Asianet Suvarna News Asianet Suvarna News

ಚಾಕ್ ಪೀಸ್ ನಿಂದ ವರ್ಲ್ಡ್‌ಕಪ್ ಕಲಾಕೃತಿ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕಾರ್ಕಳದ ಸುರೇಂದ್ರ

ಕಾರ್ಕಳದ ಮೆಸ್ಕಾಂನಲ್ಲಿ ತಾತ್ಕಾಲಿಕ ನೌಕರನಾಗಿರುವ ಇವರು ವಿಶ್ರಾಂತಿ ಸಮಯವನ್ನು ಕಲೆಗೆ ಮೀಸಲಿಡುತ್ತಾರೆ. ಸೂಜಿ, ಬ್ಲೇಡ್ ಮೊದಲಾದ ಪರಿಕರಗಳಿಂದ ಪೆನ್ಸಿಲ್ ಸೀಸದಲ್ಲಿ ಕಲಾಕೃತಿ ತಯಾರಿಸುತ್ತಾರೆ.

Guinnes world records Karkala Surendra pencil lead emerges the tiniest of sculptures
Author
Bengaluru, First Published Oct 23, 2019, 1:18 PM IST

2011 ರಲ್ಲಿ ಚಾಕ್‌ಪೀಸ್ ನಲ್ಲಿ ಕಲಾವಿದರೊಬ್ಬರು  ಕ್ರಿಕೆಟ್ ವರ್ಲ್ಡ್‌ಕಪ್ ಕಲಾಕೃತಿ ರಚಿಸಿದ್ದರು. ಅದನ್ನು ನೋಡಿ ತಾನೂ ಈ ಥರ ಏನಾದರೂ ಮಾಡಬೇಕು ಎಂದುಕೊಂಡ ಹುಡುಗನ ಹೆಸರು ಸುರೇಂದ್ರ.

ಕಾರ್ಕಳ ತಾಲೂಕಿನ ಹೊಸ್ಮಾರು ಗ್ರಾಮದ ಈ ತರುಣ ಏನೋ ಮಾಡಬೇಕು ಸುಮ್ಮನೆ ಕೂರಲಿಲ್ಲ. ಪೆನ್ಸಿಲ್ ಸೀಸ(ಪೆನ್ಸಿಲ್ ಲೆಡ್)ದಲ್ಲಿ ಕಲಾಕೃತಿ ರಚಿಸಲು ಆರಂಭಿಸಿದ. ಆರಂಭದಲ್ಲಿ ಪೆನ್ಸಿಲ್ ತುದಿಗಳೆಲ್ಲಾ ಮುರಿದು ಹೋದವು. ಇನ್ನೇನು ಕಲಾಕೃತಿ ಮುಗಿಯುತ್ತದೆ ಅನ್ನುವಷ್ಟರಲ್ಲಿ ತುದಿ ಮುರಿದ್ದೂ ಇದೆ. ಅಂಥಾ ಸಮಯದಲ್ಲಿ ಇದೆಲ್ಲಾ ಬೇಡವೇ ಬೇಡ ಅನ್ನಿಸಿರಲೂ ಸಾಕು. ಆದರೆ ಸುರೇಂದ್ರ ಹಾಗಂದುಕೊಳ್ಳಲಿಲ್ಲ. ಪ್ರಯತ್ನ ಮಾಡಿ ಮಾಡಿ ಪೆನ್ಸಿಲ್ ಕಲಾಕೃತಿ ರಚಿಸಿಯೇ ಬಿಟ್ಟರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!

ಈ ಸಂದರ್ಭ ಕಚೇರಿಯಲ್ಲಿ ಬರೆದು ಎಸೆದ ಪೆನ್ಸಿಲ್‌ನಲ್ಲಿ ವಿಶ್ವಕಪ್ ಮಾದರಿ ತಯಾರಿಸಿದ್ದು ಅವರ ಕಲಾ ಪ್ರವೇಶಕ್ಕೆ ಮುನ್ನುಡಿ ಬರೆಯಿತು. 2015 ರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಬಳಿ ತಾನು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದರು. ಅವರು ಖುಷಿ ಪಟ್ಟು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಮಾರ್ಗದರ್ಶನ ನೀಡಿದರು.

ಮಹಾಸಾಧನೆ: 2009 ಸುರೇಂದ್ರ ಈ ಸಂದರ್ಭದಲ್ಲಿ ಮಹಾಸಾಧನೆಗೆ ರೆಡಿಯಾದರು. 58 ರಿಂಗ್‌ಗಳ ಸರಪಳಿ ರಚಿಸುವುದು ಅವರ ಉದ್ದೇಶವಾಗಿತ್ತು. 2019 ರ ಜನವರಿಯಲ್ಲಿ ಪಾಕಿಸ್ತಾನ ಅಬ್ದುಲ್ ಬಷೀರ್ ಎಂಬವರು ಪೆನ್ಸಿಲ್ ಸೀಸದಿಂದ ೫೦ ರಿಂಗ್‌ಗಳ ಸರಪಳಿ ರಚಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಸುರೇಂದ್ರ ಎಸ್ ಡಿಎಂ ಕಾಲೇಜು ವಿದ್ಯಾರ್ಥಿಗಳ ಸಹಕಾರ ಕೋರಿ ದರು. ರಿಂಗ್ ತಯಾರಿ ಶುರುವಾಯಿತು.

ಒಂದು ಗಂಟೆ, ಎರಡು ಗಂಟೆ ಯಾವಾಗ ಬೇಕಾದರೂ ಈ ಸರಪಳಿ ಕೈಕೊಡಬಹುದು. ಎಲ್ಲರೂ ಕುತೂಹಲದಿಂದ ನೋಡುತ್ತಿರುವಂತೆಯೇ ಸುರೇಂದ್ರ ೫೮ ರಿಂಗ್ ಗಳನ್ನು ರಚಿಸಿ ಮಹಾಸಾಧನೆ ಮಾಡಿಯೇ ಬಿಟ್ಟರು. ಅದಕ್ಕಾಗಿ ಅವರು ತೆಗೆದುಕೊಂಡಿದ್ದು ಬರೋಬ್ಬರಿ 12 ಗಂಟೆಗಳು. ಈ ಸಾಧನೆಗೆ ಅವರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.

ಮ್ಯೂಸಿಯಂ ಆಫ್ ಪೆನ್ಸಿಲ್ ಆರ್ಟ್: ಕಾರ್ಕಳದ ಮೆಸ್ಕಾಂನಲ್ಲಿ ತಾತ್ಕಾಲಿಕ ನೌಕರನಾಗಿರುವ ಇವರು ವಿಶ್ರಾಂತಿ ಸಮಯವನ್ನು ಕಲೆಗೆ ಮೀಸಲಿಡುತ್ತಾರೆ. ಸೂಜಿ, ಬ್ಲೇಡ್ ಮೊದಲಾದ ಪರಿಕರಗಳಿಂದ ಪೆನ್ಸಿಲ್ ಸೀಸದಲ್ಲಿ ಕಲಾಕೃತಿ ತಯಾರಿಸುತ್ತಾರೆ. ಮೊದಮೊದಲು ಈ ಸಾಧನೆಯಲ್ಲಿ ತೊಡಗಿಸಿಕೊಂಡಾಗ ಮನೆ ಮಂದಿ ಬೇಸರ ವ್ಯಕ್ತಪಡಿಸಿದ್ದರು. ಈಗ ಸಾಧನೆ ನೋಡಿ ಹುರಿದುಂಬಿಸುತ್ತಿದ್ದಾರೆ. ಡಾ. ಹೆಗ್ಗಡೆ ಅವರ ಬೇಡಿಕೆಯಂತೆ ಕೆಲವು ಕಲಾಕೃತಿಗಳನ್ನು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.

ಬಾಹುಬಲಿ ಮೂರ್ತಿ, ವೀಣೆ, ಮಾನವನ ಅಸ್ಥಿಪಂಜರ, ಗಿಟಾರ್ ಮೊದಲಾದ ಕಲಾಕೃತಿಗಳು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಶೃಂಗೇರಿ ಮಠಕ್ಕೆ ಅತಿ ಸಣ್ಣ ಶಂಕರಚಾರ್ಯರ ಪ್ರತಿ ಕೃತಿಯನ್ನು ನೀಡಿದ್ದಾರೆ. ಪೆನ್ಸಿಲ್ ಸೀಸದಿಂದ ಈವರೆಗೆ 120 ಕಲಾಕೃತಿಗಳನ್ನು ರಚಿಸಿದ್ದಾರೆ. ಸರ್ಕಾರ ಮತ್ತು ದಾನಿಗಳು ಸಹಕಾರ ನೀಡಿದರೆ ಮ್ಯೂಸಿಯಂ ನಿರ್ಮಾಣ ಇವರ ಮುಂದಿನ ಯೋಜನೆ. 

 

Follow Us:
Download App:
  • android
  • ios