ಕೊರೋನಾ ತಾಂಡವ: ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪಿಎಂ ಮೋದಿ ಮಾತು!
ದೇಶವನ್ನುದ್ದೇಶಿಸಿ ಪಿಎಂ ಮೋದಿ ಮಾತು| ಗುರುವಾರದ ಬಳಿಕ ಎರಡನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಮೋದಿ| ಟ್ವೀಟ್ ಮಾಡಿ ಮಾಹಿತಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ(ಮಾ24): ಭಾರತಕ್ಕೂ ಲಗ್ಗೆ ಇಟ್ಟಿರುವ ಕೊರೋನಾ ವೈರಸ್ ಈಗಾಗಲೇ ಒಂಭತ್ತು ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ 490ಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ 'ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ಸಾಂಕ್ರಾಮಿಕ ಕೊರೋನಾ ವೈರಸ್ ಸಂಬಂಧಿತ ಕೆಲ ಮಹತ್ವಪೂರ್ಣ ವಿಚಾರಗಳನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲಿಚ್ಛಿಸುತ್ತೇನೆ. ಇಂದು 24 ಮಾರ್ಚ್ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಗುರುವಾರದ ಬಳಿಕ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದು ಇದು ಎರಡನೇ ಬಾರಿ. ಗುರುವಾರದಂದು ಮಾತನಾಡಿದ್ದ ಪಿಎಂ ಮೋದಿ ಭಾನುವಾರದಂದು 'ಜನತಾ ಕರ್ಫ್ಯೂ' ಹದಿನಾಲ್ಕು ತಾಸಿನ ಸ್ವಯಂ ದಿಗ್ಬಂಧನದಲ್ಲಿರುವಂತೆ ಕರೆ ನೀಡಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಆದರೆ ಇದರ ಗಂಭೀರತೆ ಅರಿಯದ ಜನತೆ ಸೋಮವಾರದಂದು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಬಳಿಕ ಲಾಕ್‌ಡೌನ್ ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದವು. ಅಲ್ಲದೇ ಕರ್ನಾಟಕ, ಪಂಜಾಬ್ ಸೇರಿ ಅನೇಕ ರಾಜ್ಯಗಳು ಮಾರ್ಚ್ 31ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿವೆ.