Asianet Suvarna News Asianet Suvarna News

ಮೋದಿ ಮುಖ ನೋಡಿಕೊಂಡು ನಮ್ಮೂರಲ್ಲಿ ಕಳ್ಳನನ್ನು ಗೆಲ್ಲಿಸಬೇಕೆ? ಪ್ರಕಾಶ್ ರೈ

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಕಾಶ್ ರೈ ಕಣಕ್ಕಿಳಿದಿದ್ದಾರೆ. ಚುನಾವಣೆಗಾಗಿ ಇವರ ತಯಾರಿ ಹೇಗಿದೆ? ಮೋದಿ, ರಾಹುಲ್ ಗಾಂಧಿ ಬಗ್ಗೆ ಏನಂತಾರೆ? ಇಲ್ಲಿದೆ ಪ್ರಕಾಶ್ ರೈ ಸಂದರ್ಶನ. 

Bengaluru central loksabha constituency Independent candidate Prakash Rai interview
Author
Bengaluru, First Published Apr 16, 2019, 11:25 AM IST

ಬೆಂಗಳೂರು (ಏ. 16):  ಪ್ರಬುದ್ಧ ನಟ ಎಂದೇ ಖ್ಯಾತಿ ಗಳಿಸಿರುವ ಪ್ರಕಾಶ್‌ ರಾಜ್‌ ಅವರು ಕಳೆದ ವರ್ಷ ಜಸ್ಟ್‌ ಆಸ್ಕಿಂಗ್‌ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸುವ ಮೂಲಕ ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದರು. ಇದೀಗ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.

'ವಿ ಆರ್ ಹ್ಯುಮನ್': ಏಟು ತಿಂದ ತರೂರ್ ಭೇಟಿಯಾದ ಸೀತಾರಾಮನ್!

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇತರ ಪ್ರಮುಖ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಪ್ರಕಾಶ್‌ ರಾಜ್‌ ಅವರು ಕಳೆದ ಹಲವು ತಿಂಗಳುಗಳ ಹಿಂದೆಯೇ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದರು.

ಇದೀಗ ಬೇರೆ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ಅಥವಾ ಪ್ರಮುಖ ನಟರ ಬೆಂಬಲವಿಲ್ಲದೆ ತಮ್ಮದೇ ಆದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಮಧ್ಯೆಯೇ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ತಮ್ಮ ವಿಚಾರಧಾರೆಯನ್ನು ಹೊರಹಾಕಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ:

ಛತ್ತೀಸ್‌ಗಢದಲ್ಲಿದೆ ರಫೇಲ್‌ ಹೆಸರಿನ ಹಳ್ಳಿ!: ವಿವಾದದಿಂದಾಗಿ ಗ್ರಾಮಸ್ಥರಿಗೆ ಅಪಹಾಸ್ಯ!

ಚುನಾವಣಾ ಪ್ರಚಾರ ಹೇಗೆ ಸಾಗಿ ಬಂದಿದೆ?

ಪ್ರಚಾರ ಎನ್ನುವುದಕ್ಕಿಂತ ಇದನ್ನು ಸಂವಾದ ಎಂದು ಕರೆಯುವುದು ಸೂಕ್ತ. ಚುನಾವಣೆ ಎನ್ನುವುದು ಅಭ್ಯರ್ಥಿ ಮತ್ತು ಮತದಾರರ ನಡೆಯುವ ಸಂವಾದವಾಗಬೇಕು. ಇವತ್ತಿನ ಸಮಸ್ಯೆಗಳಿಗೆ ಏನು ಕಾರಣ ಎಂಬುದನ್ನು ವಿಶ್ಲೇಷಿಸಿ ಮುಂದಿನ ದಾರಿ ಏನು ಎನ್ನುವುದನ್ನು ಹೇಳಿ ಮತಯಾಚಿಸಬೇಕು. ಆ ನಿಟ್ಟಿನಲ್ಲಿ ಕಳೆದ ನಾಲ್ಕು ತಿಂಗಳುಗಳ ಕಾಲ ನಾನು ಕ್ಷೇತ್ರದ ಮತದಾರರೊಂದಿಗೆ ನಡೆಸಿದ ಸಂವಾದ ಸಮಾಧಾನ ತಂದಿದೆ. ಜನರು ಪರ್ಯಾಯ ರಾಜಕಾರಣಕ್ಕೆ ತೆರೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಚುನಾವಣಾ ರಾಜಕಾರಣಕ್ಕಾಗಿ ಯಾವುದಾದರೊಂದು ರಾಷ್ಟ್ರೀಯ ಪಕ್ಷವನ್ನೇ ಆಶ್ರಯಿಸಬಹುದಿತ್ತಲ್ಲ?

ನನ್ನ ಹೋರಾಟವೇ ರಾಷ್ಟ್ರೀಯ ಪಕ್ಷಗಳ ವಿರುದ್ಧ. ಭಾರತದಲ್ಲಿನ ಎಲ್ಲ ದುರಾಡಳಿತಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ಚುನಾವಣೆ. ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿವೆ. ಎಲ್ಲೋ ಒಂದು ಕಡೆ ಮತದಾರರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿಲ್ಲ. ಅಭ್ಯರ್ಥಿಗಳು ಸರಿಯೇ ಅಥವಾ ತಪ್ಪೇ ಎಂಬುದನ್ನೂ ನೋಡುತ್ತಿಲ್ಲ. ಜನರು ಪ್ರಧಾನಿಯನ್ನೊ ಅಥವಾ ಮಂತ್ರಿಯನ್ನೊ ಚುನಾಯಿಸುವುದಿಲ್ಲ.

ಯಾವಾಗ ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಬಲ್ಲ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೊ, ಆ ಮೂಲಕ ಆಳುವ ಅಥವಾ ವಿರೋಧ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಅಧಿಕಾರಕ್ಕಾಗಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವುದಲ್ಲ. ಜವಾಬ್ದಾರಿ ಹೊತ್ತುಕೊಳ್ಳುವುದಕ್ಕಾಗಿ ಗೆಲ್ಲಿಸಬೇಕು ಎಂಬುದು ನನ್ನ ಉದ್ದೇಶ.

ಈ ಚುನಾವಣೆ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ?

ಇಡೀ ಚುನಾವಣೆ ಧರ್ಮ, ಜಾತಿ ಆಧಾರದ ಮೇಲೆ ನಡೆಯುತ್ತಿದೆಯೇ ಹೊರತು ಸಾಧನಾ ವರದಿ ಆಧಾರದ ಮೇಲೆ ಅಲ್ಲ. ಬೆಂಗಳೂರಿನಲ್ಲಿ ಎರಡು ಸಾವಿರ ಕೊಳಗೇರಿಗಳು ಹೇಗೆ ಹುಟ್ಟಿಕೊಂಡವು? 250 ಕೆರೆಗಳಿದ್ದ ಬೆಂಗಳೂರಿನಲ್ಲಿ ಈಗ ಕೇವಲ 50 ಕೆರೆಗಳು ಮಾತ್ರ ಯಾಕೆ ಉಳಿದುಕೊಂಡವು? ಕಳೆದ ಆರು ತಿಂಗಳಿಂದ ನಾನು ಈ ಕ್ಷೇತ್ರದಲ್ಲಿ ವಿಭಿನ್ನ ಜನರೊಂದಿಗೆ ಸಂವಾದ ನಡೆಸಿದ್ದೇನೆ. ಈ ಮೂಲಕ ಪರ್ಯಾಯ ರಾಜಕಾರಣದ ಬೀಜ ಬಿತ್ತಿದ್ದೇನೆ.

ನಿಮ್ಮ ಚುನಾವಣಾ ಸ್ಪರ್ಧೆಗೆ ಬೆಂಗಳೂರು ಸೆಂಟ್ರಲ್‌ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ಬೆಂಗಳೂರು ಕೇಂದ್ರ ಎನ್ನುವುದು ನನ್ನ ಹುಟ್ಟೂರು. ನನ್ನ ಬಾಲ್ಯ ಇಲ್ಲಿದೆ. ಇಲ್ಲಿನ ರಸ್ತೆಗಳಲ್ಲಿ ಸಣ್ಣವನಿದ್ದಾಗ ಓಡಾಡಿದ್ದೇನೆ. ನನ್ನ ಶಾಲೆ, ಕಾಲೇಜು ಇಲ್ಲೇ ಇದೆ. ನನ್ನ ದಶಕದ ರಂಗಭೂಮಿ ತಾಣವಾದ ರವೀಂದ್ರ ಕಲಾಕ್ಷೇತ್ರ ಇರುವುದು ಇಲ್ಲಿಯೇ. ನನ್ನ ಸಿನಿಮಾ ರಂಗ ಗಾಂಧಿ ನಗರ ಇರುವುದು ಇದೇ ಕ್ಷೇತ್ರದಲ್ಲಿ. ಹೀಗಾಗಿ, ಇದು ನನ್ನ ಮನೆಯಿದ್ದಂತೆ. ತುಂಬಾ ದಿನಗಳಿಂದ ಮನೆಯಿಂದ ಹೊರಗಿದ್ದೆ. ಈಗ ಮನೆಗೆ ವಾಪಸಾಗೋಕೆ ಬಿಡಿ.

ಜನರ ಸೇವೆಯೇ ಮಾಡಬೇಕು ಎಂದಾಗಿದ್ದರೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದಿತ್ತು. ರಾಜಕಾರಣವೇ ಯಾಕೆ?

ನಿಜ ನನಗೆ ರಾಜಕಾರಣ ಬೇಕಾಗಿರಲಿಲ್ಲ. ಆದರೆ, ಇವತ್ತಿನ ಪರಿಸ್ಥಿತಿ ನೋಡಿದಾಗ ನನಗೂ ಜವಾಬ್ದಾರಿಯಿದೆ ಎಂದು ಅನಿಸಿತು. ಇವತ್ತು ಈ ಸ್ಥಾನ ಬಂದಿರುವುದು ನನ್ನ ಪ್ರತಿಭೆಯಿಂದ ಎಂದರೆ ಅದು ಅಹಂಕಾರದ ಮಾತಾಗುತ್ತದೆ. ಎಲ್ಲ ಭಾಷೆಗಳ, ಎಲ್ಲ ಜಾತಿ-ಧರ್ಮಗಳ ಜನರು ನನ್ನ ಸಿನಿಮಾಗಳನ್ನು ನೋಡಿ ಮೆಚ್ಚಿದ್ದರಿಂದ ನಾನು ಈ ಸ್ಥಾನಕ್ಕೆ ಬಂದು ನಿಂತಿದ್ದೇನೆ. ಅವರು ಹಣ ನೀಡಿ ಸಿನಿಮಾ ನೋಡಿದ್ದರಿಂದ ನನ್ನ ಆದಾಯ ಹೆಚ್ಚಾಗಿದೆ. ಈಗ ನಾನು ಜನರಿಗಾಗಿ ಏನಾದರೂ ಮಾಡುವುದು ನನ್ನ ಹೊಣೆಗಾರಿಕೆ.

ಸಿನಿಮಾದಲ್ಲಿ ಸಾಕಷ್ಟುಹಣ ಗಳಿಸಿದ್ದಿರಿ. ಆರಾಮವಾಗಿ ಇರಬಹುದಿತ್ತಲ್ಲವೇ?

ಧ್ವನಿ ಇದ್ದೂ ಮಾತನಾಡದಿದ್ದರೆ ನಾವು ಹೇಡಿಗಳಾಗುತ್ತೇವೆ. ಹೌದು. ನಾನು ಹಣ ಸಾಕಷ್ಟುಗಳಿಸಿದ್ದೇನೆ. ಮನೆಗಳಿವೆ, ತೋಟಗಳಿವೆ ಎಂದುಕೊಂಡು ಆರಾಮವಾಗಿ ಸುಮ್ಮನಿರಬಹುದಿತ್ತು. ಆದರೆ, ಇಷ್ಟೆಲ್ಲ ಇದ್ದರೂ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದರೆ ಅದಕ್ಕೊಂದು ನಿಖರ ಕಾರಣ ಇರಲೇಬೇಕಲ್ಲ. ಹೆಸರು ಹಾಳು ಮಾಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ನಾನು ಬಂದಿಲ್ಲ ಇಲ್ಲಿ.

ಜಸ್ಟ್‌ ಆಸ್ಕಿಂಗ್‌ ಅಭಿಯಾನದ ಮುಂದುವರಿಕೆ ಭಾಗವಾಗಿ ನೀವು ರಾಜಕಾರಣಕ್ಕೆ ಪ್ರವೇಶಿಸಿದ್ದೀರಾ?

ಇರಬಹುದು. ಆ ಅಭಿಯಾನದ ದಾರಿಯಲ್ಲಿ ಸ್ವಾಭಾವಿಕವಾಗಿ ಇನ್ನೊಂದು ಅವತಾರವಾಗಿ ರಾಜಕಾರಣ ಎದುರಾಗಿರಬಹುದು.

ನೀವು ಮನಸ್ಸು ಮಾಡಿದ್ದರೆ ತಮಿಳುನಾಡು, ಆಂಧ್ರ, ತೆಲಂಗಾಣದಲ್ಲೂ ರಾಜಕಾರಣ ಮಾಡಬಹುದಿತ್ತಲ್ಲ. ಕರ್ನಾಟಕವೇ ಯಾಕೆ ಆಯ್ಕೆ ಮಾಡಿಕೊಂಡಿರಿ?

ಏನೇ ಆದರೂ ನಾವು ಸ್ಥಳೀಯ ನಾಯಕರಾಗಬೇಕು. ನಮ್ಮ ಭಾಷೆ, ನಮ್ಮ ಸಂಸ್ಕೃತಿಯಿಂದ ಹೊರಹೊಮ್ಮಬೇಕು. ನೋಡಿ, ರಾಷ್ಟ್ರೀಯ ಪಕ್ಷಗಳು ಕೊನೆಯ ಕ್ಷಣದವರೆಗೂ ಸಮರ್ಥ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಕನ್ನಡದಲ್ಲಿ ಪರ್ಯಾಯ ನಾಯಕರನ್ನು ಬೆಳೆಸುವ ಪ್ರಯತ್ನ ನಾವು ಮಾಡಿಲ್ಲ. ಏನಿದ್ದರೂ ಮೋದಿ ಪ್ರಧಾನಿಯಾಗÜಬೇಕು ಇಲ್ಲವೇ ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲೇ ಪ್ರಯತ್ನ ಮಾಡುತ್ತಿದ್ದೇವೆಯೇ ಹೊರತು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ನಮಗಾಗಿ ಯೋಚಿಸುವ, ನಮಗಾಗಿ ಕೆಲಸ ಮಾಡುವ ಸಮರ್ಥ ನಾಯಕನನ್ನು ಬೆಳೆಸುವ ಪ್ರಯತ್ನ ಮಾಡಿಲ್ಲ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ಬಗ್ಗೆ ನೀವು ಯಾವತ್ತೂ ಯೋಚಿಸಿಲ್ಲವೇ?

ಜೆಡಿಎಸ್‌ ಕೂಡ ರಾಷ್ಟ್ರೀಯ ಪಕ್ಷಗಳು ಮಾಡುವುದನ್ನೇ ಮಾಡುತ್ತಿದೆ. ಇವತ್ತು ಮಂಡ್ಯ ಕ್ಷೇತ್ರದಲ್ಲಿ ಇತರ ಅರ್ಹ ಮುಖಂಡರು ಇದ್ದರೂ ಅವರನ್ನು ಪರಿಗಣಿಸದೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತಮ್ಮ ಮೊಮ್ಮಗನನ್ನೇ ಕಣಕ್ಕಿಳಿಸಿದರು. ಐದು ವರ್ಷಗಳ ಕಾಲ ಇಡೀ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಮರ್ಥವಾಗಿ ಮಾತನಾಡುವ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕುಟುಂಬ ರಾಜಕಾರಣ ಮಾಡಿದ ಮೇಲೆ ಆ ಪಕ್ಷವನ್ನು ಹೇಗೆ ನಂಬುವುದು ಹೇಳಿ.

ಅಭ್ಯರ್ಥಿಗಳನ್ನು ನೋಡಿ ಮತ ಹಾಕಬೇಕು ಎನ್ನುತ್ತೀರಿ? ಎಲ್ಲಿಯೂ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲವೇ?

ಚುನಾವಣೆ ಎಂದ ಮೇಲೆ ಅಂತಿಮವಾಗಿ ಅಭ್ಯರ್ಥಿಗಳನ್ನು ಪ್ರಮುಖವಾಗಿ ಪರಿಗಣಿಸಬೇಕು. ಕಾಂಗ್ರೆಸ್‌ ಅಥವಾ ಬಿಜೆಪಿಯಲ್ಲಿ ಯೋಗ್ಯ ಅಭ್ಯರ್ಥಿ ಇದ್ದರೂ ಮತ ಹಾಕುವುದರಲ್ಲಿ ತಪ್ಪೇನಿಲ್ಲ. ಮತದಾರರು ಪಕ್ಷಗಳನ್ನು ಬೆಳೆಸುವುದು ಬೇಡ. ಯೋಗ್ಯ ಅಭ್ಯರ್ಥಿಗಳನ್ನು ಬೆಳೆಸಿ ಬೆಂಬಲಿಸಲಿ.

2047ಕ್ಕೆ ಮೋದಿಯ ಆಶಯವೇನು?: ಬಹಿರಂಗಪಡಿಸಿದ ನಿರ್ಮಲಾ ಸೀತಾರಾಮನ್

ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರಲ್ಲ?

ಮೋದಿ ಬಂದು ಬೆಂಗಳೂರನ್ನು ಆಳುವುದಿಲ್ಲ. ಮೋದಿ ಮುಖ ನೋಡಿಕೊಂಡು ಒಬ್ಬ ಕಳ್ಳನನ್ನು ಗೆಲ್ಲಿಸಬೇಕೆ? ಜನರು ತಾವು ಮತ ಚಲಾಯಿಸುತ್ತಿರುವುದು ಅವರನ್ನು ಪ್ರತಿನಿಧಿಸಬಲ್ಲ ಯೋಗ್ಯ ಅಭ್ಯರ್ಥಿ ಎಂಬುದನ್ನು ಅರಿತುಕೊಳ್ಳಬೇಕು. ಕೊನೆಗೆ ಅದರ ಪರಿಣಾಮ ಉಂಟಾಗುವುದು ಜನಸಾಮಾನ್ಯರ ಮೇಲೆಯೇ. ಮೋದಿ ಏನು ಮಾಡಿದ್ದಾರೆ ಎಂಬುದಷ್ಟೇ ಮುಖ್ಯವಲ್ಲ. ನೀವೆಷ್ಟುಕೆಲಸ ಮಾಡಿದ್ದೀರಿ ಎಂದು ಮತದಾರರು ಅಭ್ಯರ್ಥಿಗಳನ್ನು ಕೇಳುವ ಸ್ಥಿತಿ ಬರಬೇಕು.

ನೀವು ರಾಜಕಾರಣ ಪ್ರವೇಶಿಸುವುದಕ್ಕೆ ಪರೋಕ್ಷವಾಗಿ ಪ್ರಧಾನಿ ಮೋದಿ ಅವರೇ ಕಾರಣರಾದರೆ?

ದೇಶದ ಪರಿಸ್ಥಿತಿ ಕಾರಣವಾಯಿತು. ಮೋದಿ ನನಗೇನು ದೊಡ್ಡಪ್ಪನ ಮಗನೆ? ಚಿಕ್ಕಪ್ಪನ ಮಗನೆ? ಅವರ ಮೇಲೆ ನನಗೇನೂ ವೈಯಕ್ತಿಕ ದ್ವೇಷ ಇಲ್ಲ. ಆದರೆ, ಮೋದಿ ಅವರು ಮಾತನಾಡುತ್ತಿರುವ ರೀತಿ ನೋಡಿ. ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದು ಸರಿಯಲ್ಲ. ತಾವು ಮತ್ತು ತಮ್ಮ ಸರ್ಕಾರ ಏನು ಕೆಲಸ ಮಾಡಿದೆ ಎಂಬುದನ್ನು ಹೇಳಲಿ. ಹಿಂದಿನ ಎಲ್ಲ ಪ್ರಧಾನಿಗಳ ಮೇಲೆಯೂ ಆಕ್ಷೇಪವಿತ್ತು. ಹಿಂದಿನ ಪ್ರಧಾನಿಗಳನ್ನೂ ಅನೇಕರು ಟೀಕಿಸಿದ್ದರು. ಆ ಹಿಂದಿನ ಪ್ರಧಾನಿಯನ್ನು ಟೀಕಿಸಿದರೆ ನಡೆಯುತ್ತದೆ. ಆದರೆ, ಈಗಿನ ಪ್ರಧಾನಿ ಮೋದಿ ಅವರನ್ನು ಟೀಕಿಸಿದರೆ ದೇಶದ್ರೋಹಿ ಎಂಬ ಪಟ್ಟಕಟ್ಟುವುದು ಎಷ್ಟುಸರಿ ಹೇಳಿ.

ನಿಮ್ಮ ಪರವಾಗಿ ಪ್ರಚಾರ ಮಾಡಲು ಬೇರೆ ಯಾವುದೇ ನಟರು ಮುಂದೆ ಬಂದಿಲ್ಲ?

ಇರಲಿ. ಅವರವರ ಆತಂಕ, ಭಯ ಏನು ಇದೆಯೊ ಗೊತ್ತಿಲ್ಲ. ಕೆಲವರು ದೂರವಾಣಿ ಮೂಲಕ ಮಾತನಾಡಿ ಹೇಳಿದ್ದಾರೆ. ಕೆಲವರು ಯಾಕೆ ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಕು ಎಂದುಕೊಂಡು ದೂರವಾಣಿಯನ್ನೂ ಮಾಡದೆ ಇದ್ದಾರೆ. ಅವರವರ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಟ್ಟಿದ್ದೇನೆ.

- ಸಂದರ್ಶನ: ವಿಜಯ್ ಮಲಗಿಹಾಳ

Follow Us:
Download App:
  • android
  • ios