Asianet Suvarna News Asianet Suvarna News

ಕ್ಷಣ ಕ್ಷಣಕ್ಕೂ ಬೆರಗುಗೊಳಿಸುವ ಮಾಧ್ಯಮವೇ ನವಮಾಧ್ಯಮ: ಶ್ಯಾಮಸುಂದರ

ಕಾರ್ಯಾಗಾರದಲ್ಲಿ ಸುವರ್ಣ ಡಾಟ್‌ಕಾಮ್‌ನ ಪ್ರಧಾನ ಸಂಪಾದಕ ಶ್ಯಾಮಸುಂದರ ಅಭಿಮತ| ಅಂತರ್ಜಾಲವನ್ನು ಮನರಂಜನೆ ಮತ್ತು ಉದ್ಯಮಕ್ಕಾಗಿ ಬಳಸಲಾಗುತ್ತಿದೆ| ಅಂತರ್ಜಾಲದಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಹೊರಟಿರುವ ಯುವಕ- ಯುವತಿಯರು ತಮಗೆ ತಿಳಿಯದೇ ಸುದ್ದಿಯಾಗುತ್ತಿದ್ದಾರೆ| ವಿದೇಶಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಯೇ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ| ಅದು ಭಾರತದಲ್ಲೂ ಉದ್ಯಮವಾಗಿ ಬೆಳೆದರೆ ಅಚ್ಚರಿಯಿಲ್ಲ| 

Suvarna News Dot Com Editor-in-Chief Shamsundar Talked About New Media
Author
Bengaluru, First Published Oct 20, 2019, 10:57 AM IST

ಹುಬ್ಬಳ್ಳಿ(ಅ.20): ಇಂದಿನ ದಿನಮಾನದಲ್ಲಿ ಅಂತರ್ಜಾಲ ಆಧಾರಿತ ನವಮಾಧ್ಯಮವು ಕ್ಷಣ ಕ್ಷಣವೂ ಬೆರಗು ಗೊಳಿಸುವ ಮಾಧ್ಯಮ. ಇದು ಉದ್ಯಮವಾಗಿ ಬೆಳೆಯುತ್ತಿದೆ ಎಂದು ಸುವರ್ಣ ನ್ಯೂಸ್ ಡಾಟ್ ಕಾಮ್‌ನ ಪ್ರಧಾನ ಸಂಪಾದಕ ಎಸ್.ಕೆ. ಶ್ಯಾಮಸುಂದರ್ ಅವರು ಹೇಳಿದ್ದಾರೆ. 

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪತ್ರಕರ್ತರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ನವ ಮಾಧ್ಯಮಗಳ ಸವಾಲು ಮತ್ತು ನಿರ್ವಹಣೆ ವಿಷಯ ಕುರಿತು ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂತರ್ಜಾಲವನ್ನು ಮನರಂಜನೆ ಮತ್ತು ಉದ್ಯಮಕ್ಕಾಗಿ ಬಳಸಲಾಗುತ್ತಿದೆ. ಅಂತರ್ಜಾಲದಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಹೊರಟಿರುವ ಯುವಕ- ಯುವತಿಯರು ತಮಗೆ ತಿಳಿಯದೇ ಸುದ್ದಿಯಾಗುತ್ತಿದ್ದಾರೆ. ನಂತರ ಒದ್ದಾಡುವ ಪ್ರಸಂಗಗಳನ್ನು ನೋಡುತ್ತೇವೆ. ಹೀಗೆ ತಮ್ಮ ಅನುಭವಕ್ಕೆ ಬಾರದೆ ಇರುವ ವಿಷಯಗಳನ್ನು ಬರೆದು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ವಿದೇಶಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಯೇ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಅದು ಭಾರತದಲ್ಲೂ ಉದ್ಯಮವಾಗಿ ಬೆಳೆದರೆ ಅಚ್ಚರಿಯಿಲ್ಲ. ರಾಜಕಾರಣಿಗಳನ್ನು ಸೆಳೆಯುವುದಕ್ಕಾಗಿ ಅವರ ಪರವಾದ ಬರೆಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಸುಳ್ಳು ಸುದ್ದಿಯ ಇನ್ನೊಂದು ರೂಪವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಫ್ಯಾಕ್ಟ್‌ಚೆಕ್‌ನ್ನು ಉಪಯೋಗಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. 

ಅಂತರ್ಜಾಲವನ್ನು ದಿನ ನಿತ್ಯವೂ ಬಳಸುವ ವಿದ್ಯಾರ್ಥಿಗಳಿಗೆ ಯಾವುದು ಸರಿ-ತಪ್ಪು ಎಂಬುದರ ಅರಿವಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಅರಿವನ್ನು ನೀಡುವ ಕಾರ್ಯವನ್ನು ಪಾಲಕರು ಮತ್ತು ವಿಶ್ವವಿದ್ಯಾಲಯಗಳು ಮಾಡಬೇಕಿದೆ ಎಂದರು. 
ಸದ್ಯ ಕರ್ನಾಟಕದ ವಿಶ್ವ ವಿದ್ಯಾಲಯದಲ್ಲಿನ ಪತ್ರಿಕೋದ್ಯಮ ವಿಭಾಗದಲ್ಲಿ ಪತ್ರಿಕೋದ್ಯಮದ ಇತಿಹಾಸವನ್ನೇ ಹೇಳುತ್ತಾರೆ. ಈಗಿನ ಕಾಲಕ್ಕೆ ತಕ್ಕಂತೆ ಸಿಲೆಬಸ್ ಇಲ್ಲ ಎಂದ ಅವರು, ಹಾಗಂತ ಪತ್ರಿಕೋದ್ಯಮದ ಇತಿಹಾಸ ಇರ ಬಾರದು ಅಂತೇನೂ ಅಲ್ಲ. ಆದರೆ ಇತಿಹಾಸದ ಜೊತೆಗೆ ವೆಬ್‌ಗಳ ಬಗ್ಗೆಯೂ ಸಮರ್ಪಕ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳು, ಉಪನ್ಯಾಸಕರು ಕೊಂಚ ಗಮನಹರಿಸಬೇಕು ಎಂದರು. 

ಬಳಿಕ ನಡೆದ ಸಂವಾದದಲ್ಲಿ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವೇದಿಕೆ ಮೇಲೆ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರಧಾನ ಗುರುದತ್ತ ಇದ್ದರು.
 

Follow Us:
Download App:
  • android
  • ios