Asianet Suvarna News Asianet Suvarna News

ಇರಾನ್ ತೈಲ ನಿಲ್ಲಿಸಿದ ರಿಲಯನ್ಸ್: ಶುರುವಾಯ್ತು ಯುಎಸ್ ಸ್ಯಾಂಕ್ಷನ್ಸ್!

ಅಮೆರಿಕದ ಮಾತು ಕೇಳಿದ ರಿಲಯನ್ಸ್ ಸಂಸ್ಥೆ! ಇರಾನ್‌ನಿಂದ ತೈಲ ಆಮದು ನಿಲ್ಲಿಸಿದ ರಿಲಯನ್ಸ್! ಅಕ್ಟೋಬರ್‌ನಿಂದ ಇರಾನ್‌ನಿಂದ ತೈಲ ತರಿಸಲ್ಲ ಎಂದ ಸಂಸ್ಥೆ! ತೈಲಕ್ಕಾಗಿ ಸೌದಿ ಅರೇಬಿಯಾದತ್ತ ಮುಖ ಮಾಡಿದ ರಿಲಯನ್ಸ್! ಇರಾನ್‌ನಿಂದ 2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ತರಿಸಿದ್ದ ಖಾಸಗಿ ಸಂಸ್ಥೆ

Ahed of US Sanctions Reliance Industries Halts Iranian Oil Imports
Author
Bengaluru, First Published Oct 18, 2018, 7:51 PM IST

ಮುಂಬೈ(ಅ.17): ಇದೇ ನವೆಂಬರ್ 4ರಂದು ಇರಾನ್ ಮೇಲಿನ ಅಮೆರಿಕದ ನಿರ್ಬಂಧ  ಸಂಪೂರ್ಣವಾಗಿ ಜಾರಿಗೆ ಬರಲಿದೆ. ಅದರಂತೆ ವಿಶ್ವದ ಒಂದೊಂದೇ ರಾಷ್ಟ್ರಗಳು ಇರಾನ್ ಜೊತೆಗಿನ ತನ್ನ ವಾಣಿಜ್ಯ ಒಪ್ಪಂದವನ್ನು ಕಡಿದುಕೊಳ್ಳುತ್ತಿವೆ.

ಆದರೆ ಇರಾನ್ ಜೊತೆಗಿನ ತನ್ನ ತೈಲ ಒಪ್ಪಂದವನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಭಾರತ ನಿರಾಕರಿಸುತ್ತಿದೆ. ಇರಾನ್ ಜೊತೆಗೆ ವಾಣಿಜ್ಯ ಒಪ್ಪಂದ ಮುಂದುವರೆಸುವುದು ತನ್ನ ಹಕ್ಕು ಎಂಬುದು ಭಾರತದ ಪ್ರತಿಪಾದನೆ.

ಇದೇ ಕಾರಣಕ್ಕೆ ಭಾರತವನ್ನು ತನ್ನ ಶತ್ರು ರಾಷ್ಟ್ರ ಇರಾನ್‌ನಿಂದ ದೂರ ಮಾಡಲು ಅಮೆರಿಕ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಮನವಿ ಮಾಡಿರುವ ಅಮೆರಿಕ, ಕೆಲವು ಬೆದರಿಕೆಗಳನ್ನೂ ಹಾಕುತ್ತಿದೆ.

ಈ ಮಧ್ಯೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ ತೈಲ ಆಮದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಮೆರಿಕದ ನಿರ್ಬಂಧ ಜಾರಿಯಾದ ಬಳಿಕ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸೂಚನೆಯನ್ನೂ ಸಂಸ್ಥೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ರಿಲಯನ್ಸ್ ಸಂಸ್ಥೆಯ ಹಿರಿಯ ಅಧಿಕಾರಿ ವಿ. ಶ್ರೀಕಾಂತ್, ಇರಾನ್‌ನಿಂದ ತೈಲ ಆಮದನ್ನು ಹಂತ ಹಂತವಾಗಿ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೇ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಿಂದ, ಅದರಲ್ಲೂ ಪ್ರಮುಖವಾಗಿ ಸೌದಿ ಅರೇಬಿಯಾದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಅಲ್ಲದೇ ವೆನಿಜುವೆಲಾದಿಂದಲೂ ತೈಲ ಆಮದು ಮುಂದುವರೆಯಲಿದೆ ಎನ್ನಲಾಗಿದೆ.

ರಿಲಯನ್ಸ್ ಸಂಸ್ಥೆ ಇರಾನ್ ನಿಂದ ಸೆಪ್ಟೆಂಬರ್ ಅಂತ್ಯದೊಳಗೆ 2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. 

Follow Us:
Download App:
  • android
  • ios