Asianet Suvarna News Asianet Suvarna News

‘ಬಿಎಸ್‌ವೈ ರಾಜೀನಾಮೆಗೆ ಒತ್ತಾಯ’

ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮಗೆ ಆಗ್ರಹ ಕೇಳಿ ಬರುತ್ತಿದೆ. ಸಂಚಲನ ಸೃಷ್ಟಿಸುತ್ತಿರುವ ಆಡಿಯೋ ವಿಚಾರದ ಬಗ್ಗೆ ವಾಗ್ದಾಳಿ ನಡೆಸಲಾಗಿದೆ. 

Congress Protest Against BS Yediyurappa Over Audio Issue
Author
Bengaluru, First Published Nov 5, 2019, 12:50 PM IST

ದಾವಣಗೆರೆ [ನ.05]:  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಸೆಳೆದಿರುವ ಆಡಿಯೋ ವೈರಲ್‌ ಬಗ್ಗೆ ಸೂಕ್ತ ತನಿಖೆಯಾಗಬೇಕು. ಹಾಗೂ ಈ ಹಿನ್ನೆಲೆ ಬಿಎಸ್‌ವೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಯದೇವ ವೃತ್ತದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ನಿಂದ ಆಯೋಜಿಸಿದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಸೇರಿ ಅನೇಕ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾಕಾರರು, ಯಡಿಯೂರಪ್ಪ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅನರ್ಹ ಶಾಸಕರ ತ್ಯಾಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವ ಆಡಿಯೋ ಇದೀಗ ಜಗಜ್ಜಾಹಿರ ಆಗಿದೆ. ಅನರ್ಹ 17 ಶಾಸಕರು ವೈಯಕ್ತಿಕವಾಗಿ ರಾಜಿನಾಮೆ ಕೊಟ್ಟಿರುವುದಾಗಿ ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿದ್ದರು. ಆದರೆ ಯಡಿಯೂರಪ್ಪನವರು ಮಾತ್ರ ತಮ್ಮ ಪಕ್ಷ ಅಧಿಕಾರಕ್ಕೆ ತರಲು ಅನರ್ಹ ಶಾಸಕರು ರಾಜಿನಾಮೆ ಕೊಟ್ಟು ಬೊಂಬಾಯಿಯಲ್ಲಿ ತಿಂಗಳುಗಳ ಕಾಲ ಕುಟುಂಬ ವರ್ಗದ ಸಂಪರ್ಕವಿಲ್ಲದೇ ಕಾಲ ಕಳೆದಿದ್ದಾರೆ ಅವರಿಗಾಗಿ ನಾವು ಈಗ ತ್ಯಾಗ ಮಾಡಬೇಕಾಗಿದೆ. ಅಲ್ಲದೇ ಅವರಿಗೆ ಅಧಿಕಾರ ಕೊಡಬೇಕೆಂದು ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ. ಇದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರವನ್ನು ಬಿಜೆಪಿಯವರೇ ಕೆಡವಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆಂಬ ಮಾತು ನಿಜವಲ್ಲ. ಸಿದ್ದರಾಮಯ್ಯ ಅವರೇನು ಸತ್ಯ ಹರಿಶ್ಚಂದ್ರರಾ ಎಂದು ಹೇಳುವ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ ಎಂದು ಕಿಡಿಕಾರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವ ಆರ್‌. ಅಶೋಕ ಅವರು ಎಂಟಿಬಿ ನಾಗರಾಜ್‌ರನ್ನು ಕರೆದುಕೊಂಡು ಹೋಗಿ ವಿಶೇಷ ವಿಮಾನದಲ್ಲಿ ಹತ್ತಿಸುತ್ತಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೆಂಬಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಬಿಜೆಪಿಯವರು ಅಧಿಕಾರಕ್ಕಾಗಿ ಮಾಡಿರುವ ಕುತಂತ್ರಗಳು, ಸ್ಥಿರವಾಗಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಹಣದ ಆಮಿಷವೊಡ್ಡಿ ಅನರ್ಹ ಶಾಸಕರು ರಾಜಿನಾಮೆ ಕೊಡುವಂತೆ ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರು ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆ ಎಂದು ಟೀಕಿಸಿದರು.

ಯಡಿಯೂರಪ್ಪನವರದ್ದೆಂದು ಹೇಳಲಾಗಿರುವ ಆಡಿಯೋವನ್ನು ರಾಜ್ಯಪಾಲರು, ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಗುವುದು. ಈ ಪ್ರಕರಣದ ಹಿನ್ನೆಲೆ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಗೃಹಸಚಿವ ಅಮಿತ್‌ ಶಾ ಅನರ್ಹ ಶಾಸಕರ ಹಿನ್ನಲೆ ತಿಳಿದುಕೊಂಡು ಐಟಿ, ಇಡಿ ಎಂದು ಬೆದರಿಸಿ ಅನರ್ಹ ಶಾಸಕರ ರಾಜಿನಾಮೆಗೆ ಒತ್ತಡ ತಂದಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್‌, ಮುಖಂಡರಾದ ಎ. ನಾಗರಾಜ್‌, ಸೋಮಲಾಪುರ ಹನುಮಂತಪ್ಪ, ಮಾಗಾನಹಳ್ಳಿ ಪರಶುರಾಮ್‌, ನಂಜಾನಾಯ್ಕ, ಸೈಯದ್‌ ಖಾಲಿದ್‌, ಮೈನುದ್ದೀನ್‌, ರುದ್ರೇಶ್‌, ಮಂಜುನಾಥ್‌, ದ್ರಾಕ್ಷಾಯಣಮ್ಮ, ಶುಭಮಂಗಳ, ರಾಧಾ ಬಾಯಿ, ಜಗದೀಶ್‌, ಹಲಗೇರಿ ಮಂಜಪ್ಪ, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios