Asianet Suvarna News Asianet Suvarna News

ಆರ್‌ಬಿಐ ಸಿಧು ರೀತಿ ಅಲ್ಲ, ದ್ರಾವಿಡ್ ರೀತಿ ಆಡಬೇಕು: ರಾಜನ್

ಆರ್‌ಬಿಐ ಮತ್ತು ಸರ್ಕಾರದ ಕಾರ್ಯಗಳು ಪರಸ್ಪರ ಹೊಂದಾಣಿಕೆಯ ಮೇಲೆ ಆಧಾರಿತವಾಗಿರುತ್ತದೆ. ಯಾವಾಗ ಒಂದರ ಜಾಗವನ್ನು ಇನ್ನೊಂದು ಒತ್ತುವರಿ ಮಾಡಲು ಯತ್ನಿಸುತ್ತದೋ ಆಗ ಸಮಸ್ಯೆ ಆರಂಭವಾಗುತ್ತದೆ.

 

 

RBI former governor Raghuram Rajan talks about RBI policy
Author
Bengaluru, First Published Nov 9, 2018, 10:42 AM IST

ಮುಂಬೈ (ನ. 09): ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಕೇಂದ್ರ ಮತ್ತು ಆರ್‌ಬಿಐ ನಡುವಣ ಸಂಬಂಧ ಹೇಗಿರಬೇಕು ಎಂದು ‘ಇಟಿ ನೌ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

ಆರ್‌ಬಿಐ ಮತ್ತು ಸರ್ಕಾರದ ನಡುವಿನ ಸದ್ಯದ ಜಟಾಪಟಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಂಬುದು ಕಾರಿನಲ್ಲಿರುವ ಸೀಟ್ ಬೆಲ್ಟ್ ಮತ್ತು ಸರ್ಕಾರ ಚಾಲಕನಂತೆ. ಹಾಗಾಗಿ ಸರ್ಕಾರವೇ ನಿರ್ಧಾರ ಮಾಡಬೇಕು. ಸೀಟ್‌ಬೆಲ್ಟ್ ಧರಿಸಬೇಕೋ ಅಥವಾ ಬೇಡವೋ ಎಂದು. ಸೀಟ್‌ಬೆಲ್ಟ್ ಇಲ್ಲದೇ ವಾಹನ ಚಾಲನೆ ಮಾಡಿದರೆ ಗಂಭೀರ ಅಪಘಾತ ಸಂಭವಿಸಬಹುದು.

ಸದ್ಯ ವಿರಳ್ ಆಚಾರ್ಯ ಹೇಳಿದ್ದೂ ಕೂಡ ಇದನ್ನೇ. ಕೇಂದ್ರ ಬ್ಯಾಂಕ್ ಮತ್ತು ಸರ್ಕಾರದ ಮೂಲಭೂತ ಕರ್ತವ್ಯವೇ ಅದು. ಆರ್‌ಬಿಐ ಆರ್ಥಿಕ ಸ್ಥಿರತೆಯತ್ತ ಗಮನಹರಿಸುತ್ತಿದ್ದರೆ, ಸರ್ಕಾರ ಆರ್ಥಿಕ ಬೆಳವಣಿಗೆಯತ್ತ ಗಮನಹರಿಬೇಕು. ಆರ್‌ಬಿಐಗೆ ಸ್ವಾಯತ್ತೆ ಇರಬೇಕು. ಕೇಂದ್ರ ಸರ್ಕಾರ ಆರ್‌ಬಿಐ ಸಹನಶೀಲವಾಗಿರಬೇಕು ಎಂದು ಬಯಸುತ್ತದೆ. ಅದಕ್ಕಾಗಿ ಪ್ರಯತ್ನಿಸುತ್ತದೆ. ಅಂತಹ ಸಂದರ್ಭದಲ್ಲಿ ಇಲ್ಲ ಎಂದು ಹೇಳುವ ಅಧಿಕಾರ ಆರ್‌ಬಿಐಗೆ ಇದೆ. ಹಾಗೆಂದ ಮಾತ್ರಕ್ಕೆ ಅದು ಸ್ವ-ಹಿತಾಸಕ್ತಿ ಅಥವಾ ರಾಜಕೀಯ ಹಿತಾಸಕ್ತಿ ಎಂದು ಹೇಳಲಾಗುವುದಿಲ್ಲ.

ಸರ್ಕಾರ ಮತ್ತು ಆರ್‌ಬಿಐ ವಿಭಿನ್ನ ದಾರಿಯಲ್ಲಿ ಹೋಗುತ್ತಿವೆ. ಮತ್ತೆ ಒಂದುಗೂಡಿ ಕಾರ್ಯನಿರ್ವಹಿಸುವುದು ಸಾಧ್ಯವೇ?  

ಸರ್ಕಾರ ಮತ್ತು ಅತ್ಯುನ್ನತ ಸಂಸ್ಥೆಯೊಂದರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಆದರೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಎರಡೂ ಎರಡರ ಅಧಿಕಾರದ ಸರಹದ್ದನ್ನು ಗೌರವಿಸಬೇಕು. ನನ್ನ ಅವಧಿಯಲ್ಲೂ ಇಂತಹ ಅನೇಕ ಸನ್ನಿವೇಶಗಳು ಎದುರಾಗಿದ್ದವು. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಎಲ್ಲವೂ ತಹಬದಿಗೆ ಬರುತ್ತದೆಂಬ ವಿಶ್ವಾಸ ನನಗಿದೆ. ಅದರೆ ಇಷ್ಟು ತಾರಕ್ಕೇರಿರಲಿಲ್ಲ.

 ಸೆಕ್ಷನ್‌ 7 ಅನ್ನೇ ಆಧಾರವಾಗಿಟ್ಟುಕೊಂಡು ಆರ್‌ಬಿಐ ಮೇಲೆ ಪ್ರಹಾರ ಮಾಡಲಾಗುತ್ತಿದೆಯೇ?

ಸೆಕ್ಷನ್ 7 ಒಂದು ತೀರ್ಪಲ್ಲ. ಆದರೆ ಅದೊಂದು ಒಳ್ಳೆಯ ಕಾಯ್ದೆ. ಸೆಕ್ಷನ್ 7 ಅನುಷ್ಠಾನಕ್ಕೆ ಬಂದರೆ ಎರಡರ ನಡುವಿನ ಸಂಬಂಧಗಳು ಹಾಳಾಗುತ್ತದೆ. ಆರ್‌ಬಿಐ ಮತ್ತು ಸರ್ಕಾರದ ಕಾರ್ಯಗಳು ಪರಸ್ಪರ ಹೊಂದಾಣಿಕೆಯ ಮೇಲೆ ಆಧಾರಿತವಾಗಿರುತ್ತದೆ. ಆರ್‌ಬಿಐ ಸರ್ಕಾರದ ಒಂದು ಸಂಸ್ಥೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅದು ಪ್ರತ್ಯೇಕ ಕಾರ್ಯಕ್ಕೆ ನಿಯೋಜನೆಯಾಗಿದೆ. ಎರಡೂ ಪ್ರತಿಯೊಂದರ ಕಾರ್ಯಚಟುವಟಿಕೆ ಮೇಲೆ ಗಮನಹರಿಸುತ್ತಿರಬೇಕು. ಯಾವಾಗ ಒಂದರ ಜಾಗವನ್ನು ಇನ್ನೊಂದು ಒತ್ತುವರಿ ಮಾಡಲು ಯತ್ನಿಸುತ್ತದೋ ಆಗ ಸಮಸ್ಯೆ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಆರ್‌ಬಿಐನ ಕಾರ್ಯವ್ಯಾಪ್ತಿ/ ಸ್ವಾಯತ್ತೆ ಮತ್ತೆ ಪುನರ್‌ಸ್ಥಾಪಿತವಾಗುತ್ತದೆ ಎಂಬ ನಂಬಿಕೆ ಇದೆ.

ರಿಸರ್ವ್ ಬ್ಯಾಂಕ್‌ನ ಲಾಭಾಂಶದಲ್ಲಿ ಸರ್ಕಾರದ ಹಕ್ಕೇನು?

ಆರ್‌ವಿಐ ಲಾಭಾಂಶದ ಹಂಚಿಕೆ ಕುರಿತ ಸಮಗ್ರ ಚರ್ಚೆಯು ಯಾವಾಗಲೂ ವಿವಾದಕ್ಕೆ ಕಾರಣವಾಗುತ್ತದೆ. ಬಜೆಟ್ ಸಮಯದಲ್ಲಿ ಲಾಭಾಂಶದ ಕುರಿತ ಸಂವಾದ ಕಷ್ಟಕರ. ನನ್ನ ಪ್ರಕಾರ ಡಿವಿಡೆಂಡ್ ಸ್ಪಷ್ಟ ಮತ್ತು ಯಾಂತ್ರಿಕ ಪ್ರಕ್ರಿಯೆಯಾಗಿರಬೇಕು. ಆದರೆ ಅದು ಇದುವರೆಗೂ ಸಾಧ್ಯವಾಗಿಲ್ಲ.

ಆರ್‌ಬಿಐನ ಇಕ್ವಿಟಿ ಮೌಲ್ಯವು ಕೇಂದ್ರದ ಆಸ್ತಿಯಾಗಿದ್ದು, ಅದು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ತಜ್ಞರ ಪ್ರಕಾರ ಆರ್‌ಬಿಐ ಲಾಭಾಂಶಕ್ಕಿಂತ ಹೆಚ್ಚಿನ ಲಾಭವನ್ನು ಡಿವಿಡೆಂಡ್ ಫಂಡ್ ಆಗಿ ನೀಡಬಾರದು. ಆರ್ಬಿಐ ಇಕ್ವಿಟಿಯ ಮೌಲ್ಯವು ಇತ್ತೀಚಿನ ರುಪಾಯಿ ಮೌಲ್ಯ ಕುಸಿತದೊಂದಿಗೆ ಏರಿದೆ. ಆರ್‌ಬಿಐ ಸರ್ಕಾರಕ್ಕೆ ಲಾಭಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಲು ಸಾಧ್ಯವಿಲ್ಲ. ಒಂದು ವೇಳೆ ಆರ್‌ಬಿಐ ಹೆಚ್ಚಿನ ಹಣವನ್ನು ನೀಡಿದಲ್ಲಿ ಅದು ಹಣದುಬ್ಬರಕ್ಕೆ
ಕಾರಣವಾಗುತ್ತದೆ.

ವಂಚನೆ ಮತ್ತು ಉದ್ದೇಶಪೂರ್ವಕ ಸುಸ್ತಿದಾರ ಪ್ರಕರಣಗಳ ಬಗ್ಗೆ ನಿಮ್ಮ ನಿಲುವು?

ವಂಚನೆ ಪ್ರಕರಣಗಳು ಮತ್ತು ಉದ್ದೇಶಪೂರ್ವಕ ಸುಸ್ತಿದಾರ ಪ್ರಕರಣಗಳನ್ನು ಒಂದೇ ಎಂದು ನೋಡಲಾಗುವುದಿಲ್ಲ. ಉದ್ದೇಶ ಪೂರ್ವಕ ಸುಸ್ತಿದಾರರು ಸಾಲಮರುಪಾವತಿ ಮಾಡದಿರಬಹುದು. ಆದರೆ ಹಣ ತೆಗೆದುಕೊಂಡು ಓಡಿ ಹೋಗಲ್ಲ. ಆದರೆ ವಂಚಕರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮಕೈಗೊಳ್ಳಬೇಕು. ಆ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಆದರೆ ವಂಚಕರ ಹೆಸರುಗಳನ್ನು ಏಕೆ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ವಂಚಕನೊಬ್ಬನಿಗೆ ಶಿಕ್ಷೆ ನೀಡಿಲ್ಲದಿದ್ದರೆ, ಅದು ವಂಚನೆಗೆ ಪ್ರೋತ್ಸಾಹಿಸಿದಂತೆ.

ವಂಚಕರ ವಿರುದ್ಧ ಕ್ರಮಕ್ಕೆ ಸರ್ಕಾರ ಏನು ಮಾಡಬೇಕು?

ಏನೂ ಮಾಡಬೇಕಿಲ್ಲ. ಸರ್ಕಾರಕ್ಕೆ ವಂಚಕರನ್ನು ಶಿಕ್ಷಿಸುವ ಇಚ್ಛಾಶಕ್ತಿ ಇರಬೇಕು.

ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲ್ವಿಚಾರಣೆಯನ್ನು ಆರ್‌ಬಿಐನಿಂದ ನಿಯಂತ್ರಿಸಲಾಗುತ್ತಿದೆಯೇ?

ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ಎರಡರ ಸುಧಾರಣೆ ಅಗತ್ಯವಿದೆ. ಅವುಗಳ ಮೇಲಿರುವ ವಸೂಲಾಗದ ಸಾಲ ಹೆಮ್ಮೆಪಡುವಂತಹದ್ದಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.

ಆರ್‌ಬಿಐ ಮತ್ತು ಸರ್ಕಾರ ಸಂಬಂಧ ಹೇಗಿರಬೇಕು?

ಆರ್‌ಬಿಐ ಮತ್ತು ಕೇಂದ್ರ ಸರ್ಕಾರಗಳೆರಡೂ ಒಂದು ಒಳ್ಳೆಯ ಪಾಠ ಕಲಿತು, ಭಿನ್ನಾಭಿಪ್ರಾಯದಿಂದ ಹೊರಬರಲಿವೆ ಎಂದು ಭಾವಿಸಿದ್ದೇನೆ. ಇಲ್ಲಿ ಎರಡೂ ಒಂದು ಇನ್ನೊಂದರ ಮಾತು ಕೇಳುವುದು ಅಗತ್ಯ. ಇದರಲ್ಲಿ ಆರ್‌ಬಿಐ ಮಡಳಿಯ ಕಾರ್ಯ ಮಹತ್ವದ್ದು. ಇದು ಸಂಪರ್ಕ ಸೇತುವಾಗಿ, ಭಿನ್ನಾಭಿಪ್ರಾಯವನ್ನು ಶಮನ ಮಾಡಬೇಕು.

ಆರ್‌ಬಿಐ ಮಂಡಳಿ ಹೇಗೆ ಕಾರ್ಯನಿರ್ವಹಿಸಬೇಕು?

ರಿಸರ್ವ್ ಬ್ಯಾಂಕಿನ ನಿರ್ದೇಶಕ ಮಂಡಳಿಯು ಸಂಸ್ಥೆಯ ಹಿತವನ್ನು ರಕ್ಷಿಸಬೇಕೇ ಹೊರತು ಬೇರೆಯವರದ್ದನ್ನಲ್ಲ. ಸಂಸ್ಥೆಯ ಆರೋಗ್ಯವನ್ನು ಕಾಪಾಡಿ, ವಿಶಾಲ ಹಾಗೂ ವಿವೇಕದ ಸಲಹೆಗಳನ್ನು ನೀಡಬೇಕು. ಆರ್‌ಬಿಐ ನಿರ್ದೇಶಕ ಮಂಡಳಿ ಪ್ರಜ್ಞಾವಂತಿಕೆ, ಆಲೋಚನೆ ಹೊಂದಿದ ರಾಹುಲ್ ದ್ರಾವಿಡ್ ರೀತಿ ಇರಬೇಕೇ ಹೊರತು ನವಜೋತ್ ಸಿಂಗ್ ಸಿಧು ರೀತಿ ಅಲ್ಲ. 

- ರಘುರಾಮ್ ರಾಜನ್, ಆರ್‌ಬಿಐ ಮಾಜಿ ಗವರ್ನರ್ 

Follow Us:
Download App:
  • android
  • ios