Asianet Suvarna News Asianet Suvarna News

ಕೊಟ್ಟಿದ್ದ ಚಿನ್ನಾಭರಣ ವಾಪಾಸ್‌ ಕೇಳಿದ್ದಕ್ಕೆ ಪ್ರೇಯಸಿಯ ಕೊಂದ KSRTC ಚಾಲಕ!

ಕೊಟ್ಟ ಚಿನ್ನ ವಾಪಸ್ ಕೇಳಿದ್ದ ಪ್ರೇಯಸಿಯನ್ನೇ ಕೊಂದ KSRTC ಚಾಲಕನೋರ್ವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

KSRTC Driver Arrested For Murder lover
Author
Bengaluru, First Published Oct 24, 2019, 8:14 AM IST

ಬೆಂಗಳೂರು [ಅ.24]: ಇತ್ತೀಚೆಗೆ ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಕೋಪಗೊಂಡು ಪ್ರೇಯಸಿಯನ್ನು ಕೊಂದು ತಪ್ಪಿಸಿಕೊಂಡಿದ್ದ ವ್ಯಕ್ತಿಯೊಬ್ಬ ಸಂಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಾಗೇಪಲ್ಲಿ ಕೆಎಸ್‌ಆರ್‌ಟಿಸಿ ವಿಭಾಗದ ಚಾಲಕ ಕಂ ನಿರ್ವಾಹಕ ಲಕ್ಷ್ಮೀ ನಾರಾಯಣ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಸಂಜಯನಗರ ಸಮೀಪ ಗೆದ್ದಲಹಳ್ಳಿಯಲ್ಲಿ ಗೌರಮ್ಮ ಎಂಬಾಕೆಯನ್ನು ಕೊಂದು ಪರಾರಿಯಾಗಿದ್ದ.

ಅಕ್ಕ-ತಮ್ಮ ಎಂದು ಮನೆ ಬಾಡಿಗೆ:

ಮಂಡ್ಯದ ಪಾಂಡವಪುರ ತಾಲೂಕಿನ ಗೌರಮ್ಮ, ಪತಿ ಸಾವನ್ನಪ್ಪಿದ ಬಳಿಕ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದರು. ಸದಾಶಿವನಗರದಲ್ಲಿ ಮನೆಗೆಲಸ ಮಾಡಿಕೊಂಡು ನೆಲೆಸಿದ್ದರು. ಆಕೆಯ ಪುತ್ರ ಬೇರೆಡೆ ವ್ಯಾಸಂಗ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆಕೆಗೆ ಚಾಲಕ ಲಕ್ಷ್ಮೀ ನಾರಾಯಣ ಪರಿಚಯವಾಯಿತು. ಈ ಗೆಳೆತನದ ಹಿನ್ನೆಲೆಯಲ್ಲಿ ಗೌರಮ್ಮ ಮನೆಗೆ ಚಾಲಕ ಬಂದೋ ಹೋಗುತ್ತಿದ್ದ. ಇದನ್ನು ಸ್ಥಳೀಯರು ವಿರೋಧಿಸಿದ್ದರು. ಬಳಿಕ ಸದಾಶಿವನಗರದಿಂದ ಗೆದ್ದಲಹಳ್ಳಿಗೆ ಆಕೆ ವಾಸ್ತವ್ಯ ಬದಲಾಯಿಸಿದ್ದಳು.

ಆಗ ಸ್ನೇಹಿತೆಗೆ ನೆರವಾದ ಲಕ್ಷ್ಮೀ ನಾರಾಯಣ, ಅಕ್ಕ-ತಮ್ಮ ಎಂದು ಹೇಳಿ ಬಾಡಿಗೆ ಮನೆ ಮಾಡಿದ್ದರು. ಬಸ್‌ ಟಿಕೆಟ್‌ ನೀಡುವ ಮಿಷನ್‌ ಟ್ಯಾಂಪರಿಂಗ್‌ ಮಾಡಿದ ಆರೋಪದ ಮೇರೆಗೆ ಲಕ್ಷ್ಮೀ ನಾರಾಯಣ ಸೇವೆಯಿಂದ ಅಮಾನತುಗೊಂಡಿದ್ದ. ಆಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಗೌರಮ್ಮನ ಬಳಿಯ ಚಿನ್ನಾಭರಣ ಪಡೆದು, ಅದನ್ನು ಅಡವಿಟ್ಟು 25 ಸಾವಿರ ಸಾಲ ಪಡೆದಿದ್ದ. ಚಿನ್ನದ ಸರ ಬಿಡಿಸಿಕೊಡದೆ ನುಣುಚಿಕೊಳ್ಳುತ್ತಿದ್ದ. ಇದೇ ವಿಚಾರಕ್ಕೆ ಜಗಳವಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅ.1ರ ರಾತ್ರಿ ಸಹ ಹಣಕಾಸು ವಿಚಾರವಾಗಿ ಅವರ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಲಕ್ಷ್ಮೀ ನಾರಾಯಣ, ಸ್ನೇಹಿತೆಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮೃತಳ ಮನೆಯಲ್ಲಿ ದುರ್ವಾಸನೆಯಿಂದ ಘಟನೆ ಬೆಳಕಿಗೆ ಬಂದಿತ್ತು. ಮೊಬೈಲ್‌ ಕರೆಗಳನ್ನಾಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios