Asianet Suvarna News Asianet Suvarna News

ಬೆಂ. ಉತ್ತರದಲ್ಲಿ ಮೋದಿ ವರ್ಚಸ್ಸು ವರ್ಸಸ್ ದೋಸ್ತಿ ಹುಮ್ಮಸ್ಸು

ಕೇಂದ್ರ- ರಾಜ್ಯ ಸಚಿವರ ನಡುವೆ ಗೆಲುವಿಗಾಗಿ ಭರ್ಜರಿ ಕಾದಾಟ | ಒಕ್ಕಲಿಗರು, ವಲಸಿಗರ ಮತಗಳೇ ನಿರ್ಣಾಯಕ ಸಚಿವ ಸ್ಥಾದಾಸೆಗೆ ಬೈರೇಗೌಡ ಪರ ದೋಸ್ತಿ ಶಾಸಕರ ಶಕ್ತಿ ಮೀರಿ ಕೆಲಸ | ಪ್ರಧಾನಿ ಮೋದಿ ಹೆಸರೇ ಡಿವಿಎಸ್‌ಗೆ ಶ್ರೀರಕ್ಷೆ

Loksabha Elections 2019 DV Sadananda Gowda VS Krishna Byre Gowda bangalore
Author
Bangalore, First Published Apr 12, 2019, 4:04 PM IST

ವಿಜಯ್ ಮಲಗಿಹಾಳ, ಕನ್ನಡಪ್ರಭ

ಬೆಂಗಳೂರು[ಏ.12]: ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದಿರುವ ಬಿಜೆಪಿ, ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೆ ‘ಮೋದಿ ಅಲೆ’ಯನ್ನೇ ನೆಚ್ಚಿಕೊಂಡಿದೆ. ಕೇಂದ್ರದ ಸಚಿವರೂ ಆಗಿರುವ ಬಿಜೆಪಿಯ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಮತ್ತು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ ಅವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಇನ್ನುಳಿದ ಸಣ್ಣ ಪುಟ್ಟ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಹೆಸರಿಗಷ್ಟೇ ಕಣದಲ್ಲಿದ್ದಾ

ದೇವೇಗೌಡ ಬದಲು ಬೈರೇಗೌಡ ಸ್ಪರ್ಧೆ

ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ನಡುವಿನ ಸ್ಥಾನ ಹೊಂದಾಣಿಕೆ ಅನುಸಾರ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಬೆಂಬಲಿಸಿದೆ. ಒಂದು ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಇಲ್ಲಿ ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿದ್ದಲ್ಲಿ ಬಿಜೆಪಿಯ ಸದಾನಂದಗೌಡರು ಗೆಲ್ಲುವುದು ತೀರಾ ಕಷ್ಟ ಎಂಬ ಮಾತನ್ನೇ ಹೇಳಬೇಕಾಗುತ್ತಿತ್ತು. ಆದರೆ, ಅವರ ಬದಲು ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡರು ಭ್ಯರ್ಥಿಯಾಗಿದ್ದಾರೆ . ಹಾಗಂತ ಸದಾನಂದಗೌಡರ ಹಾದಿ ಸುಗಮವಾಗಿದೆ ಎಂದರ್ಥವಲ್ಲ. ದೇವೇಗೌಡರು ಕಣಕ್ಕಿಳಿದಿದ್ದರೆ ಎದುರಿಸಬೇಕಾದಷ್ಟು ದುರ್ಗಮವಾಗಿಲ್ಲ.

ಹಾಗೆ ನೋಡಿದರೆ ಕೃಷ್ಣ ಬೈರೇಗೌಡರನ್ನು ಕಣಕ್ಕಿಳಿಸುವಲ್ಲಿ ದೇವೇಗೌಡರ ಪಾತ್ರವೂ ಮಹತ್ವದ್ದು. ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದಲೇ ಹಂಚಿಕೆ ವೇಳೆ ತಮ್ಮ ಪಾಲಿಗೆ ಬಂದಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ಕೃಷ್ಣ ಬೈರೇಗೌಡರನ್ನೇ ಅಭ್ಯರ್ಥಿಯನ್ನಾಗಿಸುವಲ್ಲಿ ಮನ ವೊಲಿಸಿ ಯಶಸ್ವಿಯಾದರು. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬಲ ಕಾಣುತ್ತಿರುವುದು ಬೆಂಗಳೂರು ಉತ್ತರದಲ್ಲಿಯೇ ಎನ್ನುವುದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳೇ ಸದಾನಂದಗೌ ಡರಿಗೆ ಇರುವ ಅಸ್ತ್ರಗಳಾದರೆ, ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಕ್ಷೇತ್ರದ ವ್ಯಾಪ್ತಿಯಲ್ಲಿನ ಎಂಟು ಶಾಸಕರ ಪೈಕಿ ಏಳು ಮಂದಿ ಮಿತ್ರ ಪಕ್ಷಗಳಿಗೆ ಸೇರಿದವರು ಎಂಬುದು ಕೃಷ್ಣ ಬೈರೇಗೌಡರ ಬಳಿಯಿರುವ ಪ್ರತ್ಯಸ್ತ್ರಗಳು. ಈ ಅಸ್ತ್ರ ಹಾಗೂ ಪ್ರತ್ಯಸ್ತ್ರಗಳು ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆಯೇ ಗೆಲುವು ನಿರ್ಧಾರವಾಗಲಿದೆ.

ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು

ರಾಜ್ಯದ ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಅಷ್ಟಾಗಿ ಕೆಲಸ ಮಾಡದಿದ್ದರೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾತ್ರ ಸುಗಮವಾಗಿ ಅನುಷ್ಠಾನಗೊಂಡಿರು ವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕಡೆ ಕ್ಷಣದಲ್ಲಿ ಅದೂ ತೀವ್ರ ಒತ್ತಾಯದ ನಂತರ ಒಲ್ಲದ ಮನಸ್ಸಿನಲ್ಲೇ ಅಭ್ಯರ್ಥಿಯಾದರೂ ಕೃಷ್ಣ ಬೈರೇಗೌಡ ಅವರು ಕ್ಷೇತ್ರದಲ್ಲಿ ಪಾದರಸದಂತೆ ಸಂಚರಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯ ಪ್ರಮುಖ ಅಸ್ತ್ರವಾದ ಯುವ ಜನಾಂಗವನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಖುದ್ದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೇ ಕೃಷ್ಣ ಬೈರೇಗೌಡ ಪರ ಕೆಲಸ ಮಾಡುವಂತೆ ಜೆಡಿಎಸ್ ನಾಯಕರಿಗೆ ಸೂಚನೆ ನೀಡಿದ್ದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ಶಕ್ತಿ ಮೀರಿ ಶ್ರಮಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಂತ್ರಿಯಾಸೆಗೆ ಕೃಷ್ಣ ಪರ ಶಾಸಕರ ಕೆಲಸ

ಕಾಂಗ್ರೆಸ್ ಶಾಸಕರು ಈ ಬಾರಿ ಶಕ್ತಿ ಮೀರಿ ಕೃಷ್ಣ ಬೈರೇಗೌಡರ ಪರ ಕೆಲಸ ಮಾಡಲು ಮುಂದಾಗಿರುವುದಕ್ಕೆ ಮತ್ತೊಂದು ಕಾರಣವಿದೆ. ಕೃಷ್ಣ ಬೈರೇಗೌಡರು ಹಾಲಿ ಸಚಿವರಾಗಿರುವ ಕಾರಣ ಸಂಸದರಾದರೆ ಅವರಿಂದ ತೆರವಾಗುವ ಸಚಿವ ಸ್ಥಾನವನ್ನು ಬೆಂಗಳೂರು ಉತ್ತರ ಕ್ಷೇತ್ರದ ಶಾಸಕರಿಂದಲೇ ತುಂಬುವ ಭರವಸೆಯೂ ದೊರೆತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಒಗ್ಗೂಡಿ ಬಂದ ಮತಗಳು ಬಿಜೆಪಿ ಪಡೆದ ಮತಗಳಿಗಿಂತ ನಾಲ್ಕು ಲಕ್ಷಕ್ಕೂ ಹೆಚ್ಚಿದೆ ಎನ್ನುವುದು ಗಮನಿಸಬೇಕಾದ ಅಂಶ.

ಒಕ್ಕಲಿಗರು, ವಲಸಿಗರು ಯಾರ ಪರ?

ಒಕ್ಕಲಿಗ ಸಮುದಾಯದವರು ನಿರ್ಣಾಯಕರಾಗಿದ್ದಾರೆ. ಪ್ರಮುಖ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿವದವರಾಗಿದ್ದರಿಂದ ಸಮುದಾಯದ ಮತಗಳು ವಿಭಜನೆಯಾಗುತ್ತ ವೆಯೇ ಅಥವಾ ಒಂದು ಕಡೆ ವಾಲುತ್ತವೆಯೇ ಎಂಬುದನ್ನೂ ಕಾದು ನೋಡಬೇಕಿದೆ.

ಸದಾನಂದಗೌಡರು ಅರೆಭಾಷೆ ಒಕ್ಕಲಿಗರು. ಕೃಷ್ಣ ಬೈರೇಗೌಡರು ಮರಸು ಒಕ್ಕಲಿಗರು. ಸದಾನಂದಗೌಡರು ಮಲೆ ನಾಡಿನ ಒಕ್ಕಲಿಗ ಎಂದೇ ಕಾಂಗ್ರೆಸ್ಸಿಗರು ಬಿಂಬಿಸುವ ಮೂಲಕ ಬಯಲು ನಾಡಿನ ಮರಸು ಹಾಗೂ ಗಂಗಟಕಾರ್ ಒಕ್ಕಲಿಗರನ್ನು ಕೃಷ್ಣ ಬೈರೇಗೌಡರ ಪರವಾಗಿಸುವ ಪ್ರಯತ್ನ ನಡೆಸಿ ದ್ದಾರೆ. ಆದರೆ, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದರ ಸ್ಪಷ್ಟತೆಯಿಲ್ಲ. ಒಂದು ವೇಳೆ ದೇವೇಗೌಡರೇ ಅಭ್ಯರ್ಥಿಯಾಗಿದ್ದರೆ ಸಮುದಾಯದ ಹೆಚ್ಚಿನ ಮತಗಳು ಅವರ ಪರವಾಗಿಯೇ ನಿಲ್ಲುವ ಸಾಧ್ಯತೆ ಹೆಚ್ಚಾಗಿತ್ತು. ಇನ್ನುಳಿ ದಂತೆ ಇತರೆ ಹಿಂದುಳಿದ ವರ್ಗ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರೂ ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇದು ನಗರ ಪ್ರದೇಶವನ್ನೇ ಒಳಗೊಂಡಿರುವ ಕ್ಷೇತ್ರವಾಗಿದ್ದರಿಂದ ಇಲ್ಲಿ ಜಾತಿವಾರು ಮತ ಚಲಾವಣೆ ಆಗುತ್ತದೆ ಎಂಬುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಜೊತೆಗೆ ಈ ಕ್ಷೇತ್ರದಲ್ಲಿ ರಾಜ್ಯದ ಮತ್ತು ರಾಷ್ಟ್ರದ ಇತರ ಭಾಗಗಳಿಂದ ಬಂದು ನೆಲೆಸಿರುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಿಂದ ಉದ್ಯೋಗವನ್ನರಸಿ ವಲಸೆ ಬಂದವರ ಸಂಖ್ಯೆಯೇ 3-4 ಲಕ್ಷದಷ್ಟಿದೆ ಎಂಬ ಮಾತಿದೆ. ಕಳೆದ ಚುನಾವಣೆಗಳಲ್ಲಿ ಈ ಮತಗಳು ಬಿಜೆಪಿ ಪರ ಬಂದಿದ್ದರಿಂದಲೇ ಗೆಲುವಿಗೆ ನೆರವಾಯಿತು ಎನ್ನಲಾಗುತ್ತಿದೆ

ಡಿವಿಎಸ್‌ಗೆ ಮೋದಿ ವರ್ಚಸ್ಸೇ ಅಸ್ತ್ರ

ಸದಾನಂದಗೌಡರು ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ಅನುಮಾನ ಎಂಬ ವದಂತಿ ಹಬ್ಬಿತ್ತು. ಇದರಲ್ಲಿ ಒಂದಿಷ್ಟು ಸತ್ಯಾಂಶವೂ ಇತ್ತು. ಜತೆಗೆ ಸ್ವಪಕ್ಷೀಯರ ಅಪಪ್ರಚಾರವೂ ಇತ್ತು. ಆದರೆ, ಮತ್ತೊಂದು ಹೊಸ ಕ್ಷೇತ್ರ ಲಭ್ಯವಾಗದೇ ಇರುವುದರಿಂದ ಇಲ್ಲಿಂದಲೇ ಸ್ಪರ್ಧಿಸುವುದು ಸೂಕ್ತ ಎಂಬ ನಿಲುವಿಗೆ ಬಂದು ಕೆಲಸ ಆರಂಭಿಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ ಎಂಬ ಆರೋಪ ಅವರ ವಿರೋಧಿಗಳಿಂದ ಆರಂಭದಲ್ಲಿ ಕೇಳಿ ಬಂದಿತ್ತಾದರೂ ಅವರಿಗೆ ಲಭಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿದ ಮೊದಲ ಸ್ಥಾನದಲ್ಲಿರುವ ಸಂಸದ ಎಂಬ ಅಧಿಕೃತ ದಾಖಲೆ ಅದನ್ನು ಸುಳ್ಳಾಗಿಸಿತು. ಆದರೂ ಕೇಂದ್ರ ಸಚಿವರಾಗಿ ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ ಎಂಬ ಆಪಾದನೆ ಈಗಲೂ ಗಂಭೀರವಾಗಿಯೇ ಕೇಳಿಬರುತ್ತಿದೆ. ಚುನಾವಣೆ ಘೋಷಣೆಯಾಗುವ ಮೊದಲೇ ಪ್ರಚಾರ ಆರಂಭಿಸಿರುವ ಸದಾನಂದಗೌಡರು ಇದೀಗ ಕ್ಷೇತ್ರದಾದ್ಯಂತ ಸಂಚರಿಸಿ ಮೋದಿ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದಕ್ಕಾಗಿ ಅವಕಾಶ ಕೊಡಿ ಎಂದು ಮತಯಾಚಿಸುತ್ತಿದ್ದಾರೆ.

೩೧ ಅಭ್ಯರ್ಥಿಗಳು ಬಿಜೆಪಿಯಿಂದ ಹಾಲಿ ಸಂಸದ ಡಿ.ವಿ.ಸದಾನಂದಗೌಡ, ಕಾಂಗ್ರೆಸ್‌ನಿಂದ ಕೃಷ್ಣ ಬೈರೇಗೌಡ, ಉತ್ತಮ ಪ್ರಜಾಕೀಯ ಪಕ್ಷದಿಂದ ಸಂತೋಷ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಅಬ್ದುಲ್ ಅಜೀಜ್ ಸೇರಿದಂತೆ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮತದಾರರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ರಾಜ್ಯದಲ್ಲೇ ಅತಿಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಒಟ್ಟು 28 ಕ್ಷೇತ್ರಗಳ ಪೈಕಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಟ್ಟು 28,48,705 ಮತದಾರರಿದ್ದಾರೆ. ಈ ಪೈಕಿ ಪುರುಷರು 14,81,456 ಮಹಿಳೆಯರು 13,66,753 ಹಾಗೂ ಇತರರು 496 ಮಂದಿ ಇದ್ದಾರೆ.

ಕಳೆದ ಚುನಾವಣೆ ಮತಗಳಿಕೆ

ಸದಾನಂದಗೌಡ (ಬಿಜೆಪಿ): 7,18,326

ಸಿ.ನಾರಾಯಣಸ್ವಾಮಿ (ಕಾಂಗ್ರೆಸ್): 4,88,562

ಅಬ್ದುಲ್ ಅಜೀಂ (ಜೆಡಿಎಸ್): 92,681

ಗೆಲುವಿನ ಅಂತರ: 2,29,764

ಮತದಾರರು:28,48,705| ಪುರುಷರು: 14,81456| ಮಹಿಳೆಯರು: 13,66,753| ಇತರ: 496

ಎಂ.ಅಫ್ರೋಜ್ ಖಾನ್,  ಕನ್ನಡಪ್ರಭ

ಕ್ಷೇತ್ರ ಸಮೀಕ್ಷೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ರಾಮನಗರ[ಏ.11]: ಕ್ಷೇತ್ರ ಮರು ವಿಂಗಡಣೆ ವೇಳೆ ಕನಕಪುರ ಅಸ್ತಿತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ಮೈದಳೆದ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಬೆಂಗಳೂರು ನಗರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಈ ಕ್ಷೇತ್ರ ಹಬ್ಬಿಕೊಂಡಿದೆ. ಇಲ್ಲಿನ ರಾಜಕಾರಣದ ಎರಡು ಮುಖ್ಯ ಗುಣಲಕ್ಷಣವೆಂದರೆ, ಸಮಾನ ಶತ್ರು ನಿಗ್ರಹಕ್ಕೆ ವಿರೋಧಿಗಳ ಹೊಂದಾಣಿಕೆ ಮತ್ತು ವೈಯಕ್ತಿಕ ವರ್ಚಸ್ಸು. ಈ ಜಿಲ್ಲೆಯ ಸಂಪೂರ್ಣ ರಾಜಕಾರಣ ತ್ರಿಮೂರ್ತಿಗಳ (ಎಚ್ .ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮತ್ತು ಸಿ.ಪಿ. ಯೋಗೇಶ್ವರ್) ನಡುವೆ ಗಿರಕಿ ಹೊಡೆಯುತ್ತದೆ.

ಈ ತ್ರಿಮೂರ್ತಿಗಳು ಪರಸ್ಪರ ಹೊಂದಾಣಿಕೆ ಆಧಾರ ದಲ್ಲೇ ಹಲವು ವರ್ಷಗಳಿಂದಲೂ ಯುದ್ಧ ಗೆಲ್ಲುತ್ತಾ ಬಂದಿದ್ದಾರೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಜನಜನಿತವಾಗಿದೆ. ಈ ಹಿಂದಿನ ಸಂಸತ್ ಚುನಾವಣಾ ಫಲಿತಾಂಶಗಳೂ ಇದನ್ನೇ ಹೇಳುತ್ತ

ಎಚ್‌ಡಿಕೆ, ಡಿಕೆಶಿ-ಯೋಗಿ ಅಧಿಪತ್ಯ ಕದನ

ಈ ಹಿಂದೆ ರಾಜಕೀಯ ಶತ್ರುಗಳಾಗಿದ್ದು, ಈಗ ಜೋಡೆತ್ತುಗಳು ಎಂದು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ‘ಸೈನಿಕ’ ಖ್ಯಾತಿಯ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಡುವೆ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರದ ಅಧಿಪತ್ಯಕ್ಕಾಗಿ ದೊಡ್ಡ ಹೋರಾಟ ನಡೆದಿರು ವುದು ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ಹಳೆ ರಾಜಕೀಯ ವೈರತ್ವ ಮರೆತು ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ರಾಜಕಾರಣದ ಜೋಡೆತ್ತು ಆಗಿದ್ದರೆ, ಸಿ.ಪಿ.ಯೋಗೇಶ್ವರ್ ಬಿಜೆಪಿ ಪಾಳೆಯದ ಒಂಟಿ ಸಲಗದಂತಾಗಿದ್ದಾರೆ. ೨೦೧೩ರ ಸಂಸತ್ ಉಪಚುನಾವಣೆ ಹಾಗೂ ೨೦೧೪ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಅವರಿಗೆ ಜೆಡಿಎಸ್ ಪ್ರಬಲ ಪೈಪೋಟಿಯೊಡ್ಡಿತ್ತು. ಆಗ ಡಿ.ಕೆ. ಶಿವಕುಮಾರ್ ಅವರು ಸಿ.ಪಿ.ಯೋಗೇಶ್ವರ್ ಬೆಂಬಲ ಪಡೆದೇ ಸಹೋದರನನ್ನು ಗೆಲ್ಲಿಸಿದ್ದರು. ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ರಾಜಕೀಯ ವೈಷಮ್ಯವಿದ್ದರೂ ಪರದೆಯ ಹಿಂದೆ ಒಂದಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಅವರನ್ನು ಮಣಿಸಿ ಹೆಡೆಮುರಿ ಕಟ್ಟಿದ್ದರು. ಈ ಸೋಲಿನಿಂದ ಕಂಗೆಟ್ಟಿದ್ದ ಯೋಗೇಶ್ವರ್ ಸಂಸತ್ ಚುನಾವಣೆಯಲ್ಲಿ ಇಬ್ಬರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಪ್ರಾರಂಭದಲ್ಲಿಯೇ ಬಿಜೆಪಿ ಅಭ್ಯರ್ಥಿಯಾಗಿ ಅಶ್ವತ್ಥ್ ನಾರಾಯಣಗೌಡ ಹೆಸರು ಕೇಳಿ ಬಂದಿತ್ತು. ಆದರೆ, ವೈಯಕ್ತಿಕ ಕಾರಣ ಮುಂದೊಡ್ಡಿ ಅಶ್ವತ್ಥ್ ಹಿಂದೆ ಸರಿದಿದ್ದರು. ನಂತರದಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವ ಪ್ರಯತ್ನ ನಡೆದಿದ್ದವು. ಆದರೆ, ಯೋಗೇಶ್ವರ್ ಸ್ವತಃ ಸ್ಪರ್ಧೆ ಯಿಂದ ಹಿಂದೆ ಸರಿದು, ಪುತ್ರಿ ನಿಶಾ ಪರ ಲಾಬಿ ನಡೆಸಿದ್ದರು. ಅಂತಿಮವಾಗಿ ಬಿಜೆಪಿಯು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಗೌಡ ಅವರನ್ನು ಅಖಾಡಕ್ಕೆ ಇಳಿಸಿ

8ರ ಪೈಕಿ 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು

ಕುಮಾರಸ್ವಾಮಿ ಮತ್ತು ಡಿಕೆಶಿ ಪ್ರಾಬಲ್ಯ ಹೊಂದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ‘ಕಮಲ’ ಅರಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದನ್ನು ಹೊರತುಪಡಿಸಿದರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ‘ಕಮಲ’ ಪಕ್ಷ ತನ್ನ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕನಕಪುರ, ಕುಣಿಗಲ್, ಆನೇಕಲ್, ರಾಜರಾಜೇಶ್ವರಿ ನಗರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಚನ್ನಪಟ್ಟಣ, ಮಾಗಡಿ, ರಾಮನಗರಗಳಲ್ಲಿ ಜೆಡಿಎಸ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ

ಡಿಕೆಸುಗೆ 5 ಲಕ್ಷ ಲೀಡ್ ಟಾರ್ಗೆಟ್

ಕ್ಷೇತ್ರದಲ್ಲಿ 24.59 ಲಕ್ಷ ಮತದಾರರಿದ್ದು, ಬೆಂಗಳೂರು ನಗರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರಿದವರೇ 14 ಲಕ್ಷಕ್ಕೂ ಅಧಿಕ ಮತದಾರರು ಇದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಅಲೆಯನ್ನೇ ಅಶ್ವತ್ಥ್ ನಾರಾಯಣ ಗೌಡ ನೆಚ್ಚಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಮತದಾರರನ್ನು ಪ್ರಧಾನವಾಗಿಟ್ಟುಕೊಂಡು ಅಶ್ವತ್ಥ್ ನಾರಾಯಣ ಗೌಡ ಅವರಿಗೆ ಬಿಜೆಪಿ ಕೂಡ ಮಣೆ ಹಾಕಿದೆ. ಈ ಬೆನ್ನಲ್ಲೇ ದೋಸ್ತಿ ಪಕ್ಷಗಳು ಗ್ರಾಮೀಣ ಭಾಗದಲ್ಲಿ ದೊಡ್ಡ ಅಂತರದ ಮುನ್ನಡೆ ಸಾಧಿಸಲು ರಣತಂತ್ರ ರೂಪಿಸಿವೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಮತ್ತು ಕುಣಿಗಲ್ ವಿಧಾನಸಭಾ ಕ್ಷೇತ್ರಗಳಿಂದ ಕನಿಷ್ಠ 5 ಲಕ್ಷ ಮತಗಳಷ್ಟು ದೊಡ್ಡ ಮುನ್ನಡೆ ನೀಡಬೇಕು ಎಂದು ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಕಟ್ಟಾಜ್ಞೆ ಹೊರಡಿಸಿದ್ದಾರೆ. ಭ್ರಷ್ಟಾಚಾರದ ಅಸ್ತ್ರ, ಕ್ರಿಮಿನಲ್ ಕೇಸುಗಳ ಕಂತೆ, ಅಭಿವೃದ್ಧಿ ಲೋಪ, ಸ್ಥಳೀಯರು, ವಲಸಿಗರು ಎಂಬ ಅಂಶ ಚುನಾವಣಾ ವಿಷಯವಾಗಿದೆ.

ದೋಸ್ತಿಗಳ ನಡುವೆ ಇಲ್ಲೀಗ ಕಿತ್ತಾಟ ಇಲ್ಲ

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಸಂಸದ ಡಿ.ಕೆ. ಸುರೇಶ್ ಹ್ಯಾಟ್ರಿಕ್ ಗೆಲುವಿನ ಹಾದಿಗೆ ಅಡ್ಡಿಯೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪುಲ್ವಾಮಾ ದಾಳಿ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಪ್ರತಿದಾಳಿ ನಂತರದಲ್ಲಿ ದೇಶದ ವಿವಿಧೆಡೆ ಬಿಜೆಪಿ ಪರ ಅಲೆ ಕಂಡುಬರುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೀಗಾಗಿ ಜಿದ್ದಾಜಿದ್ದಿನ ಸೆಣಸಾಟ ಎದುರಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಅಶ್ವತ್ಥ್ ನಂಬಿ ಕೂತಿದ್ದಾರೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿರುವ ಡಿ.ಕೆ. ಸುರೇಶ್ ಅವರಿಗೆ ನಾಲ್ವರು ಕಾಂಗ್ರೆಸ್ ಮತ್ತು ಮೂವರು ಜೆಡಿಎಸ್ ಶಾಸಕರೊಂದಿಗೆ ಮೈತ್ರಿ ಪಕ್ಷಕ್ಕಿರುವ ಭದ್ರನೆಲೆ, ಕಳೆದ ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸಿನ ಮತಗಳು ವರದಾನವಾಗಲಿದೆ. ಜೆಡಿಎಸ್‌ನಲ್ಲಿನ ಭಿನ್ನಮತ ಶಮನಗೊಂಡಿರುವುದು ಅನುಕೂಲಕರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ನಗರ ಮತದಾ ರರನ್ನು ಓಲೈಸಿಕೊಳ್ಳುವುದು ಸವಾಲಿನ ಪ್ರಶ್ನೆಯಾಗಿದೆ.

ಕಾಂಗ್ರೆಸ್- ಬಿಜೆಪಿ ನಡುವೆ ಹಣಾಹಣಿ

ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಜೆಡಿಎಸ್‌ಗೆ ಹೆಚ್ಚೇನು ನಷ್ಟವಾದಂತೆ ತೋರುತ್ತಿಲ್ಲ. ಏಕೆಂದರೆ ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷದ ಹಿಡಿತ ಸಡಿಲ ಗೊಳ್ಳುತ್ತಲೇ ಬಂದಿದೆ. ಕ್ಷೇತ್ರದಲ್ಲಿ ಪ್ರತಿ ಚುನಾವಣೆ ಯಲ್ಲಿಯೂ ತ್ರಿಕೋನ ಹೋರಾಟ ನಡೆಯುತ್ತಿತ್ತು. ಇದರ ಲಾಭ ಪಡೆದು, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಜಯ ಗಳಿಸುತ್ತಿದ್ದವು. ಆದರೆ, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಇದೆ.

ಒಕ್ಕಲಿಗರ ಮತ ವಿಭಜನೆ

ಸಂಭವ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ದಲಿತರು ಇದ್ದಾರೆ. ಬಳಿಕ ಲಿಂಗಾಯತರು, ಮುಸ್ಲಿಮರು, ಕುರುಬರು, ಬ್ರಾಹ್ಮಣರು, ಕ್ರಿಶ್ಚಿಯನ್ನರು ಬರುತ್ತಾರೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಮತಗಳು ವಿಭಜನೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಲಿಂಗಾಯತ ಮತಗಳನ್ನು ಬಿಜೆಪಿ ನಂಬಿಕೊಂಡಿದ್ದರೆ, ಜೆಡಿಎಸ್ ಪಕ್ಷವು ಕಾಂಗ್ರೆಸ್ ಜತೆಗಿರುವ ಕಾರಣ ಅಹಿಂದ ಮತಗಳು ಚದುರಿ ಹೋಗುವುದಿಲ್ಲವೆಂಬ ವಿಶ್ವಾಸದಲ್ಲಿದೆ.

15 ಮಂದಿ ಕಣದಲ್ಲಿ

ಡಿ.ಕೆ. ಸುರೇಶ್ (ಕಾಂಗ್ರೆಸ್), ಅಶ್ವತ್ಥ ನಾರಾಯಣ ಗೌಡ (ಬಿಜೆಪಿ), ಡಾ. ಚೆನ್ನಪ್ಪ ವೈ. ಚಿಕ್ಕಹಾಗಡೆ (ಬಿಎಸ್ಪಿ), ಎನ್. ಕೃಷ್ಣಪ್ಪ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಡಿ.ಎಂ. ಮಾದೇಗೌಡ (ರಿಪಬ್ಲಿಕ್ ಸೇನೆ), ಎಂ. ಮಂಜುನಾಥ್ (ಉತ್ತಮ ಪ್ರಜಾಕೀಯ ಪಾರ್ಟಿ), ಟಿ.ಸಿ. ರಮಾ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ - ಕಮ್ಯುನಿಸ್ಟ್), ಡಾ. ಎಂ. ವೆಂಕಟಸ್ವಾಮಿ (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ), ವೆಂಕಟೇಶಪ್ಪ (ಸರ್ವ ಜನತಾ ಪಾರ್ಟಿ), ಈಶ್ವರ, ಬಿ. ಗೋಪಾಲ್, ಎಚ್.ಟಿ. ಚಿಕ್ಕರಾಜು, ಎಂ.ಸಿ.ದೇವರಾಜು, ಜೆ.ಟಿ.ಪ್ರಕಾಶ್, ರಘು ಜಾಣಗೆರೆ (ಪಕ್ಷೇತರರು).

2014ರ ಫಲಿತಾಂಶ

ಡಿ.ಕೆ. ಸುರೇಶ್ (ಕಾಂಗ್ರೆಸ್) 6,52,723

ಮುನಿರಾಜು ಗೌಡ (ಬಿಜೆಪಿ) 4,21,243

ಪ್ರಭಾಕರ್ ರೆಡ್ಡಿ (ಜೆಡಿಎಸ್) 3,17,870

ಗೆಲುವಿನ ಅಂತರ 2,31,480

ಮತದಾರರು:24,56,207| ಪುರುಷ:12,67,379| ಮಹಿಳೆ:11,88,207 | ಇತರೆ:340

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios