Asianet Suvarna News Asianet Suvarna News

ಲೋಕಸಭಾ ಚುನಾವಣೆ : 28 ಕ್ಷೇತ್ರಗಳಲ್ಲಿ 20ರಲ್ಲಿ ಬಿಜೆಪಿ ಗೆಲುವು

ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. 

Lok Sabha Elections 2019 BJP Hope To Win 20 Seats In Karnataka
Author
Bengaluru, First Published Apr 26, 2019, 11:26 AM IST

ಬೆಂಗಳೂರು :  ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ  ಪೈಕಿ ಕನಿಷ್ಠ 20 ಸ್ಥಾನಗಳನ್ನು ಗಳಿಸುವ ಬಗ್ಗೆ ಬಿಜೆಪಿ ಅದಮ್ಯ ವಿಶ್ವಾಸ ಹೊಂದಿದೆ. 

ಗುರುವಾರ ನಡೆದ ರಾಜ್ಯ ಬಿಜೆಪಿಯ ಹಿರಿಯ ನಾಯಕರ ನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಮತದಾನದ ಅಂಕಿ- ಅಂಶಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಪಕ್ಷದ ಎಲ್ಲ ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳು ನೀಡಿರುವ, ಮತದಾನದ ನಂತರ ಸಂಗ್ರಹಿಸಿದ ಅಂಕಿ- ಅಂಶಗಳ ಆಧಾರದ ಮೇಲೆ ಸಮಾಲೋಚನೆ ನಡೆಸಿದ ನಾಯಕರು ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಕಳೆದ ಸಲಕ್ಕಿಂತ ಪ್ರಧಾನಿ ಮೋದಿ ಅವರ ಪರ ಅಲೆ ಕಾಣಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಜನರು ಅದಕ್ಕೆ ಮನ್ನಣೆ ನೀಡಿಲ್ಲ ಎಂಬುದು ಮತದಾನದ ಪ್ರಕ್ರಿಯೆ ಅಂಕಿ- ಅಂಶಗಳಿಂದ ಗೊತ್ತಾಗುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆದಿದೆ. ಮತದಾನಕ್ಕೂ ಮೊದಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕನಿಷ್ಠ 22 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ರಾಜ್ಯ ನಾಯಕರಿಗೆ ನೀಡಿದ್ದರು. ಅದಕ್ಕೆ ತಕ್ಕಂತೆ ತಂತ್ರಗಾರಿಕೆ ಹೆಣೆಯಲಾಗಿತ್ತು. ಇದೀಗ ಸಂಗ್ರಹಿಸಿರುವ ಅಂಕಿ- ಅಂಶಗಳ ಪ್ರಕಾರ ಆ ಗುರಿಯ ಸಮೀಪವೇ ಬಿಜೆಪಿ ಬಂದಿದೆ ಎಂದು ಪಕ್ಷದ ಹಿರಿಯ ನಾಯಕರು ಮಾಹಿತಿ ನೀಡಿದರು.

Follow Us:
Download App:
  • android
  • ios