಮಂಗಲ, ಶ್ರೀರಂಗಪಟ್ಟಣ, ಮಳ್ಳವಳ್ಳಿ ಹಾಗೂ ಕೆ.ಆರ್‌. ಪೇಟೆಯಲ್ಲಿ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿಯೇ ಸುಮಲತಾ ಪರ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದೇ ರೀತಿಯ ನೇರ ಮೈತ್ರಿ ಭಂಗವಾಗಿರುವ ಮತ್ತೊಂದು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆಯಾದ ಮೈಸೂರಿನಲ್ಲಿ ಜೆಡಿಎಸ್‌ ನಾಯಕರು ಮೇಲು ನೋಟಕ್ಕೆ ಮೈತ್ರಿ ಪರವಾಗಿ ಕೆಲಸ ಮಾಡಿದಂತೆ ವರ್ತಿಸಿದ್ದರೂ, ಒಳ ಏಟು ಮಾತ್ರ ಭರ್ಜರಿಯಾಗಿಯೇ ನೀಡಿದ್ದಾರೆ ಎನ್ನಲಾಗುತ್ತಿದೆ. ಚಾಮುಂಡೇಶ್ವರಿ, ಟಿ. ನರಸೀಪುರ ಮತ್ತು ಕೊಡಗಿನಂತಹ ಪ್ರದೇಶಗಳಲ್ಲಿ ಒಳ ಏಟು ಭರ್ಜರಿಯಾಗಿಯೇ ಬಿದ್ದಿದೆ. ಚಾಮರಾಜನಗರದಲ್ಲೂ ಇಂತಹುದೇ ಪರಿಣಾಮ ಉಂಟಾಗಿದೆ. ಈ ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣ ಹಾಗೂ ಹುಣಸೂರು ಕ್ಷೇತ್ರಗಳ ಸ್ಥಳೀಯ ನಾಯಕರು ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಅಭ್ಯರ್ಥಿಯಾಗಿರುವ ತುಮಕೂರಿನಲ್ಲೂ ಕಾಂಗ್ರೆಸ್‌ ಸ್ಥಳೀಯ ನಾಯಕರು ಒಳಏಟು ನೀಡಿರುವುದು ಸ್ಪಷ್ಟವಿದೆ. ಹೀಗಾಗಿಯೇ ಕಾಂಗ್ರೆಸ್‌ ಮಧುಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಬ್ಬರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಉಚ್ಚಾಟನೆ ಮಾಡಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಮಧುಗಿರಿ ಹಾಗೂ ತಿಪಟೂರು ವಿಭಾಗಗಳಲ್ಲಿ ಕಾಂಗ್ರೆಸ್‌ ನಾಯಕತ್ವ ಜೆಡಿಎಸ್‌ಗೆ ಕೈ ಕೊಟ್ಟಿರುವ ಲಕ್ಷಣಗಳಿವೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿಯೂ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಕಣದಲ್ಲಿದ್ದು, ಈ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಸ್ಥಳೀಯ ನಾಯಕರು ಒಳ ಏಟು ನೀಡಿದ್ದಾರೆ ಎನ್ನಲಾಗುತ್ತಿದೆ. ಕೋಲಾರ ಕ್ಷೇತ್ರದಲ್ಲಿ ಚಿಂತಾಮಣಿ ಹಾಗೂ ಕೋಲಾರದಲ್ಲಿ ಒಳ ಏಟು ಬಿದ್ದಿದ್ದರೆ, ಚಿಕ್ಕಬಳ್ಳಾಪುರದಲ್ಲಿ ದೇವನಹಳ್ಳಿ, ನೆಲಮಂಗಲ ಹಾಗೂ ಖುದ್ದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ ಏಟು ಬಿದ್ದಿದೆ ಎನ್ನಲಾಗುತ್ತಿದೆ.

4 ಕ್ಷೇತ್ರದಲ್ಲಿ ಯಶಸ್ವಿ?

ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ ಪ್ರಕಾರ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಮೈತ್ರಿ ಯಶಸ್ವಿ. ಎರಡೂ ಪಕ್ಷಗಳ ಕಾರ್ಯಕರ್ತರಿಂದ ಹೆಗಲಿಗೆ ಹೆಗಲು ಕೊಟ್ಟು ಕೆಲಸ. ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಉತ್ತಮ ಸಹಕಾರ.

6 ಕ್ಷೇತ್ರಗಳಲ್ಲಿ ಒಳೇಟು?

ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧಿಸಿರುವ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಅಷ್ಟಾಗಿ ಸಹಕರಿಸಿಲ್ಲ. ಅದೇ ರೀತಿ, ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿದಿರುವ ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಹಕರಿಸಿಲ್ಲ.

Follow Us:
Download App:
  • android
  • ios