Asianet Suvarna News Asianet Suvarna News

ಬೆಂಗಳೂರಿನ ಹೃದಯಭಾಗದ ಪ್ರಮುಖ ರಸ್ತೆ ಬಂದ್

ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರಮುಖ ರಸ್ತೆಯೊಂದನ್ನು ಬಂದ್ ಮಾಡಲಾಗುತ್ತಿದೆ. ಟೆಂಡರ್ ಶೂರ್ ಕಾಮಗಾರಿ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಮುಖ್ಯ ರಸ್ತೆ ಬಂದ್ ಆಗುತ್ತದೆ. 

Bangalore Cottonpet Road Band From February 6
Author
Bengaluru, First Published Feb 7, 2019, 9:24 AM IST

ಬೆಂಗಳೂರು : ಟೆಂಡರ್ ಶ್ಯೂರ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ  ಫೆ.7 ರಿಂದ ವಾಹನ ಸಂಚಾರ ರದ್ದುಗೊಳಿಸಲಾಗಿದ್ದು, ನಗರದ ಹೃದಯಭಾಗದ ಪ್ರಮುಖ ರಸ್ತೆಯೊಂದು ಬಂದ್ ಆಗಲಿದೆ. ಇದರಿಂದ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆ, ಬಸವನಗುಡಿ ಭಾಗದತ್ತ ತೆರಳುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗಲಿದ್ದು, ಇದರೊಂದಿಗೆ ಪ್ರಮುಖ ಕೊಂಡಿಯೊಂದು ಸ್ತಬ್ಧವಾಗಲಿದೆ.

ಬಿಬಿಎಂಪಿ ವತಿಯಿಂದ ಮೆಜೆಸ್ಟಿಕ್ ಸುತ್ತಮುತ್ತಲಿನ ಆರು ಪ್ರಮುಖ ರಸ್ತೆಗಳನ್ನು 130 ಕೋಟಿ ರು. ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಕೆಲವು ರಸ್ತೆಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. 

ಇದೀಗ ಕಾಟನ್‌ಪೇಟೆ ಮುಖ್ಯರಸ್ತೆಯ ಗೂಡ್ಸ್ ಶೆಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್ ವರೆಗಿನ 1.12 ಕಿ.ಮೀ ರಸ್ತೆ ಅಭಿವೃದ್ಧಿ ಕಾರ್ಯವನ್ನು ಆರಂಭಿಸುತ್ತಿದೆ. ಹೀಗಾಗಿ ಸಾರ್ವಜನಿಕರ ವಾಹನ ಸಂಚಾರ ರದ್ದುಗೊಳಿಸಲಾಗಿದ್ದು, ಪರ್ಯಾಯವಾಗಿ ಮಾಗಡಿ ರಸ್ತೆ ಮತ್ತು ಬಿನ್ನಿಮಿಲ್ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಸಹಕರಿಸುವಂತೆ ಬಿಬಿಎಂಪಿ ಯೋಜನಾ ವಿಭಾಗ ಕೋರಿದೆ.

ಗುರುವಾರದಿಂದ ರಸ್ತೆಯಲ್ಲಿ ಹಾದು ಹೋಗಿರುವ ಬೃಹತ್ ನೀರು ಗಾಲುವೆ ದುರಸ್ತಿ ಕಾಮಗಾರಿ  ಕೈಗೊಳ್ಳಲಿದ್ದಾರೆ. ಆದಾದ ಬಳಿಕ ಜಲಮಂಡಳಿಯ ನೀರಿನ ಕೊಳವೆ ಮತ್ತು ಸ್ಯಾನಿಟರಿ ಕೊಳವೆ ಮಾರ್ಗದ ಕಾಮಗಾರಿ ನಡೆಯಲಿದೆ. 

ತದನಂತರ ಟೆಂಡರ್ ಶ್ಯೂರ್ ಕಾಮಗಾರಿ ಆರಂಭವಾಗಲಿದೆ. ಜಲಮಂಡಳಿ ಹಾಗೂ ನೀರುಗಾಲುವೆ ವಿಭಾಗದ ಕಾಮಗಾರಿ ಮುಗಿದ ಬಳಿಕ ಐದರಿಂದ ಆರು ತಿಂಗಳು ಕಾಮಗಾರಿಗೆ ಸಮಯ ಬೇಕಾಗಲಿದ್ದು, ಚಿಕ್ಕ ರಸ್ತೆ ಆಗಿರುವುದರಿಂದ ಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಳಿಸಬೇಕಾಗಲಿದೆ ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ತಿಳಿಸಿದ್ದಾರೆ.

Follow Us:
Download App:
  • android
  • ios