Asianet Suvarna News Asianet Suvarna News

‘ರೈತರ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಡ ಹಾಕಬಾರದು’

ಪರಿಹಾರ ಮೊತ್ತ ಸಾಲಕ್ಕೆ ಜಮೆ ಮಾಡದಿರಿ| ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಶೀಲನೆ ಸಭೆಯಲ್ಲಿ ಬ್ಯಾಂಕರ್‌ಗಳಿಗೆ ಸಚಿವ ಜಗದೀಶ ಶೆಟ್ಟರ್‌ ಸೂಚನೆ|ಸರ್ಕಾರದಿಂದ ನೀಡುವ ನಗದು ಪರಿಹಾರ ಸೌಕರ್ಯಗಳನ್ನು ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು|

Bankers Don not Force to Farmers for Loan Repayment
Author
Bengaluru, First Published Nov 3, 2019, 7:51 AM IST

ಹುಬ್ಬಳ್ಳಿ[ನ.3]: ಬ್ಯಾಂಕುಗಳು ಬೆಳೆವಿಮೆ ಮತ್ತು ಪರಿಹಾರ ಹಣವನ್ನು ರೈತರ ಗಮನಕ್ಕೆ ತರದೆ ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು ಎಂದು ಬೃಹತ್‌, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ಸೂಚಿಸಿದ್ದಾರೆ.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ನೀಡುವ ನಗದು ಪರಿಹಾರ ಸೌಕರ್ಯಗಳನ್ನು ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಅತಿವೃಷ್ಟಿಯಿಂದ ಈ ಬಾರಿ ಕೃಷಿಕರು ಸಂಪೂರ್ಣ ಹಾನಿಗೀಡಾಗಿದ್ದು, ಈ ವರ್ಷ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಡ ಹಾಕಬಾರದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬರ ಪರಿಹಾರ ಧನ ಜಮೆ ಮಾಡುವಲ್ಲಿ ಉಂಟಾಗಿರುವ ಪಡಿತರ ಚೀಟಿ ನಿಯಮ ಕುರಿತಾಗಿ, ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಮೂಲಕ ಅಗತ್ಯ ನಿರ್ದೇಶನವನ್ನು ಬ್ಯಾಂಕುಗಳಿಗೆ ನೀಡುವ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ನೋಟಿಸ್‌ ನೀಡಬೇಡಿ ತಿಳಿವಳಿಕೆ ಪತ್ರದ ಮೂಲಕ ಇಲ್ಲವೇ ಖುದ್ದಾಗಿ ಕರೆದು ಚರ್ಚಿಸಿ ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಅಬೀದ್‌ ಎಸ್‌.ಎಸ್‌., ಮುಂಗಾರಿನಲ್ಲಿ 740 ಮಿ.ಮೀ ಮಳೆಯಾಗಬೇಕಾಗಿತ್ತು. 1171 ವಾಸ್ತವಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಶೇ. 58ರಷ್ಟುಅಧಿಕ ಮಳೆಯಾಗಿದೆ. ಆಗಸ್ವ್‌ ತಿಂಗಳಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 1,32,103 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಪ್ರತಿ ಹೆಕ್ಟೇರ್‌ಗೆ . 6800 ಪರಿಹಾರದಂತೆ ಒಟ್ಟು . 91 ಕೋಟಿ ಇನ್‌ಪುಟ್‌ ಸಬ್ಸಿಡಿ ಅಗತ್ಯವಿದೆ. ಪರಿಹಾರ ತಂತ್ರಾಂಶದಲ್ಲಿ ಶೇ. 80ರಷ್ಟುಡಾಟಾ ಎಂಟ್ರಿ ಮಾಡಲಾಗಿದೆ. ಈಗಾಗಲೇ 25,185 ರೈತರಿಗೆ . 59.91 ಕೋಟಿ ಪರಿಹಾರವನ್ನು ನೇರವಾಗಿ ಜಮಾ ಮಾಡಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಅತಿವೃಷ್ಟಿಗೆ 48,831 ಹೆಕ್ಟೇರ್‌ ಕೃಷಿ ಬೆಳೆ ಹಾನಿಯನ್ನು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದರು.

ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಈಶ್ವರನಾಥ ಮಾತನಾಡಿ, ಮಹತ್ಮಾಗಾಂಧೀ ನರೇಗಾ, ಪ್ರಧಾನ ಮಂತ್ರಿ ಕಿಸಾನ್‌, ಬರ ಮತ್ತು ನೆರೆ ಪರಿಹಾರದ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳದಿರಲು ಸೂಚನೆ ನೀಡಲಾಗಿದೆ ಎಂದರು.

ಫಸಲ್‌ ಬಿಮಾ ಯೋಜನೆ:

2018-19ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 93904 ರೈತರು ನೋಂದಣಿ ಮಾಡಿದ್ದರು. ರೈತರ ವತಿಯಿಂದ ಒಟ್ಟು 17.463 ಪ್ರಿಮಿಯಂ ಮೊತ್ತ ಜಮಾ ಆಗಿದೆ. ಇದರಲ್ಲಿ 48801 ರೈತರಿಗೆ . 114.038 ಕೋಟಿ ಪರಿಹಾರ ಧನ ಇತ್ಯರ್ಥವಾಗಿದೆ. 43091 ರೈತರ ಖಾತೆಗೆ 103.350 ಕೋಟಿ ಹಣ ಜಮೆಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ 5710 ರೈತರ 10.689 ಕೋಟಿ ಪರಿಹಾರ ಧನ ಬಾಕಿ ಉಳಿದಿದೆ.

ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 100706 ರೈತರು ನೋಂದಣಿ ಮಾಡಿದ್ದಾರೆ. ರೈತರಿಂದ ಒಟ್ಟು 6.080 ಪ್ರಿಮಿಯಂ ಮೊತ್ತ ಜಮಾ ಆಗಿದೆ. ಇದರಲ್ಲಿ 75638 ರೈತರಿಗೆ 149.606 ಕೋಟಿ ಪರಿಹಾರ ಧನ ಇತ್ಯರ್ಥವಾಗಿದೆ. 72444 ರೈತರ ಖಾತೆಗೆ 143.289 ಕೋಟಿ ಹಣ ಜಮೆ ಮಾಡಲಾಗಿದೆ. ಒಟ್ಟು 3194 ರೈತರ  6.317 ಕೋಟಿ ಪರಿಹಾರ ಧನ ಬಾಕಿ ಉಳಿದಿದೆ ಎಂದು ವಿಮಾ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದರು. ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಎಡಿಸಿ ಶಿವಾನಂದ ಕರಾಳೆ, ತೋಟಗಾರಿಕೆ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
 

Follow Us:
Download App:
  • android
  • ios