Asianet Suvarna News Asianet Suvarna News

ಕ್ಷೇತ್ರದ ಬಿಗಿಹಿಡಿತ ಹೊಂದಿರುವ ಡಿಕೆ ಸಹೋದರರ ಯಶಸ್ಸಿನ ಗುಟ್ಟೇನು

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಕ್ತಿಗಳ ಸಂಘರ್ಷದ ತಾಣ. ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹಾಗೂ ಚುನಾವಣಾ ತಂತ್ರಗಾರಿಕೆ ಸದಾ ಮೇಲುಗೈ ಪಡೆಯುತ್ತದೆ. ಇಂತಹ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ಹಿಡಿತ ಬಿಗಿಗೊಳ್ಳುತ್ತಲೇ ಸಾಗಿದೆ. ಇದೀಗ ಮತ್ತೊಮ್ಮೆ ಡಿಕೆ ಸುರೇಶ್ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ವಿಚಾರಗಳು ಇಲ್ಲಿವೆ

Loksabha Elections 2019 Congress Candidate DK Suresh interview
Author
Bengaluru, First Published Apr 12, 2019, 8:42 AM IST

ಬೆಂಗಳೂರು :   ಕ್ಷೇತ್ರ ಮರು ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಕ್ತಿಗಳ ಸಂಘರ್ಷದ ತಾಣ. ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹಾಗೂ ಚುನಾವಣಾ ತಂತ್ರಗಾರಿಕೆ ಸದಾ ಮೇಲುಗೈ ಪಡೆಯುತ್ತದೆ. ಇಂತಹ ಕ್ಷೇತ್ರದಲ್ಲಿ ಡಿ.ಕೆ.ಸಹೋದರರ ಹಿಡಿತ ಬಿಗಿಗೊಳ್ಳುತ್ತಲೇ ಸಾಗಿದೆ. ತಮ್ಮ ಸಹೋದರ ಡಿ.ಕೆ.ಶಿವಕುಮಾರ್‌ ಅವರ ವರ್ಚಸ್ಸಿಗೆ ಕ್ಷೇತ್ರದಲ್ಲಿ ನೆರಳಾಗಿ ನಿಂತಿದ್ದ ಡಿ.ಕೆ.ಸುರೇಶ್‌ 2014ರ ಲೋಕಸಭಾ ಚುನಾವಣೆ ಮೂಲಕ ಚುನಾವಣಾ ರಾಜಕಾರಣಕ್ಕೆ ಧುಮುಕಿ ಮೊದಲ ಯತ್ನದಲ್ಲೇ ಭರ್ಜರಿ ಜಯಗಳಿಸಿದ್ದರು. 

ವಾಸ್ತವವಾಗಿ ಡಿಕೆಶಿ ಅವರು ಬೆಂಗಳೂರು ಹಾಗೂ ಡೆಲ್ಲಿ ರಾಜಕಾರಣದತ್ತ ಹೆಚ್ಚು ಗಮನ ಹರಿಸಿದ್ದರೆ, ಕ್ಷೇತ್ರದಲ್ಲಿ ನೆಲೆ ನಿಂತು ಸಹೋದರ ಹಾಗೂ ತಮ್ಮ ಎರಡು ಕ್ಷೇತ್ರಗಳ ಹೊಣೆ ನೋಡಿಕೊಳ್ಳುತ್ತಿದ್ದದ್ದು ಡಿ.ಕೆ.ಸುರೇಶ್‌. ಕ್ಷೇತ್ರದಲ್ಲಿ ನೆಲೆನಿಂತು ಚುನಾವಣಾ ರಾಜಕಾರಣ ಮಾಡುವುದರಲ್ಲಿ ಪರಿಣತ ಎನಿಸಿಕೊಳ್ಳುವ ಮಟ್ಟಿಗೆ ಡಿ.ಕೆ.ಸುರೇಶ್‌ ಬೆಳೆದಿದ್ದಾರೆ. ಹೀಗಾಗಿಯೇ ಬೆಂ. ಗ್ರಾಮಾಂತರವನ್ನು ಕಾಂಗ್ರೆಸ್‌ ಸುರಕ್ಷಿತ ಕ್ಷೇತ್ರ ಎಂದು ಭಾವಿಸಿದ್ದು ಮತ್ತು ರಾಹುಲ್‌ ಗಾಂಧಿ ದಕ್ಷಿಣ ಭಾರತದಿಂದ ಸ್ಪರ್ಧಿಸುವ ಚಿಂತನೆ ನಡೆದಾಗ ಈ ಕ್ಷೇತ್ರವೂ ಪರಿಗಣಿತವಾಗಿದ್ದು. ಆದರೆ, ನಿಜವಾಗಿಯೂ ಈ ಕ್ಷೇತ್ರ ಅಷ್ಟೊಂದು ಸುರಕ್ಷಿತವೇ? ಮೋದಿ ಹವಾ ಇಲ್ಲಿ ಕೆಲಸ ಮಾಡುತ್ತಿಲ್ಲವೇ? ಬಿಜೆಪಿಯ ತಂತ್ರಗಾರ ಯೋಗೇಶ್ವರ್‌ ಅವರನ್ನು ಹೆಣೆಯುವ ತಂತ್ರಗಳನ್ನು ವಿಫಲಗೊಳಿಸಲು ತಯಾರಿ ನಡೆದಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಬೆಂ. ಗ್ರಾಮಾಂತರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ನೀಡಿದ ಉತ್ತರಗಳಿವು-

*ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದೀರಿ, ಜನರ ನಾಡಿ ಮಿಡಿತ ಹೇಗಿದೆ?

ಕಳೆದ 15 ದಿನದಿಂದಲೂ ಕ್ಷೇತ್ರಾದ್ಯಂತ ಪ್ರಚಾರ ನಡೆಸುತ್ತಿದ್ದೇನೆ. 5 ವರ್ಷದ ಕೆಲಸಗಳನ್ನು ಗುರುತಿಸಿರುವ ಜನರಿಂದ ಕ್ಷೇತ್ರಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿಯೂ ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ.

*ಯಾವುದಾದರೂ ಹವಾ ಕಾಣುತ್ತಿದೆಯೇ?

ಮೋದಿ ಅಲೆ, ಹವಾ ಎಲ್ಲಾ ಕೃತಕ ಸೃಷ್ಟಿ. ಸೀಮಿತ ಮಂದಿ ಒಂದು ಕಡೆ ಕುಳಿತುಕೊಂಡು ಮೋದಿ ಹವಾ ಇದೆ ಎಂಬ ಸುಳ್ಳು ಸೃಷ್ಟಿಮಾಡುತ್ತಿದ್ದಾರೆ. ಆದರೆ, ಅಲೆ ಎಲ್ಲ ಕಡೆ ಇದೆ ಎಂದೇನೂ ಅಲ್ಲ. ಎಲ್ಲೋ ಜನ ಸೇರಿರುವ ಕಡೆ ಹತ್ತು ಜನ ಮೋದಿ ಎಂದು ಕೂಗಾಡುತ್ತಾರೆ. ಒಬ್ಬರನ್ನು ನೋಡಿಕೊಂಡು ಮತ್ತೊಬ್ಬರು ಕೂಗುತ್ತಾರೆ. ಇದೆಲ್ಲಾ ಕೃತಕವಾಗಿ ಸೃಷ್ಟಿಸುತ್ತಿರುವ ಅಲೆ. ನಾನು ಕ್ಷೇತ್ರಾದ್ಯಂತ ಅಲೆದಿದ್ದೇನೆ. ಶಿಕ್ಷಣ ತಜ್ಞರು, ನಿವಾಸಿ ಕ್ಷೇಮಾಭಿವೃದ್ಧಿ ಸಂಘದಿಂದ ಹಿಡಿದು ಪ್ರತಿಯೊಬ್ಬರೂ ಅಭಿವೃದ್ಧಿ ವಿಚಾರವನ್ನೇ ಮಾತನಾಡುತ್ತಾರೆ. ಯಾರೂ ಮೋದಿ ಬಗ್ಗೆ ಚರ್ಚಿಸುವುದಿಲ್ಲ. ಅವರಿಗೆಲ್ಲಾ ಅವರ ಕೆಲಸ ಮಾಡಿಕೊಡುವವರು ಬೇಕಷ್ಟೇ. ಕೆಲವರು ಮಾತ್ರ ಮೋದಿ, ಮೋದಿ ಅನ್ನುತ್ತಾರೆ ಅಷ್ಟೇ.

*ಅಂದರೆ?

ನರೇಂದ್ರ ಮೋದಿ, ದೇಶ ಉಳಿಸ್ತಾರೆ ಎಂದು ಗೊತ್ತು ಗುರಿ ಇಲ್ಲದೆ ಮಾತನಾಡುವವರು ಇದ್ದಾರೆ. ಅವರಿಗೆ 70 ವರ್ಷದಿಂದಲೂ ದೇಶ ಸುಭದ್ರವಾಗಿ, ಸುರಕ್ಷಿತವಾಗಿದೆ ಎನ್ನುವುದೇ ಗೊತ್ತಿಲ್ಲ. ಮೋದಿ ಇಲ್ಲದಿದ್ದರೆ ದೇಶವೇ ಇಲ್ಲ ಎನ್ನೋ ಭ್ರಮೆಯಲ್ಲಿದ್ದಾರೆ. ವಾಸ್ತವದ ಅರಿವಿಲ್ಲದ ಅಂತಹವರಿಗೆ ಏನೂ ಹೇಳೋಕೆ ಆಗುವುದಿಲ್ಲ.

*ಮೊದಲ ಬಾರಿಗೆ ಸಂಸದರಾಗಿ ಅವಧಿ ಪೂರ್ಣಗೊಳಿಸಿದ್ದೀರಿ, ನಿಮ್ಮ ಸಾಧನೆಯೇನು?

ನಾನು ಮಾಡಿರುವ ಅಭಿವೃದ್ಧಿ ಕೆಲಸ ಹೇಳಲು ಒಂದು ದಿನಪೂರ್ತಿ ಸಾಲದು. ಕ್ಷೇತ್ರದಲ್ಲಿ ಕೆರೆ ಭರ್ತಿಗೆ ಆರು ನೀರಾವರಿ ಯೋಜನೆ, ಇಂಧನ ಇಲಾಖೆಯಿಂದ ರೈತರಿಗೆ ಟಿಸಿ ಅಳವಡಿಕೆ, ಲೋ ವೋಲ್ಟೇಜ್‌ ಸಮಸ್ಯೆ ನಿವಾರಣೆಗೆ ಸಬ್‌ ಸ್ಟೇಷನ್‌ಗಳ ನಿರ್ಮಾಣ, ಹಾಲಿನ ಸಂಸ್ಕರಣೆಗೆ ಕನಕಪುರದಲ್ಲಿ ಘಟಕ, ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ನಿರ್ಮಾಣಕ್ಕೆ ಮಂಜೂರಾತಿ, ಮಾಗಡಿ 4 ಪಥ ರಸ್ತೆಗೆ ಮಂಜೂರಾತಿ ಪಡೆದಿದ್ದೇನೆ. ನನ್ನ ಕ್ಷೇತ್ರದಲ್ಲಿ ಉತ್ತಮ ಶಾಲೆ ಇರಲಿಲ್ಲ. ಹೀಗಾಗಿ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ, ಮೊರಾರ್ಜಿ ದೇಸಾಯಿಗಳನ್ನು ತಂದಿದ್ದೇನೆ. ಇಂಧನ ಇಲಾಖೆಗೆ ಕಚೇರಿಗಳೂ ಇರಲಿಲ್ಲ. ನಿವೇಶನ ನೀಡಿ ಕಚೇರಿಗಳನ್ನು ಮಾಡಿಕೊಟ್ಟಿದ್ದೇನೆ. ದೇಶದಲ್ಲೇ ಮೊದಲ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿದ್ದು ನನ್ನ ಕ್ಷೇತ್ರದಲ್ಲಿ. ಜತೆಗೆ ಎಂ-ನರೇಗಾ ಸದ್ಬಳಕೆಗೆ ಅರಿವು ಮೂಡಿಸಿ 70 ಸಾವಿರ ಶೆಡ್‌ ನಿರ್ಮಾಣ, 200 ಸ್ಮಶಾನ ಭೂಮಿ ಮಂಜೂರು, 2,500 ಚೆಕ್‌ಡ್ಯಾಂ ನಿರ್ಮಾಣ, ವಸತಿ ಯೋಜನೆ, ಆರ್‌ಒಬಿ-ಆರ್‌ಯುಬಿ, ಕುಡಿಯುವ ನೀರು ಒದಗಿಸಲು ಆದ್ಯತೆ ಸೇರಿ ಸಾಲು-ಸಾಲು ಯೋಜನೆ ಕೊಟ್ಟಿದ್ದೇವೆ.

ಆದರೆ, ಬಿಜೆಪಿಯವರು ಸಂಸದರ ಕೊಡುಗೆ ಶೂನ್ಯ ಎನ್ನುತ್ತಾರೆ?

ಚುನಾವಣಾ ಗಿಮಿಕ್‌ಗಾಗಿ ಈ ರೀತಿ ಮಾತನಾಡುತ್ತಾರೆ. ಕ್ಷೇತ್ರವೇ ಗೊತ್ತಿಲ್ಲದವರ ಬಳಿ ಅಭಿವೃದ್ಧಿ ಬಗ್ಗೆ ಏನು ಮಾತನಾಡುತ್ತೀರಿ? ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೇಗಿದೆ ಎಂಬುದೇ ಗೊತ್ತಿಲ್ಲ.

ಸರಿ, ಈ ಬಾರಿ ಯಾವ ವಿಚಾರ ಮುಂದಿಟ್ಟು ನೀವು ಮತ ಕೇಳುತ್ತಿದ್ದೀರಿ?

ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹಲವು ಗುರಿ ಹೊಂದಿದ್ದೇನೆ. ಮಾವು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಪಾರ್ಕ್ ಮಾದರಿ ಘಟಕಗಳ ಅಭಿವೃದ್ಧಿಗೆ ಜಮೀನು ಮೀಸಲಿಟ್ಟಿದ್ದೇವೆ. ರೇಷ್ಮೆ ಉದ್ಯಮಕ್ಕಾಗಿ ಸಿಲ್‌್ಕ ಪಾರ್ಕ್ ಮಾಡಿ ರೈತರಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡಬೇಕಿದೆ. ಜತೆಗೆ 1 ಲಕ್ಷ ಎಕರೆಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಹೀಗಾಗಿ ಹಲವು ಯೋಜನೆ ನಮ್ಮ ಮುಂದಿದೆ. ಇವೆಲ್ಲ ಸಾಧಿಸಲು ಮತ್ತೊಂದು ಅವಧಿಗೆ ನನ್ನನ್ನು ಚುನಾಯಿಸಿ ಎಂದು ಮತದಾರರನ್ನು ಕೋರುತ್ತಿದ್ದೇನೆ.

ಚುನಾವಣಾ ರಾಜಕಾರಣದ ವಿಚಾರದಲ್ಲಿ ಡಿಕೆಶಿ-ಡಿಕೆಸು ಬ್ರದರ್ಸ್‌ಗೆ ಸರಿಸಾಟಿಯಿಲ್ಲ ಅಂತಾರೆ. ಏನಿದರ ಗುಟ್ಟು?

ಚುನಾವಣೆಯಲ್ಲಿ ಗೆಲ್ಲಲು ಯಾವ ಗುಟ್ಟೂಇರುವುದಿಲ್ಲ. ಇದಕ್ಕೆ ಇರುವುದು ಒಂದೇ ಫಾರ್ಮುಲಾ- ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಜತೆಯಲ್ಲೇ ಸದಾ ಇರಬೇಕು. ನಿರಂತರವಾಗಿ ಜನರ ನಡುವೆಯೇ ಇದ್ದರೆ ಅವರ ಸಮಸ್ಯೆ, ನಿರೀಕ್ಷೆಗಳು ಅರಿವಿಗೆ ಬರುತ್ತವೆ. ಅದರ ತಕ್ಕಂತೆ ಕೆಲಸ ಮಾಡಲು ಅನುವಾಗುತ್ತದೆ. ಯಾವ ಸಮಸ್ಯೆ ಬಂದರೂ ನಮ್ಮ ನಾಯಕರು ಬಗೆಹರಿಸುತ್ತಾರೆ ಎಂಬ ವಿಶ್ವಾಸ ಮೂಡುತ್ತದೆ. ಇದು ನಾಯಕನಿಗೆ ಇರಬೇಕಾದ ಲಕ್ಷಣ. ಯಾರು ಚುನಾವಣಾ ಸಂದರ್ಭದಲ್ಲಿ ಮಾತ್ರವೇ ರಾಜಕಾರಣ ಮಾಡುತ್ತಾರೋ ಅವರಿಗೆ ಸಮಸ್ಯೆಯಾಗುತ್ತದೆ.

ಜನರ ಬಳಿ ಇರುವುದಕ್ಕಿಂತ ಹೊಂದಾಣಿಕೆ ರಾಜಕಾರಣವೇ ನಿಮ್ಮ ಮುಖ್ಯ ತಂತ್ರವಂತೆ. ಹಿಂದೆ ಯೋಗೇಶ್ವರ್‌ ಜತೆ ಕೈ ಜೋಡಿಸಿದ್ದಿರಿ, ಈಗ ಜೆಡಿಎಸ್‌ ಜತೆ?

ಹಾಗೇನಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಯೋಗೇಶ್ವರ್‌ ಕಾಂಗ್ರೆಸ್‌ನಲ್ಲಿದ್ದರು. ಹೀಗಾಗಿ ಅವರೊಟ್ಟಿಗೆ ಚುನಾವಣೆ ಮಾಡಿದ್ದೇವು. ಈಗ ಅವರು ಬಿಜೆಪಿಯಲ್ಲಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಹೋಗುವಂತೆ ಸೂಚಿಸಿದೆ. ಹೀಗಾಗಿ ಜೆಡಿಎಸ್‌-ಕಾಂಗ್ರೆಸ್‌ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ.

ಡಿಕೆಶಿ-ಕುಮಾರಸ್ವಾಮಿ ನಡುವೆ ಮೂಡಿರುವ ಮೈತ್ರಿ ಕಾರ್ಯಕರ್ತರಲ್ಲಿ ಮೂಡಿಲ್ಲ?

ನನ್ನ ಕ್ಷೇತ್ರದಲ್ಲಿ ಆ ಸಮಸ್ಯೆ ಇಲ್ಲ. ಶೇ.98ರಷ್ಟುಜೆಡಿಎಸ್‌ ಕಾರ್ಯಕರ್ತರು ನನ್ನ ಜತೆಗಿದ್ದಾರೆ. ದೇವೇಗೌಡ, ಕುಮಾರಸ್ವಾಮಿ ಅವರ ಸೂಚನೆ ಪಾಲಿಸುತ್ತಿದ್ದಾರೆ. ಶೇ.2 ರಷ್ಟುಜನರು ವೈಯಕ್ತಿಕ, ಸ್ಥಳೀಯ ಕಾರಣಗಳಿಗೆ ತಟಸ್ಥರಾಗಿದ್ದಾರೆ. ಆದರೆ, ಅವರೂ ಬಿಜೆಪಿಗೆ ಕೆಲಸ ಮಾಡುತ್ತಿಲ್ಲ. ಆನೆಕಲ್‌, ರಾಜರಾಜೇಶ್ವರಿನಗರ ಸೇರಿದಂತೆ ಎಲ್ಲೂ ಸಮಸ್ಯೆ ಇಲ್ಲ.

ಬಿಜೆಪಿಯಿಂದ ಯೋಗೇಶ್ವರ್‌ ಸ್ಪರ್ಧಿಸದಿರುವುದು ನಿಮಗೆ ಪ್ಲಸ್‌ ಆಗುತ್ತಾ?

ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಎಂಬುದೇ ಅರ್ಥಹೀನ. 543 ಕ್ಷೇತ್ರದಲ್ಲೂ ಮೋದಿಗೆ ಮತ ಕೇಳುತ್ತಿದ್ದಾರೆಯೇ ಹೊರತು ಬಿಜೆಪಿ ಅಥವಾ ಅಭ್ಯರ್ಥಿಗೆ ಮತ ಕೇಳುತ್ತಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಚರ್ಚೆಯೇ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡ ಅವರೇ ಮೋದಿ ಮುಖ ತೋರಿಸಿ ಮತ ಕೇಳುತ್ತಿದ್ದಾರೆ. ಹೀಗಿರುವಾಗ ನನ್ನ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾದರೂ ನಮಗೆ ಮುಖ್ಯವಲ್ಲ. ನರೇಂದ್ರ ಮೋದಿಗಲ್ಲ ಸ್ಥಳೀಯ ಜನರ ಅಭಿವೃದ್ಧಿ ಹಾಗೂ ನಿಮ್ಮ ಜೊತೆ ಇರುವವರನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದೇವೆ. ಹೀಗಾಗಿ ಅಭ್ಯರ್ಥಿ ಯಾರಾದರೂ ನಮಗೆ ಸಮಸ್ಯೆ ಇಲ್ಲ.

ನಿಮ್ಮ ಕ್ಷೇತ್ರದಲ್ಲಿ ರಾಹುಲ್‌ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು?

ಕರ್ನಾಟಕಕ್ಕೆ ಬರುವುದಿದ್ದರೆ ನಾವು ಕ್ಷೇತ್ರ ಬಿಡುತ್ತೇವೆ ಎಂದು ನಾವೇ ಮನವಿ ಮಾಡಿದ್ದೇವೆ. ಆದರೆ ಹೈಕಮಾಂಡ್‌ ನಿರ್ಧಾರವೇ ಬೇರೆಯೇ ಇದ್ದುದರಿಂದ ಅವರು ವಯನಾಡಿಗೆ ಹೋಗಿದ್ದಾರೆ.

ನೀವು ಕೂಡ ಐಟಿ ದಾಳಿಯ ‘ಫಲಾನುಭವಿ.’ ಐಟಿ ದಾಳಿಗಳ ಬಗ್ಗೆ ಏನು ಹೇಳುತ್ತೀರಿ?

ಐಟಿ ದಾಳಿಗಳನ್ನು ಉದ್ದೇಶಪೂರ್ವಕವಾಗಿ ಹೆದರಿಸುವ ಸಲುವಾಗಿಯೇ ಮಾಡುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಡಿ.ಕೆ. ಸುರೇಶ್‌ಗೆ ಕೋರ್ಟ್‌ ವ್ಯಾಜ್ಯಗಳಿಗೆ ಓಡಾಡುವುದಕ್ಕೇ ಸಮಯವಿಲ್ಲ. ಅಭಿವೃದ್ಧಿಗೆ ಸಮಯ ಎಲ್ಲಿಂದ ಮಾಡ್ತಾರೆ ಅಂತಾರೆ ಬಿಜೆಪಿಯವರು?

ಕೇಸುಗಳನ್ನು ಹಾಕಿಸುತ್ತಿರುವವರೇ ಬಿಜೆಪಿಯವರು. ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ. ನನಗೆ ಕ್ಷೇತ್ರದ ಅಭಿವೃದ್ಧಿಗೆ ಸಮಯ ಕೊಡುವುದು ಗೊತ್ತಿದೆ. ಬಿಜೆಪಿಯವರಿಗೆ ಟೈಂ ಬೇಕಾಗಿದ್ದರೆ ಕೇಳಲಿ. ಬಿಜೆಪಿ ಕಾರ್ಯಕರ್ತರ ಸಮಸ್ಯೆಗಳು, ಅಹವಾಲು ಸ್ವೀಕರಿಸಲೇ ಪ್ರತ್ಯೇಕವಾಗಿ ಕೇಳಿದಷ್ಟುಸಮಯ ಕೊಡುತ್ತೇನೆ.

ಡಿ.ಕೆ. ಬ್ರದರ್ಸ್‌ ದಬ್ಬಾಳಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದೂ ಬಿಜೆಪಿ ಆರೋಪಿಸುತ್ತದೆ?

ದಬ್ಬಾಳಿಕೆ ರಾಜಕಾರಣದ ಬಗ್ಗೆ ಮೊದಲು ನರೇಂದ್ರ ಮೋದಿ, ಅಮಿತ್‌ಶಾ ಬಳಿ ಕೇಳಲಿ. ದಬ್ಬಾಳಿಕೆ ರಾಜಕಾರಣ ಮಾಡಿ ಬಿಜೆಪಿಯ ಅಸ್ತಿತ್ವವನ್ನೇ ಕಳೆದು ಬಿಜೆಪಿ ಬದಲಿಗೆ ನರೇಂದ್ರ ಮೋದಿ ಪಕ್ಷ ಎಂಬಂತೆ ಮಾಡಿರುವವರು ಅವರು. ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಷಿಯಂತಹ ಎಂ.ಪಿ. ಟಿಕೆಟ್‌ ಹಂಚುವವರು, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುತ್ತಿರುವವರನ್ನೇ ಮೂಲೆಗುಂಪು ಮಾಡಲಾಗಿದೆ. ಮೂಲ ಬಿಜೆಪಿಯವರನ್ನು ಮೂಲೆಗುಂಪು ಮಾಡಿ ನರೇಂದ್ರ ಮೋದಿ ಪಕ್ಷ ಕಟ್ಟುತ್ತಿದ್ದಾರೆ. ಹೀಗಾಗಿ ಅವರು ಬಿಜೆಪಿ ಅಥವಾ ಬಿಜೆಪಿ ಅಭ್ಯರ್ಥಿ ಪರ ಮತ ಕೇಳದೆ ಮೋದಿಗೆ ಮತ ಕೇಳುತ್ತಿದ್ದಾರೆ.

ವರದಿ : ಶ್ರೀಕಾಂತ್ ಎನ್.ಗೌಡಸಂದ್ರ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios