Asianet Suvarna News Asianet Suvarna News

ಇ-ಕಾಮರ್ಸ್ ಮೇಲೆ ಸರ್ಕಾರಕ್ಕೆ ನಿಯಂತ್ರಣ ಏಕೆ ಬೇಕು?

ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ಎಫ್‌ಡಿಐ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆದರೆ, ಈ ನೀತಿಯಲ್ಲಿ ಗೊಂದಲಗಳಿವೆ ಎಂದು ದೂರುಗಳು ಬರುತ್ತಿವೆ. ಈ ಬಗ್ಗೆ ವಾಣಿಜ್ಯ ಸಚಿವರು ಇ.ಟಿ. ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

Suresh Prabhu says Govt control is needed in e-commerce for transparency
Author
Bengaluru, First Published Jan 18, 2019, 4:11 PM IST

ನವದೆಹಲಿ (ಜ. 18): ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ಎಫ್‌ಡಿಐ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆದರೆ, ಈ ನೀತಿಯಲ್ಲಿ ಗೊಂದಲಗಳಿವೆ ಎಂದು ದೂರುಗಳು ಬರುತ್ತಿವೆ. ಈ ಬಗ್ಗೆ ವಾಣಿಜ್ಯ ಸಚಿವರು ಇ.ಟಿ. ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

ಎಫ್‌ಡಿಐ ನೀತಿ ತಿದ್ದುಪಡಿಯಲ್ಲಿ ಸ್ಪಷ್ಟತೆ ಇಲ್ಲ. ಒಟ್ಟಾರೆ ನೀತಿಯೇ ಗೊಂದಲಗಳಿಂದ ಕೂಡಿದೆ ಎಂದು ಹೇಳಲಾಗುತ್ತಿದೆಯಲ್ಲಾ?

ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಸ್ಪಷ್ಟವಾಗಿದೆ. ಆ ಕುರಿತ ರಾಜಕೀಯ ಸಿದ್ಧಾಂತವೂ ಸ್ಪಷ್ಟವಾಗಿದೆ. ದೇಶದಲ್ಲಿ ಸಿಂಗಲ್ ಬ್ರ್ಯಾಂಡ್ ರೀಟೇಲ್ ಕ್ಷೇತ್ರದಲ್ಲಿ ಶೇ.೧೦೦ರಷ್ಟು ಎಫ್‌ಡಿಐ ಹೂಡಿಕೆ ಮಾಡಲು ಮುಕ್ತ ಅವಕಾಶವಿದೆ, ಆದರೆ ಬಹುಬ್ರ್ಯಾಂಡ್ ಚಿಲ್ಲರೆ ವ್ಯಾಪಾರಕ್ಕೆ ಮುಕ್ತ ಅವಕಾಶವಿಲ್ಲ. ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಸಿಂಗಲ್ ಬ್ರ್ಯಾಂಡ್ ಎಂದು ವ್ಯಾಖ್ಯಾನಿಸುವ ಮಾನದಂಡ ಏನು ಎಂಬುದು ಈಗಿರುವ ಸಮಸ್ಯೆ. ಆದರೆ ಅದನ್ನೂ ಈಗಾಗಲೇ ಸ್ಪಷ್ಟಪಡಿಸಲಾಗಿದೆ.

ದಾಸ್ತಾನು ಮಾದರಿಯೇ ಅಥವಾ ಅಲ್ಲವೇ ಎಂಬುದರ ಆಧಾರದ ಮೇಲೆ ಅದನ್ನು ನಿರ್ಧರಿಸಲಾಗುತ್ತದೆ. ಅದು ಒಂದು ಭಾಗ. ಅದಲ್ಲದೆ ಯಾವುದೇ ವಿದೇಶಿ ನೇರ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಗೆ ಮುಂದಾದರೆ ನಾವದನ್ನು ತಡೆಯುವುದಿಲ್ಲ. ಭಾರತದಲ್ಲಿ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳಿದ್ದಾರೆ. ಅವರು ಕೆಲವರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಂತ ದೇಶೀಯ ಹೂಡಿಕೆ ಮತ್ತು ವಿದೇಶಿ ನೇರ ಹೂಡಿಕೆ ನಡುವೆ ಸಂಘರ್ಷ ಏರ್ಪಡುತ್ತಿದೆ ಎಂದಲ್ಲ.

ಈ ಎಫ್‌ಡಿಐ ಅನ್ನು ನೇರವಾಗಿ ಸರ್ಕಾರವೇ ಮೇಲ್ವಿಚಾರಣೆ ಮಾಡುತ್ತಿದ್ದು, ಸಾಧ್ಯವಾದಷ್ಟು ಸರಳ ಮತ್ತು ಪಾರದರ್ಶಕವಾಗಿರಿಸಲು ಪ್ರಯತ್ನಿಸುತ್ತಿದೆ. ಹಾಗೊಂದು ವೇಳೆ ಏನೇ ಸಮಸ್ಯೆ ಎದುರಾದರೂ ಡಿಪಾರ್ಟ್‌ಮೆಂಟ್ ಆಫ್ ಇಂಡಸ್ಟ್ರಿಯಲ್ ಪಾಲಿಸಿ ಅಂಡ್ ಪ್ರೊಮೋಷನ್ (ಡಿಐಪಿಪಿ) ಕಾರ್ಯದರ್ಶಿಗೆ ದೂರು ನೀಡಬಹುದು. ಹಾಗಾಗಿ ಎಫ್‌ಡಿಐ ಗೊಂದಲದಿಂದ ಕೂಡಿದೆ ಎಂದು ಭಾವಿಸಬೇಕಿಲ್ಲ.

ಹೊಸ ಎಫ್‌ಡಿಐ ನೀತಿಯಲ್ಲಿ ದೇಶಿ ಹೂಡಿಕೆದಾರರು ಮತ್ತು ವಿದೇಶಿ ಹೂಡಿಕೆದಾರರ ನಡುವೆ ತಾರತಮ್ಯ  ಮಾಡಲಾಗುತ್ತಿದೆಯೇ?

ಹಿಂದೆ ಇ-ಕಾಮರ್ಸ್ ಕಂಪನಿಗಳ ಮೇಲ್ವಿಚಾರಣೆ ವಾಣಿಜ್ಯ ಇಲಾಖೆಯಲ್ಲಿ ನಡೆಯುತ್ತಿತ್ತು. ಈಗ ಡಿಐಪಿಪಿಯಲ್ಲಿ ನಡೆಯುತ್ತಿದೆ. ಇಷ್ಟೇ ವ್ಯತ್ಯಾಸ. ಡಿಐಪಿಪಿ ಈಗ ಸಾವಿರಾರು ಜನರಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದೆ. ಈಗ ಉದ್ಯಮಿಗಳು ದೇಶೀಯವಾಗಿ ಹೂಡಿಕೆ ಮಾಡಬೇಕೆಂದಿದ್ದರೆ ದೇಶದ ಯಾವುದೇ ಭಾಗದಲ್ಲಿ ಹೂಡಿಕೆ ಮಾಡ ಬಹುದು. ಅದಕ್ಕೆಂದೇ ಕೇಂದ್ರ ಸರ್ಕಾರ ನೀತಿಯೊಂದನ್ನು ಸಿದ್ಧಪಡಿಸುವ ಅಗತ್ಯವಿಲ್ಲ. ಇ-ಕಾಮರ್ಸ್ ಪಾಲಿಸಿಯು ನಿರ್ದಿಷ್ಟ ವಿಷಯಾಧಾರಿತ ನೀತಿ. ಎಫ್‌ಡಿಐ ನಿರ್ದಿಷ್ಟ ಕ್ಷೇತ್ರವೊಂದಕ್ಕೆ ಸಂಬಂಧಿಸಿದ ನೀತಿ. ಇದರಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ.

ಸಣ್ಣ ವ್ಯಾಪಾರಿಗಳ ರಕ್ಷಣೆಗೆ ಸರ್ಕಾರ ನಿಂತಿದೆ. ಆದರೆ ಇ-ಕಾಮರ್ಸ್ ಕಂಪನಿಗಳು ತಮ್ಮ ಉದ್ಯಮವನ್ನು ಹೇಗೆ ನಡೆಸುತ್ತಿವೆ ಎಂಬುದನ್ನು ಗುಟ್ಟು ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತದೆ. ಇದು ನಿಜವೇ?

ಅವು ಸಂಪೂರ್ಣವಾಗಿ ಅವುಗಳದೇ ಆದ ಬಿಸಿನೆಸ್ ಮಾಡೆಲ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಆ ಬಿಸಿನೆಸ್ ಮಾಡೆಲ್ ಗೆ ಒಂದು ನಿರ್ದಿಷ್ಟ ನೀತಿಯ ಚೌಕಟ್ಟು ಹಾಗೂ ಸರ್ಕಾರದ ನಿಯಂತ್ರಣ ಇರಬೇಕಾಗುತ್ತದೆ. ಸಿಂಗಲ್ ಬ್ರ್ಯಾಂಡ್ ಬಿಸಿನೆಸ್ ಮಾಡೆಲ್ ಅಂದರೆ ಏನು, ಅದರ ಸಿದ್ಧಾಂತ ಏನು ಎಂಬುದು ಮೊದಲಿಗೆ ಸ್ಪಷ್ಟವಾಗಬೇಕು.

ಏನೇ ಸಮಸ್ಯೆಗಳಿದ್ದರೂ ಸೆಕ್ರೆಟರಿ ಡಿಐಪಿಪಿಗೇ ದೂರು ನೀಡಿ ಪರಿಹರಿಸಿಕೊಳ್ಳಬಹುದು. ಇ-ಕಾಮರ್ಸ್ ಕಂಪನಿಗಳು ತಮ್ಮ ಉದ್ಯಮವನ್ನು ಹೇಗೆ ನಡೆಸುತ್ತವೆ ಎಂಬುದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ದೇಶೀ ಅಥವಾ ವಿದೇಶಿ ಹೂಡಿಕೆದಾರೊಡನೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿಯಷ್ಟೆ.

ವಿದೇಶಿ ನೇರ ಹೂಡಿಕೆಗಳನ್ನು ಸ್ವೀಕರಿಸುವ ಇ-ಕಾಮರ್ಸ್ ಕಂಪನಿಗಳು ಭಾರಿ ರಿಯಾಯ್ತಿ ಮತ್ತು ಕ್ಯಾಶ್‌ಬ್ಯಾಕ್ಗಳನ್ನು ನೀಡಬಾರದು ಎಂದು ಸರ್ಕಾರ ನಿರ್ಬಂಧ ಹೇರಿದ್ದು ಏಕೆ? ಕ್ಯಾಶ್‌ಬ್ಯಾಕ್‌ಗಳಿಂದ ಗ್ರಾಹಕರಿಗೆ ಅನುಕೂಲವಾಗುವುದಿಲ್ಲವೇ?

ಮೊದಲನೆಯದಾಗಿ ವಿದೇಶಿ ಬಂಡವಾಳ, ದೇಶೀಯ ಬಂಡವಾಳ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ಎಫ್‌ಡಿಐ ನೀತಿ ಈ ವಿಷಯದಲ್ಲಿ ಸ್ಪಷ್ಟವಾಗಿದೆ. ಆದಾಗ್ಯೂ ಸಮಸ್ಯೆ ಇದೆ ಎಂದಲ್ಲಿ ಪುನರ್ ಪರಿಶೀಲಿಸಲಾಗುವುದು. ಭಾರತದಲ್ಲಿ ಈಗಾಗಲೇ 60  ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ನಮ್ಮ ಗುರಿ 100 ಬಿಲಿಯನ್ ಡಾಲರ್. ಅದಕ್ಕಾಗಿ ಯಾವ ಕಂಪನಿಗಳು ಎಷ್ಟು ಬಂಡವಾಳ ಹೂಡಬಹುದು, ಯಾವ್ಯಾವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು, ಈ ವಿಷಯದಲ್ಲಿ ನಾವೇನು ಮಾಡಬಹುದು ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ.

ನಮ್ಮ ಪಾಲಿಸಿ ಪಾರದರ್ಶಕ, ದೀರ್ಘಕಾಲಿಕ ಮತ್ತು ಸರಳವಾಗಿದೆ ಎಂದು ಎಲ್ಲಾ ವಿದೇಶಿ ಮತ್ತು ದೇಶೀಯ ಹೂಡಿಕೆದಾರರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ಈ ವಿಷಯದಲ್ಲಿ ಭಾರತದಲ್ಲಿನ ಸಣ್ಣ ವ್ಯಾಪಾರಿಗಳ ರಕ್ಷಣೆಗೆ ನಾವು ನಿಲ್ಲಬೇಕಾಗುತ್ತದೆ. ಏಕೆಂದರೆ ಸಣ್ಣ ವ್ಯಾಪಾರಿಗಳು ನಮ್ಮ ದೇಶದ ಜನಸಾಮಾನ್ಯರು. ಸರ್ಕಾರ ಜಾರಿಗೆ ತರುವ ಯಾವುದೇ ನೀತಿಯ ಮೂಲ ಉದ್ದೇಶವೇ ಸಾರ್ವಜನಿಕರ ಹಿತಾಸಕ್ತಿಯ ರಕ್ಷಣೆ.

ಅದರ ಜೊತೆಜೊತೆಗೇ ಖಾಸಗಿ ಹೂಡಿಕೆದಾರರು ಮತ್ತು ಭಾರತದ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗೂ ಧಕ್ಕೆಯುಂಟಾಗದ ರೀತಿಯಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸುವುದು ನಮ್ಮ ಗುರಿ. ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಎಫ್‌ಡಿಐ ಪೂರಕವಾಗಿರಬೇಕು ಎಂಬುದು ನಮ್ಮ ಅಭಿಲಾಷೆ.

ವಿದೇಶಿ ನೇರ ಹೂಡಿಕೆಗೆ ಬಂಡವಾಳಗಾರರನ್ನು ಆಕರ್ಷಿಸುವುದು ಎಷ್ಟು ಕಷ್ಟ?

ಅದೊಂದು ಸಾಹಸದ ಕೆಲಸ. ಉದಾಹರಣೆಗೆ ದ್ವಿದಳ ಧಾನ್ಯಗಳನ್ನು ಮೊದಲು ಆಮದು ಮಾಡಿಕೊಳ್ಳಲಾಗುತ್ತಿತ್ತು. ಅನಂತರ ದ್ವಿದಳ ಧಾನ್ಯಗಳ ಆಮದನ್ನು ನಿಲ್ಲಿಸಲಾಯಿತು. ಅಲ್ಲಿಯವರೆಗೆ ನಮ್ಮಲ್ಲೂ ದ್ವಿದಳ ಧಾನ್ಯಗಳನ್ನು ಬೆಳೆಯಬಹುದೆಂಬ ಕಲ್ಪನೆಯೇ ಇರಲಿಲ್ಲ.

ಆಸ್ಟ್ರೇಲಿಯಾ, ಕೆನಡಾ, ಮ್ಯಾನ್ಮಾರ್‌ಗಳಿಂದ ಆವರೆಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅನಂತರ ಮಾತುಕತೆ ನಡೆದು ಆ ದೇಶಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡವು. ನಾವು ಅನಿರ್ದಿಷ್ಟವಾದ, ನಿರಂತರವಾಗಿ ಬದಲಾಗುತ್ತಲೇ ಇರುವ ಕಾಲದಲ್ಲಿ ಬದುಕುತ್ತಿದ್ದೇವೆ. ಇಂತಹ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ.

 ಏಂಜಲ್ ಟ್ಯಾಕ್ಸ್ ವಿಚಾರದಲ್ಲಿ ಏನು ನಡೆಯುತ್ತಿದೆ?

ಏಂಜಲ್ ಟ್ಯಾಕ್ಸ್ ವಿಚಾರದಲ್ಲಿ ಹಣಕಾಸು ಸಚಿವಾಲಯ ಮತ್ತು ನಮ್ಮ ಸಚಿವಾಲಯ ಕೂಡ ಚಿಂತಿಸುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಏಂಜಲ್ ಎಂದರೆ ಆಕಾಶದಿಂದಿಳಿದು ಬರುವ ಅಪ್ಸರೆ. ಅದೇ ರೀತಿ ಏಂಜಲ್ ಟ್ಯಾಕ್ಸ್ ಕೂಡ ಸರ್ಕಾರದ ಬೊಕ್ಕಸಕ್ಕೆ ಹರಿದುಬರಲಿದೆ ಎಂಬ ನಂಬಿಕೆ ಇದೆ, ನೋಡೋಣ.

 ಇ-ಕಾಮರ್ಸ್ ಮೇಲೆ ಸರ್ಕಾರಕ್ಕೆ ನಿಯಂತ್ರಣ ಏಕೆ ಬೇಕು?

ಮೊದಲಿಗೇ ಹೇಳುತ್ತಿದ್ದೇನೆ, ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಸರ್ಕಾರ ಇನ್ನೂ ಕೈಗೊಂಡಿಲ್ಲ. ಆದರೆ, ಇ-ಕಾಮರ್ಸ್ ಕ್ಷೇತ್ರ ದಲ್ಲಿ ಪಾರದರ್ಶಕತೆ ತರುವ ಅಗತ್ಯವಿದೆ. ಆ ಉದ್ದೇಶದಿಂದ ಒಂದು
ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಯುತ್ತಿದೆ ಅಷ್ಟೆ.

 ಜಾಗತಿಕ ವ್ಯಾಪಾರ ಸಮರ (ಟ್ರೇಡ್ ವಾರ್)ದಿಂದ ಭಾರತಕ್ಕೂ ಸಮಸ್ಯೆ ಇದೆಯೇ?

ಗ್ಲೋಬಲ್ ಟ್ರೇಡ್ ವಾರ್ ಎರಡು ಪ್ರಬಲ ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರ ಸಮರ. ಹೆಚ್ಚಾಗಿ ಚೀನಾ ಮತ್ತು ಅಮೆರಿಕ ಈ ಗ್ಲೋಬಲ್ ಟ್ರೇಡ್ ವಾರ್‌ನಲ್ಲಿ ತೊಡಗಿಕೊಂಡಿವೆ. ಈ ರೀತಿಯ ಟ್ರೇಡ್ ವಾರ್‌ಗಳು ಪ್ರಬಲವಾದ ಜಾಗತಿಕ ಸಂಘಟನೆಯ ನೇತೃತ್ವದಲ್ಲಿ ಬಗೆಹರಿಯಬೇಕು. ಇದಕ್ಕೆಂದೇ ಡಬ್ಲ್ಯುಟಿಒ ಇದೆ. ಇದು ಕೇವಲ ಒಂದು ಸಂಘಟನೆಯಾಗದೆ ಮತ್ತಷ್ಟು ಪರಿಣಾಮಕಾರಿಯಾಗಿ, ಗಂಭೀರವಾಗಿ, ಸಮರ್ಥವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ವಿಶ್ವ ವ್ಯಾಪಾರದಲ್ಲಿ ಹೆಚ್ಚು ಪಾರದರ್ಶಕವಾಗಿ ಮುಂಚೂಣಿ ಪಾತ್ರ ವಹಿಸುವ ಉದ್ದೇಶದಿಂದ ಭಾರತವೂ ಕೆಲಸ ಮಾಡುತ್ತಿದೆ.

- ಸುರೇಶ್ ಪ್ರಭು, ಕೇಂದ್ರ ವಾಣಿಜ್ಯ ಸಚಿವ 

Follow Us:
Download App:
  • android
  • ios