Asianet Suvarna News Asianet Suvarna News

ವ್ಯಾಪಾರಿಗಳಿಗೆ ಮೋದಿ ಚುನಾವಣೆಯ ಭರ್ಜರಿ ಉಡುಗೊರೆ!

ವ್ಯಾಪಾರಿಗಳಿಗೆ ಮೋದಿ ಭರ್ಜರಿ ಉಡುಗೊರೆ!| 50 ಲಕ್ಷ ರು.ವರೆಗೂ ಖಾತರಿ ರಹಿತ ಸಾಲ| ವ್ಯಾಪಾರಿಗಳಿಗೆ ಪಿಂಚಣಿ, ಕ್ರೆಡಿಟ್‌ ಕಾರ್ಡ್‌|  ಜಿಎಸ್‌ಟಿ ನೋಂದಾಯಿತರಿಗೆ 10 ಲಕ್ಷ ವಿಮೆ

Modi promises collateral free loan insurance pension in re-election pitch to business community
Author
Bangalore, First Published Apr 20, 2019, 8:15 AM IST

ನವದೆಹಲಿ[ಏ.20]: ಲೋಕಸಭೆ ಚುನಾವಣೆಯ ಎರಡು ಹಂತದ ಚುನಾವಣೆಗಳು ಮುಗಿದ ಬೆನ್ನಲ್ಲೇ, ವ್ಯಾಪಾರಿ ಸಮುದಾಯದ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಭರಪೂರ ಭರವಸೆ ನೀಡಿದಿದ್ದಾರೆ. ವ್ಯಾಪಾರಸ್ತರಿಗೆ ಖಾತರಿ ಇಲ್ಲದೇ 50 ಲಕ್ಷ ರು.ವರೆಗೂ ಸಾಲ, ಕ್ರೆಡಿಟ್‌ ಕಾರ್ಡ್‌ ಸೌಲಭ್ಯ ಹಾಗೂ ಸಣ್ಣ ಅಂಗಡಿ ವ್ಯಾಪಾರಿಗಳಿಗೆ ಪಿಂಚಣಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

ಇಲ್ಲಿ ವ್ಯಾಪಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ಪುನಃ ಆಯ್ಕೆ ಆದ ಬಳಿಕ ಸರ್ಕಾರ ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿ ಸ್ಥಾಪಿಸಲಿದೆ. ವ್ಯಾಪಾರಿಗಳಿಗೆ ಕ್ರೆಡಿಟ್‌ ಕಾರ್ಡ್‌ ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ನೀಡಲಾಗುವುದು. ಅಲ್ಲದೇ ಯಾವುದೇ ಖಾತರಿ ಇಲ್ಲದೇ 50 ಲಕ್ಷ ರು. ವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಜಿಎಸ್‌ಟಿ ಅಡಿ ನೋಂದಾವಣೆ ಆದ ವ್ಯಾಪಾರಿಗಳಿಗೆ 10 ಲಕ್ಷ ರು. ಅಪಘಾತ ವಿಮೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ತಮ್ಮ ಸರ್ಕಾರ ಕಷ್ಟದ ಸಂದರ್ಭದಲ್ಲಿ ವ್ಯಾಪಾರಿಗಳ ಪರವಾಗಿ ನಿಂತಿದೆ. ವಿಪಕ್ಷ ಕಾಂಗ್ರೆಸ್‌ ವ್ಯಾಪಾರಿಗಳನ್ನು ಕಳ್ಳರು (ಚೋರ್‌) ಎಂದು ಕರೆಯುವ ಮೂಲಕ ಅವಮಾನಿಸಿದೆ. ಎನ್‌ಡಿಎ ಸರ್ಕಾರ 1,500 ಪುರಾತನ ಕಾನೂನುಗಳನ್ನು ರದ್ದುಗೊಳಿಸಿದೆ, ವ್ಯಾಪಾರದ ಪ್ರಕ್ರಿಯೆಗಳನ್ನು ಸರಳಗೊಳಿಸಿದೆ, ಸುಲಭವಾಗಿ ಸಾಲ ಸೌಲಭ್ಯ ಒದಗಿಸಿದೆ. ಈ ಮೂಲಕ ವ್ಯಾಪಾರಿಗಳ ಜೀವನವನ್ನು ಸುಲಭಗೊಳಿಸಲು ತಮ್ಮ ಸರ್ಕಾರ ಕಳೆದ 5 ವರ್ಷಗಳಲ್ಲಿ ಕಾರ್ಯನಿರ್ವಹಿಸಿದೆ. ವ್ಯಾಪಾರಿಗಳ ಕೊಡುಗೆ ಇಲ್ಲದೇ ದೇಶದ ಆರ್ಥಿಕತೆಯನ್ನು ದುಪ್ಪಟ್ಟುಗೊಳಿಸಿ 345 ಲಕ್ಷ ಕೋಟಿ ರು.ನಷ್ಟು ಬೃಹತ್‌ ಆರ್ಥಿಕ ಶಕ್ತಿಯನ್ನಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಜಿಎಸ್‌ಟಿಯ ಅನುಷ್ಟಾನದಲ್ಲಿ ತಪ್ಪಾಗಿಲ್ಲ ಎಂದು ನಾವು ಹೇಳುವುದಿಲ್ಲ. ಆದರೆ, ಲೋಪದೋಷ ಬೇಗ ಪರಿಹರಿಸಲಾಗಿದೆ. ಬಹುತೇಕ ದೈನಂದಿನ ಸರಕುಗಳಿಗೆ ಶೂನ್ಯ ತೆರಿಗೆ ವಿಧಿಸಲಾಗಿದೆ. ಶೇ.98ರಷ್ಟುಸರಕುಗಳು ಶೇ.18ಕ್ಕಿಂತಲೂ ಕಡಿಮೆ ತೆರಿಗೆ ವಿಧಿಸಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios