Asianet Suvarna News Asianet Suvarna News

ತಗ್ಗಿದ ಮಳೆ ಆರ್ಭಟ: ಕುಗ್ಗಿದ ನೆರೆ

ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಬುಧವಾರ ತಗ್ಗಿದೆ. ಅಲ್ಲಿನ ಜಲಾನಯನ ಪ್ರದೇಶದಲ್ಲಿಯೂ ಮಳೆ ಇಳಿಮುಖವಾಗಿರುವುದು ನೆರೆ ಭೀತಿ ಆತಂಕ ಎದುರಿಸುತ್ತಿದ್ದ ಜನರು ನಿಟ್ಟುಸಿರುಬಿಡುವಂತಾಗಿದೆ.

karnataka flood Rain decreases
Author
Bangalore, First Published Oct 24, 2019, 9:07 AM IST

ಬೆಂಗಳೂರು(ಅ.24): ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಬುಧವಾರ ತಗ್ಗಿದೆ. ಅದೇ ರೀತಿ ನೆರೆಯ ಮಹಾರಾಷ್ಟ್ರದ ಕೊಂಕಣ, ಅಲ್ಲಿನ ಜಲಾನಯನ ಪ್ರದೇಶದಲ್ಲಿಯೂ ಮಳೆ ಇಳಿಮುಖವಾಗಿರುವುದು ನೆರೆ ಭೀತಿ ಆತಂಕ ಎದುರಿಸುತ್ತಿದ್ದ ಜನರು ನಿಟ್ಟುಸಿರುಬಿಡುವಂತಾಗಿದೆ.

ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 93 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಮಂಗಳವಾರ 1.11 ಲಕ್ಷ ಕ್ಯುಸೆಕ್‌ ಹರಿದು ಬಂದಿತ್ತು. ಆದರೆ, ಕೃಷ್ಣಾ ನದಿ ತೀರ ಪ್ರದೇಶಗಳಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾನಾ ಭಾಗಗಳಲ್ಲಿ ನೀರಿನ ಪ್ರಮಾಣ ಮಾತ್ರ ಯಥಾಸ್ಥಿತಿಯಲ್ಲಿದೆ.

ನೆರೆ: ಸಾಂಕ್ರಾಮಿಕ ರೋಗ ತಡೆಗೆ ಸರ್ಕಾರ ಆದೇಶ

ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಹಾಗೂ ಹಳ್ಳಕೊಳ್ಳಗಳು ಸೇರಿದಂತೆ ಒಟ್ಟಾರೆಯಾಗಿ ಆಲಮಟ್ಟಿಗೆ ಪ್ರಸ್ತುತ 1.84 ಲಕ್ಷ ಕ್ಯುಸೆಕ್‌ ಒಳಹರಿವಿದ್ದು, 2.50 ಲಕ್ಷ ಕ್ಯುಸೆಕ್‌ ಹೊರಹರಿವಿದೆ. ಈ ಮಟ್ಟದ ನೀರಿನ ಹರಿವಿನಿಂದ ಯಾವುದೇ ಭೀತಿ ಇಲ್ಲ.

ಮುಳುಗಡೆಯಾದ ಕೂಡಲಸಂಗಮ:

ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತ್ರ ಕೃಷ್ಣಾ-ಮಲಪ್ರಭಾ ನದಿಗಳು ಮತ್ತೆ ಉಕ್ಕಿ ಬಂದಿವೆ. ಇದರಿಂದ ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಕೂಡಲಸಂಗಮದ ಸಂಗಮನಾಥನ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ಮಲಪ್ರಭಾ ನದಿ ನೀರು ತಾಲೂಕಿನ ಐತಿಹಾಸಿಕ ತಾಣ ಐಹೊಳೆಯ ದೇಗುಲದಲ್ಲಿಯೂ ನುಗ್ಗಿದೆ. ಹೀಗಾಗಿ ಗರ್ಭಗುಡಿಗೆ ಬೀಗ ಹಾಕಲಾಗಿದೆ.

6 ಗ್ರಾಮಗಳಲ್ಲಿ ಗಂಜಿ ಕೇಂದ್ರ:

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗಂಜಿಹಾಳ, ಕೆಂಗಲ್ಲ ಕಡಪಟ್ಟಿ, ವರಗೋಡದಿನ್ನಿ, ಖಜಗಲ್ಲ, ಚಿತ್ತರಗಿ ಹಾಗೂ ಕಮತಗಿ 6 ಗ್ರಾಮಗಳಲ್ಲಿ ಮುಂಜಾಗೃತವಾಗಿ ಗಂಜಿ ಕೇಂದ್ರ ತೆರೆಯಲಾಗಿದೆ.

ನಾರಾಯಣಪುರದಿಂದ 4 ಲಕ್ಷ ಕ್ಯು. ಹೊರಕ್ಕೆ:

ಕೃಷ್ಣ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಬುಧವಾರ ನಾರಾಯಣಪುರ ಜಲಾಶಯದಿಂದ 4 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ. ಹೀಗಾಗಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ನದಿ ತೀರದ ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿದೆ. ಕೊಳ್ಳೂರು (ಎಂ) ಗ್ರಾಮದ ರಾಜ್ಯ ಹೆದ್ದಾರಿ-15 ಮೇಲಿನ ಸೇತುವೆ ಮುಳುಗಿದೆ.

ಹಂಪಿಯ ಕೆಲ ಸ್ಮಾರಕ ಇನ್ನೂ ಜಲಾವೃತ

ತುಂಗಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಹಂಪಿಯಲ್ಲಿ ನದಿ ಅಂಚಿನಲ್ಲಿರುವ ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ, ವಿಜಯನಗರ ಕಾಲು ಸೇತುವೆ ಭಾಗಶಃ ಮುಳುಗಿವೆ. ಜಲಾಶಯದಿಂದ 1.75 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವ ವೃಂದಾವನ ಗಡ್ಡೆ, ಕೃಷ್ಣದೇವರಾಯನ ಸಮಾಧಿ ಮುಳುಗಡೆಯಾಗಿದೆ.

ಭಾರೀ ಮಳೆ: ಗದಗನಲ್ಲಿ ಶವಸಂಸ್ಕಾರಕ್ಕೂ ಅವಕಾಶ ನೀಡದ ವರುಣ

ಉಳಿದಂತೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತೋರಣಘಟ್ಟಗ್ರಾಮ ಪಂಚಾಯಿತಿ ನೀರಗಂಟಿ ಎ.ಕೆ.ಬಸವರಾಜಪ್ಪ(51) ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ.

Follow Us:
Download App:
  • android
  • ios