Asianet Suvarna News Asianet Suvarna News

ಭಾರತದ ಚುಕ್ಕಾಣಿ ಯಾರಿಗೆ ? : ಅನಿರೀಕ್ಷಿತ ಅಚ್ಚರಿಯಾಗುತ್ತಾ..?

ದೇಶದಲ್ಲಿ ಲೋಕಸಭಾ ಮಹಾ ಸಮರ ಮುಕ್ತಾಯವಾಗಿದೆ. ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಫಲಿತಾಂಶದ ಮೇಲೆ ಎಲ್ಲರ ಕುತೂಹಲ ನಿಟ್ಟಿದೆ.

Lok Sabha Elections 2019 Result Will Declared On May 23
Author
Bengaluru, First Published May 22, 2019, 7:20 AM IST

ನವದೆಹಲಿ: ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದೇಶದ 542 ಲೋಕಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ನಡೆದಿದ್ದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಇದರೊಂದಿಗೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಾ? ಮೋದಿ ಮತ್ತೆ ಪ್ರಧಾನಿಯಾಗ್ತಾರಾ? ಎನ್‌ಡಿಎದಿಂದ ವಿಪಕ್ಷಗಳು ಅಧಿಕಾರ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾವಾ? ಎಂಬೆಲ್ಲಾ ಪ್ರಶ್ನೆಗಳಿಗೆ ಸ್ಪಷ್ಟಉತ್ತರ ದೊರಕಲಿದೆ.

ಗುರುವಾರ ಬೆಳಗ್ಗೆ 8 ಗಂಟೆಗೆ ದೇಶಾದ್ಯಂತ ಏಕಕಾಲಕ್ಕೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಆದರೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1ರ ಬದಲು 5 ವಿವಿಪ್ಯಾಟ್‌ಗಳ ಮತತಾಳೆಗೆ ನಿರ್ಧರಿಸಿರುವ ಕಾರಣ ಪೂರ್ಣ ಫಲಿತಾಂಶ ಪ್ರಕಟಗೊಳ್ಳಲು ಎಂದಿಗಿಂತ 5-6 ಗಂಟೆ ಹೆಚ್ಚು ಕಾಲಾವಕಾಶ ಬೇಕಾಗಬಹುದು ಎನ್ನಲಾಗಿದೆ. ಅಂದರೆ ಗುರುವಾರ ಮಧ್ಯಾಹ್ನದ ಹೊತ್ತಿಗೆ ಮೊದಲ ಫಲಿತಾಂಶ ಹೊರಬರಲಿದ್ದು, ಪೂರ್ಣ ಫಲಿತಾಂಶ ಸಂಜೆಯ ವೇಳೆಗೆ ಸಿಗುವ ಸಾಧ್ಯತೆ ಇದೆ. ಲೋಕಸಭೆ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಯ ಫಲಿತಾಂಶಗಳು ಕೂಡಾ ಗುರುವಾರವೇ ಪ್ರಕಟವಾಗಲಿದೆ.

ಭಾರೀ ಹಣ ಚಲಾವಣೆಯ ಆರೋಪ ಕೇಳಿಬಂದ ಕಾರಣ ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿದೆ. ಹೀಗಾಗಿ ಗುರುವಾರ 542 ಕ್ಷೇತ್ರಗಳ ಫಲಿತಾಂಶ ಮಾತ್ರ ಪ್ರಕಟವಾಗಲಿದೆ. ಈ ಬಾರಿ ಶೇ.67.11ರಷ್ಟು ಮತ ಚಲಾವಣೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಈ ಬಾರಿ ಏ.11ರಿಂದ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆ ವೇಳೆ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದೆಲ್ಲೆಡೆ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿತ್ತು. ಇನ್ನು ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದಿಂದಾಗಿ ಈ ಬಾರಿ ಭರ್ಜರಿ 3400 ಕೋಟಿ ರು.ಮೌಲ್ಯದ ನಗದು, ಮದ್ಯ, ಮಾದಕ ವಸ್ತು, ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಕಳೆದ ಚುನಾವಣೆಗಿಂತ 3 ಪಟ್ಟು ಹೆಚ್ಚು ಎಂಬುದು ವಿಶೇಷ. ಜೊತೆಗೆ ಈ ಬಾರಿ ಶೇ.67.11ರಷ್ಟು ಮತ ಚಲಾವಣೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ ಚುನಾವಣಾ ಸಮೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಜನರ ನಾಡಿಮಿಡಿತ ಅರಿಯಲು ವಿಫಲವಾದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿಯೇ ವಿಪಕ್ಷಗಳು ಕೂಡಾ ಅಧಿಕೃತ ಫಲಿತಾಂಶ ತಮ್ಮ ಪರವಾಗಿರಲಿದೆ ಎಂಬ ವಿಶ್ವಾಸದಲ್ಲಿವೆ. ಹೀಗಾಗಿ ಗುರುವಾರದ ಫಲಿತಾಂಶದ ಬಗ್ಗೆ ಭಾರೀ ಕುತೂಹಲ ಮೂಡಿದೆ.

ಕಳೆದ ಬಾರಿ 2 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಈ ಬಾರಿ ಕೇವಲ ವಾರಾಣಸಿಯಲ್ಲಿ ಮಾತ್ರ ಸ್ಪರ್ಧಿಸಿದ್ದಾರೆ. ಇನ್ನು ಕಳೆದ ಬಾರಿ ಅಮೇಠಿಯಲ್ಲಿ ಮಾತ್ರ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಾರಿ ಅಮೇಠಿ ಜೊತೆಗೆ ಕೇರಳದ ವಯನಾಡಿನಿಂದಲೂ ಕಣಕ್ಕೆ ಇಳಿದಿದ್ದಾರೆ.

17.4 ಲಕ್ಷ: ಚುನಾವಣೆಗೆ ಬಳಕೆಯಾದ ವಿವಿಪ್ಯಾಟ್‌

39.6 ಲಕ್ಷ: ಚುನಾವಣೆಗೆ ಬಳಕೆಯಾದ ಇವಿಎಂ

10 ಲಕ್ಷ: ಮತದಾನಕ್ಕೆ ಸ್ಥಾಪಿಸಿದ್ದು 11035918 ಮತಗಟ್ಟೆ

22 ಲಕ್ಷ: ಭದ್ರತೆಗೆ 22 ಲಕ್ಷ ಭದ್ರತಾ ಸಿಬ್ಬಂದಿ ಬಳಕೆ

91 ಕೋಟಿ: ಈ ಬಾರಿ ಮತದಾನದ ಹಕ್ಕು ಹೊಂದಿದ್ದವರು

ಶೇ.67.11: ಸಾರ್ವಕಾಲಿಕ ದಾಖಲೆಯ ಪ್ರಮಾಣದ ಮತದಾನ

3400 ಕೋಟಿ: ವಶಪಡಿಸಿಕೊಂಡ ನಗದು, ಮದ್ಯ, ಡ್ರಗ್ಸ್‌, ಚಿನ್ನದ ಮೌಲ್ಯ

28 ಕ್ಷೇತ್ರ: ಚುನಾವಣಾ ನಡೆದ ರಾಜ್ಯದ ಒಟ್ಟಾರೆ ಲೋಕಸಭಾ ಕ್ಷೇತ್ರಗಳು

461 ಮಂದಿ: ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳು

11 ಸಾವಿರ: ಮತ ಎಣಿಕೆ ಪ್ರಕ್ರಿಯೆಗೆ ನಿಯೋಜಿಸಲಾದ ಅಂದಾಜು ಸಿಬ್ಬಂದಿ

ಬೆ.8 ಗಂಟೆ: ಎಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗುವ ಸಮಯ

ಮ.12 ಗಂಟೆ: ಲೋಕಸಭಾ ಫಲಿತಾಂಶ ಎತ್ತ ಸಾಗುತ್ತಿದೆ ಎಂಬ ಸುಳಿವು ಲಭ್ಯ

ಸಂ.6 ಗಂಟೆ: ಅಂತಿಮ ಅಧಿಕೃತ ಫಲಿತಾಂಶ ಹೊರಬೀಳುವ ಸಾಧ್ಯತೆ

Follow Us:
Download App:
  • android
  • ios