Asianet Suvarna News Asianet Suvarna News

ಲೋಕಸಭೆ ಚುನಾವಣೆ 2019 ಫಲಿತಾಂಶ ವಿಳಂಬ?

ಲೋಕಸಭೆ ಫಲಿತಾಂಶ ವಿಳಂಬ?| ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲೂ 1ರ ಬದಲಿಗೆ 5 ಮತಗಟ್ಟೆಗಳ ವಿವಿಪ್ಯಾಟ್‌ ಮತ ತಾಳೆ| ಸುಪ್ರೀಂಕೋರ್ಟ್‌ ನಿರ್ದೇಶನ| ಜಾರಿಗೆ ತರುವುದಾಗಿ ಆಯೋಗ ಘೋಷಣೆ| ವಿವಿಪ್ಯಾಟ್‌ಗಳ ಮತ ಎಣಿಕೆಯಿಂದ ಫಲಿತಾಂಶ 5 ತಾಸು ತಡ ಸಾಧ್ಯತೆ

Loksabha Election 2019 results may be delayed
Author
Bangalore, First Published Apr 9, 2019, 7:41 AM IST

ನವದೆಹಲಿ[ಏ.09]: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸವೃದ್ಧಿಗಾಗಿ ಸುಪ್ರೀಂಕೋರ್ಟ್‌ ಸೋಮವಾರ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಬದಲಿಗೆ 5 ಬೂತ್‌ಗಳ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಇದನ್ನು ಜಾರಿಗೆ ತರಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.

ನ್ಯಾಯಾಲಯದ ಈ ನಿರ್ದೇಶನದಿಂದಾಗಿ ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶ ವಿಳಂಬವಾಗುವುದು ನಿಶ್ಚಿತವಾಗಿದೆ. ಆದರೆ ಎಷ್ಟುತಡವಾಗಲಿದೆ ಎಂಬುದರ ಬಗ್ಗೆ ಗೊಂದಲಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಯ ವಿವಿಪ್ಯಾಟ್‌ ಮತಗಳನ್ನು ತಾಳೆ ಹಾಕಿ ನೋಡಲು 1 ತಾಸು ಬೇಕು. 5 ಬೂತ್‌ಗಳ ಮತಗಳನ್ನು ಎಣಿಸುತ್ತಾ ಹೋದರೆ ಫಲಿತಾಂಶ 5 ತಾಸು ವಿಳಂಬವಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವಿಳಂಬ ಭಾರಿ ಪ್ರಮಾಣದಲ್ಲೇನೂ ಇರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಒಂದರ ಬದಲಿಗೆ 5 ಬೂತ್‌ಗಳಲ್ಲಿ ವಿವಿಪ್ಯಾಟ್‌ಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕೆ ಹೆಚ್ಚಿನ ಮಾನವಶಕ್ತಿ ಬೇಕಾಗಿಲ್ಲ. ಹಾಗೆಯೇ ಫಲಿತಾಂಶ ಕೂಡ ಭಾರಿ ಪ್ರಮಾಣದಲ್ಲಿ ವಿಳಂಬವಾಗುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ತೃಪ್ತಿ ಮೂಡಿಸಲು ಈ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿದ್ದ ಪೀಠ ತಿಳಿಸಿದೆ.

ಏಕೆ ಈ ನಿರ್ಧಾರ?:

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬಿಜೆಪಿ ಒಂದಾದ ಮೇಲೊಂದು ರಾಜ್ಯಗಳನ್ನು ಗೆಲ್ಲುತ್ತಾ ಹೋದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಇವಿಎಂಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದವು. ಈ ಹಿಂದಿನಂತೆ ಮತಪತ್ರ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದವು. ಅದಕ್ಕೆ ಆಯೋಗ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಶೇ.50ರಷ್ಟುವಿವಿಪ್ಯಾಟ್‌ ಮತ ಎಣಿಕೆ ಮಾಡಬೇಕು ಎಂದು 21 ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್‌ ಕದಬಡಿದಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ವಿವಿಪ್ಯಾಟ್‌ ಬಳಕೆ ಮಾಡಲಾಗುತ್ತಿದೆ. ವಿಧಾನಸಭೆ ಚುನಾವಣೆಗಳಲ್ಲಿ ಪ್ರತಿ ಕ್ಷೇತ್ರದ 1 ಬೂತ್‌ನ ವಿವಿಪ್ಯಾಟ್‌ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದ ವ್ಯಾಪ್ತಿಗೆ ಸರಾಸರಿ 8 ವಿಧಾನಸಭೆ ಕ್ಷೇತ್ರಗಳು ಬರಲಿದ್ದು, ಅಲ್ಲಿನ ತಲಾ ಒಂದೊಂದು ಮತಗಟ್ಟೆಗಳ ವಿವಿಪ್ಯಾಟ್‌ ಮತ ಎಣಿಸಲು ಆಯೋಗ ಸಿದ್ಧತೆ ಮಾಡಿಕೊಂಡಿತ್ತು. ಈಗ 5 ಮತಗಟ್ಟೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ವಿವಿಪ್ಯಾಟ್‌ ಮತ ಎಣಿಸಬೇಕಾಗಿದೆ.

ಪ್ರತಿಪಕ್ಷಗಳ ಬೇಡಿಕೆಯಂತೆ ಶೇ.50ರಷ್ಟುವಿವಿಪ್ಯಾಟ್‌ಗಳ ಮತ ಎಣಿಕೆ ಮಾಡಿದರೆ ಲೋಕಸಭೆ ಚುನಾವಣೆ ಫಲಿತಾಂಶ 6 ದಿನಗಳಷ್ಟುವಿಳಂಬವಾಗಲಿದೆ ಎಂದು ಆಯೋಗ ವಾದಿಸಿತ್ತು.

ಕಾಂಗ್ರೆಸ್‌ ಆಕ್ಷೇಪ: ಈ ನಡುವೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳಲ್ಲಿ ಮತತಾಳೆ ಮಾಡುವುದು ಸಾಕಾಗುವುದಿಲ್ಲ. ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆ. ಹೀಗಾಗಿ ಸುಪ್ರೀಂಕೋರ್ಟ್‌ ತನ್ನ ನಿರ್ಧಾರವನ್ನು ಮರಪರಿಶೀಲನೆ ಮಾಡಬೇಕು ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ವಿವಿಪ್ಯಾಟ್‌ ಮತ ಎಣಿಕೆಗೆ 5 ಬೂತ್‌ಗಳ ಆಯ್ಕೆ ಹೇಗೆ?

ಯಾರಿಗೆ ಮತ ಹಾಕಬೇಕೆಂದು ಮತದಾರ ಬಯಸಿದ್ದನೋ ಅದೇ ವ್ಯಕ್ತಿಗೆ ಮತ ಚಲಾವಣೆಯಾಗಿದೆಯೇ ಎಂಬುದನ್ನು ಅವರಿಗೆ ಖಚಿತ ಪಡಿಸುವ ವ್ಯವಸ್ಥೆಯೇ ವಿವಿಪ್ಯಾಟ್‌ (ವೋಟರ್‌ ವೆರಿಫೈಯಬಲ್‌ ಪೇಪರ್‌ ಆಡಿಟ್‌ ಟ್ರಯಲ್‌). ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಪಕ್ಕ ಮತ್ತೊಂದು ಯಂತ್ರ ಇಡಲಾಗಿರುತ್ತದೆ. ಮತದಾರ ಮತ ಚಲಾವಣೆ ಮಾಡುತ್ತಿದ್ದಂತೆ ಆತ ಆಯ್ಕೆ ಮಾಡಿದ ಪಕ್ಷದ ಚಿಹ್ನೆ ವಿವಿಪ್ಯಾಟ್‌ನಲ್ಲಿ 7 ಸೆಕೆಂಡ್‌ ಮೂಡುತ್ತದೆ. ನಂತರ ಚೀಟಿ ತುಂಡಾಗಿ ಯಂತ್ರದೊಳಕ್ಕೆ ಬೀಳುತ್ತದೆ. ಈ ಮತಗಳನ್ನು ಇವಿಎಂ ಮತಗಳ ಜತೆ ತಾಳೆ ಹಾಕಿ ನೋಡಲಾಗುತ್ತದೆ. ಇಲ್ಲಿವರೆಗೂ 1 ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಯನ್ನು ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖ ಲಾಟರಿ ಮೂಲಕ ಆಯ್ಕೆ ಮಾಡಿ ಅದರ ವಿವಿಪ್ಯಾಟ್‌ ಮತ ಎಣಿಸಲಾಗುತ್ತಿತ್ತು. ಅದೇ ರೀತಿ ಈಗಲೂ ಪ್ರಕ್ರಿಯೆ ನಡೆಯಲಿದೆ.

Follow Us:
Download App:
  • android
  • ios